ದೇಶದಲ್ಲಿ ಡಿಜಿಟಲ್ ರೂಪಾಯಿಯನ್ನು ಜಾರಿಗೆ ತರುತ್ತೇವೆ ಎಂದು ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಡಿಜಿಟಲ್ ರೂಪಾಯಿಯನ್ನು ಅಭಿವೃದ್ಧಿಪಡಿಸುವ, ಬಿಡುಗಡೆ ಮಾಡುವ ಮತ್ತು ನಿರ್ವಹಣೆ ಮಾಡುವ ಜವಾಬ್ದಾರಿ ಹೊರಲಿದೆ. ಈ ಡಿಜಿಟಲ್ ರೂಪಾಯಿಯನ್ನು ‘ಕೇಂದ್ರೀಯ ಬ್ಯಾಂಕ್ ಡಿಜಿಟಲ್ ರೂಪಾಯಿ’ (ಸಿಬಿಡಿಸಿ) ಎಂದು ಕರೆಯಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು. 2022–23ರ ಆರ್ಥಿಕ ವರ್ಷದ ಆರಂಭದಿಂದಲೇ ಸಿಬಿಡಿಸಿ ಬಳಕೆಗೆ ಬರಲಿದೆ ಎಂದೂ ಅವರು ಹೇಳಿದ್ದರು.

ಕೇಂದ್ರ ಸರ್ಕಾರವು ಆರ್‌ಬಿಐ ಮೂಲಕ ತರಲು ಹೊರಟಿರುವ ಡಿಜಿಟಲ್ ಕರೆನ್ಸಿಯು ಬ್ಲಾಕ್‌ಚೈನ್ ಲೆಡ್ಜರ್ ಮತ್ತು ಇತರ ತಂತ್ರಜ್ಞಾನಗಳ ಆಧಾರದಲ್ಲಿ ಕೆಲಸ ಮಾಡಲಿದೆ ಎಂದು ಕೇಂದ್ರ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ. ಈಗ ಜಗತ್ತಿನ ಎಲ್ಲೆಡೆ ಬಳಕೆಯಲ್ಲಿರುವ ಕ್ರಿಪ್ಟೊಕರೆನ್ಸಿಗಳು ಬ್ಲಾಕ್‌ಚೈನ್ ಲೆಡ್ಜರ್ ತಂತ್ರಜ್ಞಾನದಲ್ಲೇ ವಹಿವಾಟು ನಡೆಸುತ್ತವೆ. ಸಿಬಿಡಿಸಿಯನ್ನು ಆರ್‌ಬಿಐ ನಿರ್ವಹಿಸಲಿದೆ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನದಲ್ಲಿ ನಿರ್ವಹಣೆ ಮಾಡಲಾಗುದು ಎಂದಷ್ಟೇ ಸರ್ಕಾರ ಹೇಳಿದೆ.

ಆದರೆ, ಇಡೀ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಮಾಹಿತಿಯನ್ನು ಸರ್ಕಾರ ನೀಡಿಲ್ಲ. ಕ್ರಿಪ್ಟೊಕರೆನ್ಸಿಗಳ ವಿಷಯದಲ್ಲಿ, ಅವುಗಳ ಬ್ಲಾಕ್‌ಚೈನ್ ಅನ್ನು ಮೈನರ್‌ಗಳು ನಿರ್ವಹಣೆ ಮಾಡುತ್ತಾರೆ. ಆರ್‌ಬಿಐ ಬಿಡುಗಡೆ ಮಾಡಲಿರುವ ಡಿಜಿಟಲ್ ರೂಪಾಯಿಯು ಬ್ಲಾಕ್‌ಚೈನ್ ಲೆಡ್ಜರ್ ತಂತ್ರಜ್ಞಾನದಲ್ಲೇ ಕಾರ್ಯನಿರ್ವಹಿಸುವುದಾದರೆ, ಇದಕ್ಕಾಗಿ ಆರ್‌ಬಿಐ ಪ್ರತ್ಯೇಕ ವ್ಯವಸ್ಥೆಯನ್ನೇ ರೂಪಿಸಬೇಕಾಗುತ್ತದೆ.

ಕ್ರಿಪ್ಟೊಕರೆನ್ಸಿಗಳು ಮತ್ತು ಸರ್ಕಾರವು ತರಲು ಹೊರಟಿರುವ ಡಿಜಿಟಲ್ ರೂಪಾಯಿಯ ಮಧ್ಯೆ ಬ್ಲಾಕ್‌ಚೈನ್‌ನ ಮೂಲಭೂತ ಹೋಲಿಕೆ ಇರುವಂತೆಯೇ, ಒಂದು ಮೂಲಭೂತ ವ್ಯತ್ಯಾಸವೂ ಇದೆ. ಕ್ರಿಪ್ಟೊಕರೆನ್ಸಿಗಳಿಗೆ ಯಾವುದೇ ಸಂಸ್ಥೆ ಅಥವಾ ಬ್ಯಾಂಕ್ ಅಥವಾ ಸರ್ಕಾರದ ಖಾತರಿ ಇರುವುದಿಲ್ಲ. ಆದರೆ, ಸರ್ಕಾರವು ಬಿಡುಗಡೆ ಮಾಡಲಿರುವ ಡಿಜಿಟಲ್ ರೂಪಾಯಿಗೆ ಸರ್ಕಾರ ಮತ್ತು ಬ್ಯಾಂಕ್‌ನ ಖಾತರಿ ಇರುತ್ತದೆ. ಹೀಗಾಗಿಯೇ ಸಾಮಾನ್ಯ ರೂಪಾಯಿಗೆ ಇರುವಷ್ಟೇ ಮಾನ್ಯತೆ, ಡಿಜಿಟಲ್ ರೂಪಾಯಿಗೂ ಇರುತ್ತದೆ.

ಡಿಜಿಟಲ್ ರೂಪಾಯಿಯು ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ದೇಶದಲ್ಲಿ ಈಗ ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಪೇಮೆಂಟ್ ಬ್ಯಾಂಕಿಂಗ್ ಮತ್ತು ಯುಪಿಐ ಆಧಾರಿತ ಪಾವತಿ ವ್ಯವಸ್ಥೆಗಳು ಇವೆ. ಕೇಂದ್ರ ಸರ್ಕಾರವು ಈ ವ್ಯವಸ್ಥೆಗಳನ್ನು ಡಿಜಿಟಲ್ ಆರ್ಥಿಕತೆ ಎಂದು ಕರೆದಿತ್ತು. ಈ ಎಲ್ಲಾ ವ್ಯವಸ್ಥೆಗಳಲ್ಲಿ ಬ್ಯಾಂಕ್ ಸೇವಾ ಮಾಧ್ಯಮವಾಗಿ ಕೆಲಸ ಮಾಡುತ್ತದೆ. ಅಂದರೆ ಈ ವ್ಯವಸ್ಥೆಗಳಿಗೆ ಬ್ಯಾಂಕ್ ಮೂಲಕ
ಹಣವನ್ನು ವರ್ಗಾಯಿಸಬೇಕಾಗುತ್ತದೆ. ಆನಂತರ ಆ ಹಣವನ್ನು ಈ ವ್ಯವಸ್ಥೆಯ ಒಳಗೇ ಚಲಾವಣೆ ಮಾಡುತ್ತಿರಬಹುದು.

ಡಿಜಿಟಲ್ ರೂಪಾಯಿಯು ನಗದು ಬಳಕೆಯನ್ನು ಕಡಿಮೆ ಮಾಡುತ್ತದೆ ಎಂದು ಸರ್ಕಾರವು ಹೇಳಿದೆ. ಈಗ ಬಳಕೆಯಲ್ಲಿರುವ ಡಿಜಿಟಲ್ ಪಾವತಿ ವ್ಯವಸ್ಥೆಗಳು ಸಹ ನಗದು ಬಳಕೆಯನ್ನು ಕಡಿಮೆ ಮಾಡಿವೆ. ಹೀಗಿರುವಾಗ, ಈ ವ್ಯವಸ್ಥೆಗಳಿಗಿಂತ ಭಿನ್ನವಾಗಿ ಡಿಜಿಟಲ್ ರೂಪಾಯಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿಲ್ಲ. ಈ ಎಲ್ಲಾ ವ್ಯವಸ್ಥೆಗಳ ಜತೆಯಲ್ಲಿಯೇ ಡಿಜಿಟಲ್ ರೂಪಾಯಿ ವ್ಯವಸ್ಥೆ ಅಸ್ತಿತ್ವದಲ್ಲಿ ಇರುವುದಾದರೆ, ಅದು ಸಹ ಒಂದು ಪಾವತಿ ವ್ಯವಸ್ಥೆಯಾಗಿ ಮಾತ್ರವೇ ಉಳಿಯಲಿದೆ.

ಡಿಜಿಟಲ್ ರೂಪಾಯಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಸ್ವತಃ 14 ತಿಂಗಳ ಗಡುವು ಹಾಕಿಕೊಂಡಿದೆ. ಆ ಗಡುವಿನೊಳಗೆ ಡಿಜಿಟಲ್ ರೂಪಾಯಿ ಜಾರಿಗೆ ಬಂದರೆ, ಈ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ.

ಸಮರ್ಥನೆ ಮತ್ತು ಸವಾಲುಗಳು

ಸಿಬಿಸಿಡಿ ಅಥವಾ ಡಿಜಿಟಲ್ ರೂಪಾಯಿ ವ್ಯವಸ್ಥೆ ಜಾರಿಗೆ ಬಂದರೆ, ಹಣಕಾಸು ವ್ಯವಸ್ಥೆ ನಿರ್ವಹಣೆಯ ಕಾರ್ಯದಕ್ಷತೆ ಹೆಚ್ಚುತ್ತದೆ. ಜತೆಗೆ ಹಣಕಾಸು ನಿರ್ವಹಣೆಯ ವೆಚ್ಚ ಕಡಿಮೆಯಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದರು. ಡಿಜಿಟಲ್ ರೂಪಾಯಿ ವ್ಯವಸ್ಥೆಯಲ್ಲಿ ನೋಟುಗಳನ್ನು ಮುದ್ರಿಸುವ, ನಾಣ್ಯಗಳನ್ನು ಠಂಕಿಸುವ, ಅವುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿ ಇಡುವ, ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವ ಉಸಾಬರಿಗಳು ಇರುವುದಿಲ್ಲ. ಹೀಗಾಗಿ ಈ ವೆಚ್ಚಗಳೆಲ್ಲಾ ಉಳಿಯುತ್ತವೆ ಎಂಬುದು ಸರ್ಕಾರದ ವಾದ. ಆದರೆ, ರಿಸರ್ವ್ ಬ್ಯಾಂಕ್ ಡಿಜಿಟಲ್ ರೂಪಾಯಿ ನಿರ್ವಹಣೆಗೆ ಬ್ಲಾಕ್‌ಚೈನ್ ಲೆಡ್ಜರ್ ವ್ಯವಸ್ಥೆ ಅಳವಡಿಸಿಕೊಂಡರೆ ವೆಚ್ಚ ಉಳಿತಾಯದ ಲಾಭ ದೊರೆಯುವುದಿಲ್ಲ. ಏಕೆಂದರೆ ಈಗ ಬ್ಯಾಂಕ್‌ಗಳು ಬಳಸುವ ಸರ್ವರ್‌ಗಳು, ತಂತ್ರಾಂಶಗಳು ಮತ್ತು ಕಂಪ್ಯೂಟರ್ ವ್ಯವಸ್ಥೆಗಳನ್ನು ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ರೂಪಾಯಿಯ ನಿರ್ವಹಣೆಗೆ ಬಳಸಲು ಸಾಧ್ಯವಿಲ್ಲ. ಇದರ ನಿರ್ವಹಣೆಗೆ ಪ್ರತ್ಯೇಕ ಸರ್ವರ್, ಪ್ರತ್ಯೇಕ ತಂತ್ರಾಂಶ, ಅತ್ಯಂತ ಪ್ರಬಲವಾದ ಕಂಪ್ಯೂಟರ್‌ಗಳು ಮತ್ತು ಭಾರಿ ವೇಗದ ಇಂಟರ್ನೆಟ್ ಸಂಪರ್ಕ ಎಲ್ಲವೂ ಬೇಕಾಗುತ್ತದೆ. ಇವುಗಳ ನಿರ್ವಹಣೆಗೆ ಎಂಜಿನಿಯರಿಂಗ್ ಪರಿಣಿತರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ರಿಸರ್ವ್ ಬ್ಯಾಂಕ್ ಈ ವ್ಯವಸ್ಥೆಯನ್ನು ಜಾರಿಗೆ ತಂದರೆ, ದೇಶದ ಎಲ್ಲಾ ಬ್ಯಾಂಕ್‌ಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಬ್ಯಾಂಕಿಂಗ್ ಉದ್ಯಮವು ಭಾರಿ ಮೊತ್ತದ ಬಂಡವಾಳ ಹೂಡಬೇಕಾಗುತ್ತದೆ.

ಎಲ್ಲೆಲ್ಲಿ ಬಳಕೆ?
ಡಿಜಿಟಲ್ ಕರೆನ್ಸಿಗಳನ್ನು ವಿಶ್ವದ ಹಲವು ದೇಶಗಳು ಪ್ರಯೋಗಕ್ಕೆ ಒಳಪಡಿಸಿವೆ. 87 ದೇಶಗಳು ಈ ಬಗ್ಗೆ ಚಿಂತನೆ ನಡೆಸಿದ್ದು, ಈ ಪೈಕಿ 35 ದೇಶಗಳು ಕಾರ್ಯರೂಪಕ್ಕೆ ತರಲು ಅಡಿಯಿಟ್ಟಿವೆ. ಸದ್ಯ 9 ದೇಶಗಳಲ್ಲಿ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ ಅಸ್ತಿತ್ವದಲ್ಲಿದೆ. ಇತ್ತೀಚೆಗೆ ನೈಜೀರಿಯಾ ದೇಶವು ಕರೆನ್ಸಿಯನ್ನು ಪರಿಚಯಿಸಿದೆ. ಇದರ ಹೆಸರು ಇ–ನೈರಾ. ಬಹಮಾಸ್‌ನಲ್ಲಿ ‘ಸ್ಯಾಂಡ್ ಡಾಲರ್’ ಹೆಸರಿನ ಡಿಜಿಟಲ್ ಹಣ 2020ರಲ್ಲಿ ಕಾರ್ಯಾರಂಭ ಮಾಡಿದೆ. ಚೀನಾ, ದಕ್ಷಿಣ ಕೊರಿಯಾ, ಸೇರಿದಂತೆ 14 ದೇಶಗಳು ಡಿಜಿಟಲ್ ಕರೆನ್ಸಿಯ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿವೆ ಎನ್ನಲಾಗಿದ್ದು, ಪೂರ್ಣ ಪ್ರಮಾಣದ ಜಾರಿಗೆ ಮುಂದಾಗಿವೆ. ಇ–ಸಿಎನ್‌ವೈ ಹೆಸರಿನ ಕರೆನ್ಸಿಯನ್ನು ಚೀನಾ ಇದೇ ತಿಂಗಳಲ್ಲಿ ಜಾರಿ ಮಾಡಬಹುದು. 2022ರ ಕೊನೆಯ ಹೊತ್ತಿಗೆ ಕಜಕಸ್ತಾನದಲ್ಲಿ ಸಿಬಿಡಿಸಿ ಜಾರಿಗೆ ಬರಲಿದೆ. ಜನರ ಅಭಿಪ್ರಾಯ ಪಡೆದು ಯೋಜನೆಯ ವಿನ್ಯಾಸ ಮಾಡಲಾಗುವುದು ಎಂದು ನ್ಯೂಜಿಲೆಂಡ್‌ನ ಕೇಂದ್ರೀಯ ಬ್ಯಾಂಕ್ ತಿಳಿಸಿದೆ. ರಷ್ಯಾ, ಬ್ರೆಜಿಲ್ ದೇಶಗಳು ಪ್ರಾಯೋಗಿಕ ಪರೀಕ್ಷೆಗೆ ಮುಂದಾಗಿವೆ. ಅಂತರರಾಷ್ಟ್ರೀಯ ಸಹಕಾರ ಸಿಗದಿದ್ದರೆ, ಇಂತಹ ಮಹತ್ವದ ಹಾಗೂ ಸೂಕ್ಷ್ಮ ಯೋಜನೆಗಳು ಭವಿಷ್ಯದಲ್ಲಿ ಭಾರಿ ಸಮಸ್ಯೆ ಎದುರಿಸಲಿವೆ ಎಂದು ತಜ್ಞರು ಹೇಳಿದ್ದಾರೆ.

ರಾಜನ್ ಎಚ್ಚರಿಕೆ, ಗವರ್ನರ್ ಕಳವಳ
ಬ್ಲಾಕ್‌ಚೈನ್ ತಂತ್ರಜ್ಞಾನದ ಅಡಿಯಲ್ಲಿ ಕೆಲಸ ಮಾಡುವ ಡಿಜಿಟಲ್ ರೂಪಾಯಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರತರಲು ಮುಂದಾಗಿರುವುದಕ್ಕೆ ಕೆಲವು ಆಕ್ಷೇಪಗಳು ವ್ಯಕ್ತವಾಗಿವೆ. ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಈ ವಿಚಾರ ಚರ್ಚೆಗೆ ಬಂದ ಆರಂಭದಲ್ಲೇ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ತನ್ನದೇ ಸ್ವಂತ ಡಿಜಿಟಲ್ ರೂಪಾಯಿಯನ್ನು ಹೊರತರುವ ಮುನ್ನ ಆರ್‌ಬಿಐ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಿದ್ದರು.ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಸರಿಯಾಗಿ ವಿನ್ಯಾಸ ಮಾಡದಿದ್ದರೆ, ಅದರ ಸಂಪೂರ್ಣ ದತ್ತಾಂಶಗಳು ಪರರ ಕೈಸೇರುವ ಅಪಾಯವಿರುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರವೇ ಇದನ್ನು ಜಾರಿ ಮಾಡುವುದರಿಂದ ಸಾಕಷ್ಟು ಸೇವೆಗಳಲ್ಲಿ ವ್ಯತ್ಯಯವಾಗುವ ಸಂಭವವಿರುತ್ತದೆ. ಗ್ರಾಹಕರಿಗೆ ಒದಗಿಸುವ ಸೇವೆ ಎಷ್ಟರ ಮಟ್ಟಿಗೆ ಲಭ್ಯವಾಗುತ್ತದೆ ಎಂಬ ಬಗ್ಗೆ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಅಪಾಯಗಳ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಹ ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.ಡಿಜಿಟಲ್ ರೂಪಾಯಿ ಜಾರಿಗೊಳಿಸುವ ಮುನ್ನ ಖಾಸಗಿ ರಂಗವನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ರಾಜನ್ ಸಲಹೆ ನೀಡಿದ್ದಾರೆ. ಸರ್ಕಾರ ಜಾರಿಗೊಳಿಸುವುದಕ್ಕಿಂತಲೂ ಹೆಚ್ಚು ಹೊಸತನದಿಂದ ಕೂಡಿದ ಚಿಂತನೆಗಳನ್ನು ಖಾಸಗಿ ರಂಗದವರು ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹೀಗಾಗಿ ಎಲ್ಲ ದಿಕ್ಕುಗಳಲ್ಲೂ ಆಲೋಚಿಸಿ ಚಟುವಟಿಕೆಗಳನ್ನು ಆರಂಭಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಡಿಜಿಟಲ್ ರೂಪದ ಕರೆನ್ಸಿಯನ್ನು ಜಾರಿ ಮಾಡುವ ದೇಶಗಳಲ್ಲಿರುವ ಸರ್ಕಾರಗಳ ಸ್ವರೂಪದ ಮೇಲೆ ಅವರು ಬೆಳಕು ಚೆಲ್ಲಿದ್ದಾರೆ. ಚೀನಾದಂತಹ ದೇಶಗಳು ಇದನ್ನು ಅಕ್ರಮ ಬಿಟ್‌ಕಾಯಿನ್ ಮೈನಿಂಗ್ ಮತ್ತು ವಹಿವಾಟಿಗೆ ಬಳಸಿಕೊಂಡಿವೆ. ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿ ಚೀನಾದ ಮಾದರಿಯನ್ನು ಅನುಸರಿಸಲು ಹೇಗೆ ಸಾಧ್ಯ ಎಂದು ಅವರು ಕೇಳಿದ್ದಾರೆ.ಕ್ರಿಪ್ಟೊ ಕರೆನ್ಸಿಗಳ ಹಿಂದೆ ಜಗತ್ತು ಓಡುತ್ತಿರುವುದನ್ನು ವಿಶ್ಲೇಷಿಸಿರುವ ಅವರು, ಒಂದೆರಡನ್ನು ಬಿಟ್ಟು, ಈ ಸ್ವರೂಪದ ಎಲ್ಲ ಕರೆನ್ಸಿಗಳು ಸದ್ಯದಲ್ಲೇ ಅಂತ್ಯ ಕಾಣಲಿವೆ ಎಂದಿದ್ದಾರೆ. ಚಿಟ್‌ಫಂಡ್‌ಗಳು ತಂದೊಡ್ಡಿದ ಸಮಸ್ಯೆಯನ್ನು ಇವು ಪುನರಾವರ್ತಿಸಲಿವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಸೈಬರ್ ಭದ್ರತೆ, ವಂಚನೆ ಆತಂಕ: ಆರ್‌ಬಿಐ ಗವರ್ನರ್
ಸರ್ಕಾರ ಹೊರತರಲಿರುವ ಡಿಜಿಟಲ್ ರೂಪಾಯಿ ಎಂಬ ಹೊಸ ವ್ಯವಸ್ಥೆಗೆ ಸೈಬರ್ ಭದ್ರತೆ ಹಾಗೂ ವಂಚನೆಗಳು ದೊಡ್ಡ ಸವಾಲುಗಳು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅತ್ಯಂತ ಜಾಗರೂಕವಾಗಿ ಹೆಜ್ಜೆ ಇರಿಸಲಾಗುವುದು. ಇದರಲ್ಲಿ ಯಾವುದೇ ತರಾತುರಿ ಇಲ್ಲ ಎಂದು ಅವರು ತಿಳಿಸಿದ್ದಾರೆ.ಕೆಲವು ವರ್ಷಗಳ ಹಿಂದೆ ನಕಲಿ ನೋಟುಗಳ ಹಾವಳಿ ಇತ್ತು. ಆರ್‌ಬಿಐನ ಅಧಿಕೃತ ನೋಟುಗಳನ್ನು ನಕಲಿ ಮಾಡಲಾಗುತ್ತಿತ್ತು. ಸಿಬಿಡಿಸಿಯಲ್ಲೂ ಅಂತಹ ಯತ್ನಗಳು ನಡೆಯುವ ಬಗ್ಗೆ ಎಚ್ಚರ ವಹಿಸಲಾಗಿದ್ದು, ಅಗತ್ಯ ಸೈಬರ್ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಸಂಕೀರ್ಣ ವಿಚಾರವಾಗಿರುವ ಕಾರಣ, ಇದರ ಜಾರಿಗೆ ಕಾಲಮಿತಿ ನಿಗದಿಪಡಿಸಲಾಗದು ಎಂದು ಅವರು ಈ ಹಿಂದೆ ಹೇಳಿದ್ದರು. ಮೂಲಗಳ ಪ್ರಕಾರ, ಮುಂದಿನ 2023ರ ಹೊತ್ತಿಗೆ ಇದು ಜಾರಿಗೊಳ್ಳಬಹುದು.‘ಟ್ಯುಲಿಪ್ ಮೇನಿಯಾ’ ಉಲ್ಲೇಖ: ಖಾಸಗಿ ಕ್ರಿಪ್ಟೊಕರೆನ್ಸಿಗಳಿಂದ ಆರ್ಥಿಕ ಭದ್ರತೆಗೆ ಅಪಾಯವಿದೆ ಎಂದೂ ದಾಸ್ ಹೇಳಿದ್ದಾರೆ. ಇವುಗಳಲ್ಲಿ ಹೂಡಿಕೆ ಮಾಡಬೇಕಾದಲ್ಲಿ ಎಚ್ಚರಿಕೆ ವಹಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಹಾಲೆಂಡ್‌ನಲ್ಲಿ ನಡೆದ ‘ಟ್ಯುಲಿಪ್ ಮೇನಿಯಾ’ವನ್ನು ಅವರು ಉಲ್ಲೇಖಿಸಿದ್ದಾರೆ.17ನೇ ಶತಮಾನದಲ್ಲಿ ಹಾಲೆಂಡ್‌ನಲ್ಲಿ ಟ್ಯುಲಿಪ್ ಗಡ್ಡೆಯ ಬೆಲೆ ಇದ್ದಕ್ಕಿದ್ದಂತೆ ಸಾರ್ವಕಾಲಿಕ ಮಟ್ಟಕ್ಕೆ ಹೆಚ್ಚಾಯಿತು. ಈ ಏರಿಕೆಯು ಆ ವಸ್ತುವಿನ ಮೌಲ್ಯ ಆಧರಿಸಿ ಆಗಿದ್ದಲ್ಲ. ಆದರೆ ಮಾರಾಟಗಾರರು ಊಹಾಪೋಹ ಹಬ್ಬಿಸಿ ಮಾರಾಟವನ್ನು ಹೆಚ್ಚಿಸುವ ಯತ್ನ ಮಾಡಿದ್ದರು. ಆದರೆ ಇದು ಸಾರ್ವಕಾಲಿಕ ಪತನವನ್ನೂ ದಾಖಲಿಸಿತ್ತು. ಹಣಕಾಸು ಮಾರುಕಟ್ಟೆಯಲ್ಲಿ ದಿಢೀರ್ ಏರಿ, ದಿಢೀರ್ ಇಳಿಯುವ ವಿದ್ಯಮಾನಗಳನ್ನು ಟ್ಯುಲಿಪ್ ಮೇನಿಯಾ ಎಂದು ಕರೆಯಲಾಗುತ್ತದೆ.ಭಾರತದಲ್ಲಿ ಇಂತಹ ಕರೆನ್ಸಿ ವ್ಯವಸ್ಥೆಯನ್ನು ಜಾರಿಗೊಳಿಸುವ ಮುನ್ನ ವಿಶ್ವದ ಇತರ ಭಾಗಗಳಲ್ಲಿ ಜಾರಿಯಲ್ಲಿರುವ ಅಥವಾ ಜಾರಿಗೆ ತರಲು ಮುಂದಾಗಿರುವ ಡಿಜಿಟಲ್ ಕರೆನ್ಸಿಗಳ ಸ್ವರೂಪವನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ಆರ್‌ಬಿಐ ತಿಳಿಸಿತ್ತು. ಅತ್ಯಂತ ಸಂಕೀರ್ಣ ವ್ಯವಸ್ಥೆಯ ಜಾರಿಯಲ್ಲಿ ಹಲವು ಅಡಚಣೆಗಳಿದ್ದು, ಜಾರಿ ವಿಳಂಬವಾಗುವ ಸಾಧ್ಯತೆಯಿದೆ ಎಂದೂ ಮಾಹಿತಿ ನೀಡಿತ್ತು.

ಆಧಾರ: ಪಿಐಬಿ ಪತ್ರಿಕಾ ಪ್ರಕಟಣೆಗಳು, ಪಿಟಿಐ, ಎಎಫ್‌ಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.