ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?
ಆಳ–ಅಗಲ: ಬುಲ್ಡೋಜರ್ ನ್ಯಾಯ.. ‘ದಂಡನೆ’ಯೋ, ‘ರಾಜಕೀಯ ದಂಡ’ವೋ?
‘ಬುಲ್ಡೋಜರ್ ನ್ಯಾಯ’ ಎನ್ನುವುದು ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಫಾಲೋ ಮಾಡಿ
Published 3 ಸೆಪ್ಟೆಂಬರ್ 2024, 0:31 IST
Last Updated 3 ಸೆಪ್ಟೆಂಬರ್ 2024, 0:31 IST
Comments

‘ಬುಲ್ಡೋಜರ್ ನ್ಯಾಯ’ ಎನ್ನುವುದು ಕಳೆದ ನಾಲ್ಕೈದು ವರ್ಷಗಳಿಂದ ದೇಶದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳ ಪ್ರಕಾರ, ನಿರ್ದಿಷ್ಟ ವ್ಯಕ್ತಿಗಳ (ಆರೋಪಿಗಳ) ಮನೆಗಳ ಮೇಲೆ ಬುಲ್ಡೋಜರ್ ಹರಿಸುವುದು ಒಂದು ಕಾನೂನು ಕ್ರಮ. ಆದರೆ, ಅದನ್ನು ವಿರೋಧಿಸುವವರ ಪ್ರಕಾರ, ಅದು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬಿಜೆಪಿ ನಡೆಸುತ್ತಿರುವ ದ್ವೇಷದ ಆಂದೋಲನ.

–––––––––––––––

ಕೆಲವು ವರ್ಷಗಳಿಂದ ದೇಶದಲ್ಲಿ ತೀವ್ರ ಚರ್ಚೆಯಲ್ಲಿದ್ದ ‘ಬುಲ್ಡೋಜರ್ ನ್ಯಾಯ’ದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅನಧಿಕೃತವಾಗಿ ಹಾಗೂ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ ಕಟ್ಟಡಗಳ ಮೇಲೆ ಮಾತ್ರ ಬುಲ್ಡೋಜರ್‌ಗಳನ್ನು ಹರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸಮಜಾಯಿಷಿ ನೀಡಿದೆ. ಇದು ನಿಜವೇ ಆದರೆ, ಈ ಬಗ್ಗೆ ಒಂದು ಮಾರ್ಗಸೂಚಿ ರೂಪಿಸೋಣ ಎಂದಿದೆ ಕೋರ್ಟ್. ಈ ಮೂಲಕ ಬುಲ್ಡೋಜರ್ ಕುರಿತ ವಾದ–ವಿವಾದವು ಈಗ ನ್ಯಾಯಾಲಯದ ಅಂಗಳ ತಲುಪಿದೆ. ಸುಪ್ರೀಂ ಕೋರ್ಟ್‌ನ ಪ್ರಶ್ನೆ, ಅಸಮಾಧಾನಗಳ ಹಿಂದೆ ‘ಬುಲ್ಡೋಜರ್ ನ್ಯಾಯ’ದ ಹೆಸರಿನಲ್ಲಿ ದೇಶದಲ್ಲಿ ನಡೆದ ನೂರಾರು ಧ್ವಂಸ ಪ್ರಕರಣಗಳು ಹಾಗೂ ಅದರ ವಿರುದ್ಧ ವ್ಯಕ್ತವಾದ ಸಾಮಾಜಿಕ ಕಾರ್ಯಕರ್ತರ ಪ್ರತಿರೋಧವಿದೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ‘ಬುಲ್ಡೋಜರ್ ನ್ಯಾಯ’ ಜಾರಿಯಾಗುವುದಕ್ಕೂ ನೇರ ಸಂಬಂಧವಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ಅಧ್ಯಯನ ಹೇಳುತ್ತದೆ. ಕಟ್ಟಡಗಳ ಮೇಲೆ ಬುಲ್ಡೋಜರ್ ಹರಿಸುವುದನ್ನು ಒಂದು ದಂಡನೆಯ ಕ್ರಮವಾಗಿ ಮೊದಲು ಬಳಸಿದವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ. ಕುಖ್ಯಾತ ಪಾತಕಿ ವಿಕಾಸ್ ದುಬೆ ಮತ್ತು ಗ್ಯಾಂಗ್‌ಸ್ಟರ್ ಮುಕ್ತಾರ್ ಅನ್ಸಾರಿಯವರ ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಯೋಗಿ, ನಂತರ ಅದನ್ನು ಒಂದು ‘ರಾಜಕೀಯ ದಂಡ’ವಾಗಿ ಪರಿವರ್ತಿಸಿದರು ಎನ್ನುವ ವಿಶ್ಲೇಷಣೆ ಇದೆ. ನಂತರ, ಈ ಪ್ರವೃತ್ತಿ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಿಗೂ ಹಬ್ಬಿತು. ‘ಬುಲ್ಡೋಜರ್ ನ್ಯಾಯ’ದ ಬಗ್ಗೆ ಅಧ್ಯಯನ ಮಾಡಿರುವ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯು, ಈ ಸಂಬಂಧ ಎರಡು ವರದಿಗಳನ್ನು ಬಿಡುಗಡೆ ಮಾಡಿದೆ.

‌ಬಿಜೆಪಿ ಆಡಳಿತ ನಡೆಸಿದ ಉತ್ತರ ಪ್ರದೇಶ, ಅಸ್ಸಾಂ, ಗುಜರಾತ್, ಮಧ್ಯಪ್ರದೇಶ ಹಾಗೂ ಎಎಪಿ ಆಡಳಿತ ನಡೆಸಿದ ದೆಹಲಿಯಲ್ಲಿ ಬುಲ್ಡೋಜರ್ ಹರಿಸಿ ‘ಆರೋಪಿ’ಗಳ ಮನೆ, ಅಂಗಡಿ ಮುಂತಾದ ಹತ್ತಾರು ಕಟ್ಟಡಗಳನ್ನು ಧ್ವಂಸ ಮಾಡಲಾಯಿತು. ಅವೆಲ್ಲ ಅತಿಕ್ರಮಣ ಮಾಡಿ, ಕಾನೂನು ಉಲ್ಲಂಘಿಸಿ ಕಟ್ಟಿದ್ದ ಕಟ್ಟಡಗಳು ಎನ್ನುವುದು ಸರ್ಕಾರದ ವಾದ. ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಎನ್ನುವುದು ಗಮನಾರ್ಹ ವಿಚಾರ. ಇದೇ ವಿಚಾರವೇ ವಿವಾದಕ್ಕೆ ಕಾರಣವಾಗಿರುವುದು. ಹಿಂದೂ ರಾಷ್ಟ್ರೀಯವಾದಿ ಪಕ್ಷವಾದ ಬಿಜೆಪಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಬುಲ್ಡೋಜರ್ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವ ಆರೋಪವಿದೆ.

2022ರ ಏಪ್ರಿಲ್ ಮತ್ತು ಜೂನ್‌ ನಡುವೆ ಈ ಐದು ರಾಜ್ಯಗಳಲ್ಲಿ ಮುಸ್ಲಿಮರಿಗೆ ಸೇರಿದ 128 ಕಟ್ಟಡಗಳನ್ನು ನೆಲಸಮ ಮಾಡಲಾಗಿದ್ದು, ಅದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ 617 ಮಂದಿ ಬದುಕಿನ ಆಸರೆ ಕಳೆದುಕೊಂಡಿದ್ದಾರೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ವರದಿ ತಿಳಿಸಿದೆ. ಇದು ಕ್ರೂರ ಮತ್ತು ಭಯಾನಕ ಕ್ರಮ ಎಂದು ಸಂಸ್ಥೆ ಹೇಳಿದೆ.

ಬುಲ್ಡೋಜರ್ ಕಾರ್ಯಾಚರಣೆಯ ಮೂಲಕ ನಿರ್ದಿಷ್ಟ ವ್ಯಕ್ತಿಗಳ ಕಟ್ಟಡಗಳನ್ನು ಧ್ವಂಸ ಮಾಡುವಾಗ, ಸಂಬಂಧಪಟ್ಟ ಸರ್ಕಾರ/ಸರ್ಕಾರಿ ಸಂಸ್ಥೆ ಹೇಳುತ್ತಿದ್ದದ್ದು, ಇದು ಅಕ್ರಮ ನಿರ್ಮಾಣದ ವಿರುದ್ಧದ ಕ್ರಮ ಎಂದೇ. ಆದರೆ, ಹಾಗೆ ನೆಲಸಮ ಕಾರ್ಯ ಕೈಗೊಳ್ಳುವ ಮುನ್ನ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡುತ್ತಿರಲಿಲ್ಲ. ಕನಿಷ್ಠ ಮಾಹಿತಿಯನ್ನೂ ನೀಡದೇ, ಕಾನೂನು ಪಾಲಿಸದೇ ಏಕಾಏಕಿ ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ ಎನ್ನುವುದು ಈ ಕಾರ್ಯಾಚರಣೆಯ ವಿರುದ್ಧದ ಪ್ರಬಲ ವಾದ. ಕೆಲವು ಕಡೆಗಳಲ್ಲಂತೂ ರಾತ್ರಿ ವೇಳೆ, ಮನೆ ಖಾಲಿ ಮಾಡಲು ಕೂಡ ಸಮಯಾವಕಾಶ ನೀಡದೇ ಕಟ್ಟಡಗಳ ಮೇಲೆ ಜೆಸಿಬಿಗಳನ್ನು ನುಗ್ಗಿಸಿರುವ ಬಗ್ಗೆ ವರದಿಗಳಿವೆ. ಇದು ಕಾನೂನಿನ ಉಲ್ಲಂಘನೆ ಮಾತ್ರವಲ್ಲದೇ ಮಾನವ ಹಕ್ಕುಗಳ ಉಲ್ಲಂಘನೆ ಎನ್ನುವ ಟೀಕೆಗಳಿವೆ.

‘ಬುಲ್ಡೋಜರ್ ನ್ಯಾಯ’ ಎನ್ನುವುದು ಸಂವಿಧಾನದ ವ್ಯಂಗ್ಯವಾಗಿದ್ದು, ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಜರುಗಿಸಿ ಎಂದು ಭಾರತೀಯ ಕಾನೂನು ಆಯೋಗದ ಮಾಜಿ ಅಧ್ಯಕ್ಷ ಕೆ.ಚಂದ್ರು, ನಿವೃತ್ತ ನ್ಯಾಯಮೂರ್ತಿ ಎ.ಪಿ.ಶಾ ಸೇರಿದಂತೆ 12 ಮಂದಿ ಕಾನೂನು ತಜ್ಞರ ತಂಡವೊಂದು 2022ರ ಜೂನ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿತ್ತು. ಮುಸ್ಲಿಮರ ವಿರುದ್ಧದ ದಮನಕಾರಿ ಪ್ರವೃತ್ತಿಯನ್ನು ಕೊನೆಗೊಳಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದರು.

ಹಲವು ನ್ಯಾಯಾಲಯಗಳೂ ಈ ಬಗ್ಗೆ ಸರ್ಕಾರಗಳನ್ನು ಪ್ರಶ್ನಿಸಿದ್ದವು. ಆರೋಪಿಗಳ ಮನೆಗಳನ್ನು ಧ್ವಂಸ ಮಾಡುವ ಕ್ರಮವನ್ನು ಪ್ರಶ್ನಿಸಿ ಸ್ವಯಂ ದೂರು ದಾಖಲಿಸಿಕೊಂಡು 2022ರ ಮೇನಲ್ಲಿ ವಿಚಾರಣೆ ನಡೆಸಿದ್ದ ಗುವಾಹಟಿ ಹೈಕೋರ್ಟ್‌, ಅಸ್ಸಾಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಇಷ್ಟಾದರೂ ಯೋಗಿ ಆದಿತ್ಯನಾಥ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ‘ಬುಲ್ಡೋಜರ್ ನ್ಯಾಯ’ವನ್ನು ಹಲವು ಸಂದರ್ಭಗಳಲ್ಲಿ ಸಮರ್ಥಿಸಿಕೊಂಡಿದ್ದಾರೆ. ‘ಯೋಗಿ ಆದಿತ್ಯನಾಥ ಅವರ ಚುನಾವಣಾ ಪ್ರಚಾರ ಸಭೆಗಳಲ್ಲಿ ಬುಲ್ಡೋಜರ್‌ಗಳನ್ನು ಬಳಸಲಾಗುತ್ತಿತ್ತು ಮತ್ತು ಚುನಾವಣೆಯಲ್ಲಿ ಅವರು ಗೆದ್ದ ನಂತರ ಬುಲ್ಡೋಜರ್‌ಗಳನ್ನು ವಿಧಾನಸಭೆಯ ಕಟ್ಟಡದ ಮುಂದೆ ಪರೇಡ್ ಮಾಡಲಾಗಿತ್ತು’ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಹೇಳಿದ್ದು ಭಾರಿ ಸುದ್ದಿಯಾಗಿತ್ತು.

ಕಾನೂನು ಉಲ್ಲಂಘನೆ ಮಾಡುವ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ಸರಿ. ಆದರೆ, ಯಾರು ತಪ್ಪಿತಸ್ಥರು, ಅವರು ಏನು ತಪ್ಪು ಮಾಡಿದ್ದಾರೆ, ಅದಕ್ಕೆ ಶಿಕ್ಷೆ ಏನು ಎನ್ನುವುದನ್ನು ತೀರ್ಮಾನ ಮಾಡಬೇಕಿರುವುದು ನ್ಯಾಯಾಲಯವೇ ವಿನಾ ಸರ್ಕಾರ ಅಲ್ಲ; ಸರ್ಕಾರ ತನ್ನ ವಿರುದ್ಧ ಇರುವವರನ್ನು, ನಿರ್ದಿಷ್ಟ ಕೋಮಿನ ಜನರನ್ನು, ಭಿನ್ನಮತವನ್ನು ದಮನ ಮಾಡಲು ‘ಬುಲ್ಡೋಜರ್ ನ್ಯಾಯ’ ನೆಪವಾಗಿದ್ದು, ಇದು ಕಾನೂನಿಗೆ ಹೊರತಾದ ಕ್ರಮ ಎನ್ನುವುದು ಅದನ್ನು ವಿರೋಧಿಸುವವರ ವಾದ.

ಪ್ರಮುಖ ಪ್ರಕರಣಗಳು

* ಏಪ್ರಿಲ್‌, 2022: ಮಧ್ಯಪ್ರದೇಶದ ಖರ್‌ಗೌನ್‌ನಲ್ಲಿ ರಾಮನವಮಿ ಅಂಗವಾಗಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಸಂಭವಿಸಿದ ಕಲ್ಲು ತೂರಾಟ ಮತ್ತು ಕೋಮುಗಲಭೆಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಮುಸ್ಲಿಮರಿಗೆ ಸೇರಿದ 16 ಮನೆಗಳು ಮತ್ತು 29 ಕಟ್ಟಡಗಳನ್ನು ಸರ್ಕಾರ ನೆಲಸಮ ಮಾಡಿತ್ತು.

* ಏಪ್ರಿಲ್‌, 2022: ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿ ರ‍್ಯಾಲಿ ವೇಳೆ ಕೋಮು ಹಿಂಸಾಚಾರ ನಡೆದಿತ್ತು. ಬಿಜೆಪಿ ನೇತೃತ್ವದ ಉತ್ತರ ದೆಹಲಿ ಮಹಾನಗರ ಪಾಲಿಕೆ ಆಡಳಿತವು ಮಸೀದಿಯೊಂದರ ಗೋಡೆ ಮತ್ತು ಗೇಟು ಸೇರಿದಂತೆ ಹಲವು ಕಟ್ಟಡಗಳನ್ನು ತೆರವುಗೊಳಿಸಿತ್ತು. ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿ, ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

* ಮೇ, 2022: ಅಸ್ಸಾಂನ ನಗಾಂವ್‌ನಲ್ಲಿ ಸಫೀಕುಲ್ಲಾ ಇಸ್ಲಾಂ ಎಂಬವರು ಪೊಲೀಸ್‌ ವಶದಲ್ಲಿದ್ದಾಗ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡಿದ್ದ ಉದ್ರಿಕ್ತರು ಠಾಣೆಗೆ ಬೆಂಕಿ ಹಾಕಿದ್ದರು. ಮರುದಿನವೇ ಜಿಲ್ಲಾಡಳಿತ ಐವರು ಆರೋಪಿಗಳ ಮನೆಗಳನ್ನು ನೆಲಸಮಗೊಳಿಸಿತ್ತು. ಸರ್ಕಾರದ ಕ್ರಮವನ್ನು ನ್ಯಾಯಾಲಯ ತಪ್ಪು ಎಂದು ಹೇಳಿತ್ತು. ಈ ವರ್ಷದ ಮೇನಲ್ಲಿ ಅಸ್ಸಾಂ ಸರ್ಕಾರ ಐದು ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ ನೀಡಿದೆ.

* ಜೂನ್‌, 2022: ಬಿಜೆಪಿ ವಕ್ತಾರೆಯಾಗಿದ್ದ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಬಗ್ಗೆ ನೀಡಿದ ಹೇಳಿಕೆ ವಿವಾದದ ಸ್ವರೂಪ ಪಡೆದಿತ್ತು. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇದರ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಬಂಧನಕ್ಕೆ ಒಳಗಾಗಿದ್ದ ಪ್ರಮುಖ ಆರೋಪಿ, ರಾಜಕೀಯ ಮುಖಂಡ ಜಾವೇದ್‌ ಅಹಮದ್‌ ಅವರ ಮನೆಯನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸಲಾಗಿತ್ತು.   ಈ ಪ್ರಕರಣದ ಇನ್ನಿಬ್ಬರು ಆರೋಪಿಗಳ ಸಹರಾನ್‌ಪುರದಲ್ಲಿದ್ದ ಮನೆಗಳನ್ನೂ ದ್ವಂಸಗೊಳಿಸಲಾಗಿತ್ತು.

* ಮಾರ್ಚ್‌ 2023: ಬಂಧನದಲ್ಲಿದ್ದ ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್‌ಗಳಾಗಿದ್ದ ಮುಕ್ತಾರ್‌ ಅನ್ಸಾರಿ ಮತ್ತು ಅತೀಕ್‌ ಅಹಮದ್‌ ಅವರಿಗೆ ಸೇರಿದ ಮತ್ತು ಅವರ ಆಪ್ತರು, ಸಹಚರರ ಮನೆ, ಕಟ್ಟಡಗಳನ್ನು ದ್ವಂಸಗೊಳಿಸಲಾಗಿತ್ತು.

* ಜುಲೈ, 2023: ಹರಿಯಾಣದ ನೂಹ್‌ನಲ್ಲಿ ಜುಲೈ 31ರಂದು ವಿಶ್ವ ಹಿಂದೂ ಪರಿಷತ್‌ ಹಮ್ಮಿಕೊಂಡಿದ್ದ ಬೃಜ್‌ ಮಂಡಲ್‌ ಜಲಾಭಿಷೇಕ ಜಾತ್ರೆ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಮರ ನಡುವೆ ನಡೆದ ಹಿಂಸಾಚಾರದಲ್ಲಿ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಿಗೆ ಸೇರಿದ ಕಟ್ಟಡಗಳನ್ನು ನೆಲಸಮಗೊಳಿಸಿತ್ತು. ನೆಲಸಮ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಪಂಜಾಬ್‌–ಹರಿಯಾಣ ಹೈಕೋರ್ಟ್‌ ಸೂಚಿಸಿತ್ತು.

‘ಬುಲ್ಡೋಜರ್‌ ಬಾಬಾ’, ‘ಬುಲ್ಡೋಜರ್‌ ಮಾಮಾ’

‘ಬುಲ್ಡೋಜರ್‌ ನ್ಯಾಯ’ ಎಂದು ಕರೆಯಲಾಗುತ್ತಿರುವ ಈ ಕಾರ್ಯಾಚರಣೆ ಮೊದಲು ಶುರುವಾಗಿದ್ದು ಉತ್ತರ ಪ್ರದೇಶದಲ್ಲಿ. 2017ರಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾಂಗ್‌ಸ್ಟರ್‌ಗಳು, ಕೋಮುಗಲಭೆ, ಹಿಂಸಾಚಾರ ಪ್ರಕರಣಗಳು, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪಿಗಳ ಆಸ್ತಿಗಳನ್ನು ಬುಲ್ಡೋಜರ್‌ ಮೂಲಕ ನೆಲಸಮಗೊಳಿಸುವ ಪ್ರವೃತ್ತಿ ಅಲ್ಲಿ ಆರಂಭವಾಯಿತು. ಈ ಕಾರ್ಯಾಚರಣೆಯು ಅವರಿಗೆ ‘ಬುಲ್ಡೋಜರ್‌ ಬಾಬಾ’ ಎಂಬ ಹೆಸರನ್ನೇ ತಂದಿತ್ತಿದೆ. ಪ್ರಧಾನಿ ಮೋದಿ ಕೂಡ ಚುನಾವಣಾ ರ‍್ಯಾಲಿಗಳಲ್ಲಿ ಇದನ್ನು ಸಮರ್ಥಿಸಿಕೊಂಡಿದ್ದರು.

2020ರಲ್ಲಿ ಕಾನ್ಪುರದ ಬಿಕ್ರು ಗ್ರಾಮದಲ್ಲಿರುವ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಗೆ ಸೇರಿದ ಮನೆಯನ್ನು ನೆಲಸಮ ಮಾಡಿದ್ದು ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಎಂಟು ಮಂದಿ ಪೊಲೀಸ್‌ ಸಿಬ್ಬಂದಿಯ ಹತ್ಯೆ ಪ್ರಕರಣದಲ್ಲಿ ವಿಕಾಸ್‌ ದುಬೆ ಪ್ರಮುಖ ಆರೋಪಿಯಾಗಿದ್ದ.

ಉತ್ತರ ಪ್ರದೇಶವನ್ನು ಮಾದರಿಯಾಗಿಟ್ಟುಕೊಂಡು 2022ರಲ್ಲಿ ನೆರೆಯ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿದ್ದ ಶಿವರಾಜ್‌ಸಿಂಗ್‌ ಚೌಹಾಣ್‌ ನೇತೃತ್ವದ ಬಿಜೆಪಿ ಸರ್ಕಾರ ಅಲ್ಲೂ ಬುಲ್ಡೋಜರ್‌ ಕಾರ್ಯಾಚರಣೆಗೆ ಇಳಿಯಿತು. ಈ ಕಾರ್ಯಾಚರಣೆಯು ಚೌಹಾಣ್‌ ಅವರಿಗೆ ‘ಬುಲ್ಡೋಜರ್‌ ಮಾಮಾ’ ಎಂಬ ಹೆಸರನ್ನು ತಂದುಕೊಟ್ಟಿತು. ಚೌಹಾಣ್‌ ಅವರು ಇದೇ ವಿಚಾರವನ್ನು ಮುಂದಿಟ್ಟುಕೊಂಡು 2023ರ ಮಧ್ಯಪ್ರವೇಶ ವಿಧಾನಸಭಾ ಚುನಾವಣೆ ಎದುರಿಸಿದ್ದರು.

2022ರಲ್ಲೇ ಇದು ಬಿಜೆಪಿ ಆಡಳಿತದ ಹರಿಯಾಣ, ಅಸ್ಸಾಂಗೆ ವ್ಯಾಪಿಸಿತು. ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌, ಉತ್ತರಾಖಂಡ, ರಾಜಸ್ಥಾನದಲ್ಲೂ ಬುಲ್ಡೋಜರ್‌ಗಳು ಸದ್ದು ಮಾಡತೊಡಗಿವೆ. ಬಿಜೆಪಿ ಆಡಳಿತವಿರುವ ದೆಹಲಿ ಮಹಾನಗರ ಪಾಲಿಕೆಯಲ್ಲೂ ಇದನ್ನು ಅನುಷ್ಠಾನಕ್ಕೆ ತರಲಾಗಿದೆ.

ಕರ್ನಾಟಕದಲ್ಲೂ ‘ಬುಲ್ಡೋಜರ್‌ ನ್ಯಾಯ’ ಜಾರಿಗೆ ತರಲು ತೀವ್ರ ಒತ್ತಡ!

ಉತ್ತರ ಪ್ರದೇಶದ ಮಾದರಿಯಲ್ಲಿ ಕರ್ನಾಟಕದಲ್ಲೂ ‘ಬುಲ್ಡೋಜರ್‌ ನ್ಯಾಯ’ ಜಾರಿಗೆ ತರಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ತೀವ್ರ ಒತ್ತಡ ಬಂದಿತ್ತು. ಹಿಂಸಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಅಥವಾ ಧ್ವಂಸಗೊಳಿಸುವ ಮೂಲಕ ಅವರಿಗೆ ಶಿಕ್ಷೆ ವಿಧಿಸಬೇಕು ಎಂಬ ಒತ್ತಾಯವನ್ನು ಬಿಜೆಪಿಯ ಶಾಸಕರೇ ಮಾಡಿದ್ದರು. ‘ಬುಲ್ಡೋಜರ್‌ ಅಸ್ತ್ರ ರಾಜ್ಯದಲ್ಲಿ ಪ್ರಯೋಗಿಸುವುದಿಲ್ಲ’ ಎಂದು ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದರು. 

ಆಧಾರ: ಪಿಟಿಐ, ಬಿಬಿಸಿ, ಅಮ್ನೆಸ್ಟಿ ಇಂಟರ್‌ನ್ಯಾಷನಲ್‌, ಟೈಮ್‌ ನಿಯತಕಾಲಿಕ

******

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT