ಭಾರತದ ಜನಗಣತಿಗೆ ದೀರ್ಘವಾದ ಇತಿಹಾಸವಿದೆ. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಭಾರತದ ಮೊದಲ ಜನಗಣತಿ ನಡೆದಿತ್ತು. 1881ರ ಜನಗಣತಿಯ ನಂತರ ಪ್ರತಿ ಹತ್ತು ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸುತ್ತಾ ಬರಲಾಗಿತ್ತು. ಸ್ವಾತಂತ್ರ್ಯ ಬಂದ ಬಳಿಕವೂ ಇದು ಮುಂದುವರಿದಿತ್ತು. ಬರೋಬ್ಬರಿ 130 ವರ್ಷಗಳವರೆಗೆ ಇದನ್ನು ಮುಂದುವರಿಸಿಕೊಂಡು ಬರಲಾಗಿತ್ತು. 140ನೇ ವರ್ಷದಲ್ಲೂ ಇದು ಮುಂದುವರಿಯಲಿತ್ತು. 2021ರಲ್ಲಿ ಜನಗಣತಿಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಜನಗಣತಿಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಯಿತು. ನಂತರ ಜನಗಣತಿಗೆ ಕೇಂದ್ರ ಸರ್ಕಾರ ಆಸಕ್ತಿ ತೋರಲೇ ಇಲ್ಲ...

‘ರಾಷ್ಟ್ರವ್ಯಾಪಿ ಜಾತಿಗಣತಿಯನ್ನು ಮಾಡಲೇಬೇಕು ಎನ್ನುವ ಮೂಲಕ ಹಿಂದೂಗಳನ್ನು ಒಡೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಜನಗಣತಿಯ ಆಧಾರದಲ್ಲಿಯೇ ಸಂಪನ್ಮೂಲಗಳ ಹಂಚಿಕೆ ಆಗಬೇಕು ಎನ್ನುವುದಾದರೆ, ಮುಸ್ಲಿಮರ ಹಕ್ಕುಗಳನ್ನು ಮೊಟಕು ಮಾಡಲು ಕಾಂಗ್ರೆಸ್ ಬಯಸುತ್ತದೆಯೇ? ಈ ದೇಶದ ಜನಸಂಖ್ಯೆಯಲ್ಲಿ ಬಡವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ಜಾತಿ, ಧರ್ಮವನ್ನು ಮೀರಿ ದೇಶದ ಸಂಪನ್ಮೂಲಗಳ ಮೇಲೆ ಬಡವರಿಗೆ ಹಕ್ಕಿದೆ. ಮತಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜವನ್ನು ಕಾಂಗ್ರೆಸ್ ಒಡೆಯುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸಗಢದಲ್ಲಿ ಮಂಗಳವಾರ ನಡೆದ ರ್ಯಾಲಿಯಲ್ಲಿ ಹೇಳಿದ್ದಾರೆ.

ಬಿಹಾರದಲ್ಲಿ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಶೇ 84.46ರಷ್ಟು ಇತರೆ ಹಿಂದುಳಿದ ವರ್ಗ, ಅತ್ಯಂತ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಬಿಹಾರದಲ್ಲಿ ಇದ್ದಾರೆ ಎಂಬುದು ವರದಿಯಿಂದ ಗೊತ್ತಾಗಿದೆ.

ಜಾತಿಗಣತಿಯನ್ನು ಮಾಡಬೇಕು ಎನ್ನುವ ಒತ್ತಾಯಕ್ಕೂ ಹಲವು ವರ್ಷಗಳ ಇತಿಹಾಸವಿದೆ. ಇತ್ತೀಚಿನ ವರ್ಷಗಳಲ್ಲಿ ಈ ಆಗ್ರಹ ತೀವ್ರಗೊಂಡಿದೆ. ಪ್ರಮುಖ ವಿರೋಧ ಪಕ್ಷಗಳು ಈ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿವೆ. ಕೋವಿಡ್ ಕಾರಣದಿಂದ ಹೇಗೂ ಜನಗಣತಿ ಮಾಡಲಾಗಲಿಲ್ಲ. ಆದ್ದರಿಂದ ಈಗಲಾದರೂ ಜನಗಣತಿಯ ಹೊತ್ತಿನಲ್ಲೇ ಜಾತಿಗಣತಿಯನ್ನೂ ಮಾಡಿಬಿಡಿ ಎಂದೂ ವಿರೋಧ ಪಕ್ಷಗಳು ಹಾಗೂ ಇತರೆ ಹಿಂದುಳಿದ ವರ್ಗಗಳವರು ಒತ್ತಾಯಿಸುತ್ತಿದ್ದಾರೆ. ಜಾತಿಗಣತಿ ಬೇಡಿಕೆಯನ್ನು ಬಿಜೆಪಿ ಹಿಂದಿನಿಂದಲೂ ವಿರೋಧಿಸಿಕೊಂಡೇ ಬಂದಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು ಜನಗಣತಿಯನ್ನು ಮುಂದೂಡುತ್ತಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.

1990ರಲ್ಲಿ ಮಂಡಲ್ ಸಮಿತಿಯ ವರದಿಯನ್ನು ವಿ.ಪಿ. ಸಿಂಗ್ ಅವರು ಒಪ್ಪಿಕೊಂಡು ಶೇ 27ರಷ್ಟು ಮೀಸಲಾತಿಯನ್ನು ಇತರೆ ಹಿಂದುಳಿದ ವರ್ಗಕ್ಕೆ ನೀಡಿದರು. ಇದನ್ನು ವಿರೋಧಿಸಿ ಬಿಜೆಪಿಯು ರಾಷ್ಟ್ರಮಟ್ಟದಲ್ಲಿ ದೊಡ್ಡ ಹೋರಾಟವನ್ನೇ ಮಾಡಿತು. ‘ಮಂಡಲದ ವಿರುದ್ಧ ಕಮಂಡಲ’ ಎನ್ನುತ್ತಾ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ರಥಯಾತ್ರೆಯನ್ನು ಕೈಗೊಂಡರು. ಜಾತಿಗಳ ಆಧಾರದಲ್ಲಿ ಅಲ್ಲದೇ ‘ಹಿಂದೂ’ ಎಂಬ ಹೆಸರಿನಲ್ಲಿ ರಾಜಕೀಯ ಸಂಕಥನವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಿದರು. 2014ರಿಂದ ಈಚೆಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ‘ಹಿಂದೂ’ ಎನ್ನುವ ಸಂಕಥನದ ಅಡಿಯಲ್ಲಿಯೇ ರಾಜಕೀಯ ನಡೆಸಿದೆ. ಒಂದು ವೇಳೆ ಜಾತಿ ಆಧಾರಿತ ಗಣತಿ ಮಾಡಿತು ಅಂತಾದರೆ, ‘ಹಿಂದೂ’ ಎಂಬುದನ್ನು ಕೈಬಿಡಬೇಕಾಗಿ ಬರಬಹುದು ಎನ್ನುವುದು ಅದರ ಆತಂಕ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಮಂಡಲ್ ಸಮಿತಿ ವರದಿಯಲ್ಲಿ ಹೇಳಿದ ಮೀಸಲಾತಿಯನ್ನು ವಿರೋಧಿಸುವ ಸಂಕಥನವನ್ನು ಆರಂಭಿಸಲು, ಈ ವರದಿಯಿಂದಾಗಿ ಹುಟ್ಟಿಕೊಂಡ ಅನೇಕ ಪ್ರಾದೇಶಿಕ ಪಕ್ಷಗಳನ್ನು ಎದುರಿಸಲು ಬಿಜೆಪಿಗೆ ಹಲವು ವರ್ಷಗಳೇ ಬೇಕಾಯಿತು. ಈ ಎಲ್ಲ ಪ್ರಯತ್ನದ ಹಿನ್ನೆಲೆಯಲ್ಲಿಯೇ 2014ರಲ್ಲಿ ಬಿಜೆಪಿ ದೇಶದ ಅಧಿಕಾರದ ಗದ್ದುಗೆಗೆ ಏರಿತು. ಈ ಹಂತದಲ್ಲಿ ಜಾತಿಗಣತಿ ನಡೆಸಿದರೆ, ಬಿಜೆಪಿಯು ತನ್ನೆಲ್ಲಾ ರಾಜಕೀಯ ಸಂಕಥನಗಳನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಮತ್ತು ಪ್ರಸ್ತುತ ಅದು ತನ್ನ ರಾಜಕೀಯ ನೆಲೆಯನ್ನು ಕಳೆದುಕೊಳ್ಳುತ್ತದೆ. ಈ ಎಲ್ಲಾ ಆತಂಕಗಳ ಕಾರಣಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಜಾತಿಗಣತಿ ನಡೆಸಲು ಇಷ್ಟವಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರಲ್ಲಿ ಹಲವರ ಅಭಿಪ್ರಾಯವಾಗಿದೆ. ಪ್ರಧಾನಿ ಮೋದಿ ಅವರ ಹೇಳಿಕೆಯು ಈ ಎಲ್ಲಾ ಆತಂಕಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಅಂದರೆ, 2011ರಲ್ಲಿ ಜಾತಿಗಣತಿಯನ್ನು ಕೈಗೊಂಡಿತ್ತು. ಆದರೆ, ವರದಿಯನ್ನು ಬಹಿರಂಗಗೊಳಿಸಿರಲಿಲ್ಲ. ಕೊನೆಯ ಪಕ್ಷ ಈ ವರದಿಯನ್ನಾದರೂ ಬಹಿರಂಗಗೊಳಿಸಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಹಲವು ಬಾರಿ ಒತ್ತಾಯಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವು ಈ ವರದಿಯನ್ನೂ ಬಿಡುಗಡೆಗೊಳಿಸಿಲ್ಲ.

ಜನಗಣತಿ ಏಕೆ ಅಗತ್ಯ

l ದೇಶದಲ್ಲಿನ ಬಡತನದ ಪ್ರಮಾಣದ ನೈಜ ಚಿತ್ರಣ ದೊರೆಯುವುದಿಲ್ಲ. ಬಡತನ ನಿರ್ಮೂಲನೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ

l ದೇಶದಲ್ಲಿನ ಜನರ ಸಾಕ್ಷರತೆ ಪ್ರಮಾಣ ಎಷ್ಟು ಎಂಬುದನ್ನು ಜನಗಣತಿಯಲ್ಲಿ ಕಲೆಹಾಕಲಾಗುತ್ತದೆ. ಜನಗಣತಿಯೇ ನಡೆಯದಿದ್ದರೆ, ಈ ದತ್ತಾಂಶ ಸರ್ಕಾರಕ್ಕೆ ಲಭ್ಯವಾಗುವುದಿಲ್ಲ. ದೇಶದಲ್ಲಿ ಸಾಕ್ಷರತೆ ಯಾವ ಮಟ್ಟದಲ್ಲಿದೆ, ಸಾಕ್ಷರತೆ ಹೆಚ್ಚಿಸುವ ಉದ್ದೇಶದ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿವೆಯೇ, ಸಾಕ್ಷರತೆ ಹೆಚ್ಚಿಸಲು ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಕರಾರುವಾಕ್ಕಾಗಿ ನಿರ್ಧರಿಸಲು ಸಾಧ್ಯವಾಗುವುದಿಲ್ಲ

l ನಿರುದ್ಯೋಗದ ಪ್ರಮಾಣದ ಮಾಹಿತಿ ದೊರೆಯುವುದಿಲ್ಲ. ನಿರುದ್ಯೋಗ ನಿವಾರಣೆಗೆ ಪರಿಣಾಮಕಾರಿಯಾದ ನೀತಿ ರೂಪಿಸಲು ಆಗುವುದಿಲ್ಲ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್ಎಸ್ಒ) ಸಹ ನಿರುದ್ಯೋಗ ಪ್ರಮಾಣ ಕುರಿತು ವರದಿ ನೀಡುತ್ತದೆ. ಈಗ ಜನಗಣತಿಯ ದತ್ತಾಂಶಗಳು ಲಭ್ಯವಿಲ್ಲದೇ ಇರುವ ಕಾರಣ, ಎನ್ಎಸ್ಒವಿನ ನಿರುದ್ಯೋಗದ ವರದಿಗಳಲ್ಲಿ ನಿಖರತೆ ಇಲ್ಲ ಎಂದು ಅವುಗಳನ್ನು ತಡೆಹಿಡಿಯಲಾಗಿದೆ

ಹಲವು ಕೊರತೆಗಳು

ಕೇಂದ್ರ ಸರ್ಕಾರವು ಪ್ರತಿ ವರ್ಷ ಎಲ್ಲಾ ರಾಜ್ಯ ಸರ್ಕಾರಗಳಿಗೆ ಅನುದಾನವನ್ನು ಹಂಚಿಕೆ ಮಾಡುತ್ತದೆ. ಯಾವ ರಾಜ್ಯಕ್ಕೆ ಎಷ್ಟು ಅನುದಾನ ಹಂಚಿಕೆ ಮಾಡಬೇಕು ಎಂಬುದನ್ನು ಹಣಕಾಸು ಆಯೋಗವು ಶಿಫಾರಸು ಮಾಡುತ್ತದೆ. ಹೀಗೆ ಅನುದಾನದ ಪ್ರಮಾಣವನ್ನು ನಿಗದಿ ಮಾಡುವಲ್ಲಿ ಆಯಾ ರಾಜ್ಯದ ಜನಸಂಖ್ಯೆ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಹಣಕಾಸು ಆಯೋಗವು ಆಧಾರವಾಗಿ ಇಟ್ಟುಕೊಳ್ಳುತ್ತದೆ. ಈ ಕಾರಣದಿಂದಲೇ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ಬಡತನ ಹೆಚ್ಚಿರುವ ಬಿಹಾರ ಉತ್ತರ ಪ್ರದೇಶದಂತಹ ರಾಜ್ಯಗಳಿಗೆ ಹೆಚ್ಚು ಅನುದಾನ ದೊರೆಯುತ್ತದೆ. ಜನಸಂಖ್ಯೆ ಮತ್ತು ಆರ್ಥಿಕ ಸ್ಥಿತಿ ಎಲ್ಲಾ ರಾಜ್ಯಗಳಲ್ಲಿ ಎಲ್ಲಾ ಕಾಲಕ್ಕೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಅದು ಬದಲಾಗಿದೆ ಎಂಬುದು ಗೊತ್ತಾಗುವುದು ಜನಗಣತಿಯ ಮೂಲಕ ಮಾತ್ರ. ಈಗಿನ ಜನಗಣತಿ ದತ್ತಾಂಶಗಳು ಇಲ್ಲದೇ ಇರುವ ಕಾರಣಕ್ಕೆ ಈ ಹಿಂದೆ ಬಡತನ ಹೆಚ್ಚು ಇದ್ದು ಈಗ ಉತ್ತಮ ಸ್ಥಿತಿಯಲ್ಲಿ ಇರುವ ರಾಜ್ಯಗಳಿಗೆ ಹೆಚ್ಚು ಅನುದಾನ ಹಂಚಿಕೆಯಾಗುತ್ತಿರುವ ಸಾಧ್ಯತೆ ಇದೆ. ಉದಾಹರಣೆಗೆ: ಬಿಹಾರ ಮಧ್ಯ ಪ್ರದೇಶ ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳನ್ನು ಬಡತನ ಹೆಚ್ಚು ಇರುವ ಮತ್ತು ಅತಿಹಿಂದುಳಿದಿರುವ ರಾಜ್ಯಗಳು ಎಂದು ಗುರುತಿಸಲಾಗಿದೆ. ಈ ರಾಜ್ಯಗಳಲ್ಲಿ ಸಂಗ್ರಹವಾಗುವ ತೆರಿಗೆಗಿಂತ ಹಲವು ಪಟ್ಟು ಹೆಚ್ಚು ಅನುದಾನವನ್ನು ನೀಡಲಾಗುತ್ತದೆ. ಆದರೆ ಮಧ್ಯ ಪ್ರದೇಶ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಈಚೆಗೆ ಒಂದು ಮನವಿ ಮಾಡಿತ್ತು. ‘ನಮ್ಮಲ್ಲಿ ಆರ್ಥಿಕ ಸ್ಥಿತಿ ಸುಧಾರಿಸಿದೆ. ಹಾಗಾಗಿ ಅತಿಹಿಂದುಳಿದ ರಾಜ್ಯಗಳ ಪಟ್ಟಿಯಿಂದ ನಮ್ಮನ್ನು ತೆಗೆದುಹಾಕಬೇಕು’ ಎಂದು ಕೋರಿತ್ತು. ಆದರೆ ಜನಗಣತಿಯ ದತ್ತಾಂಶಗಳು ಇಲ್ಲದೆ ಕೇಂದ್ರ ಸರ್ಕಾರವು ಅಂತಹ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಎಲ್ಲಾ ರಾಜ್ಯಗಳಲ್ಲಿ ಬಡವರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಉಚಿತ ಮತ್ತು ಅತ್ಯಂತ ಕಡಿಮೆ ದರದಲ್ಲಿ ಪಡಿತರವನ್ನು ನೀಡಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಸಂಪೂರ್ಣ ಉಚಿತವಾಗಿ ಪಡಿತರ ನೀಡಲಾಗುತ್ತಿದೆ. ಇದರಲ್ಲಿ ಬಹುಪಾಲನ್ನು ಕೇಂದ್ರ ಸರ್ಕಾರವು ‘ಆಹಾರ ಭದ್ರತಾ ಕಾಯ್ದೆ’ಯ ಅಡಿಯಲ್ಲಿ ರಾಜ್ಯ ಸರ್ಕಾರಗಳಿಗೆ ಒದಗಿಸುತ್ತದೆ. ಹೀಗೆ ಕೇಂದ್ರ ಸರ್ಕಾರವು 2011ರ ಜನಗಣತಿಯ (121 ಕೋಟಿ) ಆಧಾರದಲ್ಲಿ 80 ಕೋಟಿ ಜನಕ್ಕೆ ತನ್ನ ಪಾಲಿನ ಪಡಿತರವನ್ನು ಒದಗಿಸುತ್ತಿದೆ. ಆದರೆ ಈಗ ಭಾರತದ ಜನಸಂಖ್ಯೆ 141 ಕೋಟಿಯನ್ನು ಮೀರಿದೆ ಎಂದು ವಿಶ್ವ ಸಂಸ್ಥೆ ಅಂದಾಜಿಸಿದೆ. ವಿಶ್ವ ಬ್ಯಾಂಕ್ನ ವರದಿಯ ಪ್ರಕಾರ ಈಗ ಭಾರತವು 97 ಕೋಟಿ ಜನರಿಗೆ ಪಡಿತರ ಒದಗಿಸಬೇಕಿತ್ತು. ಜನಸಂಖ್ಯಾ ವರದಿ ಇಲ್ಲದೇ ಇರುವ ಕಾರಣಕ್ಕೆ 80 ಕೋಟಿ ಜನರಿಗಷ್ಟೇ ಪಡಿತರ ಒದಗಿಸಲಾಗುತ್ತಿದ್ದು 13 ಕೋಟಿಗೂ ಹೆಚ್ಚು ಜನ ಈ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಕೇಂದ್ರ ಸರ್ಕಾರವೇ ರಾಜ್ಯಸಭೆಗೆ ಮಾಹಿತಿ ನೀಡಿತ್ತು. ಕೇಂದ್ರದ ಪಡಿತರದ ಪಾಲಿನಿಂದ ಬಿಟ್ಟುಹೋದ ಅರ್ಹ ಜನರಿಗೆ ರಾಜ್ಯ ಸರ್ಕಾರಗಳು ಪಡಿತರವನ್ನು ಒದಗಿಸುತ್ತಿವೆ. ಜನಗಣತಿಯ ದತ್ತಾಂಶಗಳು ಇಲ್ಲದೆ ಕೇಂದ್ರ ಸರ್ಕಾರವು ಪಡಿತರದಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳಲು ಆಗುವುದಿಲ್ಲ.

ಯಾವ ದತ್ತಾಂಶವೂ ಇಲ್ಲ. ಕೇವಲ ಅಂದಾಜಷ್ಟೆ...

ಜನಗಣತಿಯ ದತ್ತಾಂಶಗಳು ಇಲ್ಲದೇ ಇದ್ದರೆ ಕೇಂದ್ರ ಸರ್ಕಾರವು ತನ್ನೆಲ್ಲಾ ಯೋಜನೆಗಳಿಗೆ ಯಾವ ದತ್ತಾಂಶಗಳನ್ನು ಆಧಾರವಾಗಿ ತೆಗೆದುಕೊಂಡಿದೆ ಎಂಬುದು ಪ್ರಶ್ನೆ. ವಿರೋಧ ಪಕ್ಷಗಳ ಸದಸ್ಯರೂ ರಾಜ್ಯಸಭೆಯಲ್ಲಿ ಇದೇ ಪ್ರಶ್ನೆ ಕೇಳಿದ್ದರು. ಆ ಪ್ರಶ್ನೆಗೆ 2022ರ ಜುಲೈನಲ್ಲಿ ಉತ್ತರಿಸಿದ್ದ ಗೃಹಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ‘ಸರ್ಕಾರದ ಬಳಿ 2011–2036ರ ಜನಸಂಖ್ಯಾ ಅಂದಾಜು ವರದಿ ಇದೆ’ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ಟೆಕ್ನಿಕಲ್ ಗ್ರೂಪ್ ಸಿದ್ಧಪಡಿಸಿರುವ ಈ ಅಂದಾಜು ವರದಿಯಲ್ಲಿನ ದತ್ತಾಂಶಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಅವರು ವಿವರಿಸಿದ್ದರು. ಜನಸಂಖ್ಯಾ ಅಂದಾಜು ಆಧಾರದಲ್ಲಿ ಯಾವೆಲ್ಲಾ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂಬುದರ ಮಾಹಿತಿಯನ್ನು ಸರ್ಕಾರ ನೀಡಿಲ್ಲ. ಅಂದಾಜು ವರದಿಯಲ್ಲಿ ವಿವಿಧ ವಯಸ್ಸಿನ ಜನರ ಪ್ರಮಾಣ ಲಿಂಗಾನುಪಾತದ ವಿವರಗಳಷ್ಟೇ ಇವೆ. ಸಾಕ್ಷರತೆ ಪ್ರಮಾಣ ಬಡತನದ ಪ್ರಮಾಣ ನಿರುದ್ಯೋಗದ ಪ್ರಮಾಣದ ವಿವರಗಳು ಇಲ್ಲ. ಈ ಎಲ್ಲಾ ದತ್ತಾಂಶಗಳನ್ನು ಸಮೀಕ್ಷೆ ರೂಪದಲ್ಲಿ ಸಂಗ್ರಹಿಸುವ ರಾಷ್ಟ್ರೀಯ ಮಾದರಿ ಸಮೀಕ್ಷೆ ಸಹ ನಡೆದಿಲ್ಲ. ಹಾಗಿದ್ದಲ್ಲಿ ಬಡತನ ನಿರ್ಮೂಲನೆಗೆ ಉದ್ಯೋಗ ಸೃಷ್ಟಿಗೆ ಮತ್ತು ಅನಕ್ಷರತೆ ನಿವಾರಣೆಗೆ ಕ್ರಮ ತೆಗೆದುಕೊಳ್ಳಲು ಸರ್ಕಾರವು ಯಾವ ದತ್ತಾಂಶಗಳನ್ನು ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಇಲ್ಲ.

ಭಾರತದಲ್ಲಿ ಒಂದು ವೇಳೆ 2021ರಲ್ಲಿ ನಿಗದಿಯಂತೆ ಜನಗಣತಿ ನಡೆದಿದ್ದರೆ ಮೊದಲ ಹಂತದ ಪ್ರಕ್ರಿಯೆ ಸೆಪ್ಟೆಂಬರ್ನಲ್ಲಿ ಆರಂಭವಾಗಬೇಕಿತ್ತು. ಅಂದಿಗೆ ಸೆ. 1ರಂದು ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 69921 ಇತ್ತು. ಎರಡನೇ ಹಂತದ ಪ್ರಕ್ರಿಯೆ ಫೆಬ್ರುವರಿಯಲ್ಲಿ ಆರಂಭವಾಗಬೇಕಿತ್ತು. ಅಂದಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ 11427 ಇತ್ತು.

2019ರಿಂದ ಜಗತ್ತನ್ನು ಕಾಡಿದ ಕೊರೊನಾ ಸೋಂಕು ಎಲ್ಲಾ ದೇಶಗಳ ಆಡಳಿತ ವ್ಯವಸ್ಥೆಯನ್ನೂ ಬುಡಮೇಲು ಮಾಡಿತು. ಅಂತೆಯೇ ಕೆಲವು ದೇಶಗಳಲ್ಲಿ ನಡೆಯಬೇಕಿದ್ದ ಜನಗಣತಿ ಪ್ರಕ್ರಿಯೆಯನ್ನೂ ಕಾಡಿತು. ಆದರೂ ಕೆಲವು ದೇಶಗಳು ತಮ್ಮ ಜನಗಣತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ವರದಿಗಳನ್ನು ಬಿಡುಗಡೆ ಮಾಡಿವೆ. ಈ ಪಟ್ಟಿಯಲ್ಲಿ ಇಟಲಿಯಲ್ಲಿ 2021ರಲ್ಲಿ ಗಣತಿ ಪ್ರಕ್ರಿಯೆ ಆರಂಭವಾದ ಮಾಹಿತಿ ಇದ್ದು ಯಾವ ತಿಂಗಳಿನಲ್ಲಿ ಆರಂಭವಾಯಿತು ಎಂಬ ಮಾಹಿತಿ ದೊರಕದ ಕಾರಣ 2021ರ ಜನವರಿ 1 ಸಕ್ರಿಯ ಪ್ರಕರಣ ಮಾಹಿತಿಯನ್ನು ನೀಡಲಾಗಿದೆ. ಇತರ ದೇಶಗಳಿಗೆ ಸಂಬಂಧಿಸಿ ಜನಗಣತಿ ಆರಂಭಗೊಂಡ ತಿಂಗಳ ಮೊದಲ ದಿನದ ಸಕ್ರಿಯ ಪ್ರಕರಣಗಳ ಮಾಹಿತಿಯನ್ನು ನೀಡಲಾಗಿದೆ.

ಆಧಾರ: ಪಿಟಿಐ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿದ್ದ ಉತ್ತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.