ಶಿವಕುಮಾರ ಸ್ವಾಮೀಜಿ

ಏಪ್ರಿಲ್ 1 1908 – ಜನವರಿ 21 2019

‘ಸದ್ದುಗದ್ದಲವಿಲ್ಲದ ಸಾಧನೆ ಇಲ್ಲಿ ಗದ್ದುಗೆಯೇರಿದೆ ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ...’ ಎನ್ನುವ ಕವಿ ಜಿ.ಎಸ್. ಶಿವರುದ್ರಪ್ಪ ಅವರ ನಾಲ್ಕು ಸಾಲುಗಳಷ್ಟೇ ಸಾಕು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಹಿರಿಮೆಯನ್ನು ಹೇಳಲು. ಬೆಳಕು ಉಳಿಸಿ ಮರೆಯಾಗಿರುವ ಕನ್ನಡದ ಈ ಅಧ್ಯಾತ್ಮ ಸೂರ್ಯ ನಾಡಿನ ಲಕ್ಷ ಲಕ್ಷ ಮಕ್ಕಳಿಗೆ ಅನ್ನದಾನದ ಜತೆಗೆ ವಿದ್ಯಾದಾನವನ್ನೂ ಮಾಡಿ ಬದುಕು ಉದ್ಧರಿಸಿದವರು. ಸಂತರ ಸಂತತಿ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿ ನಿಂತವರು. ಯಾವುದೇ ಬಿರುದು–ಬಾವಲಿಗಳ ಕಡೆಗೆ ಕಣ್ಣೆತ್ತಿ ನೋಡದೆ ಕಾಯಕಯೋಗದ ಮಹತ್ವವನ್ನೂ ಸಾರಿದವರು. ನಿತ್ಯ ಇಷ್ಟಲಿಂಗದ ಪೂಜೆ ಮಾಡುತ್ತಾ ತ್ರಿವಿಧ ದಾಸೋಹದ ಕೈಂಕರ್ಯ ನೆರವೇರಿಸುತ್ತಾ ಬಂದವರಿಗೆಲ್ಲ ತಾಯಿ ಮಮತೆಯನ್ನು ತೋರುತ್ತಾ ಬಂದಿದ್ದ ಈ ಶತಮಾನದ ಸಂತ ಕೊನೆಗೆ ತಾವೇ ದೇವರ ಸ್ವರೂಪವನ್ನು ತಾಳಿಬಿಟ್ಟವರು. ಐದು ತಲೆಮಾರುಗಳ ಶಿಷ್ಯಬಳಗವನ್ನು ಪೋಷಿಸಿದ ಮಹಾತ್ಮ ಅವರು. ನಾಡಿನ ತುಂಬಾ ಸದ್ದುಗದ್ದಲವಿಲ್ಲದೆ ವಿದ್ಯೆಯ ಹಣತೆ ಬೆಳಗಿ ಸಾಮಾನ್ಯರ ಮನೆಗಳ ನಂದಾದೀಪವಾದ ಇಂತಹ ಸಂತನನ್ನು ಪಡೆದಿದ್ದು ಕನ್ನಡ ನಾಡಿನ ಭಾಗ್ಯ.

ಪಿ.ಲಂಕೇಶ್

ಮಾರ್ಚ್ 8 1935 – ಜನವರಿ 25 2000

ಪಿ.ಲಂಕೇಶ್ ಆಧುನಿಕ ಕನ್ನಡ ಸಾಹಿತ್ಯದ ಬಹು ಮುಖ್ಯ ಲೇಖಕ; ಕಥೆ ಕಾದಂಬರಿ ಕಾವ್ಯ ನಾಟಕ ಹೀಗೆ ತಾವು ಬರೆದ ಪ್ರತಿ ಪ್ರಕಾರದಲ್ಲಿಯೂ ಮೌಲ್ಯಯುತವಾದ ಕೃತಿಗಳನ್ನು ಕೊಟ್ಟವರು. ಮನುಷ್ಯನ ಕೇಡಿನ ಸ್ವಭಾವ ಸಣ್ಣತನ ವ್ಯಕ್ತಿತ್ವದ ವೈರುಧ್ಯಗಳನ್ನು ಶೋಧಿಸಿ ಸಾಹಿತ್ಯ ರಚನೆ ಮಾಡಿದವರು ಲಂಕೇಶ್. ಲೋಹಿಯಾವಾದಿಯಾಗಿದ್ದ ಅವರು ಕರ್ನಾಟಕದ ಸಮಾಜವಾದಿ ಚಳವಳಿಯ ಪ್ರಮುಖ ಭಾಗವಾಗಿದ್ದರು. ಎರಡು ದಶಕ ಇಂಗ್ಲಿಷ್ ಅಧ್ಯಾಪಕರಾಗಿದ್ದ ಲಂಕೇಶ್ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಸಿನಿಮಾ ನಿರ್ದೇಶನಕ್ಕಿಳಿದರು; ಮೊದಲ ಚಿತ್ರಕ್ಕೇ (ಪಲ್ಲವಿ) ರಾಷ್ಟ್ರಪ್ರಶಸ್ತಿ ಪಡೆದರು. ನಂತರ ‘ಲಂಕೇಶ್ ಪತ್ರಿಕೆ’ ಆರಂಭಿಸಿ ತಮ್ಮ ನಿರ್ಭೀತ ಬರವಣಿಗೆಯ ಮೂಲಕ ಜಾಣ ಜಾಣೆಯರ ಮನ ಗೆದ್ದರು; ವಿವಿಧ ಜಾತಿ ಧರ್ಮಗಳ ಹತ್ತಾರು ಹೊಸ ಲೇಖಕರ ಸೃಷ್ಟಿಗೆ ಕಾರಣರಾದರು. ‘ಪ್ರಗತಿ ರಂಗ’ ಸ್ಥಾಪಿಸಿ ಪರ್ಯಾಯ ರಾಜಕೀಯದ ಪ್ರಯತ್ನವನ್ನೂ ಮಾಡಿದರು. ಅತ್ಯುತ್ತಮ ಗದ್ಯ ಬರಹಗಾರರಾಗಿದ್ದ ಲಂಕೇಶ್ ತಮ್ಮ ಜಾತ್ಯತೀತ ಚಿಂತನೆಗೆ ಕಠೋರ ನಿಲುವಿಗೆ ಬಹುಮುಖ ಪ್ರತಿಭೆಗೆ ಹೆಸರಾಗಿದ್ದರು. ಅವರು ತಮ್ಮ ಸಾಹಿತ್ಯ ಕೃತಿಗಳು ಪತ್ರಿಕೆ ಸಾಮಾಜಿಕ ಕ್ರಿಯೆಗಳ ಮೂಲಕ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ಚಿರಂತನ ಪ್ರಭಾವವನ್ನು ಉಳಿಸಿದ್ದಾರೆ.

ಕಿರಣ್ ಮಜುಂದಾರ್ ಶಾ

ಜನನ: ಮಾರ್ಚ್ 23 1953

ಜಗತ್ತಿನ ನಕಾಶೆಯಲ್ಲಿ ಬೆಂಗಳೂರು ‘ಐಟಿ–ಬಿಟಿ’ ಸಿಟಿ ಎಂದೇ ಗುರುತಿಸಿಕೊಳ್ಳುತ್ತಿದೆ. ಉದ್ಯಾನನಗರಿಗೆ ‘ಐಟಿ’ಯೊಂದಿಗೆ ‘ಬಿಟಿ’ ವಿಶೇಷಣ ಸೇರಲು ಪ್ರಮುಖ ಕಾರಣ ಬಯೋಕಾನ್ ಸಂಸ್ಥೆ. ಜೈವಿಕ ತಂತ್ರಜ್ಞಾನ ಔಷಧ ತಯಾರಿಕಾ ಕ್ಷೇತ್ರದಲ್ಲಿ ಇದು ಲೋಕವಿಖ್ಯಾತ. ಇದರ ಹಿಂದಿನ ಶಕ್ತಿ ಕಿರಣ್ ಮಜುಂದಾರ್ ಶಾ. ಅವರು ಹುಟ್ಟಿದ್ದು ಬೆಳೆದಿದ್ದು ಬೆಂಗಳೂರಿನಲ್ಲಿ. ಮಹಿಳೆಯರು ಮನೆ ಕೆಲಸಕ್ಕಷ್ಟೇ ಸೀಮಿತ ಎಂಬಂತಹ ವಾತಾವರಣ ಇದ್ದ ಕಾಲದಲ್ಲೇ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದು ಮಾತ್ರವಲ್ಲದೇ 1978ರಲ್ಲಿ ಕೇವಲ ₹10 ಸಾವಿರ ಬಂಡವಾಳ ಹೂಡಿ ತಮ್ಮ ಮನೆಯಲ್ಲೇ ಕಂಪನಿ ಹುಟ್ಟುಹಾಕಿದವರು ಅವರು. ಜೈವಿಕ ತಂತ್ರಜ್ಞಾನ ಪ್ರವರ್ಧನಮಾನಕ್ಕೆ ಬರುತ್ತಿದ್ದ ಹೊತ್ತಿನಲ್ಲಿ ಹೆಜ್ಜೆ ಹೆಜ್ಜೆಗೂ ಎದುರಾದ ಸವಾಲುಗಳನ್ನು ಮೆಟ್ಟಿನಿಂತು ದೊಡ್ಡ ಉದ್ಯಮಿಯಾಗಿ ಜಗತ್ತಿನ ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಶಾ ಮಹತ್ವಾಕಾಂಕ್ಷಿ ಮಹಿಳೆಯರಿಗೆ ಬಹು ದೊಡ್ಡ ಆದರ್ಶ. ಸದಾ ಭಿನ್ನವಾಗಿ ಆಲೋಚಿಸುವ ಗುಣಸ್ವಭಾವದ ಶಾ ಲೋಕಹಿತೈಷಿ ಯಾಗಿಯೂ ಗುರುತಿಸಿಕೊಂಡಿದ್ದಾರೆ. ಎಲ್ಲರಿಗೂ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ಔಷಧ ಸಿಗಬೇಕು ಎಂಬ ಆಶಯ ಹೊಂದಿರುವ ಅವರು ನಾರಾಯಣ ಹೆಲ್ತ್ನ ಸಹಯೋಗದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಸ್ಥಾಪಿಸಿದ್ದಾರೆ. ಅವರ ಮುಕುಟ ಏರಿರುವ ಜಾಗತಿಕ ಮಟ್ಟದ ಹಲವು ಪ್ರಶಸ್ತಿಗಳು ದೇಶದ ಉನ್ನತ ನಾಗರಿಕ ಪುರಸ್ಕಾರಗಳಾದ ಪದ್ಮಶ್ರೀ ಪದ್ಮ ಭೂಷಣಗಳು ಅವರು ಜೈವಿಕ ತಂತ್ರಜ್ಞಾನ ಆರೋಗ್ಯ ಕ್ಷೇತ್ರ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸಾಕ್ಷೀಕರಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.