ವಾಟ್ಸ್‌ಆ್ಯಪ್ ಗ್ರೂಪ್‌ವೊಂದರಲ್ಲಿ ಹರಡಿದ ಬಾಳೆಕಾಯಿ ತಿನಿಸಿನ ಘಮ, ಊರು–ಕೇರಿಯ ಗಡಿ ದಾಟಿ ಮನೆ–ಮನೆಯನ್ನು ಇಣುಕುತ್ತಿದೆ. ಅಡುಗೆ ಮನೆಯ ಹೊಸ ಪ್ರಯೋಗಗಳು ಮೌಲ್ಯವರ್ಧನೆ, ಪರ್ಯಾಯ ಬಳಕೆಯ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತಿವೆ. ಹೀಗೆ ನಡೆದ ಪ್ರಯೋಗ ಸರಪಣಿಯಲ್ಲಿ ಸೂಜಿಗಲ್ಲಿನಂತೆ ಸೆಳೆದಿದ್ದು ಬಾಳೆಕಾಯಿ ಹುಡಿಯಿಂದ ತಯಾರಿಸಿದ ವೈವಿಧ್ಯ ತಿನಿಸುಗಳು.

ಬೆಲೆ ಕಳೆದುಕೊಂಡು ಬಸವಳಿದಿದ್ದ ಬಾಳೆಕಾಯಿ, ಲಾಕ್‌ಡೌನ್ ವೇಳೆಗೆ ರೈತರಿಗೆ ಭಾರವಾಯಿತು. ಬಲಿತ ಗೊನೆಗಳನ್ನು ಕಡಿದು ಗೊಬ್ಬರ ಗುಂಡಿಗೆ ಎಸೆಯಬೇಕು ಅಥವಾ ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡಬೇಕು, ಇವೆರಡೇ ಮಾರ್ಗಗಳು ರೈತರ ಪಾಲಿಗೆ ಉಳಿದವು. ಬಾಳೆಕಾಯಿ ಚಿಪ್ಸ್, ಬಾಳೆಹಣ್ಣಿನ ಸುಕ್ಕೇಳಿ (ಒಣಗಿಸಿದ ಹಣ್ಣು) ಇವು ಹೆಚ್ಚು ಪ್ರಚಲಿತ ಉತ್ಪನ್ನಗಳು. ಹೊರತುಪಡಿಸಿದರೆ, ಬಾಳೆಕಾಯಿ ಮೌಲ್ಯವರ್ಧನೆಯ ಪ್ರಯತ್ನಗಳು ನಡೆದಿದ್ದು ಅಲ್ಲಲ್ಲಿ ಬಿಡಿಬಿಡಿಯಾಗಿ ಮಾತ್ರ ಅನ್ನಬಹುದು.

ಮನೆಯಲ್ಲಿ ಬೆಳೆದ ಬಾಳೆಕಾಯಿ ಹಾಳಾಗಿ ಹೋಗುವುದನ್ನು ಕಂಡು ಹಲವರು ಹೊಸ ರುಚಿಯ ಪ್ರಯೋಗ ಶುರು ಮಾಡಿದರು. ತುಮಕೂರು ಜಿಲ್ಲೆ ಅತ್ತೀಕಟ್ಟೆಯ ನಯನಾ ಆನಂದ ಅವರು ಮನೆಯಲ್ಲಿ ಮಾಡಿದ ‘ಬಾಳೆಕಾಯಿ ಖಾದ್ಯಗಳ ಸಪ್ತಾಹ’ದ ತುಣುಕನ್ನು ‘ಎಟಿವಿ’ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡರು. ಗುಂಪಿನ ಸದಸ್ಯರಲ್ಲಿ ಹಲವರು ಕುತೂಹಲಿಗಳಾದರು. ನಯನಾ ಅವರ ಉತ್ಸಾಹ ಕಂಡ, ಹಲಸಿನ ಅಂತರರಾಷ್ಟ್ರೀಯ ರಾಯಭಾರಿ ಶ್ರೀಪಡ್ರೆ ಅವರು, ಬಾಳೆಕಾಯಿ ಹುಡಿ(ಬಾಕಾಹು) ಸೇರಿದಂತೆ ವಿವಿಧ ಗೃಹ ಉತ್ಪನ್ನ ತಯಾರಿಸುವ ಕೇರಳದ ಜಯಾಂಬಿಕಾ, ನೇಂದ್ರ ಬಾಳೆಯನ್ನು ಖರೀದಿಸಿ, ಆರು ತಿಂಗಳುಗಳಲ್ಲಿ 100 ಕೆ.ಜಿ ಬಾಕಾಹು ಮಾರಾಟ ಮಾಡಿದ ಬಗ್ಗೆ ಮಾಹಿತಿ ನೀಡಿದರು.

ನಯನಾ ಅವರಿಗೆ ಬಾಕಾಹು ತಯಾರಿಕೆಯ ತುಡಿತ ಇನ್ನಷ್ಟು ಹೆಚ್ಚಾಯಿತು. ಶ್ರೀಪಡ್ರೆ ಅವರು ಆಲೆಪ್ಪಿ ಕೃಷಿ ವಿಜ್ಞಾನ ಕೇಂದ್ರದ ಜೆಸ್ಸಿ ಜಾರ್ಜ್ ಅವರನ್ನು ಪರಿಚಯಿಸಿದರು. ಜೆಸ್ಸಿ ಜಾರ್ಜ್ ಅವರಿಂದ ಮೊಬೈಲ್ ಫೋನ್‌ನಲ್ಲಿ ಮಾರ್ಗದರ್ಶನ ಪಡೆದ ನಯನಾ, ಒಂದು ವಾರದ ಅಂತರದಲ್ಲಿ ಒಣಗಿಸಿದ ಬಾಳೆಕಾಯಿ, ಅದರ ಪಕ್ಕದ ಬೌಲ್‌ನಲ್ಲಿ ಬಾಕಾಹು ಇರುವ ಪಟವನ್ನು ಕೊಲಾಜ್ ಮಾಡಿ ಗ್ರೂಪ್‌ನಲ್ಲಿ ಅಂಟಿಸಿದರು. ಹಲಸಿಗೆ ಮಾರುಕಟ್ಟೆ ಮೌಲ್ಯ ಕಟ್ಟಿಕೊಡುವಲ್ಲಿ ಶ್ರಮಿಸಿರುವ ಶ್ರೀಪಡ್ರೆ ಅವರು ಈ ಪಟವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.

ಇಲ್ಲಿಯವರೆಗೆ ಮನೆಯಲ್ಲಿ ನಡೆದಿದ್ದ ಪಾಕ ಪ್ರಯೋಗಗಳು ಮೊಬೈಲ್‌ನಿಂದ ಹೊರ ಬಂದು ಗುಂಪಿನಿಂದ ಗುಂಪಿಗೆ ಜಿಗಿಯಲಾರಂಭಿಸಿದವು. ಫೇಸ್‌ಬುಕ್ ಪುಟವೇರಿ ಕುಳಿತವು. ಬಿಡಿ ಬಿಡಿಯಾಗಿ ನಡೆದ ಅಡುಗೆಮನೆ ಆವಿಷ್ಕಾರಗಳು ತೆರೆಯ ಮೇಲೆ ಬಂದವು.

ಉತ್ತರ ಕನ್ನಡ ಜಿಲ್ಲೆ ಶಿರಸಿ ಊರತೋಟದ ಸುಬ್ರಾಯ ಹೆಗಡೆ ಅವರು, ಜಿ 9 ಬಾಳೆಕಾಯಿಯಿಂದ ಸಿದ್ಧಪಡಿಸಿದ ಹುಡಿಯ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಮಲೆನಾಡಿನಲ್ಲಿ ಸದ್ದು ಮಾಡಿರುವ ಈ ಬಾಕಾಹು ಮಾರುಕಟ್ಟೆಯಲ್ಲಿ ಈಗ ದೊಡ್ಡ ಬೇಡಿಕೆಯನ್ನು ಸೃಷ್ಟಿಸಿದೆ. ಗೃಹ ಉತ್ಪನ್ನ ತಯಾರಿಸಲು ಅನೇಕರನ್ನು ಪ್ರೇರೇಪಿಸಿದೆ.

ಮಧುಮೇಹಿಗಳಿಗೆ ಉತ್ತಮ ಆಹಾರ:ಊರತೋಟದ ಸುಬ್ಬಣ್ಣ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ– ‘ಹಲಸಿನ ಹಣ್ಣಿನ ಬಾರ್, ಡ್ರೈ ಸೊಳೆ, ಬಾಳೆಹಣ್ಣಿನ ಸುಕ್ಕೇಳಿ ಇವೆಲ್ಲವನ್ನು ಹಲವು ವರ್ಷಗಳಿಂದ ತಯಾರಿಸುತ್ತಿದ್ದೇವೆ. ಈಗ ಬಾಳೆಕಾಯಿ ದರ ಇಳಿದಿದೆ. ತಳಿ ಆಧರಿಸಿ, ಕೆ.ಜಿ.ಯೊಂದಕ್ಕೆ ₹ 4ರಿಂದ ₹ 14ರವರೆಗೆ ದರ ಇದೆ. ಕರಿಬಾಳೆ, ಜಿ 9 ಅಂತೂ ಕೇಳುವವರಿಲ್ಲ. ಪರ್ಯಾಯ ಉತ್ಪನ್ನದ ಬಗ್ಗೆ ಯೋಚಿಸಿದಾಗ, ಬಾಳೆಕಾಯಿ ಹುಡಿ ಮಾಡುವ ಯೋಚನೆ ಬಂತು. ರಾಗಿ, ಗೋಧಿ, ಜೋಳದ ಹಿಟ್ಟಿನಂತೆ ಬಾಳೆಕಾಯಿ ಹಿಟ್ಟಿನಲ್ಲಿ ರೊಟ್ಟಿ, ಚಪಾತಿ ತಯಾರಿಸಬಹುದು. ರೊಟ್ಟಿ, ದೋಸೆ, ವಡಪೆ (ತಾಳಿಪಿಟ್ಟು), ಕೋಡುಬಳೆ ಹೀಗೆ ಬೇರೆ ಬೇರೆ ತಿನಿಸುಗಳು ರುಚಿಯ ಗ್ರಂಥಿಯನ್ನು ಕೆರಳಿಸುತ್ತವೆ. ಇದು ನಾಲಿಗೆಗೆ ರುಚಿಯಷ್ಟೇ ಅಲ್ಲ, ಆರೋಗ್ಯವರ್ಧಕ. ಮಧುಮೇಹಿಗಳಿಗೆ ಉತ್ತಮ ಆಹಾರ.

‘ಇನ್ನೂ ಇದು ಪ್ರಾಯೋಗಿಕ ಹಂತ. ಒಂದು ಕ್ವಿಂಟಲ್ ಬಾಳೆಕಾಯಿಗೆ ಅಂದಾಜು 20 ಕೆ.ಜಿ ಹುಡಿ ದೊರೆಯುತ್ತದೆ. ಬಾಳೆಕಾಯಿ ತಾಳಿ (ಸ್ಲೈಸ್) ಮಾಡಿ ಡ್ರೈಯರ್‌ನಲ್ಲಿಟ್ಟರೆ ಎರಡು ದಿನಕ್ಕೆ ಗರಿಗರಿಯಾಗುತ್ತದೆ. ಸುಲಭಕ್ಕೆ ಹುಡಿ ತಯಾರಿಸಬಹುದು. ಆದರೆ, ಡ್ರೈಯರ್ ಮಾತ್ರ ಇರಬೇಕು. ಬಾಳೆಕಾಯಿ ಸುಲಿಯುವುದು ತುಸು ಕಷ್ಟ. ನಂತರದ ಕೆಲಸಗಳೆಲ್ಲ ಸಲೀಸು.

‘ಬಾಕಾಹು ತಯಾರಿಸಿದ ಮೇಲೆ ಹೊಸತೇನೋ ಸಂಶೋಧಿಸಿದ ಖುಷಿಯಲ್ಲಿ, 80 ವರ್ಷ ದಾಟಿದ ನನ್ನ ಚಿಕ್ಕಮ್ಮನ ಬಳಿ ಇದನ್ನು ಹಂಚಿಕೊಂಡೆ. ಆರೇಳು ದಶಕದ ಹಿಂದೆ ಬರಗಾಲದ ಸಂದರ್ಭದಲ್ಲಿ ವಾರಗಟ್ಟಲೆ ಬಾಳೆಕಾಯಿ, ಬಾಳೆಕಾಯಿ ಹುಡಿಯಿಂದ ತಯಾರಿಸಿದ ರೊಟ್ಟಿ ತಿಂದು ನಮ್ಮ ಅಜ್ಜ–ಅಜ್ಜಿಯರೆಲ್ಲ ಬದುಕಿದ ಕತೆಯನ್ನು ಅವರು ತೆರೆದಿಟ್ಟರು. ಆಗ ನನಗೆ ಅನ್ನಿಸಿದ್ದು ಆರ್ಥಿಕ ಸಮೃದ್ಧಿಯಲ್ಲಿ ಹಿತ್ತಲ ಹೊನ್ನು ಮರೆತು ಕುರುಡಾದೆವಾ ?

‘ಹಾಲಿನ ಹೊರತಾಗಿಯೂ ರೈತನಿಗೆ ಜಾನುವಾರು ಅವಲಂಬನೆ ಅನಿವಾರ್ಯ. ಹಾಗೆಯೇ ಅಡಿಕೆ ತೋಟಕ್ಕೆ ಬಾಳೆಗಿಡ. ಬಾಳೆ ರೈತರಿಗೆ ಉಪ ಆದಾಯ. ತೋಟಕ್ಕೆ ಮಲ್ಚಿಂಗ್ ಮಾಡಲು, ಕಳೆ ನಿಯಂತ್ರಿಸಲು ಬಾಳೆ ಗಿಡಗಳು ಸಹಕಾರಿ. ಹೀಗೆ ಬೆಳೆಯುವ ಬಾಳೆಯಿಂದ ರೈತ ಮನೆಯಲ್ಲೇ ಬಾಕಾಹು ಸಿದ್ಧಪಡಿಸಿಕೊಂಡರೆ, ಪ್ರೋಟಿನ್ ಪೌಡರ್ ಹುಡುಕಿಕೊಂಡು ಔಷಧ ಅಂಗಡಿಗೆ ಹೋಗಬೇಕಾಗಿಲ್ಲ.

ಬೇಳೆ–ಕಾಳಿನ ಸಾಲಿನಲ್ಲಿ ಇದೊಂದು ಡಬ್ಬವಿರಲಿ: ‘ಬಾಕಾಹು ಶತಮಾನಗಳಿಂದ ಬಳಕೆಯಲ್ಲಿದೆ. ಕೇರಳದಲ್ಲಿ ಕನ್ನಂಗಾಯಂ (ಕುನ್ನಂಗಾಯಂ) ಎನ್ನುವ ಬಾಳೆ ಶಿಶು ಆಹಾರಕ್ಕೆ ಬಳಕೆಯಾಗುತ್ತದೆ. ಕೇರಳದಲ್ಲಿ ಕೆಲವು ಕಂಪನಿಗಳು ಬಾಕಾಹು (banana flour, banana atta) ಸಿದ್ಧ ಉತ್ಪನ್ನವನ್ನು ಮಾರುಕಟ್ಟೆ ಮಾಡುತ್ತಿವೆ. ಸಣ್ಣ ಸಣ್ಣ ಉದ್ದಿಮೆಗಳು ಅಲ್ಲಲ್ಲಿ ಇವೆ. ಕರ್ನಾಟಕದಲ್ಲಿ ಗಮನಸೆಳೆಯಬಹುದಾದ ಇಂತಹ ಪ್ರಯತ್ನ ನಡೆದಿದ್ದು ಕಡಿಮೆ’ ಎನ್ನುತ್ತಾರೆ ಶ್ರೀಪಡ್ರೆ.

‘ಊರತೋಟದ ಸುಬ್ರಾಯ ಹೆಗಡೆ ಅವರ ಪ್ರಯೋಗ ಈಗ ಮಲೆನಾಡು–ಕರಾವಳಿಯ ಹಲವರಲ್ಲಿ ಹುಮ್ಮಸ್ಸು ಮೂಡಿಸಿದೆ. ಅಡುಗೆಮನೆಯ ಮಿಕ್ಸಿಯಲ್ಲಿ ಒಣಗಿಸಿದ ಬಾಳೆಕಾಯಿ ಸದ್ದು ಮಾಡುತ್ತಿದೆ. ತೀರ್ಥಹಳ್ಳಿಯ ಕೊಯ್ಲೋತ್ತರ ಸಂಸ್ಕರಣಾ ಕೇಂದ್ರದಲ್ಲಿ ಬಾಕಾಹು ಮಿಂಚುತ್ತಿದೆ. ಶೃಂಗೇರಿಯ ನಾಗಾನಂದ ಅವರು ಬಾಳೆಕಾಯಿ ಹಪ್ಪಳ ಮಾಡುತ್ತಾರೆ. ಬಾಕಾಹು ಮಾಡುವ ತಯಾರಿಯಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿತ ಆದಾಗ ಮಾತ್ರ ಇದರ ಚಿಂತನೆ ಮಾಡಿದರೆ ಸಾಲದು, ಇಂತಹ ಪ್ರಯೋಗಗಳು ನಿರಂತರವಾಗಿ ನಡೆಯಬೇಕು. ಅಡುಗೆಮನೆ ಶೆಲ್ಫ್‌ನಲ್ಲಿ ಕಡಲೆಬೇಳೆ, ಉದ್ದಿನಬೇಳೆ ಡಬ್ಬಿಯ ಸಾಲಿನಲ್ಲಿ ಬಾಕಾಹು ಡಬ್ಬವೂ ಇರಲಿ’ ಎಂಬುದು ಅವರ ಸಲಹೆ.

ಆಹಾರ ತಜ್ಞರ ಅಭಿಪ್ರಾಯ ಏನು?
ಅಕ್ಕಿ, ಆಲೂಗೆಡ್ಡೆಯಲ್ಲಿದ್ದಂತೆ, ಬಾಳೆಕಾಯಿಯಲ್ಲೂ ಕಾರ್ಬೊಹೈಡ್ರೇಟ್ ಇರುತ್ತದೆ. ಇದರಲ್ಲಿ ಸ್ಟಾರ್ಚ್ ಅಂಶ ಇರುತ್ತದೆ. ಆದರೆ, ಬಾಳೆಕಾಯಿಯಲ್ಲಿರುವುದು ಬಹುತೇಕ ‘ರೆಸಿಸ್ಟೆನ್ಸ್ ಸ್ಟಾರ್ಚ್‘. ಅಂದರೆ, ಈ ಸ್ಟಾರ್ಚ್‌ನಲ್ಲಿರುವ ಕ್ಯಾಲೊರಿ ಪ್ರಮಾಣ, ಅಕ್ಕಿ ಮತ್ತಿತರ ವಸ್ತುಗಳ ಸ್ಟಾರ್ಚ್‌ನಲ್ಲಿರುವ ಕ್ಯಾಲೊರಿಯ ಪ್ರಮಾಣಕ್ಕಿಂತ ಅರ್ಧಕ್ಕರ್ಧ ಕಡಿಮೆ. ಉದಾಹ ರಣೆಗೆ– ಅಕ್ಕಿಯಲ್ಲಿರುವ ಸ್ಟಾರ್ಚ್ ದೇಹಕ್ಕೆ ಶೇ 4 ಕ್ಯಾಲೊರಿ ಬಿಡುಗಡೆ ಮಾಡಿದರೆ, ಬಾಳೆಕಾಯಿಯಲ್ಲಿನ ಸ್ಟಾರ್ಚ್ ಶೇ 2 ರಷ್ಟು ಬಿಡುಗಡೆ ಮಾಡುತ್ತದೆ. ಈ ಸ್ಟಾರ್ಚ್ ನಿಧಾನವಾಗಿ ಜೀರ್ಣವಾಗುತ್ತದೆ. ಮಧುಮೇಹಿಗಳಿಗೆ ಆಹಾರ ನಿಧಾನವಾಗಿ ಜೀರ್ಣವಾಗಬೇಕು ಹಾಗೂ ಕಾರ್ಬೊಹೈಡ್ರೇಟ್ ಅಂಶ ಕಡಿಮೆಯಿರುವ ಆಹಾರ ಸೇವಿಸಬೇಕು. ಇವೆರಡೂ ಬಾಳೆಕಾಯಿ ಖಾದ್ಯದಿಂದ ಸಾಧ್ಯವಾಗುತ್ತದೆ. ಹಾಗಾಗಿ, ಬಾಳೆಕಾಯಿ ಖಾದ್ಯ ಮಧುಮೇಹಿಗಳಿಗೆ ಉತ್ತಮ ಆಹಾರವಾಗುತ್ತದೆ.

ಬಾಳೆಕಾಯಿ ಹುಡಿಯನ್ನು ಬೇರೆ ಬೇರೆ ಹಿಟ್ಟುಗಳ ಜೊತೆ ಬೆರೆಸಿ ಖಾದ್ಯಗಳನ್ನು ತಯಾರಿಸಿ ಸೇವಿಸಿದರೆ, ದೇಹಕ್ಕೆ ಪೂರಕ ಪೋಷಕಾಂಶಗಳು ಲಭ್ಯವಾಗುತ್ತವೆ. ಈಗಾಗಲೇ ಸಿರಿಧಾನ್ಯಗಳನ್ನು ಬೇರೆ ಬೇರೆ ಧಾನ್ಯಗಳೊಂದಿಗೆ ಬೆರೆಸಿ ಪದಾರ್ಥಗಳನ್ನು ತಯಾರಿಸುವ ಪದ್ಧತಿ ರೂಢಿಯಲ್ಲಿದೆ. ಇದನ್ನೂ ಒಂದು ಪ್ರಯತ್ನವನ್ನಾಗಿ ಪರಿಗಣಿಸಬಹುದು.
– ಕೆ. ಸಿ. ರಘು, ಆಹಾರ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.