ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಅವರು ಹೆತ್ತವರಿಂದ ಪಡೆದುಕೊಂಡು ಬಂದ ವಂಶವಾಹಿಗಳ ಜೊತೆಗೆ ಸೇವಿಸುವ ಆಹಾರ ಮತ್ತು ಸುತ್ತಮುತ್ತಲಿನ ಪರಿಸರ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮಾನವಜನಾಂಗವು ಪ್ರಗತಿ ಸಾಧಿಸುತ್ತಿದ್ದಂತೆ ಕಳೆದ ಕೆಲವು ದಶಕಗಳಲ್ಲಿ ಒಂದು ಬೆಳೆಯುವ ಮಗುವಿನ ಸುತ್ತಮುತ್ತವಿರುವ ಪರಿಸರವು ಬಹಳಷ್ಟು ಬದಲಾಗಿದೆ. ಹಿಂದಿನ ತಲೆಮಾರಿನಲ್ಲಿ ಅವಿಭಕ್ತ ಕುಟುಂಬದೊಳಗೆ ಬೆಳೆಯುವ ಮಗುವಿನ ಸುತ್ತಲಿದ್ದ ಪರಿಸರವು ಮಗುವಿನ ಮಾನಸಿಕ ವಿಕಸನದಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತಿತ್ತು. ಮನೆಯಲ್ಲಿ ಹತ್ತಾರು ಜನರಿದ್ದರು ಮತ್ತು ವಿವಿಧ ವಯಸ್ಸಿನ ಇತರೆ ಮಕ್ಕಳ ಜೊತೆಗೆ ಒಡನಾಡಿಕೊಂಡು ಬೆಳೆಯುವ ಅವಕಾಶ ಮಗುವಿಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಬೆಳೆದ ಮಕ್ಕಳ ಭಾಷೆಯ ಕೌಶಲ ಮತ್ತು ಭಾವನಾತ್ಮಕ ಬುದ್ಧಿವಂತಿಕೆ ಉನ್ನತ ಮಟ್ಟದಲ್ಲಿರುತ್ತಿತ್ತು. ಬೆಳೆಯುವ ಮಗುವಿನ ಸುತ್ತಮುತ್ತ ಮಾತನಾಡುವವರು ಹೆಚ್ಚು ಜನರಿದ್ದಷ್ಟು ವೇಗವಾಗಿ ಒಂದು ಮಗು ತನ್ನ ಶಬ್ದಬಂಡಾರವನ್ನು ಹೆಚ್ಚಿಸಿಕೊಂಡು ತನ್ನ ಮಾತೃಭಾಷೆಯನ್ನು ಸುಲಭವಾಗಿ ಕಲಿತುಬಿಡುತ್ತಿತ್ತು. ತನಗಿಂತ ಸ್ವಲ್ಪ ಹಿರಿಯ ಮತ್ತು ಕಿರಿಯ ಮಕ್ಕಳ ಜೊತೆಯಲ್ಲಿ ಆಟವಾಡುವ ಮಗುವು ಆಯಾ ವಯಸ್ಸಿನಲ್ಲಿ ತಾನು ಸಾಧಿಸಬೇಕಾದ ಸಾಮಾಜಿಕ ಮೈಲುಗಲ್ಲುಗಳನ್ನು ತಲುಪಿಬಿಡುತ್ತಿತ್ತು. ಆಟಿಕೆಗಳನ್ನು ಹಂಚಿಕೊಳ್ಳುವುದು, ಗೊಂಬೆಯ ಜೊತೆಗೆ ಮಾತನಾಡುವುದು ಮತ್ತು ಹಿರಿಯರನ್ನು ಅನುಕರಣೆ ಮಾಡಲು ಪ್ರಯತ್ನಿಸುವುದು ಮುಂತಾದ ಬೆಳವಣಿಗೆಗಳನ್ನು ಒಂದು ಮಗುವು ಸೂಕ್ತ ಸಮಯದಲ್ಲಿ ಮಾಡುವುದು ಅದರ ಮಾನಸಿಕ ಬೆಳವಣಿಗೆಗೆ ಅನಿವಾರ್ಯ!

ಮಗುವಿನ ಮನೋವಿಕಾಸದಲ್ಲಿ ಸುತ್ತಮುತ್ತಲಿನ ಪರಿಸರವು ಪೂರಕವಾಗಿರದಿದ್ದರೆ ಅದು ಆ ಮಗುವಿನ ವ್ಯಕ್ತಿತ್ವದ ಮೇಲೆ ಜೀವನಪರ್ಯಂತ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ. ಹುಟ್ಟಿದ ಸಮಯದಿಂದ ಮೊದಲ ಹದಿನೆಂಟು ತಿಂಗಳುಗಳ ತನಕ ಮಗುವಿನ ತಾಯಿ ಮತ್ತು ಮನೆಯವರು ಮಗುವಿನ ಅಳುವಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸುತ್ತಾ ಸರಿಯಾದ ಸಮಯದಲ್ಲಿ ಹಾಲುಣಿಸುವುದು ಕೂಡ ಅತ್ಯಗತ್ಯ. ಇದರಿಂದ ಮಗುವಿನ ಮನದಲ್ಲಿ ತಾನು ರಕ್ಷಿತ ವಾತಾವರಣದಲ್ಲಿ ಬೆಳೆಯುತ್ತಿದ್ದೇನೆ ಎಂಬ ಆತ್ಮವಿಶ್ವಾಸದ ಭಾವನೆಯು ಮೂಡುತ್ತದೆ ಮತ್ತು ಅದು ತನ್ನ ಸುತ್ತಮುತ್ತಲಿರುವ ಪ್ರಪಂಚ ಮತ್ತು ಜನರ ಮೇಲೆ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸಿಕೊಳ್ಳುತ್ತದೆ. ಒಂದು ವೇಳೆ ಮಗುವಿನ ಅಳುವಿಗೆ ಮತ್ತು ಅಗತ್ಯತೆಗಳಿಗೆ ಸ್ಪಂದನೆಯು ದೊರೆಯದಿದ್ದರೆ ಮಗುವು ಅಳುಕು ಮತ್ತು ಅನುಮಾನದೊಂದಿಗೆ ಬೆಳೆಯುತ್ತದೆ. ಇದು ಮುಂದೆ ಆ ಮಗುವಿನ ವ್ಯಕ್ತಿತ್ವದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರುತ್ತದೆ.

ಎರಡರಿಂದ ಮೂರು ವರ್ಷದ ಮಗುವು ತಾನು ಸ್ವಾವಲಂಬಿಯಾಗುವತ್ತ ಮತ್ತು ತನ್ನ ಆಹಾರ ಮತ್ತು ಆಟಿಕೆಗಳ ಆಯ್ಕೆಯಲ್ಲಿ ತನ್ನದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನಃಸ್ಥಿತಿಯನ್ನು ರೂಪಿಸಿಕೊಳ್ಳಲು ಪ್ರಯತ್ನ ಮಾಡುತ್ತದೆ. ಸುತ್ತಮುತ್ತಲಿನ ಪರಿಸರವು ಮಗುವಿಗೆ ಉತ್ತೇಜನ ನೀಡಿದರೆ ಮುಗುವು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಆತ್ಮವಿಶ್ವಾಸ ಬೆಳೆಸಿಕೊಳ್ಳುತ್ತದೆ. ಮುಂದಿನ ಕೆಲವು ವರ್ಷಗಳಲ್ಲಿ ಮಗುವು ಇತರ ಮಕ್ಕಳ ಜೊತೆಗೆ ಆಟವಾಡಲು, ಮಾತನಾಡಲು ಮತ್ತು ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪ್ರಾರಂಭಿಸುತ್ತದೆ. ಯಾವುದೆ ಹೊಸ ಕಲೆಯನ್ನು ಕಲಿಯುವಾಗ ಮಗುವು ಮೊದಲ ಬಾರಿಗೆ ಸೋತರೆ ಅದರ ಆತ್ಮವಿಶ್ವಾಸವನ್ನು ಕುಗ್ಗಿಸುವ ಮಾತುಗಳನ್ನು ಆಡಬಾರದು. ಮಗುವಿನ ಸುತ್ತಮುತ್ತ ಬೆದರಿಸುವ (‘ಬುಲ್ಲಿಯಿಂಗ್’) ವಾತಾವರಣ ಇರಬಾರದು. ಸುತ್ತಲಿನ ವಾತಾವರಣವು ಉತ್ತೇಜನಕಾರಿಯಿದ್ದರೆ ಮಗುವು ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಹೊಸ ಮೈಲುಗಳನ್ನು ದಾಟುತ್ತ ತನ್ನ ಕೌಶಲವನ್ನು ಹೆಚ್ಚಿಸಿಕೊಳ್ಳುತ್ತದೆ. ‘ಗುಮ್ಮ ಬರುತ್ತದೆ’ ಎಂದು ಹೆದರಿಸುವುದು ಮತ್ತು ಮಗುವಿನ ಕಣ್ಣುಗಳನ್ನು ದಿಟ್ಟಿಸಿ ನೋಡುವಂತಹ ನಡೆವಳಿಕೆಗಳೂ ಮಗುವಿನ ಮಾನಸಿಕ ಬೆಳವಣಿಗೆಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನು ಬೀರಿಬಹುದು. ವಿದೇಶಗಳಲ್ಲಿ ಇಂತಹ ನಡೆವಳಿಕೆಗಳು ಅಪಾಯಕಾರಿ ಎಂಬ ಅರಿವಿದೆ. ಆದರೆ ನಮ್ಮ ದೇಶದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಇಂತಹ ನಡವಳಿಕೆಗಳು ಚಾಲ್ತಿಯಲ್ಲಿದೆ.

ಬೆಳೆಯುವ ಮಗುವಿಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ತುಂಬದೆ ಅದು ತೆಗೆದುಕೊಳ್ಳಬಹುದಾದ ಪ್ರತಿಯೊಂದು ನಿರ್ಧಾರದಲ್ಲಿಯೂ ಹೆತ್ತವರು ಮತ್ತು ಮನೆಯ ಹಿರಿಯರು ಮಧ್ಯೆ ಪ್ರವೇಶಿಸಿದರೆ ಆ ಮಗುವಿನಲ್ಲಿ ಆತ್ಮವಿಶ್ವಾಸವು ಬೆಳೆಯುವುದಿಲ್ಲ. ಅಂತಹ ಮಕ್ಕಳು ಹೊಸ ಕೌಶಲಗಳನ್ನು ಕಲಿಯುವ ಆಸಕ್ತಿಯನ್ನೂ ಕ್ರಮೇಣವಾಗಿ ಕಳೆದುಕೊಳ್ಳುತ್ತಾರೆ. ಮಗುವಿನ ಅಗತ್ಯತೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರೆ ಮತ್ತು ಮಗುವಿನ ಬೆಳವಣಿಗೆಯ ಬಗ್ಗೆ ಗಮನಹರಿಸಲು ಯಾರೂ ಇಲ್ಲದಿದ್ದಾಗ ಮಗುವಿನ ಮನಸ್ಸಿನಲ್ಲಿ ಅಭದ್ರತೆ ಮತ್ತು ಅಸುರಕ್ಷತೆ ಕಾಡುತ್ತದೆ. ಅಂತಹ ಮಕ್ಕಳು ಕೂಡ ಆತಂಕದಲ್ಲಿ ಬೆಳೆಯುತ್ತವೆ. ದೈಹಿಕವಾದ ದಂಡನೆಯೂ ಮಕ್ಕಳ ಮನಸ್ಸಿನಲ್ಲಿ ಆತಂಕ ಮತ್ತು ಅಭದ್ರತೆಗೆ ಕಾರಣವಾಗುತ್ತದೆಯೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹೀಗಾಗಿ ಮಕ್ಕಳಿಗೆ ಹೊಡೆಯುವುದಾಗಲಿ, ಬೈಯುವುದಾಗಲಿ ಸೂಕ್ತವಲ್ಲ. ಮಗು ಮಾತು ಕೇಳದಿದ್ದಾಗ ಅಥವಾ ಅತಿಯಾದ ತುಂಟತನ ಮಾಡಿದಾಗ ಮಗುವಿಗೆ ದೃಢವಾಗಿ ಮತ್ತು ಶಾಂತವಾಗಿ ತಿಳಿಹೇಳಲು ಪ್ರಯತ್ನಿಸಬೇಕು. ಮಗುವು ಆಗಲೂ ಸುಧಾರಿಸದಿದ್ದರೆ ಮಗುವಿನ ಜೊತೆಗೆ ಮೂರು-ನಾಲ್ಕು ನಿಮಿಷಗಳ ಕಾಲ ಮಾತನಾಡದಿರುವ ಮೂಲಕ (Time out technique) ಮಗುವಿನ ತಪ್ಪು ನಡವಳಿಕೆಗೆ ನಿಮ್ಮ ಆಕ್ಷೇಪಣೆಯನ್ನು ಸಲ್ಲಿಸಬೇಕು. ಸೂಕ್ಷ್ಮ ಮನಸ್ಸುಗಳನ್ನು ಸೂಕ್ಷ್ಮ ರೀತಿಯಲ್ಲಿಯೂ ಸೂಕ್ತರೀತಿಯಲ್ಲೂ ನಿಭಾಯಿಸುವ ಕಲೆಯನ್ನು ಹೆತ್ತವರು ಮತ್ತು ಮನೆಯವರು ಕಲಿತುಕೊಂಡಾಗ ಬೆಳೆಯುವ ಸಿರಿ, ಮೊಳಕೆಯಲ್ಲಿ ಬಾಡುವುದಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.