ಈಗ್ಗೆ ಸರಿಯಾಗಿ 15 ವರ್ಷಗಳ ಹಿಂದೆ ಅಮೆರಿಕದಲ್ಲಿದ್ದ ನಮ್ಮ ತಂದೆಯ ಸ್ನೇಹಿತರೊಬ್ಬರು (ಅವರೂ ಮನೋವೈದ್ಯರೇ) ಅಪ್ಪ-ಅಮ್ಮನ ಬಳಿ ಮಕ್ಕಳ ಮದುವೆಯ ಬಗ್ಗೆ ಮಾತನಾಡುವಾಗ ಹೇಳಿದ್ದರು: ‘ಇಲ್ಲಿ ನೀವೆಲ್ಲ ಜಾತಿ-ಅಂತಸ್ತು-ಪ್ರೀತಿಯ ಬಗ್ಗೆ ಮದುವೆ ಮಾಡುವಾಗ ತಲೆ ಕೆಡಿಸಿಕೊಳ್ಳುತ್ತೀರಿ.

ಆದರೆ ಈಗ ನಮಗೆ ಒಂದೇ ಚಿಂತೆ - ಹುಡುಗ ಹುಡುಗಿಯನ್ನು ಮದುವೆಯಾದರೆ ಸಾಕು ಅಂತ! ಹುಡುಗಿ ಹುಡುಗಿಯನ್ನೂ, ಹುಡುಗ ಹುಡುಗನನ್ನೂ ಮದುವೆಯಾಗದಿದ್ದರೆ ಅದೇ ನಮ್ಮ ಪುಣ್ಯ ಅಂತ ಅಂದುಕೊಳ್ತೇವೆ’.

ಇಪ್ಪತರ ವಯಸ್ಸಿನ ಯುವಕನನ್ನು ಕರೆದುಕೊಂಡು ಬಂದ ತಾಯಿ-ತಂದೆ ನನ್ನನ್ನು ಕೇಳಿದ ಪ್ರಶ್ನೆ: ‘ಡಾಕ್ಟ್ರೇ ಇವನು ಏನಾದ್ರೂ ‘‘ಬೇರೆ’’ ತರಹ ಇರಬಹುದಾ ಅಂತ ಹೆದರಿಕೆಯಾಗುತ್ತೆ. ಹೇಗೆ ಡಾಕ್ಟ್ರೇ ಅದನ್ನು ಕಂಡುಹಿಡಿಯೋದು?’

ಲೇಖಕರೊಬ್ಬರ ಸಲಿಂಗಕಾಮದ ಸಂಬಂಧಗಳನ್ನೇ ವಸ್ತುವಾಗುಳ್ಳ ಕಥಾಸಂಕಲನ ಹೊರಬಂದಾಗ ಅದರ ಬಗೆಗೆ ಸಾಹಿತ್ಯ ಸಂಘವೊಂದರಲ್ಲಿ ಪುಸ್ತಕ ವಿಮರ್ಶಾ ಉಪನ್ಯಾಸ ಮಾಲಿಕೆಯಲ್ಲಿ ಉಪನ್ಯಾಸ ಏರ್ಪಡಿಸೋಣ ಎಂದೆ.

ಆಗ ಬಂದಿದ್ದು ಬಲವಾದ ವಿರೋಧ. ಪುಸ್ತಕ ಪ್ರಕಾಶಕರೊಬ್ಬರು ‘ಇಂಥ ಪುಸ್ತಕದ ಬಗೆಗೆ ಉಪನ್ಯಾಸ ನಡೆಸುವಂಥದ್ದೇನೂ ಇಲ್ಲ. ಬೇಕಾದರೆ ಇಟ್ಟುಕೊಳ್ಳಿ. ಆದರೆ ಯಾರೂ ಬರೋಲ್ಲ. ಮನೋವೈದ್ಯರು ನೀವು. ಇಂಥದ್ದನ್ನೆಲ್ಲಾ ಸಮರ್ಥಿಸಿದರೆ ಯುವಜನತೆಗೆ ತಪ್ಪು ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಹಾಗೆ’ ಎಂದಿದ್ದರು.

ಬೆಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಟೋಲ್‌ಗೇಟ್ ಮುಂದೆ ನಿಂತಾಗ ಮತ್ತೆ ಮತ್ತೆ ಬಂದು ಚಪ್ಪಾಳೆ ತಟ್ಟುವ, ದುಡ್ಡು ಕೇಳುವ, ಬೆಂಗಳೂರಿನಲ್ಲಿ ಎಲ್ಲೇ ಹೋದರೂ ಕಣ್ಣಿಗೆ ಬೀಳುವ, ದುಡ್ಡು ಕೀಳುವ-ಕೇಳುವ ‘ತೃತೀಯ ಲಿಂಗಿ’ಗಳನ್ನು ನೋಡಿ ಹತ್ತು ವಯಸ್ಸಿನ ಒಳಗಿನ ನನ್ನ ಮಕ್ಕಳು ಕೇಳಿದ್ದು ‘ಇವರು ಏಕೆ ಈ ಥರಾ ಇದಾರೆ? ಒಂಥರಾ ಕಾಣ್ತಾರೆ? ಅವರಿಗ್ಯಾಕೆ ದುಡ್ಡು ಕೊಡಬೇಕು?’

ಮನೋವೈದ್ಯಕೀಯ ಶಾಸ್ತ್ರ ಒಂದು ‘ಜೀವಂತಶಾಸ್ತ್ರ.’ ಇಲ್ಲಿ ಜೀವಂತ ಎಂದರೆ ಬರೀ ಪ್ರತಿದಿನ ಹೊಸ ಸಂಶೋಧನೆಗಳು, ಹೊಸ ಔಷಧಿಗಳು ಬರುತ್ತವೆ ಎಂದಲ್ಲ. ಅದು ಎಲ್ಲ ವೈದ್ಯಕೀಯ ಕ್ಷೇತ್ರಗಳಲ್ಲಿಯೂ ನಡೆಯುತ್ತವೆಯಷ್ಟೆ.

ಆದರೆ ಮನೋವೈದ್ಯಕೀಯ ಕ್ಷೇತ್ರ ಸಮಾಜದ ಆಗುಹೋಗುಗಳಿಗೆ ನಿರಂತರವಾಗಿ ಸ್ಪಂದಿಸುತ್ತದೆ. ಮಿದುಳಿನಲ್ಲಿ ಏನು ನಡೆಯುತ್ತದೆ ಎನ್ನುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಮಕ್ಕಳು ಇಂದು ಹೇಗೆ ಇಂಟರ್‌ನೆಟ್‌ಗೆ, ಮೊಬೈಲ್‌ಗಳಿಗೆ ಅಂಟಿಕೊಳ್ಳುತ್ತಾರೆ ಎನ್ನುವುದು. ಈ ಚಟಕ್ಕೆ ವೈಜ್ಞಾನಿಕ ಕಾರಣ ಏನು, ಅದಕ್ಕೆ ತಂದೆ-ತಾಯಿ-ವಾತಾವರಣ ಹೇಗೆ ಪ್ರತಿಕ್ರಿಯಿಸುತ್ತಾರೆ – ಎನ್ನುವುದೂ ಕೂಡ ಅಷ್ಟೇ ಗಮನಾರ್ಹವಾಗುತ್ತವೆ.

ಹಾಗಾಗಿಯೇ ಮನೋವೈದ್ಯಕೀಯ ಶಾಸ್ತ್ರ, ‘ಸಲಿಂಗಕಾಮ’ವನ್ನು ಹೇಗೆ ನೋಡುತ್ತದೆ, ಅರ್ಥ ಮಾಡಿಕೊಳ್ಳುತ್ತದೆ, ಅದನ್ನು ‘ಕಾಯಿಲೆ’ ಎನ್ನುತ್ತದೆಯೆ, ಇಲ್ಲವೆ – ಎಂಬ ಬಗ್ಗೆ ನೋಡೋಣ.

ಸಮಾಜ ‘ಕೆಟ್ಟದ್ದು’ ಎಂದು ನೋಡುವ ಹಲವನ್ನು ‘ಮದ್ಯವ್ಯಸನ’, ‘ಜೂಜು’ ಇತ್ಯಾದಿಗಳನ್ನು ಮನೋವೈದ್ಯಕೀಯ ‘ಕಾಯಿಲೆ’ ಎಂದು ಗುರುತಿಸಿ ನಿರ್ದಿಷ್ಟ ಕಾರಣಗಳನ್ನು ಕೊಟ್ಟು ‘ಚಿಕಿತ್ಸೆ’ಯನ್ನೂ ನೀಡುತ್ತದಷ್ಟೆ. ಈಗ್ಗೆ 20–30 ವರ್ಷಗಳ ಹಿಂದೆ ‘ಸಲಿಂಗಕಾಮ’ವನ್ನೂ ಕಾಯಿಲೆಯೆಂದೇ ಭಾವಿಸಲಾಗುತ್ತಿತ್ತು.

ಹಲವು ಹಿರಿಯ ಮನೋವೈದ್ಯರು ತಾವು ಯುವ ಮನೋವೈದ್ಯರಾಗಿದ್ದಾಗ ತಾವು ನೋಡಿದ, ಚಿಕಿತ್ಸೆ ನೀಡಿದ, ಫಲಕಾರಿಯಾದ, ಫಲಕಾರಿಯಾಗದ ಇಂಥ ‘ರೋಗಿ’ಗಳ ಬಗೆಗಿನ ತಮ್ಮ ಅನುಭವಗಳನ್ನು ಇಂದೂ ಹಂಚಿಕೊಳ್ಳುತ್ತಾರೆ.

ತಮ್ಮ ‘ಮರೆಯಲಾಗದ ರೋಗಿ’ಗಳ ಪಟ್ಟಿಯಲ್ಲಿ ಇಂಥ ‘ರೋಗಿ’ಗಳ ಆತ್ಮಹತ್ಯೆಯ ಪ್ರಸಂಗಗಳನ್ನೂ ದಾಖಲಿಸಿದ್ದಾರೆ. ಸಮಾಜ ಒಪ್ಪಿಕೊಳ್ಳದ, ತಮ್ಮ ‘ಗೇ’ಯತೆ ಸ್ವತಃ ತಮಗೆ ಅಸಹನೀಯವೆನಿಸಿದಂಥ, ಅಪಾರ ನೋವಿನ ಸಂದರ್ಭಗಳು ಇವು. ‘ಫೈರ್’ನಂತಹ ಸಲಿಂಗಕಾಮದ ಚಿತ್ರ ಬಂದಾಗಲೂ ಅಷ್ಟೆ. ಚಿತ್ರ ‘ಸುದ್ದಿ’ ಮಾಡಿತಾದರೂ, ಸಮಾಜದ ಒಂದು ವರ್ಗದ ಜನ ಮಾತ್ರ ‘ಹೊರಗೆ’ ಅದರ ಪ್ರಶಂಸೆ ಮಾಡಿದರು.

ಅವರೂ ಕೂಡ ತಮ್ಮ ಮನದೊಳಗೆ ಎಷ್ಟು ಒಪ್ಪಿದ್ದರು ಎಂಬುದು ಇಂದಿಗೂ ಪ್ರಶ್ನೆಯೆ! ಇಂದು ಸಮಾಜ ಬದಲಾದಂತೆ, ಮನೋವೈದ್ಯಕೀಯ ವರ್ಗೀಕರಣ ಪದ್ಧತಿಯೂ ಬದಲಾಗುತ್ತಿದೆ. ಕಾಯಿಲೆಗಳ ವರ್ಗೀಕರಣಕ್ಕಾಗಿ ಮನೋವೈದ್ಯರು ಬಳಸುವ ICD-10 (ಸದ್ಯದಲ್ಲೇ ಬರಲಿರುವ ICD-11) 1993ರಷ್ಟು ಹಿಂದೆಯೇ ತನ್ನ ಕಾಯಿಲೆಗಳ ಪಟ್ಟಿಯಿಂದ ‘ಸಲಿಂಗಕಾಮ’ವನ್ನು ತೆಗೆದು ಹಾಕಿದೆ.

ಹಾಗೆಯೇ ಅಮೆರಿಕೆಯಲ್ಲಿ ಉಪಯೋಗಿಸುವ DSM ವರ್ಗೀಕರಣ 1973ರಷ್ಟು ಹಿಂದೆಯೇ ತನ್ನ ಕಾಯಿಲೆಗಳ ಪಟ್ಟಿಯಲ್ಲಿ ‘ಸಲಿಂಗಕಾಮ’ವನ್ನು ಕೈಬಿಟ್ಟಿದೆ. ಅಂದರೆ ಇದರ ಅರ್ಥ ‘ಸಲಿಂಗಕಾಮ’ ಒಂದು ಸಹಜ ‘ಲೈಂಗಿಕ ಮನೋಭಾವ’ (sexual orientation) ಎನ್ನುವುದನ್ನು ಮನೋವೈದ್ಯಕೀಯ ಸ್ಪಷ್ಟವಾಗಿ ಗುರುತಿಸಿದೆ.

ಇದರ ಆಧಾರವಾದರೂ ಏನು? ಇಲ್ಲಿಯವರೆಗೆ ನಡೆದ ಸಂಶೋಧನೆಗಳು, ಸತತವಾದ ಅವಲೋಕನ ಸಮಾಜ ಒಪ್ಪಿಕೊಂಡರೆ, ಯಾವುದೇ ತಾರತಮ್ಮ ತೋರದಿದ್ದರೆ ಸಲಿಂಗಕಾಮಿಗಳು ಇತರ ಎಲ್ಲರಂತೆ ಸಹಜಜೀವನ ನಡೆಸಲು ಸಾಧ್ಯವಿದೆ ಎನ್ನುವುದನ್ನು ತೋರಿಸಿದೆ. ಹಾಗಿದ್ದೂ ಮಾನಸಿಕ ಸಮಸ್ಯೆಗಳು, ಮಾದಕದ್ರವ್ಯ ವ್ಯಸನಗಳು ‘ಗೇ’ಯತೆಯಲ್ಲಿ ಹೆಚ್ಚು.

ಇದಕ್ಕೆ ಮುಖ್ಯ ಕಾರಣ ಅವರ ‘ಲೈಂಗಿಕ ಮನೋಭಾವ’ಕ್ಕಿಂತ, ಆತ್ಮೀಯರು, ಕುಟುಂಬದವರು ಸುಲಭವಾಗಿ ಈ ಸ್ಥಿತಿಯೊಡನೆ ಹೊಂದಿಕೊಳ್ಳದಿರುವುದು. ಸಂಗಾತಿಗಳ ಕೊರತೆ, ತಾನು ‘ಹೀಗೆ’ ಎಂಬುದನ್ನು ಹೇಳಿಕೊಳ್ಳಲು ಹೆದರುವ, ಒಳಗೆ ತೊಳಲಾಡುವ ಒತ್ತಡ, ಸಾರ್ವಜನಿಕವಾಗಿ ಒಪ್ಪಿಕೊಂಡ ನಂತರವೂ ಉದ್ಯೋಗ ಮತ್ತು ಮನೆ ದೊರೆಯಲು ಎದುರಾಗುವ ಸಮಸ್ಯೆಗಳು – ಇವು ಮಾನಸಿಕವಾಗಿ ಖಿನ್ನತೆ ತರಬಲ್ಲವು.

‘ಗೇ’ಯತೆ ಯಾವುದನ್ನು ಒಳಗೊಳ್ಳುತ್ತದೆ ಎಂಬ ಬಗ್ಗೆಯೇ ಬಹುಜನರಿಗೆ ಗೊಂದಲವಿರುತ್ತದೆ. ಮನುಷ್ಯನ ಲೈಂಗಿಕ ಮನೋಭಾವ - ಗುರಿ - sexual orientation ಭಾವನಾತ್ಮಕ ಮತ್ತು ಲೈಂಗಿಕ ಆಕರ್ಷಣೆಯನ್ನು ಒಳಗೊಳ್ಳುತ್ತದೆ. ಈ ಭಾವನೆಗಳು ಬೆಳೆಯುವುದು ಹದಿಹರೆಯದಲ್ಲಿ. ಪುರುಷ ಪುರುಷನೆಡೆಗೆ ಆಕರ್ಷಿತನಾದಾಗ ಆತನನ್ನು ‘ಗೇ’ ಎಂದು ಕರೆದರೆ, ಸ್ತ್ರೀ-ಸ್ತ್ರೀ ಆಕರ್ಷಣೆಯನ್ನು ‘ಲೆಸ್ಬಿಯನ್’ ಎನ್ನಲಾಗುತ್ತದೆ.

ಅದೇ ಒಬ್ಬ ವ್ಯಕ್ತಿ ಸ್ತ್ರೀ-ಪುರುಷ ಇಬ್ಬರೊಂದಿಗೂ ಆಕರ್ಷಣೆ ಹೊಂದಿದರೆ ಅವರನ್ನು ದ್ವಿಲಿಂಗ ಕಾಮಿ - ಬೈ ಸೆಕ್ಷ್ಯುಯಲ್ (Bisexual) ಎನ್ನುತ್ತೇವೆ. ಹಾಗೆಯೇ ‘ಟ್ರ್ಯಾನ್ಸ್–ಜೆಂಡರ್’ (Transgender) ಎನ್ನುವುದು ‘ಮಂಗಳಮುಖಿ’ಯರೆಂದು ಕರೆಯಲಾಗುವ, ಶುಭಕಾರ್ಯಗಳಿಗೆ ಬೇಕಾದರೂ ಮತ್ತೆಲ್ಲದರಲ್ಲಿಯೂ ಎಲ್ಲರೂ ದೂರವೇ ಇರಲು ಬಯಸುವ ‘ಧರ್ಮ’ದ ಮುದ್ರೆ ಬೀಳಲಾದ, ‘ಸ್ತ್ರೀ’ವೇಷದ ಪುರುಷ.

ಹೆಚ್ಚಿನ ಸಮಯ ‘ವೇಶ್ಯೆ’ಯರಾಗಿ, ‘ಉಪಪತ್ನಿ’ಯರಾಗಿ, ಸಾಮಾಜಿಕ ಅವಹೇಳನಕ್ಕೆ ಒಳಗಾಗುವ, ಹಲವು ವಿಧದ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವ ವ್ಯಕ್ತಿಗಳು. ಇವರ ಮೇಲಿನ ವಿವಿಧ ಸಂದರ್ಭಗಳಲ್ಲಿ ನಡೆಯುವ ಲೈಂಗಿಕ-ದೈಹಿಕ ದೌರ್ಜನ್ಯಗಳು ಗಮನಾರ್ಹವಾದರೂ ನಿರ್ಲಕ್ಷ್ಯಕ್ಕೆ ಒಳಗಾಗುವಂಥವು. ಈ ನಾಲ್ಕು ವಿಧಗಳನ್ನು ಸೇರಿಸಿ ‘LGBT’ (Lesbian, Gay, Bisexual, Transgender) Community – ಎಲ್‌ಜಿಬಿಟಿ ಕಮ್ಯೂನಿಟಿ – ಎಂದು ಗುರುತಿಸಲಾಗುತ್ತದೆ.

ಈ ಎಲ್‌ಜಿಬಿಟಿ ಸಮುದಾಯದ ವ್ಯಕ್ತಿಗಳಿಗೆ ಪ್ರತ್ಯೇಕ ಮಾನಸಿಕ ಕಾಯಿಲೆ (ನಮ್ಮ, ನಿಮ್ಮೆಲ್ಲರಿಗೆ ಬರಬಹುದಾದ ಹಾಗೆ!) ಇರದ ಹೊರತು, ಬರದ ಹೊರತು ಅವರಿಗೆ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲ! ಅಂದರೆ ಸ್ಪಷ್ಟವಾಗಿ ಹೇಳಬೇಕೆಂದರೆ ಸಲಿಂಗಕಾಮ ಮನೋವ್ಯಾಧಿಯಲ್ಲ.

ಆದರೆ ಇವಿಷ್ಟನ್ನು ಹೇಳಿ, ಸುಮ್ಮನಾಗಲು ಸಾಧ್ಯವಿಲ್ಲ. ಏಕೆಂದರೆ ಬಹುಜನ ಕೇಳುವ ಮೂರು ಮುಖ್ಯ ಪ್ರಶ್ನೆಗಳಿವೆ. ಮೊದಲನೆಯದು: ‘ಭಾರತೀಯ ಕಾನೂನು ಇದನ್ನು ಅಪರಾಧವೆಂದು ಗುರುತಿಸುವುದು ಏಕೆ?’ ಎರಡನೆಯದು: ‘ಇದರ ಬಗ್ಗೆ ಅಪರಾಧವಲ್ಲವೆಂದು, ಕಾಯಿಲೆಯಲ್ಲವೆಂದು ಒಪ್ಪಿಕೊಂಡರೆ ಸಮಾಜದಲ್ಲಿ ಇಂಥವರ ಸಂಖ್ಯೆಯೇ ಜಾಸ್ತಿಯಾದರೆ ಅಥವಾ ಯುವಜನರೆಲ್ಲರೂ ಹಾಗೆಯೇ ನಡೆದುಕೊಳ್ಳಲಾರಂಭಿಸಿದರೆ?’ ಮೂರನೆಯದು: ‘ಮದುವೆ, ಗಂಡು-ಹೆಣ್ಣಿನ ಸಂಬಂಧದ ನಡುವಣ ಪ್ರಮುಖವಾದುದೇ ವಂಶಾಭಿವೃದ್ಧಿ - ಮಕ್ಕಳನ್ನು ಪಡೆಯುವುದು ಎಂದ ಮೇಲೆ ಇಂಥ ಸಂಬಂಧಗಳನ್ನು ಒಪ್ಪುವುದಾದರೂ ಹೇಗೆ?’ ಈ ಪ್ರಶ್ನೆಗಳ ಉತ್ತರ ಸುಲಭವಲ್ಲ.

ಈಗ ಸದ್ಯದಲ್ಲಿ ಚರ್ಚೆಯಲ್ಲಿಯೇ ಇರುವ ಸಂಗತಿಗಳೇ ಆದರೂ ಇವುಗಳನ್ನು ಮನೋವೈದ್ಯಕೀಯ ದೃಷ್ಟಿಯಿಂದ, ಸಂಶೋಧನೆಗಳನ್ನು ಆಧಾರವಾಗಿಟ್ಟುಕೊಂಡು ನೋಡೋಣ. ಮೊದಲನೆಯ – ಕಾನೂನು ಸಂಬಂಧೀ ಪ್ರಶ್ನೆ; ಈಗ ಬಹು ವಿವಾದದಲ್ಲಿ ಇರುವಂಥದ್ದು. 2001ರಿಂದ ಇಲ್ಲಿಯವರೆಗೆ ‘ಸಲಿಂಗಕಾಮ’ವನ್ನು ‘ಅಪರಾಧ’ವಲ್ಲ ಎಂದು ಕಾನೂನು ತರುವ ಬಗ್ಗೆ ಪರ-ವಿರೋಧ ವಾದಗಳು-ನಿರ್ಣಯಗಳು ನಡೆಯುತ್ತಲೇ ಇವೆ.

ಹಾಗೆ ನೋಡಿದರೆ ಕಾನೂನಿನ ಪ್ರಕಾರ ಅಪರಾಧವೆನ್ನಬಹುದಾದ ಹಲವು ಲೈಂಗಿಕ ಚಟುವಟಿಕೆಗಳು ‘ದಂಪತಿ’ಗಳ ಮಧ್ಯೆಯೂ ನಡೆಯಲು ಸಾಧ್ಯವಿದೆ. ಇಲ್ಲಿಯೂ ಅಷ್ಟೆ. ಸಮಾಜ ಬದಲಾದಂತೆ ಕಾನೂನುಗಳನ್ನು ನೈತಿಕತೆಯ ಪರಿಧಿಯಲ್ಲಿ ಮಾರ್ಪಡಿಸಿಕೊಳ್ಳಬೇಕಾದ ಆವಶ್ಯಕತೆ ಎದ್ದುಕಾಣುತ್ತದೆ. ಸಲಿಂಗಕಾಮ ‘ವಿಕೃತಕಾಮ’ವಲ್ಲ (sexual perversion) ಎಂಬುದು ಗಮನಾರ್ಹ.

ಎರಡನೆಯದು – ಮನೋವೈದ್ಯರ ಬಳಿ ಬರುವ ತಂದೆ-ತಾಯಿಗಳ ಸಾಮಾನ್ಯ ಪ್ರಶ್ನೆ ‘ನನ್ನ ಮಗ/ಮಗಳು ಹಾಗಾಗಿ ಬಿಟ್ಟರೆ?’ ಎಂಬುದು. ಬಾಲ್ಯದಲ್ಲಿನ ಕೆಲವು ಅನುಭವಗಳು - ಅತಿಯಾದ ಶೋಷಣೆ, ಲೈಂಗಿಕ ದೌರ್ಜನ್ಯ, ದಾಂಪತ್ಯ ಕಲಹಗಳ ಸತತ ವೀಕ್ಷಣೆ, ಆಯ್ದಕೊಳ್ಳುವ ಆಟಗಳು (ಹುಡುಗರ/ಹುಡುಗಿಯರ ಆಟಗಳು) – ಇವುಗಳನ್ನು ನಾವು ಮಾರ್ಪಡಿಸಬಹುದಾದ ಸಂಗತಿಗಳು.

ಆದರೆ ಒಮ್ಮೆ ಹದಿಹರೆಯದಲ್ಲಿ ‘ಲೈಂಗಿಕ ಮನೋಭಾವ’ ಸ್ಪಷ್ಟವಾಗಿ ಸಲಿಂಗಕಾಮದ ಕಡೆಗಿದ್ದರೆ ಕಾದು ನೋಡುವುದು ಸೂಕ್ತ. ಆಕ್ರೋಶ-ಸಿಟ್ಟುಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು. ಹೇಗೆ ‘ಆತ್ಮಹತ್ಯೆ’ಯ ಬಗೆಗೆ ಮಾಹಿತಿ ನೀಡುವುದು ಯಾರನ್ನೂ ಆತ್ಮಹತ್ಯೆಯ ಬಗ್ಗೆ ಪ್ರೇರೇಪಿಸಲು ಸಾಧ್ಯವಿಲ್ಲವೋ, ಹಾಗೆಯೇ ಸಲಿಂಗಕಾಮದ ಬಗ್ಗೆ ಮಾಹಿತಿ ಪಡೆಯುವುದರಿಂದ ‘ಸಲಿಂಗಕಾಮಿ’ಗಳಾಗಲು ಸಾಧ್ಯವಿಲ್ಲ.

ಮೂರನೆಯದು – ವಂಶಾಭಿವೃದ್ಧಿಯ ಪ್ರಶ್ನೆ. ದಾಂಪತ್ಯಜೀವನದ ಬಹುಮುಖ್ಯ ಭಾಗ ‘ಮಕ್ಕಳನ್ನು ಪಡೆಯುವುದು’ ಎಂಬುದು ನಿಜವಾದರೂ, ಸಂಗಾತಿಗಳ ನಡುವಣ ‘ಸಾಂಗತ್ಯ’ವೂ ಅಷ್ಟೇ ಮುಖ್ಯವಷ್ಟೆ. ಇಂಥ ದಂಪತಿಗಳು ಪಡೆದ ದತ್ತುಮಕ್ಕಳು ಸಹಜವಾಗಿ ಎಲ್ಲರಂತೆ ಬೆಳೆಯುವುದನ್ನು, ಮುಂದೆ ಜೀವನಸಂಗಾತಿಗಳನ್ನು ಪಡೆಯುವಾಗಲೂ ಅವರು ವಿರುದ್ಧ ಲಿಂಗಿಗಳನ್ನೇ ಪಡೆಯುವ ಸಾಧ್ಯತೆಯೇ ಹೆಚ್ಚೆಂದೂ ಸಂಶೋಧನೆಗಳು ತೋರಿಸಿವೆ.

‘ಸಲಿಂಗಕಾಮ’ವನ್ನು ಸಮಾಜ ಒಪ್ಪಿಕೊಳ್ಳುವುದು ಸುಲಭವಲ್ಲ. ಹೇಗೆ ಎಲ್ಲರಿಂದ ಬೇರೆಯಾದದ್ದನ್ನು ನಾವು ‘ಬೇರೆ’ಯೇ ಆಗಿ ನೋಡುತ್ತೇವೆಯೋ ಅದೂ ‘ಲೈಂಗಿಕತೆ’ಗೆ ಸಂಬಂಧಿಸಿದ್ದರಲ್ಲಿ ನಮಗೆ ಒಪ್ಪಿಕೊಳ್ಳುವುದು ಕಷ್ಟ. ಆದರೆ ನಮಗಿಷ್ಟವಿರಲಿ–ಇಲ್ಲದಿರಲಿ, ಒಪ್ಪಲಿ-ಬಿಡಲಿ, ಪ್ರಾಕೃತಿಕವಾಗಿ ಲೈಂಗಿಕತೆಯ ಸಹಜ ಭೇದವಾದ ‘ಸಲಿಂಗಕಾಮ’ - ‘ಗೇ’ಯತೆಯನ್ನು ಹೊಂದಿದ ವ್ಯಕ್ತಿಗಳನ್ನು ಎಲ್ಲ ’ಮನುಷ್ಯ’ರಂತೆ ಮಾನವೀಯ ನೆಲೆಯಲ್ಲಿ ಕಾಣಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.