ಅರೇಬಿಯಾದ ಪ್ರಮುಖ ನಗರಗಳಲ್ಲಿ ಒಂದಾದ ತಾಯಿಫ್ ಹಲವು ಕಾರಣಗಳಿಂದ ಪ್ರಸಿದ್ಧ.
ಮೊದಲನೆಯದಾಗಿ ಇದೊಂದು ಯಾತ್ರಾಸ್ಥಳ. ಇಲ್ಲಿ ಪೈಗಂಬರ್ ಕಟ್ಟಿಸಿದರು ಎನ್ನಲಾದ ಮಸೀದಿಯಿದ್ದು, ಫಕ್ಕನೆ ಹಂಪಿ ಮಂಟಪದಂತೆ ತೋರುತ್ತದೆ. ಹಜ್ಯಾತ್ರೆಗೆ ಬರುವ ಯಾತ್ರಿಕರು ತಾಯಿಫಾಗೂ ಬಂದು ಪ್ರವಾದಿಗಳ ಕಾಲದ ಸ್ಮಾರಕಗಳನ್ನು ಶ್ರದ್ಧೆಯಿಂದ ನೋಡುವರು. ಮೆಕ್ಕಾದಿಂದ 80 ಕಿಲೊಮೀಟರ್ ಫಾಸಲೆಯಲ್ಲಿರುವ ತಾಯಿಫ್ಗೆ ಪ್ರವಾದಿಗಳು ಹಲವು ಸಲ ಬಂದಿದ್ದರು. ಅವರು ಒಂಟೆಗಳ ಮೇಲೆ ಮಕ್ಕಾದಿಂದ ತಾಯಿಫಿಗೆ ಕಡಿದಾದ ಬೆಟ್ಟಗಳನ್ನೇರಿ ಬರುತ್ತಿದ್ದ ಒಂಟೆಹಾದಿಯ ಕೆಲವು ಭಾಗಗಳನ್ನು ಈಗಲೂ ಉಳಿಸಿಕೊಳ್ಳಲಾಗಿದೆ.

ಎರಡನೆಯದು-ತಾಯಿಫ್ ಎತ್ತರದ ಬೆಟ್ಟ ಪ್ರದೇಶದಲ್ಲಿದ್ದು ತಂಪು ಹವಾಮಾನದಿಂದ ಕೂಡಿರುವುದು. ಅರಬಸ್ಥಾನದ ಇತರೆ ನಗರಗಳು ಮರುಭೂಮಿ ತಾಪದಲ್ಲಿ ಬೇಯುವಾಗ ತಾಯಿಫ್ ತಣ್ಣಗಿರುತ್ತದೆ. ಇಲ್ಲಿನ ಕಾಡುಬೆಟ್ಟಗಳು ಅರೇಬಿಯಾ ಮರುಭೂಮಿ ನಾಡು ಎಂಬ ಗ್ರಹಿಕೆಯನ್ನೇ ಕದಲಿಸುತ್ತವೆ. ನಾವಿದ್ದ ಮನೆ ವಂಕಿಯಂತೆ ಬಾಗಿದ ಬೆಟ್ಟವೊಂದರ ತಪ್ಪಲಿನೊಳಗಿತ್ತು. ಮನೆಯೆದುರು ಹಾದುಹೋಗಿದ್ದ ರಿಯಾದ್-ಮಕ್ಕಾ ಹೈವೇ ದಾಟಿದರೆ ಬೆಟ್ಟದ ಬುಡ. ಆ ಬೆಟ್ಟದಲ್ಲಿ ಒಂಟೆಗಳು ಸದಾ ಮೇಯುತ್ತಿದ್ದವು. ನಾನು ಅಲ್ಲಿದ್ದಾಗ ಬೆಟ್ಟಗಳನ್ನು ಏರಿದೆ. ಬೆಟ್ಟಸಾಲಿನ ಕಣಿವೆ ತಪ್ಪಲುಗಳಲ್ಲಿ ಹರಡಿಕೊಂಡಿರುವ ನಗರದಲ್ಲಿ ರೆಸಾರ್ಟುಗಳಿವೆ. ಬೇಸಗೆಯಲ್ಲಿ ಅರಬ್ ಅನುಕೂಲಸ್ಥರು ತಾಯಿಫಿನ ಇಲ್ಲಿನ ಹೋಂಸ್ಟೇಗಳಿಗೆ ಧಾವಿಸುವರು. ನಾವೊಂದು ದಿನ ಅರೇಬಿಯಾದ ಎತ್ತರದ ಬೆಟ್ಟವಾದ ಅಲ್ಶಫಾಗೆ ಹೋದೆವು. ಸಂಜೆಹೊತ್ತಿನ ಅಲ್ಲಿನ ಗಡಗಡ ಥಂಡಿಯನ್ನು ತಡೆಯಲಾರದೆ ಗಡಿಬಿಡಿಯಲ್ಲಿ ಕೆಳಗಿಳಿದು ಬಂದೆವು. ಈ ಸೀಮೆಯ ಬೆಟ್ಟಗಳ ಮೇಲೆ ಕುರುಚಲಿನಂತಹ ಕಾಡು. ಪರ್ಶಿಯನ್ ಕೊಲ್ಲಿಯಲ್ಲಿರುವ ದಮಾಂ ನಗರದಿಂದ ಹಿಡಿದು ತಾಯಿಫಿನ ತನಕ ಸಾವಿರ ಕಿಲೊಮೀಟರ್ ಮರುಭೂಮಿಯಲ್ಲಿ ಹಸಿರಿಲ್ಲದ ಬೋಳುಗುಡ್ಡಗಳನ್ನೇ ನೋಡಿ ದಣಿದಿದ್ದ ನಮಗೆ, ಅಲ್ಶಫಾ ಗಿರಿಶ್ರೇಣಿ ಖುಷಿ ಕೊಟ್ಟಿತು.

ಮೂರನೆಯದು- ತಾಯಿಫಿನ ಕಣಿವೆಗಳಲ್ಲಿರುವ ಗುಲಾಬಿಯ ತೋಟಗಳು. ಅಲ್ಲಿ ಉತ್ಪಾದನೆಯಾಗುವ ಸುಗಂಧ. ಅರಬಸ್ಥಾನದ ಗುಲಾಬಿ ಪನ್ನೀರು- ಅತ್ತರುಗಳು ಸಿಲ್ಕ್ರೂಟಿನ ಮೂಲಕ ರೋಮಿನಿಂದ ಹಿಡಿದು ಚೀನಾ ತನಕ ಹೋಗುತಿದ್ದವು. ಇವು ಭಾರತದ ಪಶ್ಚಿಮ ಕರಾವಳಿಗೆ ತಲುಪಿ, ದೇಶೀಯ ವಣಿಕರ ಮೂಲಕ ಒಳನಾಡುಗಳಿಗೆ ವಿತರಣೆಯಾಗುತ್ತಿದ್ದವು. ಭಾರತದ ದೊರೆಗಳು ಸಿರಿವಂತರು ಇದರ ಗ್ರಾಹಕರಾಗಿದ್ದರು. ಅರೇಬಿಯಾದ ಸುಗಂಧವನ್ನು ಮಾರುವವರಿಗೆ ಗುಜರಾತಿನಲ್ಲಿ ಗಾಂಧಿ ಎಂಬ ಅಡ್ಡಹೆಸರಿತ್ತು. ಮೋಹನದಾಸ್ಗೆ ಗಾಂಧಿ ಅಡ್ಡಹೆಸರು ಬಂದಿದ್ದು ಈ ಹಿನ್ನೆಲೆಯಿಂದ. ಸುಗಂಧಿ ಅತ್ತಾರ ಅಡ್ಡಹೆಸರುಳ್ಳ ಮನೆತನಗಳು ಕರ್ನಾಟಕದಲ್ಲೂ ಇವೆ.

ನಾವು ತಾಯಿಫ್ ಕಣಿವೆಗಳಲ್ಲಿರುವ ಗುಲಾಬಿ ತೋಟಗಳಿಗೂ ಸುಗಂಧದ ಭಟ್ಟಿಗಳಿಗೂ ಭೇಟಿಕೊಟ್ಟೆವು. ಗುಲಾಬಿ ತೋಟಗಳಲ್ಲಿ ಉಳಿದುಕೊಳ್ಳಲು ಹೋಟೆಲುಗಳೂ ಇವೆ. ಅಲ್ಲಿ ಸುಗಂಧ ದ್ರವ್ಯದ ಮಳಿಗೆಗಳಿದ್ದು, ಅತಿಥಿಗಳ ಮುಂಗೈಗೆ, ಬಟ್ಟೆಗೆ ಸುಗಂಧ ಪೂಸಿ ಸ್ವಾಗತಿಸುವ ಪದ್ಧತಿಯಿದೆ. ನಾವು ಹೂಗಿಡಗಳ ನಡುವೆ ಹಾಕಲಾದ ಟೇಬಲಿನಲ್ಲಿ ಕೂತು ಮಧ್ಯಾಹ್ನದ ಊಟ ಮುಗಿಸಿದೆವು. ಬಳಿಕ ಸಾಂಪ್ರದಾಯಿಕವಾಗಿ ಸುಗಂಧ ತಯಾರಿಸುವ ಭಟ್ಟಿಗಳಿಗೆ ಹೋದೆವು. ದೊಡ್ಡ ಹಂಡೆಗಳನ್ನು ಸೊಂಟದೆತ್ತರದ ಕಟ್ಟೆಯ ಮೇಲೆ ಆಲೆಮನೆಯ ಕೊಪ್ಪರಿಗೆಗಳಂತೆ ಸಾಲಾಗಿ ಕುತ್ತಿಗೆಮಟ ಹೂಳಲಾಗಿತ್ತು. ಅವುಗಳಲ್ಲಿ ಗುಲಾಬಿ ಪಕಳೆ ತುಂಬಿ ನೀರುಹೊಯ್ದು ಅಗಾಧ ಶಾಖ ಹೊಮ್ಮಿಸುವ ಉರಿಯಿಂದ ಬೇಯಿಸಲಾಗುತ್ತಿತ್ತು. ಹಂಡೆಯಿಂದ ಹೊಮ್ಮುವ ಆವಿ ತೊಟ್ಟಿನೀರಿನಲ್ಲಿ ಹಾದು ದ್ರವವಾಗಿ ಗಾಜಿನಕೊಡದಲ್ಲಿ ಹನಿಹನಿಯಾಗಿ ಬೀಳುತ್ತಿತ್ತು. ಸುಗಂಧ ತೆಗೆದ ಬಳಿಕ ಕೋಮಲವಾದ ಪಕಳೆಗಳು ಶಾಖದಲ್ಲಿ ಬೆಂದು ಸಗಣಿಯ ಮುದ್ದೆಯಂತಾಗುತ್ತವೆ. ಅವನ್ನು ತಿಪ್ಪೆಯಲ್ಲಿ ಚೆಲ್ಲಲಾಗಿತ್ತು. ಅದನ್ನು ನೋಡುತ್ತ ಅಕ್ಕಮಹಾದೇವಿಯ ‘ಚಂದನವ ಕಡಿದ ಕೊರೆದು ತೇದೊಡೆ ನೊಂದೆಂನೆಂದು ಕಂಪಬಿಟ್ಟಿತ್ತೇ?’ ವಚನ ನೆನಪಾಯಿತು. ನಾವು ಉಣ್ಣುವ ಊಟದ ಹಿಂದೆ ಎಷ್ಟೊಂದು ದುಡಿವವರ ಬೆವರು; ಉಡುವ ರೇಷ್ಮೆಯ ಹಿಂದೆ ಎಷ್ಟೊಂದು ಹುಳುಗಳ ಸಾವು; ಪೂಸುವ ಗಂಧದ ಹಿಂದೆ ಎಷ್ಟೊಂದು ಹೂವುಗಳ ಕಟಾವು!

ಭಾರತದಲ್ಲೂ ಮಲ್ಲಿಗೆ ಸಂಪಿಗೆಗಳಿಂದ ಗಂಧದಿಂದ ಸುಗಂಧ ದ್ರವ್ಯ ತೆಗೆಯುವ ಭಟ್ಟಿಗಳಿವೆ. ನನ್ನೂರು ತರೀಕೆರೆ, ಬ್ರಿಟಿಷರ ಕಾಲದಿಂದಲೂ ಶ್ರೀಗಂಧದ ಕೋಠಿಗೆ ಪ್ರಸಿದ್ಧ. ಅಲ್ಲಿ ಗಂಧದ ಕೊರಡುಗಳನ್ನು ಸೀಳಿ ಲಾರಿಗಳಲ್ಲಿ ತುಂಬಿ ಶಿವಮೊಗ್ಗೆಗೆ ಕಳಿಸುತ್ತಿದ್ದರು. ಅಲ್ಲಿ ನಮ್ಮ ಕಾಲೇಜಿಗೆ ಸಮೀಪವಿದ್ದ ಕಾರ್ಖಾನೆಯಲ್ಲಿ ಗಂಧದೆಣ್ಣೆ ತೆಗೆಯುತ್ತಿದ್ದರು. ಕಾರ್ಖಾನೆಗೆ ಭೇಟಿಕೊಟ್ಟು ಹೊರಬರುವಾಗ ಮೈಕೈಯೆಲ್ಲ ಘಮಗುಡುತ್ತಿತ್ತು.

ನಾವು ತಾಯಿಫ್ನಲ್ಲಿರುವಾಗ ಗುಲಾಬಿ ಉತ್ಸವ ನಡೆಯುತ್ತಿತ್ತು. ಗುಲಾಬಿ ರೈತರು ಹೂವಿನ ಮತ್ತು ಅತ್ತರಿನ ಅಂಗಡಿ ತೆರೆದಿದ್ದರು. ಈ ಉತ್ಸವದಲ್ಲಿ ಮದುಕರು ಮಕ್ಕಳು ಮಹಿಳೆಯರು-ಪುರುಷರು ಎನ್ನದೆ ಎಲ್ಲರೂ ಕೈಗೆ ಕಂಕಣದಂತೆ, ತಲೆಗೆ ರುಮಾಲಿನಂತೆ, ಕೊರಳಿಗೆ ಹಾರದಂತೆ ಗುಲಾಬಿ ದಂಡೆ ಮುಡಿದು ಸಂಭ್ರಮಿಸುವರು. ಗುಂಪುಕಟ್ಟಿ ಕುಣಿಯುವರು. ಹುಲ್ಲಹಾಸಿನ ಮೇಲೆ ರತ್ನಗಂಬಳಿ ಹಾಸಿ ತಿನಿಸು ಹರಡಿಕೊಂಡು ತಿನ್ನುವರು. ಅರಬರು ವಿಲಾಸಪ್ರಿಯರು. ಖಾಸಗಿತನ ಮತ್ತು ಕುಟುಂಬದ ಮೌಲ್ಯಗಳು ಅವರ ಜೀವನದ ಮುಖ್ಯ ಭಾಗಗಳು. ಈ ಜೀವನಕ್ಕೆ ಹೊರಸಂಚಾರ, ಅಡುಗೆ, ಊಟ, ಸುಗಂಧಪ್ರೇಮ ಕತ್ತಿ ಕುಣಿತಗಳು ಲಗತ್ತಾಗಿವೆ.

ಭಾರತದ ದೊರೆಗಳು ಗುಲಾಬಿ ಬೆಳೆಯನ್ನೂ ಸುಗಂಧ ತಯಾರಿಸುವ ಕುಶಲತೆಯನ್ನೂ ಆಮದು ಮಾಡಿಕೊಂಡರೆಂದು ಕಾಣುತ್ತದೆ. ರಾಜಸ್ಥಾನದ ಮರುಭೂಮಿ ಗುಲಾಬಿ ಬೆಳೆ ಮತ್ತು ಸುಗಂಧಕ್ಕೆ ಹೆಸರಾಗಿದೆ. ಅಜ್ಮೀರಿಗೆ ಹೋದಾಗ, ಪುಷ್ಕರ್ ಮತ್ತು ಹಳದಿಘಾಟಿನ ಕಣಿವೆಗಳಲ್ಲಿರುವ ಗುಲಾಬಿ ಹೊಲಗಳು, ಭಟ್ಟಿಯಿಳಿಸುವ ಕಾರ್ಖಾನೆಗಳಿಗೆ ಭೇಟಿ ಕೊಟ್ಟಿದ್ದೆವು. ಗುಲಾಬಿ ಹೂವಿಗೂ ಸುಗಂಧಕ್ಕೂ ಸೂಫಿಸಂಗೂ ವಿಶಿಷ್ಟ ಸಂಬಂಧವಿದೆ. ಅಜ್ಮೀರಿನ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಗುಲಾಬಿ ಪಕಳೆಗಳ ಚಾದರ ಏರಿಸುವ ಪದ್ಧತಿಯಿದೆ. ದರ್ಗಾದಲ್ಲಿ ಸಂಗೀತದ ಜತೆಯಲ್ಲಿ, ಗುಲಾಬಿ ಹೂವಿನ ಮತ್ತು ಅತ್ತರಿನ ಪರಿಮಳವೂ ಇಡಿಕಿರುತ್ತದೆ. ಉರುಸುಗಳಲ್ಲಿ ಗಂಧ ಏರಿಸುವ ಕಾರ್ಯಕ್ರಮವೇ ಇದೆ.

ತೇದ ಸಿರಿಗಂಧಕ್ಕೆ ಗುಲಾಬಿಯ ಅತ್ತರನ್ನು ಬೆರೆಸಿ ಸಂತನ ಸಮಾಧಿಗೆ ಬಳಿಯುವರು. ಮರುಭೂಮಿಯಲ್ಲಿ ಬೆಳೆವ ತಿಳಿಗುಲಾಬಿ, ಗಂಧವಾಗಿ ಧಾರ್ಮಿಕ ಆಚರಣೆಯಿಂದ ಹಿಡಿದು, ಜನರ ಉತ್ಸವಗಳಲ್ಲಿ, ವಿಲಾಸದ ಬದುಕಿನಲ್ಲಿ, ಸಾವಿನ ಆಚರಣೆಗಳಲ್ಲಿ ಭಾಗವಹಿಸಿತು.

ಬೆಲೆಬಾಳುವ ಸರಕಾಗಿ ಚೀನಾದಿಂದ ವೆನಿಸಿನ ತನಕ ಹಾದಿರುವ, ರೇಷ್ಮೆಹಾದಿಯಲ್ಲಿ ಖಂಡಾಂತರ ಪಯಣಿಸಿತು. ಯೂರೋಪಿಗೂ ಮುಟ್ಟಿತು. ಹಾಗಿಲ್ಲವಾದರೆ, ಶೇಕ್ಸ್ಪಿಯರನ ‘ಮ್ಯಾಕ್ಬೆತ್’ ನಾಟಕದಲ್ಲಿ ಅರೇಬಿಯಾದ ಸುಗಂಧದ ಪ್ರಸ್ತಾಪ ಬರುತ್ತಿರಲಿಲ್ಲ. ಲೇಡಿ ಮ್ಯಾಕ್ಬೆತ್ ತನ್ನ ಕೊಲೆಗಡುಕ ಕೈಗಳನ್ನು ಉಜ್ಜುತ್ತ ನಿದ್ರಾಹೀನ ರಾತ್ರಿಗಳಲ್ಲಿ ತೊಳಲುತ್ತ ‘ಆಲ್ ದಿ ಪರಫ್ಯೂಮ್ಸ್ ಆಫ್ ಅರೇಬಿಯಾ ಕ್ಯನಾಟ್ ಸ್ಟೀಟನ್ ದಿಸ್ ಲಿಟ್ಲ್ ಹ್ಯಾಂಡ್’ ಎಂದು ಹೇಳುತ್ತಿರಲಿಲ್ಲ. ಅರೇಬಿಯಾದಲ್ಲಿರುವ ಸಮಸ್ತ ಸುಗಂಧವನ್ನು ಸುರಿದರೂ, ಅವಳ ರಕ್ತದ ವಾಸನೆ ಹೋಗದಷ್ಟು ಕಟುವಾಗಿತ್ತಂತೆ.

ಯಾವ ಹೂವೂ ತನ್ನ ಪರಿಮಳ ಹೀಗೊಂದು ದಾರುಣ ರೂಪಕವಾಗುವುದನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.