ಧರ್ಮಶಾಲಾದಲ್ಲಿ ಕಣ್ಣುಮುಚ್ಚಿ ಪ್ರಾರ್ಥಿಸಲು ದೇವಸ್ಥಾನಗಳಿವೆ, ಮೆಕ್ಲೋಡ್ಗಂಜ್ನ ಬುದ್ಧ ದೇವಾಲಯದಲ್ಲಿ ನಿಂತು ಧ್ಯಾನಸ್ಥ ಆಗಲೂಬಹುದು. ಟಿಬೆಟಿಯನ್ ಧರ್ಮಕ್ಕೆ ಸಂಬಂಧಿಸಿದ ಹಸ್ತಪ್ರತಿಗಳ ಸಂಗ್ರಹಾಲಯ, ಸುಂದರವಾದ ಕ್ರಿಕೆಟ್ ಕ್ರೀಡಾಂಗಣ ಇವೆಲ್ಲವೂ ಹಿಮಾಚ್ಛಾದಿತ ಭಿತ್ತಿಯಲ್ಲಿ ಮೂಡಿದ ಚಿತ್ರಿಕೆಗಳಂತೆ ಚಿತ್ತಾಪಹಾರಿಯಾಗಿವೆ.

ಹಿಮಾಚಲ ಎಂದಾಕ್ಷಣ ಸಾಮಾನ್ಯವಾಗಿ ನೆನಪಿಗೆ ಬರುವುದು ಶಿಮ್ಲಾ, ಕುಲು-ಮನಾಲಿ, ಹೆಚ್ಚೆಂದರೆ ರೋಹತಾಂಗ್ ಪಾಸ್. ಆದರೆ ಹಿಮಾಚಲದ ಇನ್ನೊಂದು ಪಾರ್ಶ್ವದಲ್ಲಿರುವ, ಹಿಮಾಚಲದ ಚಳಿಗಾಲದ ರಾಜಧಾನಿಯೆಂದೇ ಕರೆಸಿಕೊಳ್ಳುವ ಧರ್ಮಶಾಲಾ, ಜೀವನದಲ್ಲಿ ಒಮ್ಮೆ ನೋಡಬೇಕಾದ ರಮಣೀಯ ಪ್ರಾಕೃತಿಕ ತಾಣ ಎಂಬುದು ಬಹಳ ಜನಕ್ಕೆ ಗೊತ್ತಿಲ್ಲ. ಇದು ಕಾಂಗ್ರ ಜಿಲ್ಲೆಗೆ ಸೇರಿದ್ದು, ಗಗ್ಗಲ್ ( ಕಾಂಗ್ರಾ) ವಿಮಾನ ನಿಲ್ದಾಣದಿಂದ 15 ಕಿ.ಮೀ. ದೂರದಲ್ಲಿದೆ.

ಧರ್ಮಶಾಲಾ ನಮ್ಮನ್ನು ಕೈಬೀಸಿ ಕರೆಯುವುದು ಅನೇಕ ಕಾರಣಗಳಿಂದಾಗಿ. ಒಂದು, ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆಯುವ ಚಂದದ ಸ್ಟೇಡಿಯಂ ಇಲ್ಲಿದೆ. ಇದನ್ನು ನೋಡಲಿಕ್ಕೆ ಸಾವಿರಾರು ಜನ ಪ್ರತಿನಿತ್ಯ ಬರುತ್ತಾರೆ. ಧರ್ಮಶಾಲಾಕ್ಕೆ ಇರುವ ಜಾಗತಿಕ ಮಾನ್ಯತೆಗೆ ಇನ್ನೊಂದು ಕಾರಣ ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ವಾಸಸ್ಥಾನವಿದು ಎನ್ನುವುದು. ಪ್ರತಿನಿತ್ಯ ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಟಿಬೆಟಿಯನ್ನರು ತಮ್ಮ ಧರ್ಮಗುರುವಿನ ದರ್ಶನ ಮಾಡಲು ಬರುತ್ತಾರೆ. ಚೀನಾದವರಿಂದ ಜೀವಭಯ ಇರುವುದರಿಂದ ದಲೈಲಾಮಾ ಅವರಿಗೆ ಸರ್ಕಾರ ಭಾರಿ ರಕ್ಷಣೆ ಒದಗಿಸಿದೆ. ರಕ್ಷಣೆಯ ಭದ್ರ ಕೋಟೆಯನ್ನು ಭೇದಿಸಿ ಒಳಹೋದರೆ, 87ರ ಅಜ್ಜ ಪ್ರೀತಿಯ ಹೊಳೆಯನ್ನೇ ಹರಿಸುತ್ತಾರೆ. ‘ಕರುಣಾ ಕರುಣಾ’ ಎಂದು ಕನವರಿಸುವ ಕರುಣಾಮಯಿಯನ್ನು ಕಂಡಾಗ ದೂರದೂರದಿಂದ ಬಂದವರಿಗೆ ಸಾರ್ಥಕ ಭಾವ ಉಂಟಾಗುತ್ತದೆ.

ಇನ್ನು ಧರ್ಮಶಾಲಾ ಇರುವುದು ಸಮುದ್ರ ಮಟ್ಟದಿಂದ 1457 ಮೀಟರ್ ಎತ್ತರದಲ್ಲಿ. ಕೆಳಗಿನ ಧರ್ಮಶಾಲೆ ಮತ್ತು ಮೇಲಿನ ಧರ್ಮಶಾಲೆಯೆಂಬುದು ಒಂದು ವಿಂಗಡಣೆ. ಕೆಳಗಿನ ಧರ್ಮಶಾಲಾ ವಾಣಿಜ್ಯ ಕೇಂದ್ರವಾದರೆ, ಮೇಲಿನ ಧರ್ಮಶಾಲೆ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿ. ಕೆಳಗಿನ ಧರ್ಮಶಾಲಾದಲ್ಲಿ ಸಿಗದ ವಸ್ತುಗಳಿಲ್ಲ. ಮೂಲತಃ ಟಿಬೆಟಿಯನ್ನರ ಮಣಿಗಳು, ಕೌದಿಗಳು, ದೇವರ ಪೂಜೆಯ ವಸ್ತುಗಳಿಗೆ ಇದು ಹೆಸರುವಾಸಿ. ಮೇಲಿನ ಧರ್ಮಶಾಲಾ ಎಂದರೆ ಹಿಮಾಲಯದ ಹಿಮಾಚ್ಛಾದಿತ ಗುಡ್ಡಗಳ ನಡುವೆ ಇರುವ ಇಲ್ಲಿನ ಗಿರಿ ಕಂದರಗಳು. ಈ ಪ್ರದೇಶವನ್ನು ‘ದೌಲಾಧಾರ್ ರೇಂಜ್’ ಎಂದು ಕರೆಯುತ್ತಾರೆ. ಧರ್ಮಶಾಲಾಕ್ಕೆ ಸನಿಹದಲ್ಲೇ ಇರುವ ಭಗಳಾಮುಖಿ, ಜ್ವಾಲಾಮುಖಿ, ಚಾಮುಂಡಾ ದೇವಿಯ ದೇವಸ್ಥಾನಗಳು ಭಕ್ತರ ಪವಿತ್ರ ಕ್ಷೇತ್ರಗಳು. ಭಗಳಾಮುಖಿ ಜನರ ಸಂಕಷ್ಟಗಳನ್ನು ದೂರಮಾಡುವ ದೇವಿಯೆಂದು ನಂಬಿರುವವರು ಅಸಂಖ್ಯ. ಜ್ವಾಲಾಮುಖಿ- ಆರದ ಬೆಂಕಿ-ಅದುವೇ ದೇವಿಯ ಪ್ರತಿನಿಧಿ. ನಮ್ಮ ಮೈಸೂರಿನ ಚಾಮುಂಡಿ ಇಲ್ಲಿ ‘ಚಾಮುಂಡ’ ಆಗಿದ್ದಾಳೆ. ಧರ್ಮಶಾಲೆಗೆ ಹೋಗುವ ಆಸ್ತಿಕರು, ಈ ಮೂರೂ ದೇವಾಲಯಗಳಿಗೆ ತಪ್ಪದೇ ಭೇಟಿ ನೀಡುತ್ತಾರೆ.

ದಲೈಲಾಮಾ ಅವರ ವಾಸಸ್ಥಾನ ಇರುವುದು ಮೆಕ್ಲೋಡ್ಗಂಜ್ ಎಂಬ ಪರ್ವತ ಪ್ರದೇಶದಲ್ಲಿ. ಅಲ್ಲಿರುವ ಬುದ್ಧನ ದೇವಾಲಯ ಪವಿತ್ರವಾದುದು. ದಲೈಲಾಮಾ ಅವರ ಮನೆಯ ಸಂಕೀರ್ಣದಲ್ಲಿರುವ ಥೆಕ್ಚೆನ್ಚೋಲಿಗ್ ದೇವಾಲಯ, ಗ್ರಂಥಾಲಯ, ಟಿಬೆಟಿ
ಯನ್ ಧರ್ಮಕ್ಕೆ ಸಂಬಂಧಿಸಿದ ಹಸ್ತಪ್ರತಿಗಳ ಸಂಗ್ರಹಾಲಯ ಅಮೂಲ್ಯವಾದುದು. ಮೆಕ್ಲೋಡ್ ಗಂಜಿ
ನಿಂದ ಇಳಿದು ಬರುವಾಗ ಸಿಗುವ ಇನ್ನೊಂದು ಅಪರೂಪದ ಸ್ಥಳ ಇಂದ್ರುನಾಗ್ ದೇವಸ್ಥಾನ. ಇದರ ಪುರಾಣ ವಿಚಿತ್ರವಾಗಿದ್ದು, ಎಷ್ಟೋ ದಕ್ಷಿಣ ಭಾರತೀಯರು ಕಂಡು ಕೇಳರಿಯದ್ದು. ಇಂದ್ರುನಾಗ್ ದೇವಸ್ಥಾನದಿಂದ ಕೆಳಗೆ ನೋಡಿದರೆ ಕಾಣುವ ಧರ್ಮಶಾಲೆಯ ದೃಶ್ಯ ಅಪರೂಪದ್ದು. ಹಾಗೆಯೇ ಇಲ್ಲಿಂದ ಮೇಲೆ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಕಾಣುವ ಹಿಮಾವೃತ ಪರ್ವತಗಳ ದೃಶ್ಯ ಅಮೋಘ. ಇಲ್ಲಿ ನಿಂತಾಗ ಪ್ರಕೃತಿಯ ಎದುರು ನಮ್ಮ ಸಾಧನೆಗಳೆಲ್ಲ ಎಷ್ಟು ಸಣ್ಣದು ಎನಿಸಿಬಿಡುತ್ತದೆ. ಇಲ್ಲಿಂದ ಪ್ಯಾರಾ ಗ್ಲೈಡಿಂಗ್ ವ್ಯವಸ್ಥೆಯೂ ಇದ್ದು, ಸಾಹಸಿಗಳನ್ನು ಕರೆಯುತ್ತದೆ.

ಧರ್ಮಶಾಲಾದಿಂದ ಮೇಲಕ್ಕೆ ಕಡಿದಾದ ರಸ್ತೆಯಲ್ಲಿ ಸಾಗಿಬಂದರೆ ಕಾಣುವ ಹಿಮಾಚ್ಛಾದಿತ ಪರ್ವತಗಳು, ಪೈನ್ ವೃಕ್ಷಗಳ ಕಣಿವೆಗಳು, ಅಲ್ಲಲ್ಲಿ ಹರಿವ ಝರಿಗಳು, ಅವುಗಳು ಸೃಷ್ಟಿಸುವ ಜಲಪಾತಗಳು, ತಣ್ಣನೆಯ ಗಾಳಿಯ ಸ್ಪರ್ಶ, ಅಲೌಕಿಕ ಅನುಭವ ನೀಡುತ್ತದೆ. ಮೆಕ್ಲೋಡ್ ಗಂಜ್ನಿಂದ ಮೇಲಕ್ಕೆ ಭಾಗಸುನಾಗ್ ಜಲಪಾತವಿದೆ. ನದಿ ನೀರು ಇಲ್ಲಿ ಎರಡು ಕವಲಾಗಿ ಕೆಳಬೀಳುತ್ತದೆ. ಧರ್ಮಶಾಲಾದ ಇನ್ನೊಂದು ಆಕರ್ಷಣೆಯಾಗಿ ರೋಪ್ವೇ ಇದೆ. ಅದರಲ್ಲಿ ಕುಳಿತು ಧರ್ಮಶಾಲಾ ಮಾತ್ರವಲ್ಲ ಇಡೀ ಹಿಮಾಲಯದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. 1852ರಷ್ಟು ಹಿಂದೆ ಕಟ್ಟಿದ ಸೇಂಟ್ ಜಾನ್ಸ್ ಚರ್ಚು ಧರ್ಮಶಾಲೆಯ ಇನ್ನೊಂದು ಆಕರ್ಷಣೆ. 1905ರಲ್ಲಿ ಆದ ಭೀಕರ ಭೂಕಂಪದಲ್ಲೂ ಅಲುಗಾಡದೇ ನಿಂತ ಚರ್ಚು ಶತಮಾನದ ಹಿಂದಿನ ವಾಸ್ತುಶಿಲ್ಪದ ಅತ್ಯುಚ್ಛ ಉದಾಹರಣೆಯಾಗಿ ಜನರ ಸೆಳೆಯುತ್ತದೆ.

ಇತ್ತೀಚೆಗೆ ಭಯಂಕರ ಮಳೆ ಹಾಗೂ ಭೂಕುಸಿತದಿಂದಾಗಿ ಧರ್ಮಶಾಲಾ ಸುದ್ದಿಯಲ್ಲಿತ್ತು. ನಾವು ನಡೆದಾಡಿದ ಜಾಗಗಳು ಹೊರ ಜಗತ್ತಿನಿಂದ ಸಂಪರ್ಕ ಕಡಿದುಕೊಂಡಿದ್ದವು. ಈಗ ಅಲ್ಲಿ ಹೇಗಿರಬಹುದೆಂದು ನೆನೆಸಿಕೊಂಡರೆ ಕುಳಿತಲ್ಲೇ ಭೂಮಿ ಕಂಪಿಸಿದಂತೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.