ಹಂಪಿ ಬಹುರೂಪಿ. ಅದಕ್ಕೆ ಹಲವು ಮುಖಗಳಿವೆ- ಗುಡಿಗಳ ಧಾರ್ಮಿಕತೆ; ಕೋಟೆ ಆನೆಲಾಯ ಕಮಲಮಹಲ್ ಸ್ನಾನಗೃಹಾದಿಗಳ ವಾಸ್ತುಶಿಲ್ಪ; ವಿವಿಧ ವಿಗ್ರಹಗಳ ಶಿಲ್ಪಕಲೆ; ಜಾತ್ರೆ ತೇರು ಮದುವೆ ಶಿವರಾತ್ರಿ ಭಜನೆಗಳ ಆಚರಣೆ; ಸಂತರ ಆಶ್ರಮಗಳ ಆಧ್ಯಾತ್ಮಿಕತೆ; ಸರ್ಕಾರಿ ಕಾರ್ಯಕ್ರಮಗಳ ಉತ್ಸವ- ಇತ್ಯಾದಿ. ಮನುಷ್ಯ ನಿರ್ಮಿತವಾದ ಈ ಎಲ್ಲ ಮುಖಗಳಿಗೂ ಜೀವ ತುಂಬಿರುವುದು ಅಲ್ಲಿನ ನಿಸರ್ಗ. ಅದರಲ್ಲೂ ಹಸಿರುಸೈನ್ಯ ಮುತ್ತಿಗೆ ಹಾಕಿದಂತಿರುವ ಗದ್ದೆ ತೋಟಗಳು; ಕಾವಲಿಗೆ ನಿಂತಿರುವ ಕಲ್ಲುಬೆಟ್ಟಗಳ ಸಾಲು; ಅವುಗಳ ನಡುವೆ ಕಾಲಾತೀತವಾಗಿ ಹರಿವ ತುಂಗಭದ್ರೆ; ಅದರೊಳಗಿನ ಅಗೋಚರ ಜೀವರಾಶಿ.

ಈ ನಿಸರ್ಗದ ಆಯಾಮವನ್ನು ಹೆಚ್ಚಿನ ಪ್ರವಾಸಿಗರು ಗಮನಿಸುವುದಿಲ್ಲ. ಕಾರಣ, ಹಂಪಿಯ ಚಾರಿತ್ರಿಕ ಸ್ಮಾರಕಗಳನ್ನು ನೋಡಲು ರಸ್ತೆಗಳಿವೆ. ತೋರಿಸಲು ಗೈಡುಗಳಿದ್ದಾರೆ. ಆದರೆ ಚರಿತ್ರೆಯ ಭಾರವಿಲ್ಲದ ಬೆಟ್ಟ, ಹೊಳೆ, ಕಾಡುಗಳನ್ನು ನಾವೇ ಹುಡುಕಿ ತಿರುಗಿ ನೋಡಬೇಕು. ಈ ಪ್ರದೇಶಗಳು ಪ್ರವಾಸಿಗರ ಜಾಗಗಳಲ್ಲ. ಚಾರಣಿಗರವು. ಇವನ್ನು ನೋಡಬೇಕಾದರೆ ದಡದಲ್ಲಿ ಬೆಳೆದ ಹಳುವನ್ನು ದಾಟಬೇಕು. ಕೆಸರನ್ನು ಮೆಟ್ಟಬೇಕು. ಬಂಡೆ ಹತ್ತಬೇಕು. ಪೊದೆಗಳಲ್ಲಿ ನುಸುಳಬೇಕು. ಗದ್ದೆತೋಟಗಳನ್ನು ಹಾಯಬೇಕು. ಹಾದಿತಪ್ಪಿದರೆ ತೋಟಗಳಲ್ಲಿರುವ ರೈತರು, ಆಡುಕಾಯುವವರು, ಮೀನುಗಾರರು, ಹರಿಗೋಲಿನವರು ನೆರವಾಗುವರು.

ತಿಂಗಳಿಗೊಮ್ಮೆ ಮತಂಗ ಪರ್ವತ ಹತ್ತಿಳಿವ ನಾನು, ನನ್ನ ಶಿಷ್ಯಮಿತ್ರರಾದ ಗೋಪಾಲಕೃಷ್ಣ-ಗುರುರಾಜ ಅವರ ಜತೆಗೆ, ಈಚೆಗೆ ತುಂಗಭದ್ರೆಯ ಪಾತ್ರದ ಕಿಂಚಿತ್ ಚಾರಣ ಮಾಡಿದೆ-ವಿರೂಪಾಕ್ಷ ಗುಡಿಯ ಹಿಂದೆ, ಒಂದು ಕಿ.ಮೀ. ಮೇಲ್ಭಾಗದಲ್ಲಿ. ನಾವು ನದೀಪಾತ್ರದ ತೋಟದೊಳಗಿಂದ ಹಾಯುವಾಗ, ವಿರೂಪಾಕ್ಷ ಶಿಖರದಂತೆ ನಿಡಿದಾಗಿದ್ದ ಹಳೆಯ ತೆಂಗಿನಮರಗಳಿಂದ ರೈತರು ಎಳನೀರನ್ನು ಇಳಿಸುತ್ತಿದ್ದರು. ಇಲ್ಲಿನ ಜಮೀನು ಹೊಳೆ ಬಂದಾಗ ಮುಳುಗಡೆಯಾಗುವ, ನೆರೆಯಿಳಿದಾಗ ಕಾಣಿಸಿಕೊಳ್ಳುವ ನೀರಾಟವಾಡುತ್ತ ಬಂದಿದೆ.

ಮಳೆಗಾಲದಲ್ಲಿ ದಾಟಲು ಅಸಾಧ್ಯವಾದ ತುಂಗಭದ್ರೆಯ ಕಲ್ಲುಸಾರವು, ಬೇಸಗೆಯಲ್ಲಿ ತಾನೇ ತಾನಾಗಿ ಮೈದೆಗೆಯುತ್ತದೆ. ಇಲ್ಲಿ ನೀರನ್ನು ಕಾಲಿಗೆ ತಾಗಿಸದೆಯೇ ತುಂಗಭದ್ರೆಯ ಆಚೆದಡಕ್ಕೆ ಹೋಗುವ ಮೇಕೆದಾಟುಗಳಿವೆ. ಅವನ್ನು ದಾಟಿದರೆ ಇನ್ನೊಂದು ಗಡ್ಡೆ. ಅದನ್ನು ದಾಟಿದರೆ ಕೊಪ್ಪಳ ಜಿಲ್ಲೆ; ಹಿಂದೊಂದು ಕಾಲಕ್ಕೆ ಹೈದರಾಬಾದ್ ಸಂಸ್ಥಾನ. ರೈತರು, ಬೆಸ್ತರು ಕಲ್ಲುಸಾರದ ಮೇಲೆ ನಡೆದು ಈ ದಾಟುಗಳನ್ನು ನೆಗೆದು ಆಚೆದಡದ ಊರುಗಳಿಗೆ ಹೋಗುತ್ತಾರೆ.

ಅರ್ಧ ಕಿ.ಮೀ. ವಿಸ್ತಾರವಾದ ಹಾಸುಗಲ್ಲಿನ ಈ ಪಾತ್ರದಲ್ಲಿ ಕೊಳಗಳಿವೆ. ಬೃಹದಾಕಾರದ ಬಂಡೆಗಳಿವೆ. ಮರಳ ದಿಬ್ಬಗಳಿವೆ. ಬೆಟ್ಟಗಳಿವೆ. ಪುಟ್ಟ ಗುಹೆಗಳಿವೆ. ಕಿರು ಜಲಪಾತಗಳಿವೆ. ಹೊಳೆಪಾತ್ರಕ್ಕೇ ವಿಶಿಷ್ಟವಾದ ಮರಗಿಡಗಳಿವೆ. ಹೊಳೆ ತುಂಬಿದಾಗ ಹೊರಜಗತ್ತಿನ ಜತೆ ಸಂಪರ್ಕ ಕಡಿದುಕೊಂಡು ಏಕಾಂಗಿಯಾಗುವ ನಡುಗಡ್ಡೆಗಳಿವೆ. ಈ ಗಡ್ಡೆಗಳಲ್ಲಿ ಬಾಳೆಯ-ತೆಂಗಿನ ತೋಟಗಳಿವೆ.

ನಾವು ನದೀಪಾತ್ರದ ಚಾರಣದಲ್ಲಿ ಕಲ್ಲುಸಂದಿನಲ್ಲಿ ಮಾತ್ರ ಬೆಳೆವ ವಿಶಿಷ್ಟ ಮರಗಳನ್ನು ಕಂಡೆವು. ಅವುಗಳಲ್ಲಿ ಹಾಲೆ ಮತ್ತು ಹೊಳೆಮತ್ತಿಯೂ ಸೇರಿವೆ. ಹೊಳೆಮತ್ತಿಯನ್ನು ಕಾವೇರಿಯ ಮುತ್ತತ್ತಿಯಲ್ಲಿ ನೋಡಿದ್ದೆ. ಹರಿವ ಹೊಳೆಯಲ್ಲಿ ಬೇರನ್ನು ಬಂಡೆಸಂದುಗಳಲ್ಲಿ ಕಳಿಸಿ, ಬೃಹದಾಕಾರ ಬೆಳೆದು, ನೀರದರ್ಪಣದಲ್ಲಿ ಮೊಗವನ್ನು ನೋಡುತ್ತ ನಿಲ್ಲುವ ವೃಕ್ಷವಿದು. ಅದು ನೀರಹಕ್ಕಿಗಳು ಮನೆಮಾಡುವ ಅಪಾರ್ಟ್ಮೆಂಟ್ ಕೂಡ. ಒಂದು ಅನಾಮಿಕ ಗಿಡದಲ್ಲಿ ನೆಕಲೇಸಿನಂತೆ ಹೂಮಾಲೆಗಳಿದ್ದವು. ಒಂದು ಗಿಡದ ಕಾಯಿ ಒಣಗಿ ಬಿರಿತು ತಾನೇ ಹೂವಾಗಿತ್ತು. ಅತ್ತಿಕಾಯಿಯಂತಹ ಕಾಯಿ ಬಿಡುವ ಮರದಲ್ಲಿ, ಗ್ರೀಕ್ ಸೈನಿಕರಂತೆ ವೇಷ ಧರಿಸಿದ್ದ ತ್ರಿಕೋನಾಕಾರ ಕೆಂಬಣ್ಣದ ಕವಚವುಳ್ಳ ಕೀಟಗಳು ಹರಿದಾಡುತಿದ್ದವು. ಹಂಗಾಮಿರಬೇಕು. ರತಿಕ್ರೀಡೆಯಲ್ಲಿದ್ದವು.

ಹೊಳೆ ತನ್ನ ಪಾತ್ರದಲ್ಲಿ ಅಲ್ಲಲ್ಲಿ ಮಡುಗಳನ್ನು ನಿರ್ಮಿಸಿದೆ. ಅವುಗಳ ಸುತ್ತ ಬೇಲಿಕಟ್ಟಿದಂತೆ ಹಾಪು ಸೆತ್ತೆಸದೆ ಬೆಳೆದಿದೆ. ಮೇಲೆ ನೂರಾರು ಬಗೆಯ ಜಲಸಸ್ಯಗಳು; ಮನುಷ್ಯರು ಇಳಿಯಲಾಗದ ಆಳದಲ್ಲಿ ನೈದಿಲೆಗಳು. ಬದಿಯಲ್ಲಿ ಕೇಬಲುಗಳಂತೆ ಹರಿದಿರುವ ಮಾರುದ್ದದ ಹುಲ್ಲು. ಇದೇ ಪಾತ್ರದಲ್ಲೇ ಇನ್ನೊಂದಿಷ್ಟು ಹಿಂದೆ ಹೋದರೆ, ಕಾಳಘಟ್ಟವಿದೆ. ಅಲ್ಲಿ ತುಂಗಭದ್ರೆ ನಿರ್ಮಿಸಿರುವ ಸರೋವರದಂತೆ ವಿಶಾಲವಾಗಿರುವ ಗಂಗಮ್ಮನ ಮಡುವಿದೆ. ಅದರ ತುಂಬ ಮೊಸಳೆಗಳು. ಬಂಡೆಯ ಮೇಲೆ ಕೂತು ತಮ್ಮ ಮೂತಿಯನ್ನಷ್ಟೆ ಮೇಲೆತ್ತಿ ವಿಹರಿಸುವ ಮೊಸಳೆಗಳನ್ನು ನೋಡಬಹುದು. ಕಾಲನ್ನು ನೀರೊಳಗಿಟ್ಟು ಜಲಕೇಳಿ ಆಡುವ ಅಚಾತುರ್ಯ ಮಾಡಲಾಗದು. ಒಮ್ಮೆ ಹೊಳೆತೀರದಲ್ಲಿ ಹುಲ್ಲುಕೊಯ್ಯಲು ಬಂದ ಹುಡುಗನನ್ನು ಮೊಸಳೆ ಎಳೆದುಕೊಂಡು ಹೋಯಿತು. ಈ ಮಡುವಿನಲ್ಲಿ ಮೀನುಗಾರರು ಬಿಡುಬಲೆ ಹಾಕಿ ಮೀನು ಹಿಡಿಯುವರು.

ಬೇಸಗೆಯಲ್ಲಿ ತುಂಗಭದ್ರೆಯ ಪಾತ್ರವು ಶಿಲ್ಪಕಲಾ ಮ್ಯೂಸಿಯಂ ಆಗಿ ರೂಪಾಂತರಗೊಳ್ಳುತ್ತದೆ. ಎಷ್ಟು ಮಿಲಿಯನ್ ವರ್ಷಗಳ ಹಿಂದೆ ಭೂಮಿಯೊಳಗಿನ ಲಾವಾರಸ ಹರಿದು ತಣ್ಣಗಾಗಿದ್ದೊ? ಹೊಳೆ ಮಾತ್ರ ತನಗಡ್ಡಬಂದ ಬೆಟ್ಟಗಳನ್ನು ಬಳಸಿ, ಕೊರಕಲನ್ನು ಇಳಿದು, ಬಯಲನ್ನು ಹುಡುಕಿ ಹಾದಿ ಮಾಡಿಕೊಂಡು ಹರಿದಿದೆ. ಕಲ್ಲರೆಯ ಮೆದುಭಾಗಗಳನ್ನು ಕರಗಿಸಿ ಕಲಾಕೃತಿಗಳನ್ನು ರಚಿಸಿದೆ. ಅವು ಹೃದಯ ಗುರುತನ್ನು ಯಾರೊ ಪ್ರೇಮಿ ಕೆತ್ತಿದಂತಹ ಆಕೃತಿಗಳು; ಶಿಲಾರಸವು ದ್ರವರೂಪದಲ್ಲಿ ಇರುವಾಗಲೆ ಯಾರೊ ಹೆಜ್ಜೆಯಿಟ್ಟುಕೊಂಡು ಹೋದಂತಹ ಗುರುತುಗಳು; ಒರಳುಕಲ್ಲಿನ ಗುಂಡಿಗಳು; ಆಳಬಾವಿಗಳು. ಕೆಲವು ಬಂಡೆಗಳು ಆನೆಗಳು ಮಲಗಿದಂತೆ; ಮತ್ತೆ ಕೆಲವು ಡೈನೊಸರಸಿನ ಅಸ್ಥಿಪಂಜರ. ಇಂತಹ ಚಿತ್ರವಿಚಿತ್ರ ಕಲ್ಲುಗಳು ಹುಲಗಿಯ ತನಕವೂ ಸಿಗುತ್ತವೆ. ಇಲ್ಲಿನ ಮನುಷ್ಯರು ಹತ್ತಲಾರದ ಬಂಡೆಗಳ ತುದಿಯಲ್ಲಿ ನೀರಹಕ್ಕಿ ಮೊಟ್ಟೆ ಇಡುತ್ತವೆ.

ಹೊಳೆಗೆ ನೆರೆ ಬಂದಾಗ, ಈ ಮರ ಗಿಡ ದಿಬ್ಬ ಸುರಂಗ ಪೊಟರೆ ಗುಹೆ ಬಂಡೆಗಳೆಲ್ಲ ಪ್ರವಾಹದಲ್ಲಿ ಕಣ್ಮರೆಯಾಗಿ ನೀರು ಏಕತ್ರವಾಗುತ್ತದೆ. ಅದೊಂದು ಪ್ರವಾಹ ಸೃಷ್ಟಿಸುವ ಜಲಸಮಾನತೆ. ಹೊಳೆಯಿಳಿದ ಬಳಿಕ ನೀರು, ಮತ್ತೆ ಬಂಡೆಗಳ ಸಂದಿಗೊಂದುಗಳಲ್ಲಿ ಹಾದು, ಸುರಂಗ ಪೊಟರೆಗಳನ್ನು ಹೊಕ್ಕು ಜುಳಜುಳಿಸುತ್ತದೆ. ಅಗೋಚರವಾಗಿ ಬಂಡೆಗಳಿಗೆ ಡಿಕ್ಕಿ ಹೊಡೆದು ಆರ್ಭಟಿಸುತ್ತದೆ. ಶಿಲೆಗಳ ಇಕ್ಕಟ್ಟಿನಲ್ಲಿ ಕುಗ್ಗುತ್ತದೆ. ಹೊರಬಂದು ಬಿಡುಗಡೆಯ ಲವಲವಿಕೆಯಲ್ಲಿ ಹರಿಯುತ್ತದೆ. ತುಂಗಭದ್ರೆಯ ಈ ನದೀಪಾತ್ರವು ಖಂಡಿತ ಜಲಕೇಳಿಯ ತಾಣವಲ್ಲ. ಇಲ್ಲಿ ಅಪರಿಚಿತರು ನೀರಿಗಿಳಿದಾಗ ಸಾಯುವುದು ಈಜುಬಾರದೆ ಅಲ್ಲ. ಪಾಚಿಗೆ ಜಾರಿ; ನೀರೊಳಗಿನ ಅಗೋಚರ ಸುರಂಗ ಪೊಟರೆಗಳಲ್ಲಿ ಸಿಕ್ಕಿಕೊಂಡು. ಬಂಡೆಗಳ ನಡುವಿನ ಹೊಳೆಯ ಆಳ ಸೆಳವು ಅಂದಾಜಿಗೆ ಸಿಗದು. ಆದರೂ ಏಕಾಂತದ ನಿರ್ಜನ ಜಾಗ ಹುಡುಕುವಲ್ಲಿ ಪ್ರೇಮಿಗಳಿಗೂ ಪಾನಪ್ರಿಯರಿಗೂ ವಿಶೇಷ ಪ್ರತಿಭೆಯಿದೆ. ಪಾನಿಗರು ಬಂದು ಹೋದ ಕುರುಹುಗಳಾದ ಖಾಲಿಸೀಸೆ ಕಂಡವು.

ಹೊಳೆ ಬೆಟ್ಟ ಕಣಿವೆಗಳು ಯಾವುದೇ ಊರಿಗೆ ವಿಶಿಷ್ಟ ಚೆಲುವನ್ನು ಕೊಡುತ್ತವೆ. ಮಾತ್ರವಲ್ಲ, ತಮ್ಮನ್ನು ದಾಟಲು ಹತ್ತಲು ಇಳಿಯಲು ಪ್ರಚೋದಿಸುವ ಮೂಲಕ, ಊರವರನ್ನು ಜೀವಂತವಾಗಿಡುತ್ತವೆ. ಇಷ್ಟೆ, ಸಂಭಾಳಿಸಿಕೊಂಡು ಅವುಗಳ ಸಂಗ ಮಾಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.