ಬೆಂಗಳೂರು: ಅತೀ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಭಾರಿ ಸಂಖ್ಯೆಯಲ್ಲಿ ಗಣ್ಯರು (ವಿಐಪಿ) ಹಾಗೂ ಅತೀ ಗಣ್ಯರು (ವಿವಿಐಪಿ) ಭೇಟಿ ನೀಡುವ ನಗರವೂ ಆಗಿದೆ. ಜನಪ್ರತಿನಿಧಿಗಳ ಓಡಾಟ, ಪ್ರತಿಭಟನೆ, ರ‍್ಯಾಲಿ, ಸಮಾವೇಶ, ಊರಹಬ್ಬ... ಹೀಗೆ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳಿಗೆ ಆತಿಥ್ಯ ವಹಿಸುವ ಈ ನಗರದಲ್ಲಿ ‘ಭದ್ರತೆ’ ಕಾಯಕವೇ ಪೊಲೀಸರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಗಣ್ಯರಿಗೆ, ವಿವಿಧ ಸಭೆ ಸಮಾರಂಭಗಳಿಗೆ ‘ಭದ್ರತೆ’ ಒದಗಿಸುವಷ್ಟರಲ್ಲೇ ಹೈರಾಣಾಗುತ್ತಿರುವ ಪೊಲೀಸರು, ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳ ತನಿಖೆ ಹಾಗೂ ಅಪರಾಧ ಚಟುವಟಿಕೆ ನಿಯಂತ್ರಣದ ಬಗ್ಗೆ ಹೆಚ್ಚು ಸಮಯ ವಿನಿಯೋಗಿಸಲು ಸಾಧ್ಯವಾಗುತ್ತಿಲ್ಲ.

ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗ (ಎನ್‌ಸಿಆರ್‌ಬಿ) ಕಲೆ ಹಾಕಿರುವ ಅಂಕಿ–ಅಂಶಗಳ ಪ್ರಕಾರ, 2019ರಲ್ಲಿ ಅಪರಾಧ ಪ್ರಕರಣಗಳ ದಾಖಲಾತಿ ಪ್ರಮಾಣ ಹೆಚ್ಚಿದೆ. ಅವುಗಳಲ್ಲಿ ಶೇ 22ರಷ್ಟು ಪ್ರಕರಣಗಳ ತನಿಖೆ ಮಾತ್ರ ಪೂರ್ಣಗೊಂಡಿದೆ. ಈ ಹಿನ್ನಡೆಗೆ ಕಾರಣವೇನು ಎಂಬುದನ್ನು ಹುಡುಕುತ್ತ ಹೊರಟಾಗ, ‘ಪೊಲೀಸರ ಹೆಚ್ಚಿನ ಸಮಯ ‘ಭದ್ರತೆ’ ಒದಗಿಸುವುದಕ್ಕೆ ವಿನಿಯೋಗ ಆಗುತ್ತಿರುವುದು ಹಾಗೂ ಅವರಿಗೆ ಪ್ರಕರಣಗಳ ತನಿಖೆಗೆ ಸಾಕಷ್ಟು ಸಮಯ ಸಿಗದೇ ಇರುವುದು' ನಿಚ್ಚಳವಾಗಿ ಗೋಚರಿಸುತ್ತದೆ.

ಬೆಂಗಳೂರಿನ ಬಹುಪಾಲು ಪೊಲೀಸರು, ತಮ್ಮ ಸೇವಾವಧಿಯ ಶೇ 75ರಷ್ಟನ್ನು ಭದ್ರತೆ ನೀಡುವ ಕೆಲಸದಲ್ಲೇ ಕಳೆಯುತ್ತಿದ್ದಾರೆ. ಅನ್ಯಾಯಕ್ಕೆ ಒಳಗಾದ ಜನರು ಠಾಣೆಗೆ ನೀಡುವ ದೂರುಗಳ ತನಿಖೆ ನಡೆಸುವುದಕ್ಕೂ ಅವರಿಗೆ ಸಮಯ ಸಿಗುತ್ತಿಲ್ಲ. ದೂರುದಾರರು ತನಿಖೆ ಪ್ರಗತಿ ಬಗ್ಗೆ ಠಾಣೆಗೆ ಹೋಗಿ ವಿಚಾರಿಸಿದರೆ, ‘ಇವತ್ತು ಸಿಬ್ಬಂದಿ ಬಂದೋಬಸ್ತ್‌ಗೆ ಹೋಗಿದ್ದಾರೆ. ನಾಳೆ ಅಥವಾ ನಾಡಿದ್ದು ಬನ್ನಿ. ಇಲ್ಲ ತಿಂಗಳು ಬಿಟ್ಟು ಬನ್ನಿ’ ಎಂಬ ಸಿದ್ಧ ಉತ್ತರಗಳೇ ಸಿಗುತ್ತಿವೆ.

‘ಮನೆಯಲ್ಲಿ ಕಳ್ಳತನವಾಗಿದ್ದ ಬಗ್ಗೆ ದೂರು ಕೊಟ್ಟು ಮೂರು ತಿಂಗಳಾಯಿತು. ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಪೊಲೀಸರನ್ನು ಕೇಳಿದರೆ, ‘ಭದ್ರತೆ ಕೆಲಸವೇ ಜಾಸ್ತಿ ಇದೆ. ನೋಡೋಣ’ ಎನ್ನುತ್ತಿದ್ದಾರೆ. ಪೊಲೀಸರೇ ಈ ರೀತಿ ಮಾಡಿದರೆ, ನಾವು ಯಾರನ್ನು ಕೇಳಬೇಕು’ ಎಂದು ಪುಟ್ಟೇನಹಳ್ಳಿಯ ನಿವಾಸಿಯೊಬ್ಬರು ಪ್ರಶ್ನಿಸಿದರು.

‘ಅತಿಹೆಚ್ಚು ಗಣ್ಯರು– ಅತಿಗಣ್ಯರು ಭೇಟಿ ನೀಡುವ ದೇಶದ ನಂಬರ್ ಒನ್ ನಗರ ಬೆಂಗಳೂರು. ಅವರಿಗೆಲ್ಲ ನಾವೇ ಭದ್ರತೆ ನೀಡಬೇಕು. ಆಯಾ ಠಾಣಾಧಿಕಾರಿಯೇ ಭದ್ರತೆ ಹೊಣೆ ವಹಿಸಿಕೊಂಡು ಸಿಬ್ಬಂದಿ ಜೊತೆ ಕರ್ತವ್ಯ ನಿರ್ವಹಿಸುತ್ತಾರೆ. ಸ್ವಲ್ಪ ಎಡವಟ್ಟಾದರೂ ನಗರಕ್ಕೆ ಕೆಟ್ಟ ಹೆಸರು ಬರುತ್ತದೆ. ಠಾಣಾಧಿಕಾರಿ, ಸಿಬ್ಬಂದಿಯ ಹುದ್ದೆಗೂ ಕುತ್ತು ಬರುವ ಅಪಾಯವಿದೆ. ಹೀಗಾಗಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ’ ಎಂದು ಡಿಸಿಪಿ ಒಬ್ಬರು ತಿಳಿಸಿದರು.

‘ಕೊಲೆ, ಸುಲಿಗೆ, ಕಳ್ಳತನ, ಕೊಲೆಗೆ ಯತ್ನ, ರೌಡಿಗಳ ಅಟ್ಟಹಾಸ... ಹೀಗೆ ನಾನಾ ಪ್ರಕರಣಗಳು ಠಾಣೆಯಲ್ಲಿ ದಾಖಲಾಗುತ್ತವೆ. ಅವುಗಳ ತನಿಖೆ ಕೈಗೊಳ್ಳಬೇಕು. ಪಾಸ್‌ಪೋರ್ಟ್ ಸೇರಿ ಇತರೆಸೇವೆಗಳ ದಾಖಲೆ ಪರಿಶೀಲನೆಯನ್ನೂ ಮಾಡಬೇಕು. ಇದರ ನಡುವೆಯೇ ಭದ್ರತೆ ಹೊಣೆಯೂ ಇರುತ್ತದೆ. ಪ್ರಕರಣದ ತನಿಖೆ ಸೂಕ್ತವಾಗಿ ಆಗುತ್ತಿಲ್ಲವೆಂಬುದನ್ನು ಒಪ್ಪಿಕೊಳ್ಳುತ್ತೇವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಸಾಕಷ್ಟಿದೆ. ಭದ್ರತೆಯನ್ನೂ ಕೈಗೊಂಡು ಪ್ರಕರಣಗಳ ತನಿಖೆಯನ್ನೂ ಮಾಡಲು ಹಲವು ಅಡೆತಡೆಗಳೂ ಇವೆ. ಆದರೆ, ಪ್ರಕರಣಗಳು ಗಂಭೀರವಾಗಿದ್ದರೆ ಆದ್ಯತೆ ಮೇರೆಗೆ ತನಿಖೆ ಪೂರ್ಣಗೊಳಿಸುತ್ತೇವೆ’ ಎಂದರು.

ಕರೆ ಸ್ವೀಕರಿಸುವ ಸಿಬ್ಬಂದಿ ಹೊರತು ಎಲ್ಲರೂ ಭದ್ರತೆಗೆ: ‘ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲು ಭದ್ರತೆ ಅಡ್ಡಿಯಾಗಿದೆ’ ಎಂಬುದನ್ನು ಇನ್‌ಸ್ಪೆಕ್ಟರ್ ಒಬ್ಬರು ಒಪ್ಪಿಕೊಂಡರು. ‘ಭದ್ರತೆಯೂ ನಮ್ಮ ಕರ್ತವ್ಯ. ಈ ನಡುವೆಯೇ ಜನರ ಸಮಸ್ಯೆಗಳಿಗೆಸಾಧ್ಯವಾದಷ್ಟು ಸ್ಪಂದಿಸುತ್ತೇವೆ’ ಎಂದು ಅವರು ಹೇಳಿದರು.

‘ರಾಜಕಾರಣಿಗಳು, ಗಣ್ಯರು ಠಾಣೆ ವ್ಯಾಪ್ತಿಯಲ್ಲಿ ವಾಹನದಲ್ಲಿ ಹಾದು ಹೋಗುವಾಗಲೂ ಭದ್ರತೆ ನೀಡಬೇಕು. ಅವರು ಪಾಲ್ಗೊಳ್ಳುವ ಕಾರ್ಯಕ್ರಮ ಹಾಗೂ ಜನರು ಸೇರುವ ಎಲ್ಲ ಕಾರ್ಯಕ್ರಮಗಳಲ್ಲೂ ಕಾವಲು ಕಾಯಬೇಕು. ನಮ್ಮ ಠಾಣೆಯಲ್ಲಿ 50 ಸಿಬ್ಬಂದಿ ಇದ್ದೇವೆ. ಠಾಣೆಯಲ್ಲಿ ಕರೆ ಸ್ವೀಕರಿಸುವ ಸಿಬ್ಬಂದಿ ಒಬ್ಬರನ್ನು
ಬಿಟ್ಟು ಅಪರಾಧ, ವಿಶೇಷ ಹಾಗೂ ಕಾನೂನು ಸುವ್ಯವಸ್ಥೆ ವಿಭಾಗಗಳ ಸಿಬ್ಬಂದಿಯನ್ನೂಅವರ ಭದ್ರತೆಗೆ ನಿಯೋಜಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಠಾಣೆಗೆ ಬರುವ ಜನ ಬೇಸರದಿಂದ ವಾಪಸು ಹೋಗುತ್ತಾರೆ’ ಎಂದು ಅವರು ವಿವರಿಸಿದರು.

‘ಜನರ ಸೇವೆ ಮಾಡಬೇಕು. ಅವರಿಗೆ ನ್ಯಾಯ ಒದಗಿಸಬೇಕು ಎಂಬ ಇಚ್ಛೆಯಿಂದಲೇ ನಾವು ಇಲಾಖೆಗೆ ಸೇರಿದ್ದೇವೆ. ಆದರೆ, ಇಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ. ನಸುಕಿನಲ್ಲಿ ಕರ್ತವ್ಯಕ್ಕೆ ಬಂದರೆ ಮನೆಗೆ ಮರಳುವಾಗ ರಾತ್ರಿ 12 ದಾಟುತ್ತದೆ. ಇದರಲ್ಲಿ ಬಹುಪಾಲು ಸಮಯ ಭದ್ರತೆ ಒದಗಿಸುವುದರಲ್ಲೇ ಕಳೆಯುತ್ತದೆ’ ಎಂದರು.

ಜನಸಂಖ್ಯೆ ಹೆಚ್ಚಿದಂತೆ ಒತ್ತಡವೂ ಹೆಚ್ಚಳ: ‘ನಗರದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ. ಸಿಬ್ಬಂದಿ ಕೊರತೆಯಿಂದ ಕೆಲಸದ ಒತ್ತಡ ಜಾಸ್ತಿ ಆಗುತ್ತಿದೆ. ಇದರ ಮಧ್ಯೆಯೇ ಜನರ ದೂರುಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದು ಎಸಿಪಿಯೊಬ್ಬರು ಹೇಳಿದರು.

‘ಒಂದು ಪ್ರಕರಣವನ್ನು ಆಳವಾಗಿ ತನಿಖೆ ನಡೆಸಲು ಆಗುವುದಿಲ್ಲ. ತನಿಖೆ ನಡೆಯುವಾಗಲೇ ಭದ್ರತೆ ಸೇರಿದಂತೆ ಇನ್ನಿತರ ಹಲವು ಜವಾಬ್ದಾರಿಗಳನ್ನೂ ನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಸ್ವಲ್ಪ ವ್ಯತ್ಯಾಸ
ವಾದರೂ ‘ಕರ್ತವ್ಯ ಲೋಪ’ ಆರೋಪದಡಿ ತಲೆದಂಡವಾಗುತ್ತದೆ. ಇಂಥ ಸ್ಥಿತಿಯಲ್ಲಿ ಪ್ರಕರಣದ
ತನಿಖೆ ಮುಗಿಸುವುದಾದರೂ ಹೇಗೆ’ ಎಂದು ಅವರು ಪ್ರಶ್ನಿಸಿದರು.

‘10 ಮಂದಿಯ ಕೆಲಸ ಒಬ್ಬರೇ ನಿರ್ವಹಿಸಬೇಕಿದೆ’

‘ಪ್ರತಿಯೊಬ್ಬರಿಗೂ ಭದ್ರತೆ ನೀಡುವುದು ನಮ್ಮ ಕರ್ತವ್ಯ. ಇದರ ಬಗ್ಗೆ ಹೆಮ್ಮೆ ಇದೆ. ಸಿಬ್ಬಂದಿ ಕೊರತೆಯಿಂದ ಸಾಕಷ್ಟು ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಬೆಂಗಳೂರಿನ ಜನಸಂಖ್ಯೆ 1.5 ಕೋಟಿ ದಾಟಿದ್ದು, 10 ಮಂದಿ ಮಾಡಬೇಕಾದ ಕೆಲಸವನ್ನು ಒಬ್ಬರೇ ಮಾಡುವ ಸ್ಥಿತಿ ಇದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

‘ಕರ್ತವ್ಯ ನಿರ್ವಹಿಸುತ್ತಿರುವ ಹಲವು ಸಿಬ್ಬಂದಿಗೆ ಅನುಭವ ಹಾಗೂ ಕೌಶಲದ ಕೊರತೆಯೂ ಇದೆ. ಅವರಿಗೆ ತರಬೇತಿ ಅಗತ್ಯವಿದೆ. ಭದ್ರತೆ ಕಲ್ಪಿಸುವುದರ ಜೊತೆಗೇ ಜನರ ಸೇವೆಯನ್ನೂ ಮಾಡುತ್ತಿದ್ದೇವೆ. ಅದಕ್ಕಾಗಿ ತಾಂತ್ರಿಕವಾಗಿಯೂ ಸಿದ್ಧರಾಗಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ತಿಳಿಸಿದರು.

ಜನಪ್ರತಿನಿಧಿಗಳ ಭದ್ರತೆಗೆ ಹೆಚ್ಚು ಆದ್ಯತೆ

‘ರಾಜ್ಯದ ಬಹುತೇಕ ಜನಪ್ರತಿನಿಧಿಗಳು ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರೆಲ್ಲರಿಗೂ ಶಿಷ್ಟಾಚಾರ ಪ್ರಕಾರ ಭದ್ರತೆ ನೀಡುವ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಅವರ ಮನೆಗಳಿಗೂ ಭದ್ರತೆ ಒದಗಿಸಲಾಗುತ್ತದೆ. ಅದರ ಉಸ್ತುವಾರಿ ಆಯಾ ಠಾಣೆಯ ಇನ್‌ಸ್ಪೆಕ್ಟರ್‌ಗಳದ್ದು. ಕೆಲಸದ ಒತ್ತಡ ಎಷ್ಟೇ ಇದ್ದರೂ ದಿನಕ್ಕೆ ಎರಡೂ ಬಾರಿ ಗಣ್ಯರ ಮನೆಗೆ ಭೇಟಿ ನೀಡಲೇಬೇಕು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು ಬೆಳಿಗ್ಗೆ ಮನೆಯಿಂದ ಹೊರಟು ಸಂಜೆ ಮರಳುವವರೆಗೂ ಅವರಿಗೆ ಭದ್ರತೆ ನೀಡಲಾಗುತ್ತದೆ. ಅವರು ಸಾಗುವ ಪ್ರತಿಯೊಂದು ರಸ್ತೆ ಹಾಗೂ ಪ್ರದೇಶಗಳಲ್ಲೂ ಸಂಚಾರ ಪೊಲೀಸ್ ಜೊತೆಯಲ್ಲೇ ಠಾಣಾ ಸಿಬ್ಬಂದಿಯನ್ನೂ ನಿಯೋಜಿಸಲಾಗುತ್ತದೆ’ ಎಂದರು.

‘ಜನಪ್ರತಿನಿಧಿ ಒಂದು ರಸ್ತೆಯಲ್ಲಿ ಸಾಗಿದರೆ, ಮತ್ತೊಬ್ಬರು ಅದೇ ರಸ್ತೆಯಲ್ಲೇ ಬರುತ್ತಾರೆ. ಒಮ್ಮೊಮ್ಮೆ ಸಾಲು ಸಾಲು ಜನಪ್ರತಿನಿಧಿಗಳು ಓಡಾಡುತ್ತಾರೆ. ಅಂಥ ಸಂದರ್ಭದಲ್ಲಿ ಆಯಾ ಠಾಣೆ ಇನ್‌ಸ್ಪೆಕ್ಟರ್‌ಗಳೇ ಅವರ ಕಾವಲಿನ ಹೊಣೆ ನಿಭಾಯಿಸುತ್ತಾರೆ. ಅಗತ್ಯ ಬಿದ್ದರೆ, ಅಕ್ಕ–ಪಕ್ಕದ ಠಾಣೆಗಳ ಸಿಬ್ಬಂದಿಯನ್ನೂ ಭದ್ರತೆಗೆ ಕರೆಸಿಕೊಳ್ಳುತ್ತಾರೆ. ನಿತ್ಯವೂ ಇಂತಹ ಕರ್ತವ್ಯ ಮಾಮೂಲಿ ಎಂಬಂತಾಗುತ್ತಿದೆ’ ಎಂದರು.

‘ವಿದೇಶೀ ಗಣ್ಯರು, ಪ್ರಧಾನಿ, ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಅನ್ಯರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಹಾಗೂ ಇತರೆ ಎಲ್ಲ ಗಣ್ಯರು ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಾರೆ. ಅವರ ಭದ್ರತೆಯ ಉಸ್ತುವಾರಿಗಾಗಿ ಪ್ರತ್ಯೇಕ ಭದ್ರತಾ ಪಡೆ ಇದೆ. ಆದರೂ ಅವರೊಂದಿಗೆ ಸ್ಥಳೀಯ ಪೊಲೀಸರೂ ಕೈಜೋಡಿಸಬೇಕಾಗುತ್ತದೆ’ ಎಂದು ವಿವರಿಸಿದರು.

ನಿತ್ಯದ ಗೋಳು

‘ನಗರದಲ್ಲಿ ಸಂಚಾರ ದಟ್ಟಣೆ ಮಧ್ಯೆಯೇ ಸಂಚಾರ ಪೊಲೀಸರು, ಗಣ್ಯರಿಗೆ ಹಾಗೂ ಜನಪ್ರತಿನಿಧಿಗಳ ವಾಹನಗಳಿಗೆ ದಾರಿ ಮಾಡಿಕೊಡಬೇಕು. ಇದು ಅವರ ನಿತ್ಯದ ಗೋಳು’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಗಣ್ಯರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದನಗರಕ್ಕೆ ಬರುವಾಗ ದಾರಿಯುದ್ದಕ್ಕೂ ಖಾಸಗಿ ವಾಹನಗಳನ್ನು ತಡೆದು ಅನುಕೂಲ ಕಲ್ಪಿಸಬೇಕು. ವಾಪಸ್ ಅದೇ ರೀತಿಯಲ್ಲೇ ಕಳುಹಿಸಿಕೊಡಬೇಕು. ಸ್ವಲ್ಪ ತೊಂದರೆಯಾದರೂ ಕೆಲಸವೇ ಹೋಗುತ್ತದೆ’ ಎಂದರು.

ಕೇಂದ್ರ ವಿಭಾಗದಲ್ಲಿ ಒತ್ತಡ ಹೆಚ್ಚು

ವಿಧಾನಸೌಧ, ವಿಕಾಸಸೌಧ, ಹೈಕೋರ್ಟ್ ಇರುವ ಕೇಂದ್ರ ವಿಭಾಗದಲ್ಲೇ ಭದ್ರತೆಯ ಒತ್ತಡ ಹೆಚ್ಚಿದೆ.

‘ಆಗಾಗ ಬೆದರಿಕೆಗಳು ಬರುತ್ತಿರುತ್ತವೆ. ಹೀಗಾಗಿ, ದಿನದ 24 ಗಂಟೆಯೂ ಭದ್ರತೆ ಇರುತ್ತದೆ. ವಿಶೇಷ ದಿನಗಳಲ್ಲಂತೂ ನಗರದ ಪೊಲೀಸರೆಲ್ಲರೂ ವಿಧಾನಸೌಧ ಮುಂದೆಯೇ ಇರುತ್ತಾರೆ. ಸಣ್ಣ ಎಡವಟ್ಟಾದರೂ ತಲೆದಂಡ ತಪ್ಪಿದ್ದಲ್ಲ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಚಿನ್ನಸ್ವಾಮಿ ಕ್ರೀಡಾಂಗಣವೂ ಇದೇ ವಿಭಾಗದಲ್ಲಿದೆ. ಇಲ್ಲಿ ಕ್ರಿಕೆಟ್ ಪಂದ್ಯ ನಡೆದಾಗಲೆಲ್ಲ ನಗರದ ಬೇರೆ ಬೇರೆ ಠಾಣೆಗಳ ಪೊಲೀಸರನ್ನು ಇಲ್ಲಿನ ಭದ್ರತೆಗೆ ನಿಯೋಜಿಸಲಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.