ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ | ಕಲುಷಿತ ಆಹಾರ ಸೇವನೆ ಶಂಕೆ: 50 ವಿದ್ಯಾರ್ಥಿನಿಯರು ಅಸ್ವಸ್ಥ

Published : 6 ಅಕ್ಟೋಬರ್ 2024, 6:54 IST
Last Updated : 6 ಅಕ್ಟೋಬರ್ 2024, 6:54 IST
ಫಾಲೋ ಮಾಡಿ
Comments

ಲಾತೂರ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಲಾತೂರ್ ನಗರದ ಸರ್ಕಾರಿ ಕಾಲೇಜಿನ ವಸತಿ ನಿಲಯದಲ್ಲಿ ರಾತ್ರಿ ಆಹಾರ ಸೇವಿಸಿದ 50 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲುಷಿತ ಆಹಾರ ಸೇವನೆ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುರನ್ಮಲ್ ಲಾಹೋಟಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿಗೆ ಸೇರಿದ ವಸತಿ ನಿಲಯ ಇದಾಗಿದ್ದು, ಸುಮಾರು 324 ವಿದ್ಯಾರ್ಥಿನಿಯರಿದ್ದಾರೆ.

‘ವಿದ್ಯಾರ್ಥಿನಿಯರು ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಅನ್ನ, ಚಪಾತಿ, ಬೆಂಡೆಕಾಯಿ ಪದಾರ್ಥ ಮತ್ತು ಸೊಪ್ಪಿನ ಸಾರು ಊಟವನ್ನು ಸೇವಿಸಿದ್ದಾರೆ. 8.30ರ ವೇಳೆಗೆ ಹಲವರಲ್ಲಿ ವಾಂತಿ ಕಾಣಿಸಿಕೊಂಡಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮಾಹಿತಿ ಪಡೆದ ಕಾಲೇಜು ಪ್ರಾಂಶುಪಾಲರು ತಕ್ಷಣ ಸ್ಥಳಕ್ಕೆ ಧಾವಿಸಿ ಲಾತೂರ್‌ನ ವಿಲಾಸ್‌ರಾವ್ ದೇಶಮುಖ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಭಾಗದ ಅಧ್ಯಕ್ಷ ಡಾ.ಉದಯ್ ಮೋಹಿತೆ ಅವರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳನ್ನು ತಕ್ಷಣವೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ಅವರು ತಿಳಿಸಿದ್ದಾರೆ.

‘ಮಧ್ಯರಾತ್ರಿಯ ವೇಳೆಗೆ ಸುಮಾರು 50 ವಿದ್ಯಾರ್ಥಿಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ 20 ಮಂದಿಯನ್ನು ಭಾನುವಾರ ಬೆಳಗಿನ ಜಾವ 3 ಗಂಟೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಉಳಿದ 30 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲಾ ಬಾಲಕಿಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವಿದ್ಯಾರ್ಥಿಗಳ ಪೋಷಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಡಾ. ಉದಯ್‌ ಮೋಹಿತೆ ಹೇಳಿದ್ದಾರೆ.

ಘಟನೆ ಕುರಿತು ಶಿವಾಜಿನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT