ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಗಡಿ ಮಾಲೀಕರ ‘ಹೆಸರು ಪ್ರದರ್ಶನ’ ಕಡ್ಡಾಯವಲ್ಲ: ಮಧ್ಯಪ್ರದೇಶದ ಸರ್ಕಾರ ಸ್ಪಷ್ಟನೆ

Published 22 ಜುಲೈ 2024, 10:35 IST
Last Updated 22 ಜುಲೈ 2024, 10:35 IST
ಅಕ್ಷರ ಗಾತ್ರ

ಭೋಪಾಲ್: ಕಾಂವಡ್‌ ಯಾತ್ರೆ ಮಾರ್ಗದಲ್ಲಿನ ತಿಂಡಿ–ತಿನಿಸುಗಳ ಅಂಗಡಿ ಮಾಲೀಕರು ತಮ್ಮ ಹೆಸರನ್ನು ಮಳಿಗೆಗಳ ಮುಂದೆ ಉಲ್ಲೇಖಿಸಬೇಕು ಎಂಬ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಮಧ್ಯಪ್ರದೇಶದ ಸರ್ಕಾರ ಸ್ಪಷ್ಟಪಡಿಸಿದೆ.

ಉಜ್ಜಯಿನಿಯ ಮೇಯರ್‌ ಆದೇಶ ಕುರಿತು ಪ್ರತಿಕ್ರಿಯಿಸಿರುವ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ (ಯುಡಿಎಚ್‌ಡಿ), ‘ನಗರ ಪ್ರದೇಶಗಳಲ್ಲಿನ ಕಾಂವಡ್‌ ಯಾತ್ರೆ ಮಾರ್ಗದಲ್ಲಿ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್‌ ಸಂಖ್ಯೆಯನ್ನು ಪ್ರದರ್ಶಿಸುವ ಬಗ್ಗೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ತಿಳಿಸಿದೆ.

ಮಧ್ಯಪ್ರದೇಶದ ಪ್ರಾಚೀನ ನಗರ ಉಜ್ಜಯಿನಿಯಲ್ಲಿನ ಅಂಗಡಿಗಳ ಮುಂದೆ ಮಾಲೀಕರ ಹೆಸರು, ಮೊಬೈಲ್‌ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂದು ಅಲ್ಲಿನ ಮಹಾನಗರ ಪಾಲಿಕೆ ಭಾನುವಾರ ಆದೇಶ ಹೊರಡಿಸಿತ್ತು.

ಈ ಆದೇಶ ಉಲ್ಲಂಘಿಸುವವರು ಮೊದಲ ಬಾರಿಗೆ ₹2,000 ದಂಡ ಪಾವತಿಸಬೇಕು. ಎರಡನೇ ಬಾರಿಯೂ ಆದೇಶ ಉಲ್ಲಂಘಿಸಿದರೆ ₹5,000 ದಂಡ ಪಾವತಿಸಬೇಕಾಗುತ್ತದೆ ಎಂದು ಉಜ್ಜಯಿನಿಯ ಮೇಯರ್‌ ಮುಕೇಶ್‌ ತತ್ವಾಲ್‌ ತಿಳಿಸಿದ್ದರು.

ಈ ಆದೇಶವು ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತರಿಪಡಿಸುವ ಗುರಿಯನ್ನು ಹೊಂದಿದೆಯೇ ಹೊರತು, ಮುಸ್ಲಿಂ ಅಂಗಡಿಗಳನ್ನು ಗುರಿಯಾಗಿಸುವ ಉದ್ದೇಶ ಹೊಂದಿಲ್ಲ ಎಂದು ಮೇಯರ್‌ ಸ್ಪಷ್ಟಪಡಿಸಿದ್ದರು.

ಉಜ್ಜಯಿನಿಯು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್‌ ಯಾದವ್‌ ಅವರ ತವರೂರು. ಇಲ್ಲಿನ ಪ್ರಸಿದ್ಧ ಮಹಾಕಾಳ ದೇವಾಲಯದಲ್ಲಿ ಇಂದಿನಿಂದ (ಸೋಮವಾರ) ಶ್ರಾವಣ ಮಾಸ ಆರಂಭವಾಗಿದ್ದು, ವಿವಿಧೆಡೆಯಿಂದ ಅಪಾರ ಭಕ್ತರು ಇಲ್ಲಿಗೆ ಬರುತ್ತಾರೆ.

ಉತ್ತರ ಪ್ರದೇಶದಲ್ಲಿ ಕಾಂವಡ್‌ ಯಾತ್ರೆ ಮಾರ್ಗದಲ್ಲಿನ ಎಲ್ಲ ತಿನಿಸು ಅಂಗಡಿಗಳ ಮಾಲೀಕರ ಹೆಸರುಗಳನ್ನು ಪ್ರದರ್ಶಿಸುವಂತೆ ಇತ್ತೀಚೆಗೆ ನಿರ್ದೇಶಿಸಲಾಗಿತ್ತು. ಅದರ ಬೆನ್ನಲ್ಲೇ ಉಜ್ಜಯಿನಿಯಲ್ಲಿ ಇದೇ ರೀತಿಯ ಆದೇಶ ಹೊರಬಿದ್ದಿದೆ. ಇದು ಮುಸ್ಲಿಂ ವ್ಯಾಪಾರಿಗಳನ್ನು ಗುರಿಯಾಗಿಸಿರುವ ಆದೇಶ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT