ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇವಿಎಂ ಪರಿಶೀಲನೆಗೆ ಹಲವು ಆಯ್ಕೆ: ಚುನಾವಣಾ ಆಯೋಗ

ಯಾವುದೇ ಮತಗಟ್ಟೆಯ ಇವಿಎಂ ಆಯ್ಕೆ ಮಾಡಬಹುದು: ಚುನಾವಣಾ ಆಯೋಗ
Published 16 ಜುಲೈ 2024, 15:53 IST
Last Updated 16 ಜುಲೈ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳ ಫಲಿತಾಂಶದ ಬಳಿಕ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲೆ ಅನುಮಾನ ವ್ಯಕ್ತಪಡಿಸಿರುವ ಅಭ್ಯರ್ಥಿಗಳಿಗೆ ಇವಿಎಂಗಳ ಪರಿಶೀಲನೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ.

ಚುನಾವಣೆಯಲ್ಲಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿರುವ ಅಭ್ಯರ್ಥಿಗಳಿಗೆ ಇವಿಎಂಗಳ ಪರಿಶೀಲನೆಗೆ ಯಾವುದೇ ಮತಗಟ್ಟೆಯಿಂದ ಯಂತ್ರಗಳನ್ನು ಆರಿಸುವುದು ಸೇರಿದಂತೆ ಹಲವು ಆಯ್ಕೆಗಳನ್ನೂ ನೀಡಿದೆ. 

ಇವಿಎಂಗಳಲ್ಲಿ ಅಳವಡಿಸಲಾಗಿರುವ ಮೈಕ್ರೋ ಕಂಟ್ರೋಲರ್ ಚಿಪ್‌ಗಳಲ್ಲಿ ಅಕ್ರಮವಾಗಿ ತಿದ್ದುಪಡಿ ಮಾಡಲಾಗಿದೆಯೇ ಅಥವಾ ಮಾರ್ಪಾಡು ಮಾಡಲಾಗಿದೆಯೇ ಎಂಬುದರ ಪರಿಶೀಲನೆಗೆ ಅವಕಾಶ ನೀಡಬೇಕು ಎಂದು ಎರಡು ಅಥವಾ ಮೂರನೇ ಸ್ಥಾನ ಪಡೆದ ಎಂಟು ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು.

ಪರಿಶೀಲನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಮಂಗಳವಾರ ತಾಂತ್ರಿಕ–ಪ್ರಮಾಣಿತ ಕಾರ್ಯಾಚರಣೆ ವಿಧಾನ (ಟಿ–ಎಸ್‌ಒಪಿ) ಹೊರಡಿಸಿದೆ.

ಟಿ–ಎಸ್‌ಒಪಿ ಪ್ರಕಾರ, ಅರ್ಹ ಅಭ್ಯರ್ಥಿಗಳು ಒಂದು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗಿನ ಯಾವುದೇ ಮತಗಟ್ಟೆಯಲ್ಲಿ ಬಳಸಿದ ಮತಯಂತ್ರಗಳನ್ನು ಪರಿಶೀಲನೆಗೆ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಪರಿಶೀಲನೆಗೆ ಒಳಪಡಿಸಬೇಕಾದ ಮತಯಂತ್ರಗಳ ಸೀರಿಯಲ್‌ ಸಂಖ್ಯೆಗಳನ್ನು ತಿಳಿಸಬಹುದು.  

‘ಅಭ್ಯರ್ಥಿಯು ಮೂರನೇ ವ್ಯಕ್ತಿ ಅಥವಾ ಅಧಿಕಾರಿಗಳ ಮಧ್ಯಪ್ರವೇಶವಿಲ್ಲದೆಯೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಭಾಗದಿಂದ ಇವಿಎಂಅನ್ನು ಪರಿಶೀಲನೆಗೆ ಆರಿಸಿಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ’ ಎಂದು ಆಯೋಗ ತಿಳಿಸಿದೆ.

ಮತಗಟ್ಟೆಯಲ್ಲಿ ಬಳಸಿದ ಇವಿಎಂ ಸೆಟ್‌ನ ಒಂದು ನಿರ್ದಿಷ್ಟ ಘಟಕವನ್ನು ಇನ್ನೊಂದು ಸೆಟ್‌ನ ಘಟಕದ ಜೊತೆ ಜೋಡಿಸಿ ಪರಿಶೀಲನೆ ನಡೆಸುವ ಆಯ್ಕೆಯನ್ನೂ ನೀಡಿದೆ.

ಪರಿಶೀಲನೆ ಬಯಸಿರುವ ಅಭ್ಯರ್ಥಿಯು ತನ್ನ ಆಯ್ಕೆಯ ಮತಗಟ್ಟೆಯ ಇವಿಎಂ ಸೆಟ್‌ನ ಒಂದು ಘಟಕ (ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಅಥವಾ ವಿವಿಪ್ಯಾಟ್‌– ಇವುಗಳಲ್ಲಿ ಒಂದು) ಆಯ್ಕೆಮಾಡಿದರೆ, ಆ ಮತಗಟ್ಟೆಯಲ್ಲಿ ಬಳಸಿದ ಅದೇ ಸೆಟ್‌ನ ಇತರ ಘಟಕಗಳನ್ನು ಆಯ್ಕೆ ಮಾಡುವಂತಿಲ್ಲ. ಅದರ ಬದಲು, ಬೇರೆ ಮತಗಟ್ಟೆಯಲ್ಲಿ ಬಳಸಿದ ಇವಿಎಂನ ಇತರ ಘಟಕಗಳನ್ನು ಆಯ್ಕೆ ಮಾಡಿಕೊಂಡು ಸೆಟ್‌ ಅನ್ನು ಜೋಡಿಸಬೇಕು.  

ಪ್ರತಿಯೊಂದು ಇವಿಎಂ ಸೆಟ್‌ ಕೂಡಾ ಕನಿಷ್ಠ ಒಂದು ಬ್ಯಾಲಟ್‌ ಯುನಿಟ್, ಒಂದು ಕಂಟ್ರೋಲ್‌ ಯುನಿಟ್ ಮತ್ತು ಒಂದು ವಿವಿಪ್ಯಾಟ್‌ ಆಥವಾ ಪೇಪರ್‌ ಟ್ರಯಲ್‌ ಮಷಿನ್‌ಅನ್ನು ಒಳಗೊಂಡಿರುತ್ತದೆ.

ಹೀಗೆ ಜೋಡಿಸಿದ ಮತಯಂತ್ರಗಳಲ್ಲಿ ಅಣಕು ಮತದಾನದ ವೇಳೆ ಗರಿಷ್ಠ 1,400 ಮತಗಳನ್ನು ಹಾಕಲು ಅವಕಾಶ ನೀಡಲಾಗಿದೆ. ಆಯೋಗವು ಸೂಚಿಸಿದ ಕಾರ್ಯವಿಧಾನದ ಪ್ರಕಾರವೇ ವಿವಿಪ್ಯಾಟ್‌ ಸ್ಲಿಪ್‌ಗಳ ಎಣೆಕೆ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT