ಮರಣ ನೋಂದಣಿ ಲೋಪದ ಆರೋಪ: ಸತ್ಯಕ್ಕೆ ದೂರ
ಭಾರತದಂತಹ ಮಧ್ಯಮ ಆದಾಯದ ದೇಶಗಳಲ್ಲಿ ಮರಣ ನೋಂದಣಿ ವ್ಯವಸ್ಥೆಯು ದುರ್ಬಲವಾಗಿದೆ ಎಂದೂ ವಿಶ್ಲೇಷಣೆಯಲ್ಲಿ ಹೇಳಲಾಗಿದೆ. ಇದು ಸತ್ಯಕ್ಕೆ ದೂರವಾದುದು. ಭಾರತದಲ್ಲಿ ನಾಗರಿಕ ನೋಂದಣಿ ವ್ಯವಸ್ಥೆಯು (ಸಿಆರ್‌ಎಸ್) ಹೆಚ್ಚು ದೃಢವಾದುದು ಹಾಗೂ ಸಾವಿನ ಶೇ 99ರಷ್ಟು ಮಾಹಿತಿ ಒಳಗೊಂಡಿದೆ ಎಂದು ಕೇಂದ್ರ ಪ್ರತಿಪಾದಿಸಿದೆ. ನೋಂದಣಿ ಪ್ರಮಾಣ 2015ರಲ್ಲಿ ಶೇ 75ರಷ್ಟಿದ್ದರೆ 2020ರಲ್ಲಿ ಶೇ 99ರಷ್ಟಿತ್ತು ಎಂದು ಗೃಹ ಸಚಿವಾಲಯ ಹೇಳಿದೆ. ಈ ಸಿಆರ್‌ಎಸ್ ಮಾಹಿತಿಯ ಪ್ರಕಾರ ಮರಣ ನೋಂದಣಿ ಸಂಖ್ಯೆಯು 2019ರ ಸಾಲಿಗೆ ಹೋಲಿಸಿದರೆ 2020ರಲ್ಲಿ 4.74 ಲಕ್ಷ ಏರಿದೆ. ಹಾಗೆಯೇ ಈ ಸಂಖ್ಯೆಯು 2018ರಲ್ಲಿ4.86 ಲಕ್ಷವಿದ್ದರೆ 2019ರಲ್ಲಿ 6.90 ಲಕ್ಷಕ್ಕೆ ಏರಿತ್ತು ಎಂದೂ ತಿಳಿಸಿದೆ. ಹಾಗೆಯೇ ಸಿಆರ್‌ಎಸ್‌ನಲ್ಲಿ ದಾಖಲಾದ ಸಾವಿನ ಎಲ್ಲ ಹೆಚ್ಚುವರಿ ಪ್ರಕರಣಗಳಿಗೂ ಕೋವಿಡ್ ಪರಿಸ್ಥಿತಿಯೇ ಕಾರಣ ಎಂದೂ ಹೇಳಲಾಗದು. ಮರಣ ಸಂಖ್ಯೆ ಏರಿಕೆಗೆ ಸಿಆರ್‌ಎಸ್‌ನಲ್ಲಿ ನೋಂದಣಿ ಪ್ರಮಾಣ ಏರಿಕೆಯೂ (2029ರಲ್ಲಿ ಶೇ 92ರಷ್ಟಿತ್ತು) ಕಾರಣ ಎಂದು ಪ್ರತಿಕ್ರಿಯಿಸಿದೆ. ಈ ಹಿನ್ನೆಲೆಯಲ್ಲಿ ‘ಸೈನ್ಸ್ ಅಡ್ವಾನ್ಸಸ್’ ನಿಯತಕಾಲಿಕದ ವರದಿಯಲ್ಲಿ ಉಲ್ಲೇಖಿಸಿರುವಂತೆ 2020ರಲ್ಲಿ 11.9 ಲಕ್ಷ ಸಾವುಗಳು ಸಂಭವಿಸಿವೆ ಎಂಬ ಮಾಹಿತಿಯು ತಪ್ಪು ಮಾಹಿತಿ ನೀಡುವ ಅಂದಾಜು ಆಗಿದೆ’ ಎಂದು ಸಚಿವಾಲಯವು ಹೇಳಿಕೆಯಲ್ಲಿ ಪ್ರತಿಪಾದಿಸಿದೆ.