ದೆಹಲಿಯಲ್ಲಿ ಥೇಲ್ಸ್ ಕಂಪನಿ ಘಟಕ ಸ್ಥಾಪನೆ
ನವದೆಹಲಿ: ರಕ್ಷಣಾ ಸಾಧನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಫ್ರಾನ್ಸ್‌ನ ಥೇಲ್ಸ್ ಕಂಪನಿಯು ವಾಯುಯಾನ ತಂತ್ರಜ್ಞಾನಕ್ಕೆ ಸಂಬಂಧಿಸಿದ ‘ನಿರ್ವಹಣೆ ದುರಸ್ತಿ ಹಾಗೂ ಕಾರ್ಯಾಚರಣೆ’ (ಎಂಆರ್‌ಒ) ಘಟಕವನ್ನು ದೆಹಲಿಯಲ್ಲಿ ಸ್ಥಾಪಿಸಲಿದೆ. ‘ಭಾರತದ ರಕ್ಷಣಾ ಮತ್ತು ವಾಯುಯಾನ ಕ್ಷೇತ್ರಕ್ಕೆ ವಿಶ್ವದರ್ಜೆಯ ಸೇವೆಗಳನ್ನು ಒದಗಿಸಬೇಕು ಹಾಗೂ ಈ ಕ್ಷೇತ್ರಗಳ ಆಧುನೀಕರಣಕ್ಕೆ ನೆರವು ಒದಗಿಸುವ ಉದ್ದೇಶದಿಂದ ಈ ಘಟಕವನ್ನು ಸ್ಥಾಪಿಸಲಾಗುತ್ತಿದೆ’ ಎಂದು ಥೇಲ್ಸ್ ಇಂಡಿಯಾದ ಉಪಾಧ್ಯಕ್ಷ ಹಾಗೂ ನಿರ್ದೇಶಕ ಆಶಿಶ್ ಸರಾಫ್ ಹೇಳಿದ್ದಾರೆ. ‘ನೌಕಾಪಡೆಗಾಗಿ ಭಾರತ 26 ರಫೇಲ್ ಯುದ್ಧವಿಮಾನಗಳು ಹಾಗೂ ಸ್ಕಾರ್ಪೀನ್ ಜಲಾಂತರ್ಗಾಮಿಗಳನ್ನು ಖರೀದಿಸುತ್ತಿದೆ. ಈ ಖರೀದಿಯು ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲಿದೆಯೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸರಾಫ್ ‘ರಫೇಲ್ ಉತ್ಪಾದಿಸುವ ತಂಡದ ಭಾಗವಾಗಿರುವುದಕ್ಕೆ ಥೇಲ್ಸ್‌ಗೆ ಹೆಮ್ಮೆ ಇದೆ’ ಎಂದಷ್ಟೆ ಹೇಳಿದರು.