ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಚೈತನ್ಯ-ಸಮಂತಾ ವಿಚ್ಛೇದನ: ಸಚಿವೆ ಸುರೇಖಾ ವಿರುದ್ಧ KTR ಮಾನಹಾನಿ ನೋಟಿಸ್‌

Published : 3 ಅಕ್ಟೋಬರ್ 2024, 2:47 IST
Last Updated : 3 ಅಕ್ಟೋಬರ್ 2024, 2:47 IST
ಫಾಲೋ ಮಾಡಿ
Comments

ಹೈದರಾಬಾದ್: ನಟಿ ಸಮಂತಾ ರುತ್ ಪ್ರಭು ಮತ್ತು ನಟ ಅಕ್ಕಿನೇನಿ ನಾಗಚೈತನ್ಯ ವಿಚ್ಛೇದನ ವಿಚಾರವಾಗಿ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ ಆರೋಪ ಮೇಲೆ ತೆಲಂಗಾಣ ಸಚಿವೆ ಕೊಂಡಾ ಸುರೇಖಾ ಅವರಿಗೆ ಬಿಆರ್‌ಎಸ್ ನಾಯಕ ಕೆ.ಟಿ.ರಾಮರಾವ್‌(ಕೆಟಿಆರ್‌) ನೋಟಿಸ್ ನೀಡಿದ್ದಾರೆ.

ಸಮಂತಾ – ನಾಗಚೈತನ್ಯ ವಿಚ್ಛೇದನಕ್ಕೂ ಕೆಟಿಆರ್‌ಗೂ ನೇರ ಸಂಬಂಧವಿದೆ ಎಂದು ಕೊಂಡಾ ಸುರೇಖಾ ಬುಧವಾರ ಆರೋಪ ಮಾಡಿದ್ದರು.

‘ಸಚಿವೆಯ ಹೇಳಿಕೆ ಆಧಾರರಹಿತ ಮತ್ತು ರಾಜಕೀಯ ಪ್ರೇರಿತವಾಗಿದ್ದು, ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ’ ಎಂದು ಕೆಟಿಆರ್ ತಮ್ಮ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

‘ಕೊಂಡಾ ಸುರೇಖಾ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. 24 ಗಂಟೆಗಳ ಒಳಗೆ ಹೇಳಿಕೆ ಹಿಂಪಡೆಯದೆ ಹೋದರೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಕೊಂಡಾ ಸುರೇಖಾ ಹೇಳಿದ್ದೇನು?

ಬುಧವಾರ(ಅ.02) ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಚಿವೆ ಸುರೇಖಾ, ‘ಕೆ.ಟಿ.ರಾಮ ರಾವ್‌ ಡ್ರಗ್ ವ್ಯಸನಿ. ಚಿತ್ರರಂಗದ ಖ್ಯಾತನಾಮರಿಗೆ ಆತ ರೇವ್‌ ಪಾರ್ಟಿ ಆಯೋಜಿಸುತ್ತಿದ್ದರು. ಅವರ ದೌರ್ಜನ್ಯ ಸಹಿಸದೇ ಅನೇಕ ನಟಿಯರು ನಟನೆಯನ್ನೇ ಬಿಟ್ಟಿದ್ದಾರೆ. ಕೆಲವರು ಮದುವೆಯಾಗಿ, ಚಿತ್ರರಂಗದಿಂದ ದೂರ ಉಳಿದಿದ್ದಾರೆ‘ ಎಂದು ಹೇಳಿದ್ದಾರೆ.

‘ನಾಗಾರ್ಜುನ ಒಡೆತನದ ಎನ್‌–ಕನ್ವೆನ್ಷನ್‌ ಸೆಂಟರ್‌ ನೆಲಸಮಗೊಳಿಸುವುದು ಬೇಡ ಎಂದಾದಲ್ಲಿ, ತನ್ನ ಬಳಿ ಸಮಂತಾ ಅವರನ್ನು ಕಳುಹಿಸುವಂತೆ ರಾಮ ರಾವ್‌, ಬೇಡಿಕೆ ಇಟ್ಟಿದ್ದರು. ರಾಮ ರಾವ್‌ ಬಳಿ ಹೋಗುವಂತೆ ಸಮಂತಾ ಅವರಿಗೆ ನಾಗಾರ್ಜುನ ಬಲವಂತ ಮಾಡಿದಾಗ, ಅದನ್ನು ಆಕೆ ಒಪ್ಪಿಕೊಂಡಿರಲಿಲ್ಲ. ಈ ವಿಚಾರವೇ ವಿಚ್ಛೇದನಕ್ಕೆ ಕಾರಣವಾಯಿತು‘ ಎಂದು ಸಚಿವೆ ಸುರೇಖಾ ಹೇಳಿದ್ದಾರೆ.

‘ಕೆ.ಟಿ.ರಾಮ ರಾವ್ ಅನೇಕರಿಗೆ ತೊಂದರೆ ಕೊಟ್ಟಿದ್ದು, ಬ್ಲ್ಯಾಕ್‌ಮೇಲ್‌ ಕೂಡ ಮಾಡಿದ್ದಾರೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT