ಅನುಮತಿ ನಿರಾಕರಣೆ: ಕೇಂದ್ರದ ಕ್ರಮಕ್ಕೆ ಆಕ್ಷೇಪ
ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಕುವೈತ್‌ಗೆ ತೆರಳಲು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರಿಗೆ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಹಾಗೂ ಇತರ ವಿರೋಧ ಪಕ್ಷಗಳು ಟೀಕಿಸಿವೆ. ಆದರೆ ಕೇಂದ್ರ ಸರ್ಕಾರದ ಕ್ರಮವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ‘ಕುವೈತ್‌ಗೆ ತೆರಳಿ ಅಲ್ಲಿ ದುರಂತದಲ್ಲಿ ಸಿಲುಕಿದ ನಮ್ಮ ಜನರಿಗೆ ನೆರವಾಗಲು ನಾವು ಕೇಂದ್ರ ಸರ್ಕಾರದಿಂದ ಅನುಮತಿ ಬಯಸಿದ್ದೆವು’ ಎಂದು ಗುರುವಾರ ರಾತ್ರಿ ವೀಣಾ ಜಾರ್ಜ್ ಹೇಳಿದ್ದರು. ಅದಕ್ಕೆ ಕೇಂದ್ರ ಅನುಮತಿ ನೀಡರಲಿಲ್ಲ. ‘ಅದು ಕೇಂದ್ರದ ತಪ್ಪು ನಿರ್ಧಾರ’ ಎಂದು ಪಿಣರಾಯಿ ಟೀಕಿಸಿದ್ದಾರೆ. ‘ಮೃತದೇಹಗಳನ್ನು ಶುಕ್ರವಾರ ಭಾರತಕ್ಕೆ ತರಲಾಗಿದೆ. ಗುರುವಾರ ಅಲ್ಲಿಗೆ ಹೋಗಿ ವೀಣಾ ಜಾರ್ಜ್ ಅವರು ಏನು ಮಾಡುತ್ತಿದ್ದರು’ ಎಂದು ಆರಿಫ್ ಮೊಹಮ್ಮದ್ ಖಾನ್ ಪ್ರಶ್ನಿಸಿದ್ದಾರೆ.