ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ: ಸಿಎಂ ಏಕನಾಥ ಶಿಂದೆ ಭೇಟಿಯಾದ ಎನ್‌ಸಿಪಿ ನಾಯಕ ಶರದ್ ಪವಾರ್

Published 22 ಜುಲೈ 2024, 11:33 IST
Last Updated 22 ಜುಲೈ 2024, 11:33 IST
ಅಕ್ಷರ ಗಾತ್ರ

ಮುಂಬೈ: ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್‌ಚಂದ್ರ ಪವಾರ್‌ ಬಣ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು (ಸೋಮವಾರ) ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಮುಂಬೈನ ಮಲಬಾರ್ ಹಿಲ್ ಪ್ರದೇಶದಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಉಭಯ ನಾಯಕರು ನೀರಾವರಿ, ಹಾಲಿನ ಬೆಲೆ ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಜಿತ್‌ ಪವಾರ್‌ ಬಣದ ಪಿಂಪ್ರಿ– ಚಿಂಚವಾಡ್‌ ಘಟಕದ ಅಧ್ಯಕ್ಷ ಅಜಿತ್‌ ಗವ್ಹಾಣೆ, ಇಬ್ಬರು ಮಾಜಿ ಕಾರ್ಪೊರೇಟರ್‌ಗಳು ಈಚೆಗೆ ಶರದ್‌ ಪವಾರ್‌ ಬಣಕ್ಕೆ ಸೇರ್ಪಡೆಯಾಗಿದ್ದರು. ‘ಶರದ್‌ ಪವಾರ್‌ ಆಶೀರ್ವಾದ ಪಡೆಯುವ ಉದ್ದೇಶದಿಂದ ಮತ್ತೆ ಅವರ ಬಣಕ್ಕೆ ಸೇರಿದ್ದೇನೆ’ ಎಂದು ಗವ್ಹಾಣೆ ತಿಳಿಸಿದ್ದರು.

ಈ ಬೆಳವಣಿಗೆ ಬೆನ್ನಲ್ಲೇ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರು ಸುದ್ದಿಗೋಷ್ಠಿ ನಡೆಸಿ, ‘ಬಿಜೆಪಿಯ ಕೆಲವು ಶಾಸಕರು ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸೇರಲು ಉತ್ಸುಕರಾಗಿದ್ದಾರೆ’ ಎಂದು ತಿಳಿಸಿದ್ದರು.

‘ರಾಜ್ಯದ ಆಡಳಿತ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯದ ಹಿನ್ನೆಲೆಯಲ್ಲಿ ಬಿಜೆಪಿಯ ಕೆಲವು ಶಾಸಕರು ಹಾಗೂ ಮುಖಂಡರು ಪಕ್ಷ ಸೇರ್ಪಡೆಯಾಗಲು ಬಯಸಿದ್ದಾರೆ. ಎನ್‌ಸಿಪಿ (ಅಜಿತ್‌ ಪವಾರ್‌ ಬಣ)ದ ಶಾಸಕರು ಸೇರಲು ಬಯಸಿದ್ದು, ಈ ಕುರಿತಂತೆ ಶರದ್‌ ಪವಾರ್‌ ಅವರೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದಿದ್ದರು.

‘ಯಾರೇ ಮುಖಂಡರು ಪಕ್ಷ ಸೇರ್ಪಡೆಯಾಗಲು ಬಯಸಿದರೆ, ಎಲ್ಲರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಶರದ್‌ ಪವಾರ್‌ ಈಚೆಗೆ ಹೇಳಿಕೆ ನೀಡಿದ್ದರು. ಅಜಿತ್‌ ಪವಾರ್‌ ಬಂದರೆ ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದರು.

ಮಹಾರಾಷ್ಟ್ರದಲ್ಲಿ ವರ್ಷಾಂತ್ಯಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT