ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಮಾಂಸ ತಿನ್ನುವ ವ್ಯಕ್ತಿಯ ಕೈಯಲ್ಲಿ ಈಶ್ವರನ ಫೋಟೊ: ರಾಹುಲ್ ವಿರುದ್ಧ BJP ಕಿಡಿ

Published 18 ಜುಲೈ 2024, 7:45 IST
Last Updated 18 ಜುಲೈ 2024, 7:45 IST
ಅಕ್ಷರ ಗಾತ್ರ

ಜೈಪುರ: ಗೋಮಾಂಸ ಸೇವಿಸುವ ವ್ಯಕ್ತಿಯು ಸಂಸತ್ತಿನಲ್ಲಿ ಈಶ್ವರನ ಫೋಟೊವನ್ನು ಪ್ರದರ್ಶಿಸಿದ್ದಾರೆ ಎಂದು ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಸಿ.ಪಿ.ಜೋಶಿ ಹೇಳಿದ್ದಾರೆ. ಆ ಮೂಲಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ದೌಸಾದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಜೋಶಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

'ಅಂತರರಾಷ್ಟ್ರೀಯ ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಏರ್ಪಟ್ಟಿದೆ. ಹೀಗಿರುವಾಗ, ಆ ವ್ಯಕ್ತಿಯು ಚೀನಾದ ರಾಯಭಾರಿಯೊಂದಿಗೆ ಕುಳಿತುಕೊಳ್ಳುತ್ತಾರೆ. ಗೋಮಾಂಸವನ್ನು ತಿನ್ನುವ ಅವರು ಸಂಸತ್ತಿಗೆ ಮಹಾದೇವನ ಚಿತ್ರವನ್ನು ತರುವುದನ್ನು ಸಹಿಸಲು ಆಗುವುದಿಲ್ಲ' ಎಂದು ಹೆಸರನ್ನು ಉಲ್ಲೇಖಿಸದೆ ರಾಹುಲ್‌ ವಿರುದ್ಧ ಗುಡುಗಿದ್ದಾರೆ.

'ಯಾರಾದರೂ, ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸಿದರೆ, ಗಲಭೆಕೋರರು ಎಂದರೆ ಮತ್ತು ರಾಮ ಮಂದಿರವನ್ನು ವಿರೋಧಿಸಿದರೆ, ನಾವು ಮೌನವಾಗಿರಬೇಕೇ? ರಾಷ್ಟ್ರಪತಿ ದ್ರೌಪದಿ ಮರ್ಮು ಅವರ ಬಣ್ಣವನ್ನು ಹೀಯಾಳಿಸುವುದನ್ನು ಮುಂದುವರಿಸಿದರೆ ನಾವು ಮೂಕ ಪ್ರೇಕ್ಷಕರಾಗಿ ಇರಬೇಕೇ?' ಎಂದು ಕೇಳಿದ್ದಾರೆ.

ರಾಹುಲ್‌ ಅವರು, ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಜೂನ್‌ 1ರಂದು ಸಂಸತ್ತಿನಲ್ಲಿ ಈಶ್ವರ, ಯೇಸು ಕ್ರಿಸ್ತ, ಗುರು ನಾನಕ್‌ ಫೋಟೊಗಳನ್ನು ಪ್ರದರ್ಶಿಸಿದ್ದರು. ಧೈರ್ಯ ಮತ್ತು ಅಹಿಂಸೆಯನ್ನು ಈಶ್ವರ ನಮಗೆ ಬೋಧಿಸಿದ್ದಾರೆ. ಇತರ ಧರ್ಮಗಳಲ್ಲೂ ಇದೇ ಬೋಧನೆಯನ್ನು ಮಾಡಲಾಗಿದೆ ಎಂದು ಉಲ್ಲೇಖಿಸಿದ್ದರು.

ಬಿಜೆಪಿ ನಾಯಕರು ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT