‘ಆಲಮಟ್ಟಿಯಿಂದ 3 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿ’
‘ಆಲಮಟ್ಟಿ ಅಣೆಕಟ್ಟೆಯಿಂದ 2.5 ಲಕ್ಷ ಕ್ಯುಸೆಕ್ ನೀರನ್ನು ಈಗ ಬಿಡುಗಡೆ ಮಾಡಲಾಗುತ್ತಿದೆ. ಈ ಪ್ರಮಾಣವನ್ನು 3 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ಕೇಳಿಕೊಂಡ್ಡೇವೆ’ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದರು. ‘ಒಂದು ವೇಳೆ ಆಲಮಟ್ಟಿ ಅಣೆಕಟ್ಟೆಯಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಿಲ್ಲವಾದರೆ ಸಾಂಗ್ಲಿ ಹಾಗೂ ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಬಹುದು’ ಎಂದರು. ಸತಾರ ಜಿಲ್ಲೆಯ ಮಹಾಬಲೇಶ್ವರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮಳೆ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ 40 ಸೆಂ.ಮೀ.ಗೂ ಅಧಿಕ ಪ್ರಮಾಣದ ಮಳೆಯಾಗಿದೆ. ಮಹಾಬಲೇಶ್ವರದಲ್ಲಿ ಮಳೆಯಾದರೆ ಕೊಯ್ನಾ ಅಣೆಕಟ್ಟೆಗೆ ನೀರು ಬರಲಿದೆ. ಈಗ ಈ ಅಣೆಕಟ್ಟೆ ಶೇ 75ರಷ್ಟು ತುಂಬಿದೆ. ಮಳೆಯು ಇದೇ ರೀತಿ ಮುಂದುವರಿದರೆ ಅಣೆಕಟ್ಟೆಯಿಂದ ನೀರು ಬಿಡುಗಡೆ ಮಾಡಬೇಕಾಗಬಹುದು. ಇದು ಕೃಷ್ಣಾ ನದಿಯ ನೀರಿನ ಮಟ್ಟವನ್ನು ಹೆಚ್ಚಲಿದೆ. ಕೊಯ್ನಾ ನದಿಯು ಕೃಷ್ಣಾ ನದಿಯ ಅತಿ ದೊಡ್ಡ ಉಪನದಿಯಾಗಿದೆ.