ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೆಹಲಿ | ₹5 ಲಕ್ಷ ಮೌಲ್ಯದ ಇ–ಸಿಗರೇಟ್‌ ವಶ: ಐವರ ಬಂಧನ

Published : 4 ಅಕ್ಟೋಬರ್ 2024, 11:02 IST
Last Updated : 4 ಅಕ್ಟೋಬರ್ 2024, 11:02 IST
ಫಾಲೋ ಮಾಡಿ
Comments

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇ–ಸಿಗರೇಟ್‌ಗಳ ಸಂಗ್ರಹ-ಸಾಗಣೆ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐದು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು ₹5 ಲಕ್ಷ ಮೌಲ್ಯದ 257 ಇ–ಸಿಗರೇಟ್‌ಗಳು ಮತ್ತು ₹4 ಲಕ್ಷ ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ 2019ರ ಸೆಪ್ಟೆಂಬರ್‌ನಿಂದ ಇ–ಸಿಗರೇಟ್‌ಗಳ ತಯಾರಿಕೆ, ಆಮದು, ಜಾಹೀರಾತು ಅಥವಾ ಮಾರಾಟವನ್ನು ನಿಷೇಧಿಸಲಾಗಿದೆ.

‘ಅಕ್ಟೋಬರ್‌ 2ರಂದು ತಡರಾತ್ರಿ ಪೊಲೀಸ್‌ ತಂಡ ಗಸ್ತಿನಲ್ಲಿರುವಾಗ ನಗರದ ಅಶೋಕ ಪಾರ್ಕ್‌ ಮುಖ್ಯ ಮೆಟ್ರೊ ನಿಲ್ದಾಣದ ಬಳಿಯ ನಿರ್ಜನ ಪ್ರದೇಶದಲ್ಲಿ ಎರ್ಟಿಗಾ ಕಾರೊಂದು ಪತ್ತೆಯಾಗಿದ್ದು, ಅನುಮಾನ ಹುಟ್ಟುಹಾಕಿತ್ತು. ಶೀಘ್ರವೇ ಮತ್ತೊಂದು ಕಾರು ಆ ವಾಹನದ ಬಳಿ ಬಂದು ನಿಂತಿತು. ಅದರಲ್ಲಿದ್ದ ಜನರು ಬಾಕ್ಸ್‌ಗಳನ್ನು ಎರ್ಟಿಗಾ ಕಾರ್‌ಗೆ ಸ್ಥಳಾಂತರಿಸಲು ಪ್ರಾರಂಭಿಸಿದರು’ ಎಂದು ಉಪ ಪೊಲೀಸ್‌ ಆಯುಕ್ತ ವಿಚಿತ್ರ ವೀರ ತಿಳಿಸಿದ್ದಾರೆ.

ತಕ್ಷಣವೇ ಪೊಲೀಸರು ಎರಡು ವಾಹನಗಳ ಚಾಲಕರನ್ನು ಬಂಧಿಸಿದ್ದು, ತಲಾ 10 ಇ–ಸಿಗರೇಟ್‌ಗಳನ್ನು ಒಳಗೊಂಡ 20 ಬಾಕ್ಸ್‌ಗಳನ್ನು ವಶಪಡಿಸಿಕೊಂಡರು. ಇದರೊಂದಿಗೆ ಅವರ ಬಳಿಯಿದ್ದ ₹4 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಆರೋಪಿಗಳನ್ನು ರಿತೀಕ್‌ ಉಪ್ಪಾಲ್‌ (22) ಮತ್ತು ಸಬಿ ಕುಮಾರ್‌ (32) ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇತರ ಮೂವರು ವ್ಯಕ್ತಿಗಳ ಬಗ್ಗೆ ತಿಳಿದು ಬಂದಿದೆ. ಬಳಿಕ ಆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ಬಳಿ ಇದ್ದ 57 ಇ–ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೀರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT