ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್ ಪ್ರಧಾನಿ ಕೀರ್ ಜೊತೆ ಮೋದಿ ಮಾತುಕತೆ

Published : 6 ಜುಲೈ 2024, 13:32 IST
Last Updated : 6 ಜುಲೈ 2024, 13:32 IST
ಫಾಲೋ ಮಾಡಿ
Comments

ನವದೆಹಲಿ: ಬ್ರಿಟನ್‌ನ ನೂತನ ‍ಪ್ರಧಾನಿ ಕೀರ್‌ ಸ್ಟಾರ್ಮರ್‌ ಜೊತೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತುಕತೆ ನಡೆಸಿದರು. ಈ ಸಂದರ್ಭ ಉಭಯ ನಾಯಕರು ಭಾರತ–ಬ್ರಿಟನ್‌ ನಡುವೆ ಪರಸ್ಪರ ಮುಕ್ತ ವ್ಯಾಪಾರ ಒಪ್ಪಂದದಡಿ ಕಾರ್ಯನಿರ್ವಹಿಸಲು ಸಮ್ಮತಿಸಿದರು.

ಚುನಾವಣೆಯಲ್ಲಿ ಲೇಬರ್ ಪಕ್ಷ ಜಯ ಗಳಿಸಿದ್ದಕ್ಕಾಗಿ ಮೋದಿ ಸ್ಟಾರ್ಮರ್‌ಗೆ ಅಭಿನಂದನೆ ಸಲ್ಲಿಸಿದರು. 

‘ಉಭಯ ನಾಯಕರು ತಮ್ಮ ಮಾತುಕತೆ ನಡುವೆ ಎರಡೂ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಮೆಲುಕು ಹಾಕಿದರು. ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತಂತೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು’ ಎಂದು ಹೇಳಿಕೆ ತಿಳಿಸಿದೆ.

ಬ್ರಿಟನ್‌ನ ಸಾಮಾಜಿಕ, ಆರ್ಥಿಕ, ರಾಜಕೀಯ ಅಭಿವೃದ್ಧಿಯಲ್ಲಿ ಭಾರತೀಯ ಸಮುದಾಯದ ಸಕಾರಾತ್ಮಕ ಕೊಡುಗೆಗಳನ್ನು ಶ್ಲಾಘಿಸಿದ ಕೀರ್‌ ಸ್ಟಾರ್ಮರ್‌, ಜನರ ನಡುವಿನ ನಿಕಟ ಸಂಬಂಧ ಉತ್ತೇಜಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.

ಉಭಯ ನಾಯಕರಿಬ್ಬರೂ ಪರಸ್ಪರ ಸಂಪರ್ಕದಲ್ಲಿರಲು ಸಮ್ಮತಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಕೀರ್‌ಗೆ ಮೋದಿ ಆಹ್ವಾನ ನೀಡಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.

‘ಕೀರ್‌ ಸ್ಟಾರ್ಮರ್‌ ಜೊತೆ ಮಾತನಾಡಿದ್ದು ಖುಷಿಕೊಟ್ಟಿದೆ. ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಅವರನ್ನು ಅಭಿನಂದಿಸಿದೆ. ನಮ್ಮ ಜನರ ಪ್ರಗತಿ, ಸಮೃದ್ಧಿಗಾಗಿ ಹಾಗೂ ಜಗತ್ತಿನ ಒಳಿತಿಗಾಗಿ ಸಮಗ್ರ ಪಾಲುದಾರಿಕೆ ಹಾಗೂ ಭಾರತ–ಬ್ರಿಟನ್‌ ನಡುವೆ ದೃಢವಾದ ಆರ್ಥಿಕ ಸಂಬಂಧಗಳನ್ನು ಹೊಂದಲು ನಾವು ಬದ್ಧರಾಗಿದ್ದೇವೆ’ ಎಂದು ಮೋದಿ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೀರ್
ಕೀರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT