ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಫಲಿತಾಂಶ ಮೋದಿಯ ನೈತಿಕ ಸೋಲಿನ ಬಿಂಬ: ಸೋನಿಯಾ ಗಾಂಧಿ

Published 29 ಜೂನ್ 2024, 15:59 IST
Last Updated 29 ಜೂನ್ 2024, 15:59 IST
ಅಕ್ಷರ ಗಾತ್ರ

ನವದೆಹಲಿ: ‘ಲೋಕಸಭೆ ಚುನಾವಣೆಯ ತೀರ್ಪು ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ, ರಾಜಕೀಯ ಮತ್ತು ನೈತಿಕ ಸೋಲನ್ನು ಸೂಚಿಸುತ್ತದೆ’ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿಪಾದಿಸಿದ್ದಾರೆ.

‘ತನ್ನನ್ನು ತಾನು ದೈವಿಕ ಶಕ್ತಿ ಎಂದು ಘೋಷಿಸಿಕೊಂಡ ಮೋದಿ ಅವರನ್ನು ಮತ್ತು ಅವರ ದ್ವೇಷದ ರಾಜಕಾರಣವನ್ನು ಈ ಚುನವಾಣಾ ಫಲಿತಾಂಶ ತಿರಸ್ಕರಿಸಿದೆ. ಆದರೆ ಅವರು ಏನೂ ಆಗಿಲ್ಲವೆಂಬಂತೆ ಮುಂದುವರಿದಿದ್ದಾರೆ’ ಎಂದು ಅವರು ಇಂಗ್ಲಿಷ್‌ ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.

ಪ್ರಧಾನಿ ಅವರ ಪ್ರತಿನಿಧಿಗಳು ಸ್ಪೀಕರ್‌ ಸ್ಥಾನಕ್ಕೆ ಸರ್ವಾನುಮತದ ಬೆಂಬಲ ಕೋರಿದಾಗ, ‘ಇಂಡಿಯಾ’ ಒಕ್ಕೂಟ ಆರಂಭದಲ್ಲಿ ಸಮ್ಮತಿಸಿತ್ತು. ಆದರೆ ಸಂಪ್ರದಾಯದಂತೆ ವಿರೋಧ ಪಕ್ಷದವರಿಗೆ ಉಪ ಸ್ಪೀಕರ್‌ ಸ್ಥಾನ ನೀಡುವಂತೆ ಕೋರಿದಾಗ ಆ ಮನವಿಯನ್ನು ಅವರು ತಿರಸ್ಕರಿಸಿದರು ಎಂದು ಅವರು ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.

ಇದರ ಬೆನ್ನಲ್ಲೇ ಸ್ಪೀಕರ್‌ ಮತ್ತು ಪ್ರಧಾನಿ ಅವರು ತುರ್ತುಪರಿಸ್ಥಿತಿಯನ್ನು ಪ್ರಸ್ತಾಪಿಸಿ, ಗಮನ ಬೇರೆಡೆಗೆ ಸೆಳೆಯಲು ತಂತ್ರ ರೂಪಿಸಿದರು. ತುರ್ತು ಪರಿಸ್ಥಿತಿಗೆ ಸಂಬಂಧಿಸಿದಂತೆ ದೇಶದ ಜನರು 1977ರಲ್ಲಿ ನೀಡಿದ್ದ ತೀರ್ಪುನ್ನು ನಾವು ಸ್ವೀಕರಿಸಿದ್ದೇವೆ’ ಎಂದು ಅವರು ಹೇಳಿದ್ದಾರೆ. 

ಜುಲೈ 1ರಿಂದ ಜಾರಿಗೆ ಬರಲಿರುವ ಮೂರು ಅಪರಾಧ ಕಾನೂನುಗಳು ಸಂಸತ್ತಿನ ಸಂಪೂರ್ಣ ಪರಿಶೀಲನೆಗೆ ಒಳಪಡುವವರೆಗೆ ಹಿಂತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. 146 ಸಂಸತ್‌ ಸದಸ್ಯರನ್ನು ಅಮಾನತು ಮಾಡಿದ್ದ ಸಂದರ್ಭದಲ್ಲಿ ಈ ಕಾಯ್ದೆಗಳಿಗೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಲಾಗಿತ್ತು. ಹೀಗಾಗಿ ಅವುಗಳನ್ನು ಪೂರ್ಣವಾಗಿ ಪರಿಶೀಲಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್‌’ ಕುರಿತು ಪ್ರಸ್ತಾಪಿಸಿರುವ ಅವರು, ‘ಪರೀಕ್ಷಾ ಪೇ ಚರ್ಚಾ’ ಮಾಡುವ ಪ್ರಧಾನಿ ಅವರು ‘ನೀಟ್‌’ ಅಕ್ರಮಗಳ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT