ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಥರಸ್‌ ಕಾಲ್ತುಳಿತ ದುರಂತ: ಬಾಬಾ ಸಿಬ್ಬಂದಿ ನೂಕಿದ್ದರಿಂದ ದುರ್ಘಟನೆ– ವರದಿ

Published 3 ಜುಲೈ 2024, 13:47 IST
Last Updated 3 ಜುಲೈ 2024, 13:47 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತ ಘಟನೆಗೂ ಮುನ್ನ ಸ್ವಘೋಷಿತ ದೇವಮಾನವ ನಾರಾಯಣ ಸಾಕಾರ ಹರಿ ಅವರ ಪಾದದ ದೂಳನ್ನು ಹಣೆಗೆ ಹಚ್ಚಿಕೊಳ್ಳಲು ಮುಂದಾದ ಭಕ್ತರನ್ನು ಅಲ್ಲಿದ್ದ ಖಾಸಗಿ ಭದ್ರತಾ ಸಿಬ್ಬಂದಿ ನೂಕಿದ್ದೇ ಪ್ರಮುಖ ಕಾರಣ ಎಂದು ಉಪ ವಿಭಾಗ ಮ್ಯಾಜಿಸ್ಟ್ರೇಟ್‌ ಸಿಕಂದರ್ ರಾವ್‌ ನಡೆಸಿದ ತನಿಖೆಯ ಪ್ರಾಥಮಿಕ ವರದಿ ಹೇಳಿದೆ.

ನಾರಾಯಣ ಸಾಕಾರ್ ಹರಿ ಅವರ ಬೆಂಬಲಿಗರು ಅವರ ಸಮೀಪ ತೆರಳಲು ವಾಹನದ ಬಳಿ ಬಂದರು. ಈ ಸಂದರ್ಭದಲ್ಲಿ ಸ್ವಘೋಷಿತ ದೇವಮಾನವನ ಭದ್ರತಾ ಸಿಬ್ಬಂದಿ ಜನರನ್ನು ನೂಕಿದರು. ಇದರಿಂದ ಒಬ್ಬರ ಮೇಲೊಬ್ಬರು ಬಿದ್ದಿದ್ದರಿಂದ ಕಾಲ್ತುಳಿತ ಉಂಟಾಗಿ 121 ಜನರ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ

ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

‘ಘಟನೆ ನಡೆದಾಗ ಸ್ವಯಂಸೇವಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಹಲವರ ಪ್ರಾಣ ಉಳಿಸಬಹುದಿತ್ತು. ಆದರೆ ಅವರೆಲ್ಲರೂ ಓಡಿ ಹೋಗಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಪ್ರತ್ಯಕ್ಷದರ್ಶಿಗಳಿಂದ ತಿಳಿದುಬಂದಿದೆ’ ಎಂದಿದ್ದಾರೆ.

‘ಇಂಥ ಘಟನೆಗಳು ಮರುಕಳಿಸಬಾರದು. ಇದಕ್ಕಾಗಿ ಬಹಳಷ್ಟು ಜನ ಸೇರುವ ಇಂಥ ಕಾರ್ಯಕ್ರಮಗಳಿಗೆ ನಿರ್ದಿಷ್ಟ ಮಾರ್ಗಸೂಚಿಯನ್ನು ಜಾರಿಗೆ ತರಲಾಗುವುದು. ಹಾಥರಸ್ ಘಟನೆ ಕುರಿತು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು. ಈ ಸಮಿತಿಯಲ್ಲಿ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೂ ಇರಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಇದರೊಂದಿಗೆ ಎಡಿಜಿಪಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗುವುದು. ಒಟ್ಟು 121 ಜನ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ ಹರಿಯಾಣ, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ಸೇರಿದ ಆರು ಜನರಿದ್ದಾರೆ’ ಎಂದಿದ್ದಾರೆ.

ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಹೆಸರು ಏಕಿಲ್ಲ?

ಹಾಥರಸ್‌ ಕಾಲ್ತುಳಿತಕ್ಕೆ ಕಾರಣವಾದ ಸತ್ಸಂಗ ಆಯೋಜಿಸಿದ್ದ ಸಾಕಾರ್ ವಿಶ್ವ ಹರಿ ಭೋಲೆ ಬಾಬಾ ಅವರ ಹೆಸರು ಎಫ್‌ಐಆರ್‌ನಲ್ಲಿ ಏಕಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯೋಗಿ, ‘ಘಟನೆಯ ಮಾಹಿತಿ ಆಧರಿಸಿ ಸತ್ಸಂಗ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆಗೆ ಕಾರಣರಾದವರು ಯಾರೇ ಇರಲಿ ಅವರನ್ನು ಕಾನೂನಿನ ವ್ಯಾಪ್ತಿಗೆ ತರಲಾಗುವುದು’ ಎಂದರು.

ಹಾಥರಸ್‌ನಲ್ಲಿ ನಡೆದ ಸತ್ಸಂಗದಲ್ಲಿ 80 ಸಾವಿರ ಜನ ಭಾಗವಹಿಸಲು ಜಿಲ್ಲಾಡಳಿತ ಅನುಮತಿಸಿತ್ತು. ಆದರೆ 2.5 ಲಕ್ಷ ಜನರು ಸೇರಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಅಲಿಘಢದ ಜಿಲ್ಲಾಧಿಕಾರಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಘಟನೆಯ ಮಾಹಿತಿ ನೀಡಿದರು. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಯೋಗಿ, ‘ಸತ್ಸಂಗ ಮುಗಿಸಿ ಸಾಕಾರ್ ವಿಶ್ವ ಹರಿ ಭೋಲೆ ಬಾಬಾ ಅವರು ವೇದಿಕೆಯಿಂದ ಕೆಳಗಿಳಿಯುತ್ತಿದ್ದರು. ಈ ಸಂದರ್ಭದಲ್ಲಿ ಮಹಿಳೆಯರ ಗುಂಪೊಂದು ಬಾಬಾ ಅವರ ಪಾದದ ದೂಳನ್ನು ಹಣೆಗೆ ಹಚ್ಚಿಕೊಳ್ಳಲು ಮುಂದಾದರು. ಈ ಸಂದರ್ಭದಲ್ಲಿ ಒಬ್ಬರ ಮೇಲೊಬ್ಬರು ಏರಿದ್ದರಿಂದ ಕಾಲ್ತುಳಿತ ಉಂಟಾಯಿತು. ಸ್ವಯಂ ಸೇವಕರು ಜನರನ್ನು ನೂಕಿದ್ದರಿಂದ ಜನರು ಕಾಲ್ತುಳಿತಕ್ಕೆ ಸಿಲುಕಿದರು’ ಎಂದರು.

ಬಾಬಾ ಸಂಪರ್ಕ ಯಾರೊಂದಿಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ: ಯೋಗಿ

‘ಹಾಥರಸ್ ಘಟನೆಗೆ ಕಾರಣರಾದ ಬಾಬಾ ಅವರು ಯಾರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ. ಅವರ ರಾಜಕೀಯ ಸಂಪರ್ಕ ಯಾರೊಂದಿಗೆ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಘಟನೆಯ ಆಳಕ್ಕಿಳಿದು ಸತ್ಯ ಹೊರಕ್ಕೆ ತರುವ ಅಗತ್ಯವಿದೆ. ಮುಗ್ದ ಜೀವಗಳ ಬಲಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಗುರಿಯಾಗಿಸಿ ಯೋಗಿ ವಾಗ್ದಾಳಿ ನಡೆಸಿದರು.

‘ಸ್ಥಳದಲ್ಲಿ ಜಿಲ್ಲಾಡಳಿತದ ಸಿಬ್ಬಂದಿ ಪ್ರವೇಶಕ್ಕೆ ಸ್ವಯಂ ಸೇವಕರು ಏಕೆ ತಡೆಯೊಡ್ಡಿದರು. ರಾಜ್ಯದ ಎಲ್ಲೆಡೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಶಿಸ್ತಿನಿಂದ ನಡೆಯುತ್ತಿವೆ. ಆದರೆ ಕೆಲ ಸ್ವಾರ್ಥಿಗಳು ಆಯೋಜಿಸಿದ ಇಂಥ ಕಾರ್ಯಕ್ರಮಗಳಲ್ಲಿ ಅಶಿಸ್ತು ಮನೆ ಮಾಡಿರುತ್ತದೆ’ ಎಂದು ಆರೋಪಿಸಿದರು.

ಇದಾದ ನಂತರ ಬಾಬಾ ಹಾಗೂ ಅಖಿಲೇಶ್ ಅವರು ಜತೆಗಿರುವ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT