ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ರಾಹುಲ್ ಗಾಂಧಿಯ ಯಾತ್ರೆಗಳ ಪರಿಣಾಮ: ನಾನಾ ಪಟೋಲೆ

Published 20 ಜೂನ್ 2024, 6:34 IST
Last Updated 20 ಜೂನ್ 2024, 6:34 IST
ಅಕ್ಷರ ಗಾತ್ರ

ಮುಂಬೈ: ರಾಹುಲ್‌ ಗಾಂಧಿ ಅವರು ದೇಶದಾದ್ಯಂತ ನಡೆಸಿದ ಯಾತ್ರೆಗಳು ಲೋಕಸಭಾ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಉಂಟುಮಾಡಿವೆ ಎಂದು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್‌ ಸಮಿತಿ (ಎಂಪಿಸಿಸಿ) ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.

ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಸುಧಾರಿಸಿಕೊಳ್ಳಲು ರಾಹುಲ್ ಅವರು ನಡೆಸಿದ ಭಾರತ್‌ ಜೋಡೊ ಹಾಗೂ ಭಾರತ್‌ ನ್ಯಾಯ ಯಾತ್ರೆಗಳೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

'ರಾಹುಲ್‌ ಅವರ ಯಾತ್ರೆಗಳು ಮಹಾರಾಷ್ಟ್ರದಲ್ಲಿ ಸಾಗಿದ ಹಾದಿಯನ್ನು ಸರಿಯಾಗಿ ಗಮನಿಸಿದರೆ, ಯಾತ್ರೆಗಳು ನಡೆದ ಸ್ಥಳಗಳ ವ್ಯಾಪ್ತಿಯಲ್ಲಿರುವ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಥವಾ ಅದರ ಮಿತ್ರ ಪಕ್ಷಗಳು ಗೆಲುವು ಸಾಧಿಸಿರುವುದು ತಿಳಿಯುತ್ತದೆ' ಎಂದು ಪಟೋಲೆ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ಮತಗಳು ಅದರ ಮಿತ್ರ ಪಕ್ಷಗಳಾದ ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಶಿವಸೇನಾ–ಯುಬಿಟಿ) ಹಾಗೂ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ (ಎನ್‌ಸಿಪಿ–ಎಸ್‌ಪಿ) ಹೋಗಿವೆ. ಇದು ಬಿಜೆಪಿಗೆ ಹಿನ್ನಡೆಯನ್ನುಂಟು ಮಾಡಿದೆ ಎಂದು ಪ್ರತಿಪಾದಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕಟು ಟೀಕಾಕಾರರೂ ಆದ ಪಟೋಲೆ, 'ಮಹಾರಾಷ್ಟ್ರದಲ್ಲಿ ಮೋದಿ ಅವರ ಭಾಷಣಗಳು ಉತ್ತಮ ಪರಿಣಾಮವನ್ನೇನು ಉಂಟುಮಾಡಲಿಲ್ಲ. ಅವರು ತಮ್ಮ ಭಾಷಣಗಳಲ್ಲಿ ವಿಷ ಉಗುಳುತ್ತಿದ್ದರು. ಅತ್ಯಂತ ಘನತೆಯ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಮೋದಿ ಅವರ ಜನಪ್ರಿಯತೆ ಕುಸಿಯುತ್ತಿದೆ' ಎಂದು ಟೀಕಿಸಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟವಾಗಿರುವ 'ಇಂಡಿಯಾ', ದೇಶದ ಜನರ ಹೃದಯದಲ್ಲಿ ಸ್ಥಾನ ಗಳಿಸಿದೆ ಎಂದಿರುವ ಅವರು, 'ಭಾರತ್‌ ಜೋಡೊ ಹಾಗೂ ಭಾರತ್‌ ನ್ಯಾಯ ಯಾತ್ರೆಯ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ದೇಶದಾದ್ಯಂತ ಪ್ರೀತಿಯನ್ನು ಹಂಚಿದ್ದಾರೆ. ಈ ದೇಶದ ಜನರು ರಾಹುಲ್‌ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ' ಎಂದು ಹೇಳಿದ್ದಾರೆ.

ಮುಂದುವರಿದು, ಉತ್ತರ ಪ್ರದೇಶದ ಅಮೇಠಿ ಮತ್ತು ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ಗೆ ದೊರೆತ ಗೆಲುವು ಪಕ್ಷದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಮೇಠಿಯಲ್ಲಿ ಹ್ಯಾಟ್ರಿಕ್‌ (2004, 2009, 2014ರಲ್ಲಿ) ಜಯ ಸಾಧಿಸಿದ್ದ ರಾಹುಲ್‌, 2019ರಲ್ಲಿ ಸ್ಮೃತಿ ಇರಾನಿ ಎದುರು ಸೋಲು ಕಂಡಿದ್ದರು. ಇದೀಗ ಆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕಿಶೋರಿ ಲಾಲ್‌ ಶರ್ಮಾ 1.67 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅದೇರೀತಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿಯಲ್ಲಿ ಈ ಬಾರಿ ರಾಹುಲ್‌ 3.90 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸಭಾಧ್ಯಕ್ಷರೂ ಆಗಿರುವ ಪಟೋಲೆ, ರಾಜ್ಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಅಧಿಕಾರದಿಂದ ಕಿತ್ತೊಗೆಯುವುದೇ ತಮ್ಮ ಉದ್ದೇಶ ಎಂದು ಹೇಳಿದ್ದಾರೆ. ಹಾಗೆಯೇ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಶಿವಸೇನಾ (ಯುಬಿಟಿ), ಎನ್‌ಸಿಪಿ–ಎಸ್‌ಪಿ ಮೈತ್ರಿಕೂಟ 'ಮಹಾ ವಿಕಾಸ ಆಘಾಡಿ' (ಎಂವಿಎ) ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT