ರಾಜಸ್ಥಾನದಲ್ಲಿ ಪ್ರವಾಸೋದ್ಯಮ ಮತ್ತು ಕಲ್ಲು ಗಣಿಗಾರಿಕೆ ಪ್ರಧಾನ ಉದ್ಯಮಗಳಾದರೂ, ಮುಕ್ಕಾಲು ಪಾಲು ಜನರ ಕಸುಬು ಕೃಷಿ. ಗೊಬ್ಬರದ ಕೊರತೆ, ಬೆಲೆ ಹೆಚ್ಚಳ, ನೀರಾವರಿ ಯೋಜನೆಗೆ ತಡೆ... ಈ ಬಗ್ಗೆ ರೈತ ಸಮುದಾಯದ ಅಸಮಾಧಾನ ತೀವ್ರವಾಗಿದೆ. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪ–ಪ್ರತ್ಯಾರೋಪ ಮಾಡಿದರೂ ಸಮಸ್ಯೆಗಳಿಗೆ ಏನು ಕಾರಣ ಎಂಬುದನ್ನು ಇಲ್ಲಿನ ರೈತ ಸಮುದಾಯ ಗುರುತಿಸಿದೆ

ಸಿರ್ಕಾ/ನಾಗೌರ್/ಅಲ್ವರ್: ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ರೈತರ ಸಮಸ್ಯೆಗಳು ನಿರ್ಣಾಯಕ ಪಾತ್ರವಹಿಸಲಿವೆ. ಪ್ರವಾಸೋದ್ಯಮ, ಗ್ರಾನೈಟ್ ಗಣಿಗಾರಿಕೆ ರಾಜಸ್ಥಾನದಲ್ಲಿ ದೊಡ್ಡ ಉದ್ಯಮವಾದರೂ ಕೃಷಿಯನ್ನು ನೆಚ್ಚಿಕೊಂಡವರ ಸಂಖ್ಯೆಯೇ ದೊಡ್ಡದು. 29ರಲ್ಲಿ 24 ಜಿಲ್ಲೆಗಳಲ್ಲಿ ಕೃಷಿಯೇ ಪ್ರಧಾನ ಕಸುಬು. ಕೃಷಿ ಚಟುವಟಿಕೆಗಳನ್ನು ಬಾಧಿಸುವ ಸಂಗತಿಗಳು ಚುನಾವಣೆಯಲ್ಲಿ ಮತದಾರರನ್ನು ಪ್ರಭಾವಿಸುತ್ತವೆ. ಈ ಬಾರಿಯ ಚುನಾವಣೆಯೂ ಇದಕ್ಕೆ ಹೊರತಲ್ಲ.

ರಾಜಸ್ಥಾನದ ಬಹುತೇಕ ಜಿಲ್ಲೆಗಳಲ್ಲಿ ವರ್ಷವೊಂದರಲ್ಲಿ ಎರಡು ಬೆಳೆಗಳನ್ನು ಬೆಳೆಯಲಾಗುತ್ತದೆ. ಅಕ್ಟೋಬರ್, ಹಿಂಗಾರು ಬೇಸಾಯದ ಆರಂಭದ ತಿಂಗಳು. ಕುಂಟೆ ಒಡೆದು, ಹೊಲವನ್ನು ಹದವಾಗಿಸಿ ಬಿತ್ತನೆಗೆ ಸಿದ್ಧವಾಗಿಸಿರುವ ದೃಶ್ಯವು ರಾಜಸ್ಥಾನದ ಉದ್ದಗಲಕ್ಕೂ ಕಾಣುತ್ತಿತ್ತು. ಹೊಲಗಳು ಬಿತ್ತನೆಗೆ ಸಿದ್ಧವಾಗಿದ್ದರೂ, ಗೊಬ್ಬರ ಇಲ್ಲದೆ ಬಹುತೇಕ ಕಡೆ ಬಿತ್ತನೆಯೇ ಆಗಿಲ್ಲ. ರಸಗೊಬ್ಬರ ಬಳಸಿಯೇ ವರ್ಷಕ್ಕೆ ಎರಡು ಬೆಳೆ ತೆಗೆಯುವ ರಾಜಸ್ಥಾನದಲ್ಲಿ, ರೈತರು ಗೊಬ್ಬರ ಸಂಗ್ರಹಿಸಿಕೊಳ್ಳದೆ ಬಿತ್ತನೆ ಮಾಡುವುದೇ ಇಲ್ಲ.

‘ಗೊಬ್ಬರವೇ ಸಿಗುತ್ತಿಲ್ಲ. ಮೊದಲೆಲ್ಲಾ ಗೊಬ್ಬರಕ್ಕಾಗಿ ಕಾಯುವ ಸ್ಥಿತಿಯೇ ಇರಲಿಲ್ಲ. ಈಗ ಗೊಬ್ಬರಕ್ಕಾಗಿ ಸೊಸೈಟಿ ಎದುರು ಎರಡು–ಮೂರು ದಿನ ನಿಲ್ಲಬೇಕು. ಗೊಬ್ಬರ ಇಲ್ಲದೆ ಬೇಸಾಯ ಮಾಡಲಾಗಿಲ್ಲ. ಅಶೋಕ್ಜೀ ಅವರ ಸರ್ಕಾರ ಕೊಡುತ್ತಿರುವ ಉಚಿತ ಪಡಿತರದಿಂದ ಜೀವನ ನಡೆಸಿದ್ದೇವೆ. ನಮ್ಮ ಕಷ್ಟಕ್ಕೆ ನೆರವಾಗುತ್ತಿರುವ ರಾಜ್ಯ ಸರ್ಕಾರಕ್ಕೇ ಮತ ಹಾಕಬೇಕಲ್ಲವೇ’ ಎಂದರು ನೌಗಾರ್ನ ಕೃಷಿಕ ಕಮಲಾಕರ್ ಕರ್ಮಾಕರ್.

ನಾಗೌರ್ ಹೊರವಲಯದಲ್ಲಿರುವ ಸಿರ್ಕಾ ಹೆದ್ದಾರಿಯ ಸೊಸೈಟಿ ಎದುರು ಗೊಬ್ಬರಕ್ಕಾಗಿ ಕಾದುನಿಂತ ಇನ್ನೂರಕ್ಕೂ ಹೆಚ್ಚು ರೈತರಲ್ಲಿ ಕಮಲಾಕರ್ ಸಹ ಒಬ್ಬರು. ಕೇಂದ್ರ ಸರ್ಕಾರ ಗೊಬ್ಬರ ಪೂರೈಸದೇ ಇರುವುದರಿಂದಲೇ ಗೊಬ್ಬರದ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ. ರೈತ ಸಮುದಾಯದ ಹಲವರು ಇದನ್ನು ಒಪ್ಪುತ್ತಾರೆ.

‘ಕೇಂದ್ರ ಸರ್ಕಾರವೇ ಗೊಬ್ಬರ ಪೂರೈಸಬೇಕಲ್ಲವೇ. ಪಕ್ಕದ ಹರಿಯಾಣದಲ್ಲಿ ಗೊಬ್ಬರ ಬೇಕಾದಂತೆ ಸಿಗುತ್ತದೆ. ನನ್ನ ಮನೆಯಾಕೆಯ ಅಪ್ಪ ಹರಿಯಾಣದವರು. ಅವರಿಗೆ ಗೊಬ್ಬರ ಬೇಕಾದಷ್ಟು ಸಿಗುತ್ತಿದೆ. ಆದರೆ ಇಲ್ಲಿ ರಾಜಸ್ಥಾನದಲ್ಲಿ ಮಾತ್ರ ಗೊಬ್ಬರ ಸಿಗುತ್ತಿಲ್ಲ. ಇದು ಕೇಂದ್ರ ಸರ್ಕಾರ ಮಾಡುತ್ತಿರುವ ರಾಜಕಾರಣವಲ್ಲವೇ? ಅವರಿಗೆ ನಾವು ಮತ ಹಾಕಬೇಕೇ’ ಎಂದು ಪ್ರಶ್ನಿಸಿದವರು ಅಲ್ವರ್ನ ಗಡಿಗ್ರಾಮ ಹರಸೋಲಿಯ ಮೋನಕ್ ಸಿಂಗ್ ಯಾದವ್.

‘ಗೊಬ್ಬರದ ದರ ಎರಡರಷ್ಟಾಗಿದೆ. ಮೊದಲು 45 ಕೆ.ಜಿ.ಯ ಚೀಲ ₹250ಕ್ಕೆ ಸಿಗುತ್ತಿತ್ತು. ಈಗ ₹500 ಆಗಿದೆ. ಅಷ್ಟು ಕೊಟ್ಟರೂ ಸಿಗುತ್ತಿಲ್ಲ. ಬಿಜೆಪಿ ಸರ್ಕಾರ ಎಲ್ಲದರ ದರವನ್ನೂ ಹೆಚ್ಚಿಸಿದೆ. ಡೀಸೆಲ್ ದರ ಹೆಚ್ಚಿಸಿದೆ. ಉಳುಮೆ ಮಾಡಲೇ ಹೆಚ್ಚು ದುಡ್ಡು ಹೋಗುತ್ತದೆ. ಎಲ್ಲಾ ಖರ್ಚು ಕಳೆದರೂ ನಮಗೆ ಉಳಿಯುವ ಲಾಭ ಕಡಿಮೆ. ಬಿಜೆಪಿಗೆ ಈ ಬಾರಿ ಬುದ್ಧಿಕಲಿಸಬೇಕು’ ಎಂದು ಮೋನಕ್ನ ಮಾತಿಗೆ ದನಿಗೂಡಿಸಿದರು ರೂಪಾರಾಮ್ ಗೋಶಾಲಾ.

ಗೋಶಾಲೆ ನಡೆಸುತ್ತಿರುವ ರೂಪಾರಾಮ್ ಅವರಿಗೆ ಮೇವನ್ನು ರಾಜಸ್ಥಾನದಲ್ಲಿ ಖರೀದಿಸುವುದಕ್ಕಿಂತ, ಹರಿಯಾಣದಿಂದ ತರಿಸಿಕೊಳ್ಳುವುದಕ್ಕೇ ಕಡಿಮೆ ಖರ್ಚಾಗುತ್ತದಂತೆ. ರಾಜ್ಯ ಸರ್ಕಾರ ಒದಗಿಸುತ್ತಿರುವ ಮೇವು ಸಹಾಯಧನ, ಉಚಿತ ವಿದ್ಯುತ್, ಗ್ರಾಮೀಣ ಪ್ರದೇಶದ ಮನೆಗಳಿಗೆ ಉಚಿತ ವಿದ್ಯುತ್, ಉಚಿತ ಪಡಿತರ... ಇವೆಲ್ಲವೂ ಬಡರೈತರು ಜೀವನ ನಡೆಸಲು ನೆರವಾಗಿವೆ. ಅವರು ಕಾಂಗ್ರೆಸ್ಗೇ ಮತ ಹಾಕುತ್ತಾರೆ ಎನ್ನುತ್ತಾರೆ ಹರಸೋಲಿಯ ರೈತ ಮಂದಿ.

ಚುನಾವಣೆಯಲ್ಲಿ ರೈತರ ಸಮಸ್ಯೆ ಮುಂದು ಮಾಡುವಲ್ಲಿ ಬಿಜೆಪಿ ಸಹ ಹಿಂದೆ ಬಿದ್ದಿಲ್ಲ. ಗೊಬ್ಬರದ ಸಮಸ್ಯೆ ಬಿಗಡಾಯಿಸಿದ್ದು ರಾಜ್ಯ ಸರ್ಕಾರದ ವೈಫಲ್ಯದಿಂದಲೇ ಎಂದು ಸ್ಥಳೀಯ ಬಿಜೆಪಿ ನಾಯಕರು ಹೇಳುತ್ತಾರೆ. ‘ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಗೊಬ್ಬರವನ್ನು ತರಿಸಿಕೊಳ್ಳಬೇಕಾಗಿದ್ದು ರಾಜ್ಯ ಸರ್ಕಾರದ ಕೆಲಸವಲ್ಲವೇ. ಬಿಜೆಪಿ ಮೇಲೆ ಗೂಬೆ ಕೂರಿಸಿ ಏನು ಪ್ರಯೋಜನ? ಹರಿಯಾಣದಲ್ಲಿ ಬಿಜೆಪಿ ಸರ್ಕಾರವಿದೆ. ಅಲ್ಲಿಗೆ ಗೊಬ್ಬರ ಸುಲಭವಾಗಿ ಪೂರೈಕೆಯಾಗುತ್ತಿದೆ. ರಾಜ್ಯದಲ್ಲೂ ಕೇಂದ್ರದಲ್ಲೂ ಒಂದೇ ಸರ್ಕಾರ ಬಂದರೆ, ಇಲ್ಲಿ ಗೊಬ್ಬರ ಸುಲಭವಾಗಿ ಸಿಗುತ್ತದೆ. ಇದಕ್ಕಾಗಿ ಬಿಜೆಪಿಗೆ ಮತ ಹಾಕಬೇಕು’ ಎನ್ನುವುದು ಸಿರ್ಕಾದ ಗೋಧಿ ವರ್ತಕ ರಾಧೆಶ್ಯಾಮ್ ಸೂತ್ರಧಾರ್ ಅವರ ಪ್ರತಿಪಾದನೆ.

ಕೇಂದ್ರದ ಬಿಜೆಪಿ ಸರ್ಕಾರವು ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಕೃಷಿ ಕಾಯ್ದೆಗಳನ್ನು ಬದಲಿಸಿತು ಎಂಬುದನ್ನು ರಾಜಸ್ಥಾನದ ಹನುಮಾನ್ಗಢ್, ಶೆಖಾವತಿ ಪ್ರಾಂತ್ಯದ ರೈತರು ಬಹಳ ಗಟ್ಟಿಯಾಗಿ ಹೇಳುತ್ತಾರೆ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಈ ಪ್ರಾಂತ್ಯದ ಸಾವಿರಾರು ರೈತರು ಭಾಗಿಯಾಗಿದ್ದರು. ಆ ಕಾಯ್ದೆಗಳ ಕಾರಣದಿಂದ ಕೇಂದ್ರ ಸರ್ಕಾರದ ಮೇಲೆ ಈ ರೈತರಲ್ಲಿ ಉಂಟಾಗಿದ್ದ ಸಿಟ್ಟು ಇನ್ನೂ ಕಡಿಮೆಯಾಗಿಲ್ಲ.

‘ರೈತ ವಿರೋಧಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಅದು ನಮಗಾಗಿ ಕೆಲಸವೇ ಮಾಡುವುದಿಲ್ಲ. ಕೃಷಿ ಕಾಯ್ದೆಗಳ ಕಾರಣದಿಂದ ನಮಗೆ ತೊಂದರೆಯಾಗಿದೆ. ಅದನ್ನು ತೆಗೆದುಹಾಕಿ ಎಂದು ಹೇಳಿದರೂ ಬಿಜೆಪಿ ನಮ್ಮ ಮಾತನ್ನು ಕೇಳಲಿಲ್ಲ. ನಮ್ಮಂತಹ ರೈತರು ಅದಕ್ಕಾಗಿ ಒಂದು ವರ್ಷ ಪ್ರತಿಭಟನೆ ನಡೆಸಬೇಕೇ? ಇಂತಹ ಪಕ್ಷ ಅಧಿಕಾರಕ್ಕೆ ಏಕೆ ಬರಬೇಕು’ ಎಂದು ಸಿಟ್ಟನ್ನು ಹೊರಹಾಕಿದರು ಅಲ್ವರ್ನ ದಿವ್ಯೇಂದ್ರು ಯಾದವ್.

ರೈತ ಸಮುದಾಯದ ಪ್ರಾಬಲ್ಯವಿರುವ ಈ ಎಲ್ಲಾ ಪ್ರಾಂತಗಳಲ್ಲಿ ಇಂತಹ ಮಾತು ಪ್ರತಿಧ್ವನಿಸುತ್ತದೆ.

‘ರಾಜಕೀಯ ಮಾಡಿದರೆ ಮಾರಕ’

ರಾಜಸ್ಥಾನದ ದಕ್ಷಿಣ ಭಾಗದ ನದಿಗಳನ್ನು ಜೋಡಿಸಿ, ಉತ್ತರ ಮತ್ತು ಈಶಾನ್ಯ ಜಿಲ್ಲೆಗಳಿಗೆ ನೀರು ಕೊಂಡೊಯ್ಯುವ ‘ಪಶ್ಚಿಮ ರಾಜಸ್ಥಾನ ಕಾಲುವೆ ಯೋಜನೆ’ ಈ ಚುನಾವಣೆಯಲ್ಲಿ ಪ್ರಮುಖ ವಿಷಯಗಳಲ್ಲಿ ಒಂದು.

ವಸುಂಧರಾ ರಾಜೇ ನೇತೃತ್ವದ ಸರ್ಕಾರ ಇದ್ದಾಗ 2017ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಈ ಯೋಜನೆಗೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಅನುಮೋದನೆ ನೀಡಲಿಲ್ಲ ಮತ್ತು ಹಣಕಾಸು ನೆರವು ನೀಡಲು ನಿರಾಕರಿಸಿತ್ತು. ಹೀಗೆ ಸ್ಥಗಿತವಾದ ಯೋಜನೆಗೆ ಮರುಚಾಲನೆ ನೀಡಿದ್ದು, ಅಶೋಕ್ ಗೆಹಲೋತ್ ಅವರ ಕಾಂಗ್ರೆಸ್ ಸರ್ಕಾರ. ಸರ್ಕಾರವು ಯೋಜನೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಹೇಳಿ, ರಾಜ್ಯ ಯೋಜನೆಯಾಗಿ ಘೋಷಿಸಿತು. ಮೊದಲ ಹಂತದಲ್ಲಿ ₹13,000 ಕೋಟಿಯನ್ನು ತೆಗೆದಿರಿಸಿತು. ಆದರೆ ಪಕ್ಕದ ಮಧ್ಯ ಪ್ರದೇಶ ಸರ್ಕಾರದಿಂದ ನಿರಾಕ್ಷೇಪಣಾ ಪತ್ರ ದೊರೆಯದೇ ಇರುವುದರಿಂದ ಕಾಮಗಾರಿ ಆರಂಭವಾಗಿಲ್ಲ.

ಯೋಜನೆ ವಿಫಲವಾಗಿದೆ ಎಂದು ಬಿಜೆಪಿಯ ನಾಯಕರು ಮಾತನಾಡುತ್ತಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲೂ ಇದನ್ನು ಪ್ರಸ್ತಾಪಿಸಲಾಗಿದೆ. ಇದು, ‘ಬಿಜೆಪಿಯ ಯೋಜನೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ’ ಎನ್ನುತ್ತಾರೆ ಜಾಲಾವಾಡ್ನ ಎ2 ದರ್ಜೆಯ ಗುತ್ತಿಗೆದಾರ ರೂಬಲ್ ಜೈನ್.

ಆದರೆ ಈ ಮಾತನ್ನು ರೈತ ಸಮುದಾಯ ನಿರಾಕರಿಸುತ್ತದೆ. ‘ಜನರಿಗಾಗಿ ಕೆಲಸ ಮಾಡಿದರಷ್ಟೇ ಮತ ಹಾಕುತ್ತಾರೆ ಎಂಬುದು ಇಲ್ಲಿನ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ. ಹೀಗಿದ್ದೂ ರಾಜಕೀಯಕ್ಕಾಗಿ ಯೋಜನೆಗೆ ಅಡ್ಡಗಾಲು ಹಾಕಿದರೆ ಅದು ಕಾಂಗ್ರೆಸ್ಗೂ ಮಾರಕ, ಬಿಜೆಪಿಗೂ ಮಾರಕ. ಇದರಲ್ಲಿ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ’ ಎನ್ನುತ್ತಾರೆ ಅಲ್ವರ್ನ ಲಕ್ಷೀಕಾಂತ್ ಸಿಂಗ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.