ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅವಮಾನಿಸಿದ ಫೋರ್ಡ್ ವಿರುದ್ಧ 9 ವರ್ಷಗಳ ನಂತರ ತಮ್ಮದೇ ಶೈಲಿಯಲ್ಲಿ ಟಾಟಾ ಉತ್ತರ

Published : 10 ಅಕ್ಟೋಬರ್ 2024, 13:26 IST
Last Updated : 10 ಅಕ್ಟೋಬರ್ 2024, 13:26 IST
ಫಾಲೋ ಮಾಡಿ
Comments

ಮುಂಬೈ: ‘ಕಾರು ತಯಾರಿಕೆ ಗೊತ್ತಿಲ್ಲವೆಂದಮೇಲೆ, ಪ್ರಯಾಣಿಕ ಕಾರುಗಳ ತಯಾರಿಕಾ ಘಟಕವನ್ನು ಏಕೆ ಆರಂಭಿಸಿದಿರಿ...?’ ಎಂದು ಹೇಳಿದ್ದ ಅಮೆರಿಕದ ಕಾರು ತಯಾರಿಕಾ ಕಂಪನಿ ಫೋರ್ಡ್‌ನ ಬಿಲ್‌ ಅವರ ಮಾತಿಗೆ, ರತನ್ ಟಾಟಾ ಅವರು 9 ವರ್ಷಗಳ ನಂತರ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ್ದು ಈಗ ಸುದ್ದಿಯಲ್ಲಿದೆ.

1998ರಲ್ಲಿ ರತನ್‌ ಟಾಟಾ ಅವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಕಾರು ತಯಾರಿಕಾ ಜಗತ್ತಿಗೆ ಇಂಡಿಕಾ ಎಂಬ ಹ್ಯಾಚ್‌ಬ್ಯಾಕ್‌ ಮೂಲಕ ಪದಾರ್ಪಣೆ ಮಾಡಿದ್ದರು. ಇದು ಭಾರತ ಮೂಲದ ಮೊದಲ ಡೀಸಲ್‌ ಚಾಲಿತ ಹ್ಯಾಚ್‌ಬ್ಯಾಕ್‌ ಕಾರಾಗಿತ್ತು. ಕಾರುಗಳ ಮಾರಾಟ ನಿರೀಕ್ಷಿಸಿದಷ್ಟು ಆಗಿರಲಿಲ್ಲ. 

ಆಗ, ಟಾಟಾ ಮೋಟಾರ್ಸ್‌ ಕಂಪನಿಯನ್ನು ಅಮೆರಿಕದ ದಿಗ್ಗಜ ಫೋರ್ಡ್‌ಗೆ ಮಾರಾಟ ಮಾಡಲು ರತನ್ ನಿರ್ಧರಿಸಿದ್ದರು. ಘಟಕ ನೋಡಲು 1999ರಲ್ಲಿ ಫೋರ್ಡ್‌ ಕಂಪನಿಯ ಅಧಿಕಾರಿಗಳು ಮುಂಬೈಗೆ ಬಂದಿದ್ದರು. ನಂತರ ರತನ್ ಟಾಟಾ ಅವರು ಡೆಟ್ರಾಯ್ಟ್‌ಗೆ ತೆರಳಿ ಫೋರ್ಡ್ ಬಿಲ್‌ ಅವರನ್ನು ಭೇಟಿಯಾದರು.

ಸುದೀರ್ಘ ಮೂರು ಗಂಟೆಗಳ ಸಭೆಯಲ್ಲಿ ಬಿಲ್‌ ಅವರ ಚುಚ್ಚು ಮಾತುಗಳು ರತನ್‌ ಅವರ ಆತ್ಮಗೌರವವನ್ನು ಇರಿದಿದ್ದವು. ಡೆಟ್ರಾಯ್ಟ್‌ನಿಂದ ನ್ಯೂಯಾರ್ಕ್‌ ವರೆಗಿನ 90 ನಿಮಿಷಗಳ ಪ್ರಯಾಣದಲ್ಲಿ ರತನ್‌ ಒಂದು ಮಾತನ್ನೂ ಆಡಲಿಲ್ಲ. ಸ್ವದೇಶಕ್ಕೆ ಮರಳಿದವರೇ, ಕಂಪನಿಯನ್ನು ಮಾರಾಟ ಮಾಡದಿರಲು ನಿರ್ಧರಿಸಿದರು. ಬದಲಿಗೆ ಟಾಟಾ ಮೋಟಾರ್ಸ್‌ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವತ್ತ ಯೋಜನೆ ರೂಪಿಸಿದರು.

ಅಲ್ಲಿಂದ ಸುಮಾರು ಒಂಬತ್ತು ವರ್ಷಗಳ ನಂತರ, 2008ರಲ್ಲಿ ಅಮೆರಿಕದಲ್ಲಿ ಆರ್ಥಿಕ ಹಿಂಜರಿಕೆ ಆರಂಭವಾಗಿತ್ತು. ತೀವ್ರ ನಷ್ಟ ಅನುಭವಿಸಿದ್ದ ಪೋರ್ಡ್‌, ದಿವಾಳಿಯಾಗುವ ಹಂತಕ್ಕೆ ಬಂದು ನಿಂತಿತ್ತು. ಆದರೆ ಆ ಹೊತ್ತಿಗೆ ಟಾಟಾ ಮೋಟಾರ್ಸ್‌ ಉತ್ತಮ ಹಾದಿಯಲ್ಲಿತ್ತು. 

ಫೋರ್ಡ್ ಕಂಪನಿಯು ತಮ್ಮ ಒಡೆತದಲ್ಲಿದ್ದ ಬ್ರಿಟಿಷ್‌ ಕಾರು ಕಂಪನಿ ಜಾಗ್ವಾರ್ ಮತ್ತು ಲ್ಯಾಂಡ್‌ರೋವರ್‌ ಅನ್ನು ಮಾರಾಟಕ್ಕಿಟ್ಟಿತ್ತು. 2.3 ಶತಕೋಟಿ ಅಮೆರಿಕನ್ ಡಾಲರ್ (₹19,300 ಕೋಟಿ) ಮೊತ್ತಕ್ಕೆ ಟಾಟಾ ಖರೀದಿಸಿತು. ದಿವಾಳಿಯಿಂದ ರಕ್ಷಿಸಿದ ರತನ್‌ ಟಾಟಾಗೆ ಬಿಲ್ ಫೋರ್ಡ್‌ ಧನ್ಯವಾದ ಹೇಳಿದ್ದರು. ರತನ್ ಅವರು ಅದನ್ನು ನಮ್ರತೆಯಿಂದಲೇ ಸ್ವೀಕರಿಸಿ, 9 ವರ್ಷಗಳ ಹಿಂದಿನ ಅವಮಾನಕ್ಕೆ ನೆರವಿನ ಮೂಲಕವೇ ಸೇಡು ತೀರಿಸಿಕೊಂಡಿದ್ದರು. 

ಈ ಘಟನೆಯನ್ನು ಅಂದು ರತನ್ ಟಾಟಾ ಅವರೊಂದಿಗೆ ಪ್ರಯಾಣಿಸಿದ್ದ ಟಾಟಾ ಮೋಟಾರ್ಸ್‌ ಕಂಪನಿಯ ಅಧಿಕಾರಿ ಪ್ರವೀಣ್ ಕಾಡ್ಲೆ ಅವರು 2015ರಲ್ಲಿ ನೆನಪಿಸಿಕೊಂಡಿದ್ದರು ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT