ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ | 10ನೇ ದಿನಕ್ಕೆ ವೈದ್ಯರ ಉಪವಾಸ: ರಾಜಭವನಕ್ಕೆ ರ‍್ಯಾಲಿ

ಹದಗೆಟ್ಟಿದ ಧರಣಿ ನಿರತ ಇಬ್ಬರ ಆರೋಗ್ಯ
Published : 14 ಅಕ್ಟೋಬರ್ 2024, 14:45 IST
Last Updated : 14 ಅಕ್ಟೋಬರ್ 2024, 14:45 IST
ಫಾಲೋ ಮಾಡಿ
Comments
ರಾಜಭವನಕ್ಕೆ ಪ್ರತಿಭಟನಾ ರ‍್ಯಾಲಿ
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ನಡುವೆಯೂ ಕಿರಿಯ ವೈದ್ಯರು ಸೋಮವಾರ ರಾಜಭವನಕ್ಕೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಅ.5ರಿಂದ ನಡೆಯುತ್ತಿರುವ ಆಮರಣಾಂತ ಉಪವಾಸ ಸ್ಥಳವಾದ ಧರ್ಮತಳ ಬಳಿಯ ಡೊರಿನಾ ಕ್ರಾಸಿಂಗ್‌ನಿಂದ ಮೆರವಣಿಗೆ ಆರಂಭವಾಯಿತು. ಈ ವೇಳೆ ಸಾರ್ವಜನಿಕರೂ ರ‍್ಯಾಲಿಯಲ್ಲಿ ಪಾಲ್ಗೊಂಡರು. ‘ಅಪರಾಧದ ಹಿಂದೆ ಕೇವಲ ಒಬ್ಬ ವ್ಯಕ್ತಿ ಇದ್ದಾನೆ ಎಂದು ಸಿಬಿಐ ಆರೋಪ ಪಟ್ಟಿಯಲ್ಲಿ ಹೇಳಿರುವುದನ್ನು ನಾವು ಒಪ್ಪುವುದಿಲ್ಲ. ಅತ್ಯಾಚಾರ ಘಟನೆ ಬಗ್ಗೆ ತ್ವರಿತ ಹಾಗೂ ಪಾರದರ್ಶಕ ತನಿಖೆಯಾಗಬೇಕು. ನಾವು ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳುತ್ತಿಲ್ಲ. ಬದಲಿಗೆ ಅವರಿಗೆ ನಮ್ಮ ಪ್ರತಿಭಟನೆಯ ಸಂದೇಶವನ್ನಷ್ಟೇ ತಿಳಿಸುತ್ತಿದ್ದೇವೆ’ ಎಂದು ಕಿರಿಯ ವೈದ್ಯರೊಬ್ಬರಾದ ದೇಬಶಿಶ್‌ ಹಾಲ್ದರ್‌ ಹೇಳಿದರು.
ಗಡುವಿಗೆ ಒಪ್ಪದ ಸರ್ಕಾರ: ಫಲ ನೀಡದ ಸಭೆ
ಕೋಲ್ಕತ್ತ: ಆರ್‌.ಜಿ ಕರ್‌ ಪ್ರಕರಣದಿಂದ ಉಂಟಾಗಿರುವ ಬಿಕ್ಕಟ್ಟು ಶಮನಗೊಳಿಸಲು ಸೋಮವಾರ ಆಯೋಜಿಸಿದ್ದ ಪಶ್ಚಿಮ ಬಂಗಾಳದ 12 ವೈದ್ಯರಿದ್ದ ಸಂಘ ಹಾಗೂ ಮುಖ್ಯಕಾರ್ಯದರ್ಶಿ ಮನೋಜ್‌ ಪಂತ್‌ ಅವರ ನಡುವಿನ ನಿರ್ಣಾಯಕ ಸಭೆ ಯಾವುದೇ ಫಲ ನೀಡಲಿಲ್ಲ. ಬಿಕ್ಕಟ್ಟು ಶಮನಕ್ಕೆ ಗಡುವು ನಿಗದಿಗೊಳಿಸಲು ಸರ್ಕಾರ ಒಪ್ಪದ ಕಾರಣ ಸಮಸ್ಯೆ ಬಗೆಹರಿಯಲಿಲ್ಲ ಎಂದು ಮೂಲಗಳು ತಿಳಿಸಿವೆ. ಸಭೆಗೆ ಆರೋಗ್ಯ ಇಲಾಖೆ ಕಾರ್ಯದರ್ಶಿ ಎನ್‌.ಎಸ್‌ ನಿಗಮ್‌ ಹಾಜರಾಗದಿರುವ ಬಗ್ಗೆ ವೈದ್ಯ ಪ್ರತಿನಿಧಿಗಳು ಪ್ರಶ್ನಿಸಿದರು. ಅಲ್ಲದೇ ಉಪವಾಸ ನಿರತ ಕಿರಿಯ ವೈದ್ಯರನ್ನು ನೇರವಾಗಿ ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸುವಂತೆಯೂ ಪಂತ್‌ ಅವರನ್ನು ವೈದ್ಯರು ಒತ್ತಾಯಿಸಿದರು.  ಸರ್ಕಾರಿ ಮೂಲಗಳ ಪ್ರಕಾರ ನಿಗಮ್‌ ಅವರು ಆರ್‌.ಜಿ ಕರ್‌ ವಿಷಯ ಕುರಿತ ಸುಪ್ರೀಂ ಕೋರ್ಟ್‌ ಕಲಾಪಕ್ಕೆ ಹಾಜರಾಗಲು ದೆಹಲಿಗೆ ತೆರಳಿದ್ದರು. ‘ಸಭೆಯು ಫಲಪ್ರದವಾಗಲಿಲ್ಲ. ಬಿಕ್ಕಟ್ಟು ಶಮನಕ್ಕೆ ಗಡುವು ನಿಗದಿಗೊಳಿಸಲು ಪಂತ್‌ ಒಪ್ಪಲಿಲ್ಲ’ ಎಂದು ಪಶ್ಚಿಮ ಬಂಗಾಳ ವೈದ್ಯರ ವೇದಿಕೆಯ ಅಧ್ಯಕ್ಷ ಡಾ.ಕೌಶಿಕ್‌ ಚಾಕಿ ತಿಳಿಸಿದ್ದಾರೆ. ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂತ್‌ ಎರಡೂವರೆ ತಾಸು ನಾವು ಚರ್ಚಿಸಿದ್ದೇವೆ. ವೈದ್ಯರ 10 ಬೇಡಿಕೆಗಳಲ್ಲಿ ಈಗಾಗಲೇ ಏಳನ್ನು ಈಡೇರಿಸಲಾಗಿದೆ. ಉಳಿದ ಮೂರರಲ್ಲಿ ಗಡುವು ನಿಗದಿ ಕುರಿತ ಬೇಡಿಕೆ ಇದೆ. ಇದು ಆಡಳಿತಾತ್ಮಕ ನಿರ್ಧಾರವಾಗಿರುವುದರಿಂದ ಈ ಕ್ಷಣದಲ್ಲಿ ನಾವು ಗಡುವು ನಿಗದಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಕಿರಿಯ ವೈದ್ಯರ ಉಪವಾಸ ನಿರತ ಹೋರಾಟವನ್ನು ಕೊನೆಗೊಳಿಸಲು ಅವರ ಮನವೊಲಿಸುವಂತೆ ವೈದ್ಯರ ವೇದಿಕೆಯನ್ನು ಆಗ್ರಹಿಸಲಾಗಿದೆ ಎಂದು ಸಹ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT