ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲ್ಕತ್ತ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ: ಸಂಜಯ್ ರಾಯ್ ಪ್ರಮುಖ ಆರೋಪಿ ಎಂದ CBI

Published : 7 ಅಕ್ಟೋಬರ್ 2024, 10:52 IST
Last Updated : 7 ಅಕ್ಟೋಬರ್ 2024, 10:52 IST
ಫಾಲೋ ಮಾಡಿ
Comments

ನವದೆಹಲಿ: ‘ದೇಶವ್ಯಾಪಿ ತೀವ್ರ ಸಂಚಲನ ಮೂಡಿಸಿದ್ದ ಪಶ್ಚಿಮ ಬಂಗಾಳದ ಕೋಲ್ಕತ್ತದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿನ ಸ್ನಾತಕೋತ್ತರ ಪದವಿಯ ಟ್ರೈನಿ ವೈದ್ಯೆ ಮೇಲೆ ಸಂಜಯ್‌ ರಾಯ್‌ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ’ ಎಂದು ಸಿಬಿಐ ಹೇಳಿದೆ.

ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಿರುವ ಸಿಬಿಐ, ‘ಸ್ವಯಂಸೇವಕನಂತೆ ಕೆಲಸ ಮಾಡುತ್ತ, ಪೊಲೀಸರಿಗೆ ನೆರವಾಗುತ್ತಿದ್ದ ಸಂಜಯ್‌ ರಾಯ್‌, ಆ. 9ರಂದು ಈ ಕೃತ್ಯ ನಡೆಸಿದ್ದ. ಕೃತ್ಯಕ್ಕೂ ಮೊದಲು ಮೃತ ವೈದ್ಯೆಯು ತನ್ನ ಬಿಡುವಿನ ಸಂದರ್ಭದಲ್ಲಿ ಸಮ್ಮೇಳನ ಸಭಾಂಗಣದಲ್ಲಿ ವಿಶ್ರಾಂತಿಯಲ್ಲಿದ್ದರು’ ಎಂದು ಹೇಳಲಾಗಿದೆ.

ಈ ಕೃತ್ಯದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಅಂಶವನ್ನು ಸಿಬಿಐ ಎಲ್ಲಿಯೂ ಉಲ್ಲೇಖಿಸಿಲ್ಲ. ಆದರೆ ಅತ್ಯಾಚಾರ ಹಾಗೂ ಕೊಲೆಯನ್ನು ಸಂಜಯ್ ರಾಯ್ ಒಬ್ಬನೇ ಮಾಡಿದ್ದಾನೆ ಎಂದು ಹೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ತನಿಖೆಯನ್ನು ಮುಂದುವರಿಸಿದೆ.

ಆಗಸ್ಟ್ 9ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಮಾಜಿ ಪ್ರಾಚಾರ್ಯ ಸಂದೀಪ್ ಘೋಷ್ ಹಾಗೂ ಪ್ರಕರಣದ ಸಾಕ್ಷ್ಯ ನಾಶ ಪಡಿಸಿದ ಆರೋಪದಡಿ ತಾಲಾ ಠಾಣೆಯ ಅಧಿಕಾರಿ ಅಭಿಜಿತ್‌ ಮಂಡಲ್‌ ಅವರನ್ನು ಸಿಬಿಐ ಬಂಧಿಸಿದೆ.

ಘಟನೆ ನಡೆದ ನಂತರ ಕೋಲ್ಕತ್ತ ಪೊಲೀಸರು ಸಂಜಯ್ ರಾಯ್‌ನನ್ನು ಬಂಧಿಸಿದ್ದರು. ನಂತರ, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೋಲ್ಕತ್ತ ಹೈಕೋರ್ಟ್‌ ನಿರ್ದೇಶಿಸಿದ ನಂತರ, ಪ್ರಕರಣದ ತನಿಖೆಯನ್ನು ಸಿಬಿಐ ಆರಂಭಿಸಿತು. ಸಂಜಯನನ್ನು ಸಿಬಿಐ ತನ್ನ ವಶಕ್ಕೆ ಪಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT