ಗುರುವಾರ, 4 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಕಡತದಿಂದ ಭಾಷಣಕ್ಕೆ ಕೊಕ್‌: ಸ್ಪೀಕರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ

Published 2 ಜುಲೈ 2024, 11:18 IST
Last Updated 2 ಜುಲೈ 2024, 11:18 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯಲ್ಲಿ ತಾವು ಮಾಡಿದ ಭಾಷಣದ ಕೆಲವು ಭಾಗಗಳನ್ನು ತೆಗೆದುಹಾಕಿರುವ ಕ್ರಮಕ್ಕೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ‘ತೆಗೆದುಹಾಕಿರುವ ಭಾಗಗಳನ್ನು ಮತ್ತೆ ಸೇರಿಸಬೇಕು’ ಎಂದು ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ.

ರಾಹುಲ್‌ ಅವರು ವಿರೋಧ ಪಕ್ಷದ ನಾಯಕರಾಗಿ ಲೋಕಸಭೆಯಲ್ಲಿ ಸೋಮವಾರ ತಮ್ಮ ಚೊಚ್ಚಲ ಭಾಷಣ ಮಾಡಿದ್ದರು. ಈ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ‘ಆಡಳಿತ ಪಕ್ಷದ ನಾಯಕರು ಜನರಲ್ಲಿ ಕೋಮು ಭಾವನೆ ಕೆರಳಿಸಿ, ಸಮಾಜದಲ್ಲಿ ಒಡಕು ಉಂಟುಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದರು. 

ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ರಾಹುಲ್‌ ಮಾಡಿದ ಭಾಷಣದ ಕೆಲವು ಭಾಗಗಳನ್ನು ಆ ಬಳಿಕ ದಾಖಲೆಯಿಂದ ತೆಗೆದುಹಾಕಲಾಗಿದೆ. ಹಿಂದುತ್ವ ಮತ್ತು ಬಿಜೆಪಿ ಕುರಿತು ನೀಡಿದ ಹೇಳಿಕೆಗಳು, ಕೆಲವು ಉದ್ಯಮಿಗಳ ಬಗ್ಗೆ ಆಡಿದ ಮಾತುಗಳು, ಅಗ್ನಿಪಥ ಯೋಜನೆ ಮತ್ತು ಕೋಟಾದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌ ಸೆಂಟರ್‌ಗಳ ಕುರಿತ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ. 

‘ಸದನದಲ್ಲಿ ಆಡಿದ ಮಾತುಗಳನ್ನು ಕಡತದಿಂದ ತೆಗೆದುಹಾಕುವ ಅಧಿಕಾರ ಸ್ಪೀಕರ್‌ಗೆ ಮಾತ್ರ ಇರುವಂತಹದ್ದು. ಅಂತಹ ಮಾತುಗಳ ಸ್ವರೂಪವನ್ನು ಲೋಕಸಭೆಯ ನಡಾವಳಿಗೆ ಸಂಬಂಧಿಸಿದ ನಿಯಮ 380ರಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ ನನ್ನ ಭಾಷಣದ ಪ್ರಮುಖ ಭಾಗಗಳನ್ನು ತೆಗೆದುಹಾಕಿರುವುದು ತಿಳಿದು ಅಚ್ಚರಿ ಉಂಟಾಯಿತು’ ಎಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

‘ತೆಗೆದುಹಾಕಲಾದ ಭಾಗಗಳು ನಿಯಮ 380ರ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ನೆಲದ ವಾಸ್ತವತೆಯನ್ನು ನಾನು ಸದನದ ಮೂಲಕ ಜನರಿಗೆ ತಿಳಿಸಲು ಬಯಸಿದ್ದೆ’ ಎಂದಿದ್ದಾರೆ.

‘ಸಂವಿಧಾನದ 105(1)ನೇ ವಿಧಿಯಲ್ಲಿ ಪ್ರತಿಪಾದಿಸಿರುವಂತೆ ಜನರ ಧ್ವನಿಯನ್ನು ವ್ಯಕ್ತಪಡಿಸುವುದು ಸದನದ ಪ್ರತಿಯೊಬ್ಬ ಸದಸ್ಯನ ವಾಕ್ ಸ್ವಾತಂತ್ರ್ಯ ಆಗಿದೆ. ಈ ಸ್ವಾತಂತ್ರ್ಯವನ್ನು ಎಲ್ಲಾ ಜನಪ್ರತಿನಿಧಿಗಳು ಹೊಂದಿದ್ದಾರೆ. ಜನರ ಸಮಸ್ಯೆಗಳನ್ನು ಸದನದ ಮುಂದಿಡುವುದು ಪ್ರತಿಯೊಬ್ಬ ಸದಸ್ಯರ ಹಕ್ಕು. ಆ ಹಕ್ಕನ್ನು ನಾನು ಚಲಾಯಿಸಿದ್ದೇನೆ. ನನ್ನ ಹೇಳಿಕೆಗಳನ್ನು ತೆಗೆದುಹಾಕಿರುವುದು ಸಂಸದೀಯ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ’ ಎಂದು ಹೇಳಿದ್ದಾರೆ.

‘ಈ ಸಂದರ್ಭದಲ್ಲಿ ನಾನು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಭಾಷಣದ ಬಗ್ಗೆ ಉಲ್ಲೇಖ ಮಾಡಲು ಬಯಸುತ್ತೇನೆ. ಅನುರಾಗ್ ಅವರ ಭಾಷಣ ಕೇವಲ ಆರೋಪಗಳಿಂದ ತುಂಬಿತ್ತು. ಆದರೆ ಅವರ ಭಾಷಣದ ಕೇವಲ ಒಂದು ಪದವನ್ನು ಮಾತ್ರ ತೆಗೆದುಹಾಕಲಾಗಿದೆ. ಆಯ್ದ ಕೆಲವರ ಮಾತುಗಳನ್ನು ಮಾತ್ರ ಕಡತದಿಂದ ತೆಗೆದುಹಾಕುವ ಕ್ರಮವನ್ನು ಒಪ್ಪಲಾಗದು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT