ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಶಾ ಫೌಂಡೇಷನ್‌ ವಿರುದ್ಧದ ಪೊಲೀಸ್ ಕ್ರಮಕ್ಕೆ ಸುಪ್ರೀಂ ಕೋರ್ಟ್‌ ತಡೆ

Published : 3 ಅಕ್ಟೋಬರ್ 2024, 7:24 IST
Last Updated : 3 ಅಕ್ಟೋಬರ್ 2024, 7:24 IST
ಫಾಲೋ ಮಾಡಿ
Comments

ನವದೆಹಲಿ: ಸದ್ಗುರು ಜಗ್ಗಿ ವಾಸುದೇವ ಅವರ ‘ಇಶಾ ಫೌಂಡೇಷನ್’ ವಿರುದ್ಧ ದಾಖಲಾಗಿರುವ ಎಲ್ಲ ಕ್ರಿಮಿನಲ್ ಪ್ರಕರಣಗಳ ಕುರಿತ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಪೊಲೀಸರಿಗೆ ಮದ್ರಾಸ್ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಹೈಕೋರ್ಟ್‌ ಆದೇಶ ಪ್ರಶ್ನಿಸಿ ಇಶಾ ಫೌಂಡೇಷನ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಸಂಸ್ಥೆ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಇಂದು ತುರ್ತು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಕೋರಿದ್ದರು.

ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ‘ಅಂತಹ ಸ್ಥಳಗಳಿಗೆ ಪೊಲೀಸರು ಅಥವಾ ಸೇನೆ ಪ್ರವೇಶಿಸುವುದು ಸರಿಯಲ್ಲ. ಅಲ್ಲದೆ ಯಾವುದೇ ಪ್ರಾಥಮಿಕ ಕಾರಣವಿಲ್ಲದೆ ಮದ್ರಾಸ್‌ ಹೈಕೋರ್ಟ್‌ ವಿಚಾರಣೆಗೆ ಸೂಚನೆ ನೀಡಿದ್ದು, ಅದನ್ನು ನಾವು ತಡೆಹಿಡಿಯುತ್ತೇವೆ. ಜತೆಗೆ ಆಶ್ರಮದಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ ಎನ್ನಲಾದ ಇಬ್ಬರು ಮಹಿಳೆಯರೊಂದಿಗೆ ನ್ಯಾಯಾಲಯ ಸಂವಾದ ನಡೆಸಲಿದೆ’ ಎಂದು ಹೇಳಿದರು.

ಬಳಿಕ ವರ್ಚುವಲ್‌ ಮೂಲಕ ಒಬ್ಬ ಮಹಿಳೆ ವಿಚಾರಣೆಗೆ ಹಾಜರಾಗಿ, ‘ಸ್ವಇಚ್ಛೆಯಿಂದ ಇಶಾ ಫೌಂಡೇಷನ್‌ನಲ್ಲಿ ಉಳಿದುಕೊಂಡಿದ್ದೇನೆ ಎಂದರು. ಜತೆಗೆ ನನ್ನೊಂದಿಗಿರುವ ಸಹೋದರಿಯೂ ಅವಳ ಇಚ್ಛೆಯಿಂದಲೇ ಇದ್ದಾಳೆ. ಕಳೆದ 8 ವರ್ಷಗಳಿಂದ ತಂದೆಯ ಕಡೆಯಿಂದ ಕಿರುಕುಳ ನಡೆಯುತ್ತಲೇ ಇದೆ’ ಎಂದು ಹೇಳಿಕೆ ನೀಡಿದ್ದಾರೆ.

ನಿವೃತ್ತ ಪ್ರಾಚಾರ್ಯ ಎಸ್. ಕಾಮರಾಜ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಆಶ್ರಮದಲ್ಲಿ ಹಿಡಿದಿಟ್ಟುಕೊಳ್ಳಲಾಗಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್, ಪೊಲೀಸರಿಗೆ ವಿಚಾರಣೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಕೊಯಮತ್ತೂರು ಗ್ರಾಮಾಂತರ ಎಸ್‌ಪಿ ಕೆ. ಕಾರ್ತಿಕೇಯನ್ ನೇತೃತ್ವದಲ್ಲಿ ವಿವಿಧ ಇಲಾಖೆಗಳ ತಂಡವು ಇಶಾ ಫೌಂಡೇಷನ್‌ನ ಆವರಣದಲ್ಲಿ ತನಿಖೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT