ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

UP ನಾಲ್ವರ ಹತ್ಯೆ: ಆರೋಪಿ ಬಂಧನ– ಶಿಕ್ಷಕನ ಪತ್ನಿ ಜೊತೆಗಿನ ಅಕ್ರಮ ಸಂಬಂಧವೇ ಕಾರಣ!

ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ದಲಿತ ಕುಟುಂಬಕ್ಕೆ ಸೇರಿದ್ದ ಶಿಕ್ಷಕ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Published : 5 ಅಕ್ಟೋಬರ್ 2024, 2:47 IST
Last Updated : 5 ಅಕ್ಟೋಬರ್ 2024, 2:47 IST
ಫಾಲೋ ಮಾಡಿ
Comments

ಅಮೇಠಿ: ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ದಲಿತ ಕುಟುಂಬಕ್ಕೆ ಸೇರಿದ್ದ ಶಿಕ್ಷಕ, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಡಿಕ್ಕಿ ನಾಲ್ವರನ್ನು ಹತ್ಯೆ ಮಾಡಿದ ನಂತರ ದೆಹಲಿಯತ್ತ ಹೊರಟಿದ್ದ ಚಂದನ್ ವರ್ಮಾ ಎಂಬುವವನನ್ನು ನೋಯ್ಡಾದ ಟೋಲ್ ಪ್ಲಾಜಾ ಬಳಿ ಉತ್ತರ ಪ್ರದೇಶ ಪೊಲೀಸರು ಗುಂಡು ಹಾರಿಸಿ ಬಂಧಿಸಿ ಅಮೇಠಿಗೆ ಕರೆದೊಯ್ದಿದ್ದಾರೆ.

ಗುರುವಾರ ರಾತ್ರಿ ರಾಯ್‌ಬರೇಲಿ ಮೂಲದ ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳನ್ನು ಚಂದನ್ ವರ್ಮಾ ಗುಂಡಿಕ್ಕಿ ಹತ್ಯೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದರು.

ಮೃತರನ್ನು ಶಿಕ್ಷಕ ಸುನೀಲ್ (35) ಸುನೀಲ್ ಅವರ ಪತ್ನಿ ಪೂನಮ್ (32) ದೃಷ್ಟಿ (6) ಹಾಗೂ ಒಂದು ವರ್ಷದ ಗಂಡು ಮಗು ಎಂದು ಗುರುತಿಸಲಾಗಿತ್ತು.

ಈ ಪ್ರಕರಣ ಉತ್ತರ ಪ್ರದೇಶ ಅಷ್ಟೇ ಅಲ್ಲದೇ ಇಡೀ ದೇಶದ ತುಂಬ ಸದ್ದು ಮಾಡಿತ್ತು.

ಸುನೀಲ್ ಅವರ ಪತ್ನಿ ಪೂನಮ್ ಅವರ ಜೊತೆ ಚಂದನ್ ವರ್ಮಾ ಕಳೆದ 18 ತಿಂಗಳಿನಿಂದ ಅಕ್ರಮ ಸಂಬಂಧ ಹೊಂದಿದ್ದ. ಇತ್ತೀಚೆಗೆ ಪೂನಮ್ ಜೊತೆಗಿನ ಸಂಬಂಧ ಬಹಿರಂಗವಾಗಿದ್ದಾಗ ಪೂನಮ್ ಚಂದನ್ ವರ್ಮಾ ಮೇಲೆ ರಾಯ್ ಬರೇಲಿಯಲ್ಲಿ ಎಸ್‌.ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಿಸಿದ್ದರು. ನಮ್ಮ ಕುಟುಂಬಕ್ಕೆ ಏನಾದರೂ ಆದರೆ ಚಂದನ್ ವರ್ಮಾನೇ ಹೊಣೆ ಎಂದು ಪೂನಮ್ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೂನಮ್ ಹಾಗೂ ಅವರ ಕುಟುಂಬದವರನ್ನು ಹತ್ಯೆ ಮಾಡಿದ ಬಳಿಕ ಆರೋಪಿ ತಾನೂ ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಆದರೆ, ತಪ್ಪಿದ ಗುಂಡಿನಿಂದ ಬದುಕುಳಿದ ಎಂದು ಹೇಳಿದ್ದಾರೆ.

‘ನನ್ನ ಮಗ ನಮ್ಮನ್ನು ಬಿಟ್ಟು ಹೋಗಿದ್ದಾನೆ. ನಾನು ಹೊರಟರೆ, ಮನೆ ನೋಡಿಕೊಳ್ಳುವವರು ಯಾರೂ ಇಲ್ಲ. ನನಗೀಗ 60 ವರ್ಷ. ಮತ್ತೊಬ್ಬ ಮಗನಿದ್ದು, ಪ್ರತ್ಯೇಕವಾಗಿ ವಾಸಿಸುತ್ತಿದ್ದಾನೆ. ಆತನಿಗೆ ಕೆಲಸ ಸಿಕ್ಕಿದರೆ, ಮುಂದಿನ ದಿನಗಳಲ್ಲಿ ಒಳ್ಳೆಯದಾಗಬಹುದು’ ಎಂದು ಹತ್ಯೆಯಾದ ಸುನೀಲ್ ಅವರ ತಂದೆ ರಾಮ್‌ಗೋಪಾಲ್ ಹೇಳಿದ್ದರು.

‘ಚಂದನ್‌ ವರ್ಮಾ ಯಾರು ಎಂಬುದು ನನಗೆ ಗೊತ್ತಿಲ್ಲ. ಅವರ ಜಾತಿಯೂ ತಿಳಿದಿಲ್ಲ. ಪ್ರಕರಣ ದಾಖಲಿಸಿದ್ದ ಕುರಿತು, ಸೊಸೆ ತಿಳಿಸಿದ್ದಳು. ಅಂದೇ ಕ್ರಮ ಕೈಗೊಂಡಿದ್ದರೆ, ಈ ಘಟನೆ ನಡೆಯುತ್ತಿರಲಿಲ್ಲ’ ಎಂದು ಅವರು ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT