ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗವು ಶೇಕಡ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಜತೆಗೆ, ಶೇ 27.50ರಷ್ಟು ಫಿಟ್ಮೆಂಟ್ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ನೇತೃತ್ವದ ಆಯೋಗದ ಸದಸ್ಯರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿ 244 ಪುಟಗಳ ವರದಿಯನ್ನು ಸಲ್ಲಿಸಿದರು.

ಆರಂಭಿಕ ವೃಂದದ ನೌಕರರ ಕನಿಷ್ಠ ವೇತನ ತಿಂಗಳಿಗೆ ₹17 ಸಾವಿರ ಇದ್ದು, ಅದನ್ನು ಗರಿಷ್ಠ ₹27 ಸಾವಿರಕ್ಕೆ ಹಾಗೂ ಹಿರಿಯ ಶ್ರೇಣಿ ನೌಕರರ ಆರಂಭಿಕ ಕನಿಷ್ಠ ವೇತನ ಈಗ ₹1,04,600 ಇದ್ದು, ಅದನ್ನು ₹1,67,200ಕ್ಕೆ ಪರಿಷ್ಕರಿಸುವಂತೆ ಶಿಫಾರಸು ಮಾಡಲಾಗಿದೆ. ಪ್ರಸ್ತುತ 1:8.86 ಕನಿಷ್ಠ ಮತ್ತು ಗರಿಷ್ಠ ವೇತನಗಳ ಅನುಪಾತವನ್ನು 1:8.93ಕ್ಕೆ ಹೆಚ್ಚಿಸಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಈ ಶಿಫಾರಸು ಅನ್ವಯವಾಗಲಿದ್ದು, 2022ರ ಜೂನ್ನಿಂದ ಪೂರ್ವಾನ್ವಯವಾಗುವಂತೆ ಜಾರಿ ಮಾಡುವಂತೆ ಶಿಫಾರಸು ಮಾಡಿದೆ.

ತಿಂಗಳ ಪಿಂಚಣಿಯನ್ನು ಮೂಲ ವೇತನದ ಶೇ 50ರಷ್ಟು, ಕುಟುಂಬ ಪಿಂಚಣಿಯನ್ನು ಶೇ 30ರಷ್ಟು ಮುಂದುವರಿಸಿದ್ದು, ಪಿಂಚಣಿಯು ಕನಿಷ್ಠ ₹13,500ರಿಂದ ₹1,20,600ವರೆಗೆ ನಿಗದಿ ಮಾಡಿದೆ. 70–80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯು ಹೆಚ್ಚುವರಿ ಶೇ 10ರಷ್ಟು ಹೆಚ್ಚಳ ಆಗಬೇಕು ಎಂದು ಶಿಫಾರಸು ಮಾಡಲಾಗಿದೆ. ಪಿಂಚಣಿದಾರರು ಮರಣ ಹೊಂದಿದರೆ ₹10 ಸಾವಿರ ಶವ ಸಂಸ್ಕಾರ ಮೊತ್ತ ನಿಗದಿ ಮಾಡಲಾಗಿದೆ. ಶಿಫಾರಸುಗಳನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಮಾಡಿದರೆ ₹17,440.15 ಕೋಟಿ ಹೆಚ್ಚುವರಿ ಆರ್ಥಿಕ ಹೊರೆ ಭರಿಸಬೇಕಾಗುತ್ತದೆ.

ವರದಿ ಸ್ವೀಕರಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ‘ವರದಿಯನ್ನು ಆರ್ಥಿಕ ಇಲಾಖೆಗೆ ನೀಡಲಾಗುವುದು. ಕೂಲಂಕಷವಾಗಿ ಪರಿಶೀಲಿಸಿದ ನಂತರ ವೇತನ ಹೆಚ್ಚಳ ಕುರಿತು ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ’ ಎಂದರು.

ವೇತನ ಆಯೋಗದ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿತ್ತು. ಈ ಅವಧಿಯು ಮಾರ್ಚ್ 15ರಂದು ಮುಕ್ತಾಯಗೊಂಡಿದೆ. ವೇತನ ಪರಿಷ್ಕರಣೆವರೆಗೆ ಈಗಾಗಲೇ ನೀಡಿರುವ ಶೇ 17ರಷ್ಟು ಮಧ್ಯಂತರ ಪರಿಹಾರ ಮುಂದುವರಿಯಲಿದೆ ಎಂದು ಹೇಳಿದರು.

ಆಯೋಗದ ಸದಸ್ಯರಾದ ಪಿ.ಬಿ. ರಾಮಮೂರ್ತಿ, ಶ್ರೀಕಾಂತ್ ವನಹಳ್ಳಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಕೆ.ವಿ. ತ್ರಿಲೋಕಚಂದ್ರ, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ವೇತನ ಆಯೋಗದ ಸದಸ್ಯ ಕಾರ್ಯದರ್ಶಿ ಹೆಫ್ಸಿಬಾರಾಣಿ ಕೊರ್ಲಪಾಟಿ ಉಪಸ್ಥಿತರಿದ್ದರು.

ಶೇ 27.5ರಷ್ಟು ಫಿಟ್ಮೆಂಟ್, ಶೇ 31ರಷ್ಟು ಡಿಎ ವಿಲೀನ

ವಾರ್ಷಿಕ ವೇತನ ಬಡ್ತಿ ದರ ಕನಿಷ್ಠ ₹400ರಿಂದ ಗರಿಷ್ಠ ₹650ಕ್ಕೆ, ಕನಿಷ್ಠ ₹3,100ರಿಂದ ₹5 ಸಾವಿರಕ್ಕೆ

ಸಮವಸ್ತ್ರ ಭತ್ಯೆ, ಪ್ರಯಾಣ ಭತ್ಯೆ, ದಿನಭತ್ಯೆಗಳು ಶೇ 25ರಷ್ಟು ಹೆಚ್ಚಳ

ಅಂಗವಿಕಲ ಮಕ್ಕಳ ಶೈಕ್ಷಣಿಕ ಭತ್ಯೆ ₹1 ಸಾವಿರದಿಂದ ₹2 ಸಾವಿರಕ್ಕೆ ಹೆಚ್ಚಳ

ಗೃಹ ನಿರ್ಮಾಣ ಮುಂಗಡ ₹40 ಲಕ್ಷದಿಂದ ₹65 ಲಕ್ಷದವರೆಗೆ ಹೆಚ್ಚಳ

ಗ್ರೂಪ್ ಸಿ, ಡಿ ವೃಂದದ ವೈದ್ಯಕೀಯ ಭತ್ಯೆ ₹200ರಿಂದ ₹500ಕ್ಕೆ ಹೆಚ್ಚಳ

ನೌಕರರ ಅವಲಂಬಿತ ಕುಟುಂಬದ ಸದಸ್ಯರ ಆರೋಗ್ಯ ಸಮಸ್ಯೆಯ ಸಮಯದಲ್ಲಿ ಶೇ 50ರಷ್ಟು ವೇತನದೊಂದಿಗೆ 180 ದಿನಗಳ ಆರೈಕೆ ರಜೆ.

ಸರ್ಕಾರಿ ಸೇವೆಗೆ ಸೇರುವ ಎರಡು ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ್ದ ಮಹಿಳಾ ನೌಕರರಿಗೆ 18 ವಾರಗಳು ಹೆರಿಗೆ ರಜೆ

ಪಿಂಚಣಿದಾರರಿಗೆ ಸಂಧ್ಯಾ ಕಿರಣ ಆರೋಗ್ಯ ಯೋಜನೆ ತ್ವರಿತ ಅನುಷ್ಠಾನ

ಸಂಗಾತಿಯ ಬದಲಿಗೆ ಮಕ್ಕಳನ್ನು ಪಿಂಚಣಿಗೆ ನಾಮನಿರ್ದೇಶನ ಮಾಡಲು ಅವಕಾಶ

ವಾರಕ್ಕೆ ಐದು ದಿನ ಕೆಲಸ

ಸರ್ಕಾರಿ ನೌಕರರ ಕೆಲಸ, ವಿರಾಮದ ಸಮತೋಲನ ಹಾಗೂ ಕಾರ್ಯಕ್ಷಮತೆಯ ಗುಣಮಟ್ಟ ಕಾಯ್ದುಕೊಳ್ಳಲು ವಾರದಲ್ಲಿ ಐದು ದಿನಗಳ ಕೆಲಸದ ಅವಧಿ ನಿಗದಿ ಮಾಡಲು ಆಯೋಗ ಶಿಫಾರಸು ಮಾಡಿದೆ.

ಸರ್ಕಾರಿ ನೌಕರರ ವಿವಿಧ ಸಂಘಟನೆಗಳು ಹಾಗೂ ಇಲಾಖೆ ನೌಕರರು ಐದು ದಿನಗಳ ಕಾಲಾವಕಾಶದ ಕೋರಿಕೆ ಸಲ್ಲಿಸಿದ್ದಾರೆ. ಇತರೆ ದೇಶಗಳಲ್ಲಿನ ಸರ್ಕಾರಿ ನೌಕರರ ಕೆಲಸದ ಅವಧಿಯನ್ನೂ ಗಮನಿಸಲಾಗಿದೆ. ದೇಶದ ಕೆಲ ರಾಜ್ಯಗಳಲ್ಲೂ ವಾರದಲ್ಲಿ ಐದು ದಿನಗಳು ಕೆಲಸದ ಅವಧಿ ನಿಗದಿ ಮಾಡಿದ್ದು, ಅಲ್ಲಿನ ನೌಕರರ ಕೆಲಸದ ಗುಣಮಟ್ಟ ವೃದ್ಧಿಸಿದೆ. ವಹಿಸಿದ ಕಾರ್ಯವನ್ನು ತ್ವರಿತವಾಗಿ ಪೂರೈಸಲು ಸಹಕಾರಿಯಾಗಿದೆ ಎಂದು ಆಯೋಗ ವಿವರಿಸಿದೆ.

ಮನೆ ಬಾಡಿಗೆ ಭತ್ಯೆ ಇಳಿಕೆ

ಮನೆ ಬಾಡಿಗೆ ಭತ್ಯೆ ಎ–ವರ್ಗದ ನಗರಗಳಿಗೆ ಮೂಲ ವೇತನದ ಶೇ 20, ಬಿ–ವರ್ಗದ ನಗರಗಳಿಗೆ ಶೇ 15 ಹಾಗೂ ಸಿ–ವರ್ಗದ ಪ್ರದೇಶಕ್ಕೆ ಶೇ 7.5ರಷ್ಟು ನೀಡುವಂತೆ ಶಿಫಾರಸು ಮಾಡಿದೆ.

ಪ್ರಸಕ್ತ ಇರುವ ಮನೆ ಬಾಡಿಗೆ ಭತ್ಯೆಗಿಂತ ಶೇಕಡವಾರು ಕಡಿಮೆ ಮಾಡಲಾಗಿದ್ದರೂ, ಮೂಲ ವೇತನ ಹೆಚ್ಚಳವಾಗುವುದರಿಂದ ಭತ್ಯೆಯ ಒಟ್ಟು ಮೊತ್ತದಲ್ಲಿ ಸಾಕಷ್ಟು ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.

ಪರಿಷ್ಕರಣೆ ಹೇಗೆ?

ಒಬ್ಬ ನೌಕರ ಪ್ರಸ್ತುತ ಪಡೆಯುತ್ತಿರುವ ಮೂಲವೇತನಕ್ಕೆ 2022 ಜುಲೈನಲ್ಲಿದ್ದ ಶೇ 31 ತುಟ್ಟಿ ಭತ್ಯೆ ಹಾಗೂ ಶಿಫಾರಸು ಮಾಡಿದ ಶೇ 27.50 ಫಿಟ್ಮೆಂಟ್ ಸೇರಿಸಿದರೆ ಒಟ್ಟು ಮೂಲ ವೇತನದಲ್ಲಿ ಶೇ 58.50ರಷ್ಟನ್ನು ಹೆಚ್ಚಳವಾಗುತ್ತದೆ. ಈಗ ತುಟ್ಟಿಭತ್ಯೆಯ ಮೊತ್ತ ಶೇ 42.50ರಷ್ಟಿದ್ದು, ಅದರಲ್ಲಿ ಶೇ 31 ಅನ್ನು ಕಳೆದರೆ, ಶೇ 11.50 ಉಳಿಯಲಿದೆ. ಕೇಂದ್ರ ಸರ್ಕಾರ ಶೇ 1ರಷ್ಟು ತುಟ್ಟಿಭತ್ಯೆ ಘೋಷಿಸಿದರೆ, ಅದಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಶೇ 0.722ರಷ್ಟು ತುಟ್ಟಿಭತ್ಯೆ ನೀಡಬೇಕೆಂದು ಶಿಫಾರಸು ಹೇಳಿದೆ. ಮೂಲವೇತನಕ್ಕೆ ವಿಲೀನದ ಬಳಿಕ ಉಳಿಯುವ ತುಟ್ಟಿಭತ್ಯೆ ಸರಿಸುಮಾರು ಶೇ 8 ಹಾಗೂ ಆಯಾ ನೌಕರರ ವೃಂದಕ್ಕೆ ಅನುಗುಣವಾಗಿ ನಿಗದಿಯಾಗುವ ಮನೆಬಾಡಿಗೆ ಭತ್ಯೆ ( ಶೇ 7.5, ಶೇ 15, ಶೇ 20) ಜತೆಗೆ, ವಿಶೇಷ ಭತ್ಯೆಗಳು ವೇತನದ ಭಾಗವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.