ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Channapatna Bypoll | ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ: ಕುಮಾರಸ್ವಾಮಿ

Published 21 ಜುಲೈ 2024, 10:09 IST
Last Updated 21 ಜುಲೈ 2024, 10:09 IST
ಅಕ್ಷರ ಗಾತ್ರ

ಹಾಸನ: ಚನ್ನಪಟ್ಟಣ ಉಪಚುನಾವಣೆಯ ಕುರಿತು ಇನ್ನೂ ಚರ್ಚೆ ಆಗಿಲ್ಲ. ಕೇಂದ್ರ–ರಾಜ್ಯದ ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಕುಳಿತು ಚರ್ಚೆ ಮಾಡುತ್ತೇವೆ. ಯೋಗೇಶ್ವರ್‌ ಅವರಿಗೆ ಗೆಲ್ಲುವ ಅವಕಾಶ ಇದ್ದರೆ, ಅವರಿಗೆ ಟಿಕೆಟ್‌ ಕೊಡುತ್ತೇವೆ. ಇನ್ನೊಬ್ಬರು ಗೆಲ್ಲುವ ಅವಕಾಶವಿದ್ದರೆ, ಅವರಿಗೆ ಕೊಡುತ್ತೇವೆ. ಒಟ್ಟಾರೆ ಎನ್‌ಡಿಎ ಅಭ್ಯರ್ಥಿ ಸ್ಪರ್ಧೆ ಮಾಡುತ್ತಾರೆ. ಅಷ್ಟೇ ಅಲ್ಲ, ನಮ್ಮ ಅಭ್ಯರ್ಥಿ ಗೆಲುವಿಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸಕಲೇಶಪುರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಯಾವ ರೀತಿಯ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎನ್ನುವುದಕ್ಕೆ ನನ್ನದೇ ಆದ ಯೋಚನೆಗಳಿವೆ. ಕೇಂದ್ರ ಹಣಕಾಸು ಸಚಿವರು, ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಿ, ಏನೆಲ್ಲ ಸಾಧ್ಯವಿದೆಯೋ ಅದನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದು ತಿಳಿಸಿದರು.

ರೇವಣ್ಣ ನೇತೃತ್ವದಲ್ಲಿ ಹಾಸನದಲ್ಲಿ ಸಮಾವೇಶ...

ಇಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುಮಾರಣ್ಣ ಹಾಸನ ಜಿಲ್ಲೆಗೆ ಬರಬೇಕೆಂದು ಕಾರ್ಯಕರ್ತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಲಾಪ ಮುಗಿದ ನಂತರ ಹಾಸನದಲ್ಲಿ ರೇವಣ್ಣ ನೇತೃತ್ವದಲ್ಲಿ ಬೃಹತ್ ಸಮಾವೇಶ ಮಾಡಲು ಯೋಚಿಸಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಲೋಕಸಭಾ ಚುನಾವಣೆ ನಂತರ ಪ್ರಥಮ ಬಾರಿಗೆ ಹಾಸನ ಜಿಲ್ಲೆಯಲ್ಲಿ ಆಗಿರುವ ಮಳೆ ಹಾನಿ ನೋಡಲು ಬಂದಿದ್ದೇನೆ. ಚುನಾವಣೆ ಫಲಿತಾಂಶ ನಂತರ, ಚುನಾವಣೆ ಆಸುಪಾಸಿನಲ್ಲಿ ಕೆಲವು ಅಹಿತಕರ ಘಟನೆಗಳು ಪಕ್ಷದ ಕಾರ್ಯಕರ್ತರು, ಮುಖಂಡರಲ್ಲಿ ನಿರಾಸೆ ಮೂಡಿಸಿವೆ ಎಂದು ಹೇಳಿದರು.

ಮುಂದೆ ಹಾಸನ ಜಿಲ್ಲೆಯ ಕಾರ್ಯಕರ್ತರಿಗೆ ನೈತಿಕ ಸ್ಥೆರ್ಯ ತುಂಬಲು ಬರುತ್ತೇನೆ. ಹಾಸನದಲ್ಲಿ ಬೃಹತ್ ಸಮಾವೇಶ ಮಾಡುವಂತೆ ಶಾಸಕರ ಒತ್ತಾಯ ಇದೆ. ರೇವಣ್ಣ ಅವರ ನೇತೃತ್ವದಲ್ಲಿ ಶಾಸಕರನ್ನು ಒಳಗೊಂಡು, ನಾನೂ ಸೇರಿ ಪಕ್ಷ ಸಂಘಟನೆ ಮಾಡುತ್ತೇವೆ. ಈ ಜಿಲ್ಲೆಯ ಜನರ ಋಣವನ್ನು ತೀರಿಸುತ್ತೇವೆ ಎಂದು ಹೇಳಿದರು.

ಈಗ ರೇವಣ್ಣ ಅವರ ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ. ಆದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರು ಮರೆಯುವಂತಿಲ್ಲ. ಎಲ್ಲರಿಗಿಂತ ಒಂದು ಹೆಜ್ಜೆ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ. ಬೆಂಗಳೂರಿನ ಮದರ್ ಡೇರಿ ಮೀರಿಸುವ ರೀತಿಯಲ್ಲಿ ಹಾಸನದಲ್ಲಿ ಮೆಗಾ ಡೇರಿ ನಿರ್ಮಾಣ ಮಾಡುತ್ತಿದ್ದಾರೆ. ಇಲ್ಲಿನ ರೈತರಿಗೆ ಆರ್ಥಿಕ ಶಕ್ತಿ ತುಂಬಲು ಅದನ್ನು ಮಾಡುತ್ತಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT