ಶನಿವಾರ, 6 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವರಾಜ ಅರಸು ಟ್ರಕ್ ಟರ್ಮಿನಲ್‌ ಅಕ್ರಮ: ಆರೋಪಿ ಶಂಕರಪ್ಪ ಜಾಮೀನು ಅರ್ಜಿ ತಿರಸ್ಕೃತ

Published 29 ಜೂನ್ 2024, 5:38 IST
Last Updated 29 ಜೂನ್ 2024, 5:38 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್‌ನಲ್ಲಿ (ಡಿಡಿಯುಟಿಟಿಎಲ್) ನಡೆದಿದೆ ಎನ್ನಲಾದ ₹47 ಕೋಟಿ ಅಕ್ರಮ ಹಗರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಡಿಡಿಯುಟಿಟಿಎಲ್ ನ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹಾಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಎಸ್.ಶಂಕರಪ್ಪ ಅವರಿಗೆ ಜಾಮೀನು ನೀಡಲು ಸೆಷನ್ಸ್ ಕೋರ್ಟ್ ನಿರಾಕರಿಸಿದೆ.

ಈ ಕುರಿತಂತೆ ಎಸ್.ಶಂಕರಪ್ಪ ನಿಯಮಿತ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ 51 ನೇ ಕೋರ್ಟ್ ನ್ಯಾಯಾಧೀಶ ಯಶವಂತ ಕುಮಾರ್ ಈ ಕುರಿತಂತೆ ಆದೇಶಿಸಿದ್ದಾರೆ.

"ಮೇಲ್ನೋಟಕ್ಕೆ ಅರೋಪಿಯ ವಿರುದ್ಧದ ಆಪಾದನೆಗಳು ಗಂಭೀರವಾಗಿವೆ. ಸಾರ್ವಜನಿಕರ ತೆರಿಗೆಯ ಬೃಹತ್ ಮೊತ್ತ ದುರ್ಬಳಕೆಯಾಗಿರುವ ಆರೋಪ ಹಾಗೂ ಇದಕ್ಕೆ ಸಂಬಂಧಿಸಿದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ‌. ತನಿಖಾಧಿಕಾರಿ ಹೇಳಿಕೆ ಅನುಸಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ದಾಖಲೆಗಳನ್ನು ಕಲೆ ಹಾಕುವ ಅಗತ್ಯವಿದೆ. ಇನ್ನೂ ಕೆಲವರು ಆರೋಪಿಗಳನ್ನು ಬಂಧಿಸಬೇಕಿದೆ. ಒಂದು ವೇಳೆ ಶಂಕರಪ್ಪ ಅವರನ್ನು ಈ ಹಂತದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ‌ನಾಶ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ, ಜಾಮೀನು‌ ಕೋರಿಕೆ ಅರ್ಜಿಯನ್ನು ತಿರಸ್ಕರಿಸಲಾಗುತ್ತಿದೆ" ಎಂದು ನ್ಯಾಯಾಧೀಶರು ಆದೇಶದಲ್ಲಿ ವಿವರಿಸಿದ್ದಾರೆ.

ಪ್ರಕರಣವೇನು?:

ಡಿಡಿಯುಟಿಟಿಎಲ್ ನಲ್ಲಿ 2021ರಿಂದ 2023ರ ನಡುವೆ ತುಂಡು ಗುತ್ತಿಗೆ ಹೆಸರಿನಲ್ಲಿ ನಡೆದಿದೆ ಎನ್ನಲಾದ ₹47 ಕೋಟಿ ಅಕ್ರಮದ ಬಗ್ಗೆ ಹಾಲಿ‌ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಸಿ.ಎನ್. ಶಿವಪ್ರಕಾಶ್, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 2023ರ ಸೆಪ್ಟೆಂಬರ್ 23ರಂದು ಎಫ್‌ಐಆರ್ ದಾಖಲಾಗಿತ್ತು.

ಎಸ್.ಶಂಕರಪ್ಪ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಕಲಂ 409 (ಸರ್ಕಾರಿ ನೌಕರನಿಂದ ನಡೆದಿರುವ ಅಪರಾಧಿಕ ನಂಬಿಕೆ ದ್ರೋಹ), 420 (ವಂಚನೆ), 465 (ಸುಳ್ಳು ದಾಖಲೆ ಸೃಷ್ಟಿ), 471(ಸುಳ್ಳು ದಾಖಲೆಯನ್ನು ನೈಜ ಎಂದು ಬಳಸುವುದು), 468 (ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ದಾಖಲೆ ಸೃಷ್ಟಿ ಯಾ ಬನಾವಟ್) ಹಾಗೂ 120-ಬಿ (ಅಪರಾಧಿಕ ಒಳಸಂಚು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT