ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರಿ ಮಳೆ: ಪ್ರವಾಹಕ್ಕೆ ನಲುಗಿದ ಕರಾವಳಿ

Published 8 ಜುಲೈ 2024, 23:10 IST
Last Updated 8 ಜುಲೈ 2024, 23:10 IST
ಅಕ್ಷರ ಗಾತ್ರ

ಉಡುಪಿ/ಕಾರವಾರ: ರಾಜ್ಯದ ಹಲವೆಡೆ ಸೋಮವಾರ ಮಳೆಯಾಗಿದೆ. ರಾಜ್ಯದ ಕರಾವಳಿಯಲ್ಲಿ ಅದರ ತೀವ್ರತೆ ಹೆಚ್ಚಿದೆ. ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ರಾತ್ರಿ ಹಾಗೂ ಸೋಮವಾರ ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಹಲವು ಕಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ರಸ್ತೆಗಳು ಮುಳುಗಡೆಯಾದ ಪರಿಣಾಮ ಹಲವು ಬಡಾವಣೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು.

ನಗರದ ಗುಂಡಿಬೈಲು, ಪಾಡಿಗಾರು, ಕರಂಬಳ್ಳಿ, ಮಠದಬೆಟ್ಟು, ಕಲ್ಸಂಕ ಸಮೀಪದ ಬೈಲಕೆರೆ, ಶ್ರೀಕೃಷ್ಣ ಮಠದ ವಾಹನ ಪಾರ್ಕಿಂಗ್‌ ಪ್ರದೇಶದ ಸಮೀಪ ನೆರೆ ನೀರು ನಿಂತಿದೆ. ಗುಂಡಿಬೈಲು, ಬಡಗುಪೇಟೆಯಲ್ಲಿ ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಬೈಲಕೆರೆಯಲ್ಲಿ ಪ್ರವಾಹಪೀಡಿತ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಭಾರಿ ಮಳೆಯಾಗುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇದೇ 9ರಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

60 ಜನರ ಸ್ಥಳಾಂತರ:
ಕಾರವಾರ ಜಿಲ್ಲೆಯ ಹೊನ್ನಾವರ, ಕುಮಟಾ ತಾಲ್ಲೂಕಿನ ವಿವಿಧೆಡೆ ವ್ಯಾಪಕ ಮಳೆ ಸುರಿದಿದ್ದು ಗುಂಡಬಾಳ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದ ಪರಿಣಾಮ ಕಡತೋಕಾ ಗ್ರಾಮದ ಗುದ್ನಕಟ್ಟು ಎಂಬಲ್ಲಿ ಸಿಲುಕಿದ್ದ 60 ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್.ಡಿ.ಆರ್.ಎಫ್) ಸದಸ್ಯರು ರಕ್ಷಿಸಿ ಸೋಮವಾರ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿದರು.

ಹೊನ್ನಾವರ ತಾಲ್ಲೂಕಿನಲ್ಲಿ ತೆರೆಯಲಾದ 8 ಕಾಳಜಿ ಕೇಂದ್ರಗಳಲ್ಲಿ 313 ಮಂದಿ, ಕುಮಟಾದಲ್ಲಿ ತೆರೆಯಲಾದ 2 ಕಾಳಜಿ ಕೇಂದ್ರಗಳಲ್ಲಿ 72 ಮಂದಿ ಆಶ್ರಯ ಪಡೆದಿದ್ದರು. ಕುಮಟಾದಲ್ಲಿ 22.18 ಸೆಂ.ಮೀ ಮತ್ತು ಕುಮಟಾ ತಾಲ್ಲೂಕಿನ ಕತಗಾಲದಲ್ಲಿ 15.93 ಸೆಂ.ಮೀ ಮಳೆ ಸುರಿದಿತ್ತು.

ಮಳೆಯ ಪರಿಣಾಮದಿಂದ ಜಿಲ್ಲೆಯ ವಿವಿಧೆಡೆ 2 ಮನೆಗಳು ಸಂಪೂರ್ಣ ಹಾನಿಗೀಡಾಗದ್ದರೆ, 13 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT