ಬೆಂಗಳೂರು: ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ನ.13ರಂದು ನಡೆಯಲಿರುವ ಉಪ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಇಬ್ಬರು ಮಾಜಿ ಮುಖ್ಯಮಂತ್ರಿ
ಗಳಿಗೆ ಚುನಾವಣೆ ಗೆಲುವು ಪ್ರತಿಷ್ಠೆಯಾಗಿದೆ.

ಕಗ್ಗಂಟಾಗಿ ಉಳಿದಿದ್ದ ಚನ್ನಪಟ್ಟಣ ದಿಂದ ಎನ್ಡಿಎ ಅಭ್ಯರ್ಥಿಯಾಗಿ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯಲಿದ್ದಾರೆ. ‘ನಿಖಿಲ್ ಸ್ಪರ್ಧೆಯಿಲ್ಲ; ಕಾರ್ಯಕರ್ತರನ್ನೇ ಕಣಕ್ಕೆ ಇಳಿಸುತ್ತೇವೆ’ ಎಂದು ಹೇಳಿದ್ದ ಜೆಡಿಎಸ್ ವರಿಷ್ಠರು ಕೊನೆಗೂ ಕುಟುಂಬ ರಾಜಕಾರಣದ ಮೊರೆಹೋಗಿದ್ದಾರೆ. ಶಿಗ್ಗಾವಿಯಿಂದ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಈ ಮಧ್ಯೆ ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್, ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಂ ಅವರು ಕಾಂಗ್ರೆಸ್ನಿಂದ ಮತ್ತು ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕೊನೇ ದಿನ.

ಸಿ.ಪಿ.ಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬೆನ್ನಲ್ಲೇ, ಬಿಜೆಪಿಗಿದ್ದ ಒತ್ತಡ ನಿವಾರಣೆ ಆಯಿತು. ಆದರೆ, ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಇಕ್ಕಟ್ಟಿಗೆ ಸಿಲುಕಿದ ಜೆಡಿಎಸ್ ನಾಯಕರು ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ತೀರ್ಮಾನದ ಮೂಲಕ ಗುರುವಾರ ಗೊಂದಲಕ್ಕೆ ತೆರೆ ಎಳೆದರು.

ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಜಯಮುತ್ತು ಅವರು ತಾವು ಸ್ಪರ್ಧಿಸುವುದಿಲ್ಲ ಎಂದು ಬುಧವಾರವೇ ಸ್ಪಷ್ಟಪಡಿಸಿದ್ದರು. ನಿಖಿಲ್ ಅವರೇ ಸ್ಪರ್ಧಿಸಬೇಕು ಎಂಬುದಾಗಿ ಜೆಡಿಎಸ್ ಕಾರ್ಯಕರ್ತರು ಪಟ್ಟುಹಿಡಿದಿದ್ದರು. ಎಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಜೆಡಿಎಸ್ ನಾಯಕರು ನಿಖಿಲ್ ಅವರ ಹೆಸರನ್ನು ಅಂತಿಮಗೊಳಿಸಿದರು. ಆ ಬಳಿಕ ನಿರ್ಧಾರವನ್ನು ಬಿಜೆಪಿ ನಾಯಕರಿಗೆ ತಿಳಿಸಲಾಯಿತು.

ತಮ್ಮ ಮಕ್ಕಳನ್ನು ಕಣಕ್ಕೆ ಇಳಿಸಿರುವ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಈ ಚುನಾವಣೆ ತಮ್ಮ ರಾಜಕೀಯ ಪ್ರಭಾವಳಿಯನ್ನು ತೋರಿಸಿ, ಪುತ್ರರನ್ನು ಗೆಲ್ಲಿಸಿಕೊಳ್ಳಲು ಪ್ರತಿಷ್ಠೆಯನ್ನು ಪಣಕ್ಕಿಡಬೇಕಾದ ಸವಾಲನ್ನು ಸೃಷ್ಟಿಸಿದೆ.

ಚನ್ನಪಟ್ಟಣವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ, ಎಚ್.ಡಿ. ಕುಮಾರಸ್ವಾಮಿ ಅವರನ್ನು ರಾಮನಗರ ಕ್ಷೇತ್ರದಿಂದ ಹೊರಗಟ್ಟಬೇಕು ಎಂಬ ಛಲಕ್ಕೆ ಬಿದ್ದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸುವ ಚುನಾವಣೆ ಇದಾಗಿದೆ. ಹಾಗೆಯೇ, ಅಧಿಕಾರದಲ್ಲಿದ್ದ ಪಕ್ಷ ಉಪ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂಬ ‘ಪರಂಪರೆ’ಯನ್ನು ಮುಂದುವರಿಸುವ ಸವಾಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದಿದೆ.

ನಿಖಿಲ್ ಹೆಸರು ಘೋಷಿಸಿದ ಯಡಿಯೂರಪ್ಪ

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರನ್ನೇ ಚನ್ನಪಟ್ಟಣ ಕ್ಷೇತ್ರಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಮೈತ್ರಿ ಪಕ್ಷಗಳು ಕಣಕ್ಕೆ ಇಳಿಸಿವೆ.

ಬೆಂಗಳೂರಿನಲ್ಲಿ ಸಭೆ ನಡೆಸಿದ ಜೆಡಿಎಸ್ ನಾಯಕರು ಚನ್ನಪಟ್ಟಣದ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಸುದೀರ್ಘ ಸಮಾಲೋಚನೆ ನಡೆಸಿ ನಿಖಿಲ್ ಹೆಸರನ್ನೇ ಅಂತಿಮಗೊಳಿಸಿದರು.

ಸಭೆಯ ನಂತರ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿಯ ಮನೆಯಲ್ಲಿ ಎರಡೂ ಪಕ್ಷಗಳ ಪ್ರಮುಖ ನಾಯಕರ ಸಭೆ ನಡೆಯಿತು. ಎಚ್.ಡಿ. ಕುಮಾರಸ್ವಾಮಿ, ಆರ್. ಅಶೋಕ, ಛಲವಾದಿ ನಾರಾಯಣಸ್ವಾಮಿ, ಸಿ.ಎನ್. ಅಶ್ವತ್ಥನಾರಾಯಣ, ಸಾ.ರಾ. ಮಹೇಶ್, ಸುರೇಶ್ ಬಾಬು ಭಾಗವಹಿಸಿದ್ದರು.

ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪ ಅವರು ನಿಖಿಲ್ ಕುಮಾರಸ್ವಾಮಿ ಹೆಸರು ಪ್ರಕಟಿಸಿದರು.

‘ನಿಖಿಲ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದ ಇದೆ. ಬಿಜೆಪಿ ಬೆಂಬಲ, ಜೆಡಿಎಸ್ ಬಲದಿಂದ ಗೆಲುವು ಖಚಿತ. ಎರಡೂ ಪಕ್ಷಗಳ ನಾಯಕರು ಒಟ್ಟಾಗಿ ಚುನಾವಣಾ ಪ್ರಚಾರ ನಡೆಸುತ್ತೇವೆ. ಪಕ್ಷಾಂತರ ಮಾಡಿದವರ ಬಗ್ಗೆ ಮಾತಾನಾಡುವುದಿಲ್ಲ. ಫಲಿತಾಂಶದ ಮೂಲಕ ಉತ್ತರ ಕೊಡುತ್ತೇವೆ’ ಎಂದು ಯಡಿಯೂರಪ್ಪ ಹೇಳಿದರು.

ಶಿಗ್ಗಾವಿ: ಕಾಂಗ್ರೆಸ್ನಲ್ಲಿ ಬಂಡಾಯದ ಬಿಸಿ

ಶಿಗ್ಗಾವಿಯಲ್ಲಿ ಯಾಸೀರ್ಅಹ್ಮದ್ ಖಾನ್ ಪಠಾಣ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ಗೆ ಬಂಡಾಯದ ಬಿಸಿ ತಟ್ಟಿದೆ.

ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಅಸಮಾಧಾನ ವ್ಯಕ್ತಪಡಿಸಿದ್ದು, ಶಿಗ್ಗಾವಿಯಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದಾರೆ. ‘ನನಗೆ ಟಿಕೆಟ್ ಕೈ ತಪ್ಪಿದೆ. ನನಗಾದ ಅನ್ಯಾಯವನ್ನು ಕಾರ್ಯಕರ್ತರ ಬಳಿ ಹೇಳುವೆ. ಅವರು ಏನು ತೀರ್ಮಾನಿಸುತ್ತಾರೋ, ಅದೇ ರೀತಿ ಮುಂದುವರಿಯುವೆ. ಪಕ್ಷೇತರರಾಗಿ ಸ್ಪರ್ಧಿಸಬೇಕೇ ಅಥವಾ ಬೇರೆಯವರನ್ನು ಬೆಂಬಲಿಸಬೇಕೇ ಎಂಬುದನ್ನು ನಿರ್ಧರಿಸುವೆ’ ಎಂದು ಸೈಯದ್ ಅಜ್ಜಂಪೀರ್ ಖಾದ್ರಿ ಹೇಳಿದರು.

ಲಿಂಗಾಯತ ಸಮುದಾಯದ ಸಾದರ ಉಪ ಪಂಗಡಕ್ಕೆ ಸೇರಿದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರನ್ನು ಎದುರಿಸಲು ಅದೇ ಸಮುದಾಯದ ಪಂಚಮಸಾಲಿ ಉಪ ಪಂಗಡದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ಕಾಂಗ್ರೆಸ್ನ ಸ್ಥಳೀಯ ಕೆಲವು ಮುಖಂಡರು ಒತ್ತಡ ಹೇರಿದ್ದರು. ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ತಮ್ಮ ಪತ್ನಿ ಶಿವಲೀಲಾ ಅಥವಾ ಮಗಳು ವೈಶಾಲಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ, ಕಾಂಗ್ರೆಸ್ ವರಿಷ್ಠರು ಮತ್ತೊಮ್ಮೆ ಅಲ್ಪಸಂಖ್ಯಾತ
(ಮುಸ್ಲಿಂ) ಅಭ್ಯರ್ಥಿಗೆ ಮಣೆ ಹಾಕಿದ್ದಾರೆ.

ಪರಿಷತ್ ಉಪಚುನಾವಣೆ ಬಿಜೆಪಿ ಗೆಲುವು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರನ್ನು 1697 ಮತಗಳ ಅಂತರದಿಂದ ಸೋಲಿಸಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ಉಪಚುನಾವಣೆ ಎದುರಾಗಿತ್ತು. ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

‘ಫಲಿತಾಂಶವು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಮತದಾರರು ಕೊಟ್ಟ ಉತ್ತರ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಬಿಜೆಪಿ ಭದ್ರಕೋಟೆಗಳು ಎಂಬುದು ಮತ್ತೆ ಸಾಬೀತಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.