ಯಾರನ್ನು ಸಂತುಷ್ಟಗೊಳಿಸಲು ಬಂಧಿಸುತ್ತೀರಿ?
‘ಬಿ.ಎಸ್.ಯಡಿಯೂರಪ್ಪ ಯಾರೊ ಒಬ್ಬ ವೆಂಕ ನಾಣಿ ಸೀನನಂತಹ ಸಾಮಾನ್ಯ ವ್ಯಕ್ತಿಯಲ್ಲ. ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ತಮ್ಮ ಜೀವನದ ಸಂಧ್ಯಾಕಾಲದಲ್ಲಿದ್ದಾರೆ. ಸ್ವಾಭಾವಿಕವಾಗಿಯೇ ಅವರಿಗೆ ತನುವಿನ ಅಡಚಣೆಗಳಿರುತ್ತವೆ. ಅಷ್ಟಕ್ಕೂ ನೀವು ಯಾರನ್ನು ಸಂತುಷ್ಟಗೊಳಿಸುವ ಸಲುವಾಗಿ ಬಂಧಿಸಲು ತವಕಿಸುತ್ತಿದ್ದೀರಿ’ ಎಂದು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಪ್ರಾಸಿಕ್ಯೂಷನ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಅರ್ಜಿದಾರರು ಈಗಾಗಲೇ ಒಮ್ಮೆ ನೋಟಿಸ್‌ಗೆ ಪ್ರತಿಯಾಗಿ ಹಾಜರಾಗಿದ್ದಾರೆ. ಎರಡನೇ ನೋಟಿಸ್‌ಗೆ ಸಮಯ ಕೇಳಿದ್ದು ಬರುತ್ತೇನೆ ಎಂದು ಪತ್ರ ಬರೆದಿದ್ದಾರೆ. ಇದನ್ನು ನೀವು ಗೌರವಿಸಬೇಕು. ಅವರೇನೂ ತಪ್ಪಿಸಿಕೊಂಡು ಹೋಗುವ ವ್ಯಕ್ತಿಯಲ್ಲ. ಅಷ್ಟಕ್ಕೂ ವಶದಲ್ಲಿ ಇರಿಸಿಕೊಂಡೇ ವಿಚಾರಣೆ ನಡೆಸಬೇಕಾದ ಅನಿವಾರ್ಯ ಆರೋಪದಲ್ಲಿ ಇದೆಯೇ? ಒಬ್ಬ ಮಾಜಿ ಮುಖ್ಯಮಂತ್ರಿಗೇ ಈ ರೀತಿಯ ಭೀತಿ ಸುತ್ತಿಕೊಂಡರೆ ಸಾಮಾನ್ಯರ ಗತಿಯೇನು? ದೂರುದಾರ ಮಹಿಳೆಯ ನಡೆಯ ಬಗ್ಗೆ ಸಮಗ್ರ ವಿವರ ಕೊಡಿ...’ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆದರು. ಇದಕ್ಕೆ ಪ್ರತಿಯಾಗಿ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ‘ತನಿಖೆ ಪ್ರಗತಿಯಲ್ಲಿದೆ. ನ್ಯಾಯಪೀಠ ಕೇಳುತ್ತಿರುವ ವಿವರಗಳನ್ನೆಲ್ಲಾ ಲಿಖಿತ ಆಕ್ಷೇಪಣೆಯಲ್ಲಿ ಸಲ್ಲಿಸಲು ಸಮಯ ನೀಡಬೇಕು’ ಎಂದು ಮನವಿ ಮಾಡಿದರು.