ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈಟ್ನರ್‌ ಕಪ್ಪುಚುಕ್ಕೆ ಅಳಿಸಿತೇ: ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

Published : 22 ಆಗಸ್ಟ್ 2024, 15:54 IST
Last Updated : 22 ಆಗಸ್ಟ್ 2024, 15:54 IST
ಫಾಲೋ ಮಾಡಿ
Comments

ಬೆಂಗಳೂರು: ‘ಸಿದ್ದರಾಮಯ್ಯ ಅವರು ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲ ಎನ್ನುತ್ತಾರೆ. ಹಾಗಿದ್ದರೆ ಅವರು ವೈಟ್ನರ್‌ ಹಾಕಿ, ಕಪ್ಪುಚುಕ್ಕೆ ತೆಗೆಯುವ ವ್ಯರ್ಥ ಪ್ರಯತ್ನ ಮಾಡಿದ್ದೇಕೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ 550 ಎಕರೆ ಜಮೀನು ಮಂಜೂರು ಮಾಡಿದ್ದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದ ಪೋಸ್ಟ್‌ಗಳಿಗೆ ಕುಮಾರಸ್ವಾಮಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಈ ಸಂಬಂಧ ‘ಎಕ್ಸ್‌’ನಲ್ಲಿ ದೀರ್ಘ ಪೋಸ್ಟ್‌ ಮಾಡಿರುವ ಅವರು, ‘ಸಾಯಿ ವೆಂಕಟೇಶ್ವರಕ್ಕೆ 550 ಎಕರೆ ಮಂಜೂರು ಮಾಡಿದ್ದೇನೆ ಎಂದು ಬೊಗಳೆ ಬಿಟ್ಟಿದ್ದೀರಿ. ನನ್ನ ಬರವಣಿಗೆ ಪೋರ್ಜರಿ ಆಗಿದೆ. ಪತ್ರಿಕೆಗಳ ವರದಿಗೆ ನಾನು ಉತ್ತರ ಕೊಡುತ್ತೇನೆ. ಪಲಾಯನ ನನ್ನ ಜಾಯಮಾನವಲ್ಲ. ಆದರೆ, ಆ ವರದಿಯನ್ನೇ ನೆತ್ತಿ ಮೇಲಿಟ್ಟುಕೊಂಡು ಉಪ್ಪಿನಕಾಯಿ ಚಪ್ಪರಿಸುವ ದೈನೇಸಿ ಸ್ಥಿತಿ ನಿಮಗೇಕೆ’ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

‘ಮುಡಾದಲ್ಲಿ ನೀವು ಮತ್ತು ನಿಮ್ಮ ಕುಟುಂಬದವರು ಸರ್ಕಾರಿ ಭೂಮಿಯನ್ನು ಹೇಗೆಲ್ಲಾ ಕಬಳಿಸಿದ್ದೀರಿ ಎಂಬುದಕ್ಕೆ ದಂಡಿದಂಡಿ ದಾಖಲೆಗಳೇ ಇವೆ. ನನ್ನ ಪುರಾಣಗಳು ಕಂತುಗಳಲ್ಲಿ ಬರುತ್ತದೆ ಎಂದಿದ್ದೀರಿ. ನಿಮ್ಮ ಪುರಾಣಗಳನ್ನು ಪ್ಯಾನ್‌ ಇಂಡಿಯಾ ಸಿನಿಮಾ ಮಾಡಬಹುದು’ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. 

‘ಬೇಲಿಕೇರಿಯಲ್ಲಿ ಅದಿರು ಕದ್ದವರ ಜತೆಗಿನ ನಿಮ್ಮ ‘ಸಿದ್ದಹಸ್ತ’ ಶಾಮೀಲಾಗಿರುವ ಗಣಿ ಪುರಾಣವನ್ನು ಬಿಚ್ಚಿಟ್ಟರೆ, ನಿಮ್ಮ ಬಂಧನಕ್ಕೆ ಮನೆಯ ಮುಂದೆ ಕಾನ್‌ಸ್ಟೆಬಲ್‌ಗಳು ಸಾಲುಗಟ್ಟಿ ನಿಲ್ಲುತ್ತಾರೆ’ ಎಂದಿದ್ದಾರೆ.

‘ಎಚ್‌ಡಿಕೆ ಭ್ರಷ್ಟಾಚಾರದ ಮೊದಲ ಅಧ್ಯಾಯ’

‘ಎಚ್‌.ಡಿ.ಕುಮಾರಸ್ವಾಮಿಯವರೇ, ನೋಂದಣಿಯೇ ಆಗದ ಕಂಪನಿಗೆ 550 ಎಕರೆ ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದೀರಿ. ಈಗ ‘ಸಹಿ ನನ್ನದಲ್ಲ, ಯಾರೋ ಪೋರ್ಜರಿ ಮಾಡಿದ್ದಾರೆ’ ಎಂದು ಕಣ್ಣೀರು ಸುರಿಸುತ್ತಿದ್ದೀರಿ. ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರದ ಪುರಾಣದ ಮೊದಲ ಅಧ್ಯಾಯ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮುಂದೆ ಇನ್ನೇನೆಲ್ಲಾ ಬಹಿರಂಗವಾಗಲಿವೆಯೋ’ ಎಂದು ಸಿದ್ದರಾಮಯ್ಯ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ನೋಂದಣಿಯೇ ಆಗದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಕುಮಾರಸ್ವಾಮಿ 550 ಎಕರೆ ಮಂಜೂರು ಮಾಡಿದ್ದರು ಎಂದು ‘ಪ್ರಜಾವಾಣಿ’ ಯಲ್ಲಿ ಪ್ರಕಟವಾಗಿದ್ದ ವರದಿಯನ್ನು ಸಿದ್ದರಾಮಯ್ಯ ತಮ್ಮ ಪೋಸ್ಟ್‌ನಲ್ಲಿ ಲಗತ್ತಿಸಿದ್ದಾರೆ. ‘ಲೋಕಾಯುಕ್ತವೇ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವುದೊಂದೇ ಬಾಕಿ. ನರೇಂದ್ರ ಮೋದಿ ಬಂದು ನಿಮ್ಮನ್ನು ರಕ್ಷಿಸುತ್ತಾರೆಂದು ಕಾದು ಕೂತಿದ್ದೀರಾ? ತಮ್ಮ ಮುಖ್ಯಮಂತ್ರಿಯನ್ನೇ ಜೈಲಿಗೆ ಕಳಿಸಿದ್ದ ಬಿಜೆಪಿ ನಿಮ್ಮ ರಕ್ಷಣೆಗೆ ಬರುತ್ತದೆಯೇ’ ಎಂದು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT