ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಬ್ಬರಿ ಖರೀದಿಗೆ ಚೀಲ ಕೊರತೆ!

ಖರೀದಿ ಪ್ರಕ್ರಿಯೆ ಸ್ಥಗಿತ: ಬೆಳೆಗಾರರು ಕಂಗಾಲು
Published 23 ಮೇ 2024, 22:30 IST
Last Updated 23 ಮೇ 2024, 22:30 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ/ ಹಿರೀಸಾವೆ: ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಗೋಣಿಚೀಲಗಳ ಕೊರತೆಯಿಂದಾಗಿ ಕನಿಷ್ಠ ಬೆಂಬಲ ಬೆಲೆಯಡಿ ಉಂಡೆ ಕೊಬ್ಬರಿ ಖರೀದಿಸುವ ಪ್ರಕ್ರಿಯೆಯು ಗುರುವಾರ ಸ್ಥಗಿತಗೊಂಡಿದ್ದು, ಬೆಳೆಗಾರರು ತೊಂದರೆಗೆ ಸಿಲುಕಿದ್ದಾರೆ. 

ಕೊಬ್ಬರಿ ತುಂಬಿದ ಸುಮಾರು 100 ವಾಹನಗಳು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಆವರಣದಲ್ಲಿಯೇ ನಿಂತಿವೆ.

ಪ್ರತಿ ಕ್ವಿಂಟಲ್ ಕೊಬ್ಬರಿಗೆ ಕೇಂದ್ರ ಸರ್ಕಾರದ ₹12 ಸಾವಿರ ಮತ್ತು ರಾಜ್ಯ ಸರ್ಕಾರದ ₹1,500 ಪ್ರೋತ್ಸಾಹಧನ ಸೇರಿ ₹ 13,500 ಬೆಲೆ ಸಿಗುತ್ತಿದೆ.

‘ನಿತ್ಯ 30 ರೈತರಿಂದ ಅಂದಾಜು 1,500 ಚೀಲದಷ್ಟು ಕೊಬ್ಬರಿ ಖರೀದಿಸಲಾಗುತ್ತದೆ. ಎಷ್ಟು ಚೀಲಗಳು ಬೇಕಾಗುತ್ತವೆ ಎಂಬುದು ಅಧಿಕಾರಿಗಳಿಗೆ ಗೊತ್ತಿರಬೇಕು. ಮುಂಜಾಗ್ರತಾ ಕ್ರಮವಾಗಿ ಚೀಲಗಳನ್ನು ತರಿಸದಿರುವುದರಿಂದ ದಿನಗಟ್ಟಲೇ ಕಾಯುವಂತಾಗಿದೆ’ ಎಂದು ರೈತರು ದೂರುತ್ತಿದ್ದಾರೆ.

‘ಊರಿನಿಂದ ಟ್ರ್ಯಾಕ್ಟರ್, ಆಟೊ ಮತ್ತು ಸರಕು ಸಾಗಣೆ ಆಟೊಗಳಲ್ಲಿ ಕೊಬ್ಬರಿ ತಂದಿದ್ದೇವೆ. ನಿತ್ಯ ಟ್ರ್ಯಾಕ್ಟರ್‌ಗೆ ₹2,500ರಿಂದ ₹3,ಸಾವಿರ, ಆಟೊಗೆ ₹1,500 ಮತ್ತು ಸರಕು ಸಾಗಣೆ ಆಟೊಗೆ ₹2,500 ಬಾಡಿಗೆ ಕೊಡಬೇಕು. ಕೊಬ್ಬರಿ ಎಷ್ಟು ದಿನ ಗಾಡಿಯಲ್ಲಿ ಉಳಿಯುತ್ತದೆಯೋ ಅಷ್ಟೂ ದಿನದ ಬಾಡಿಗೆ ಹೊರೆ ಹೊರಬೇಕು. ಚಾಲಕರು ಮತ್ತು ನಮ್ಮ ಊಟ, ತಿಂಡಿಯ ಖರ್ಚು ಮಿತಿ ಮೀರುತ್ತಿದೆ’ ಎಂದು ಬೆಳೆಗಾರರು ಅಲವತ್ತುಕೊಂಡರು.

‘ನಾಫೆಡ್‌ನಿಂದ ಚೀಲಗಳನ್ನು ಪೂರೈಸಿಲ್ಲ. ಸರದಿಯಂತೆ ರೈತರು ಕೊಬ್ಬರಿ ತಂದರೂ ಮಾರುವ ಪರಿಸ್ಥಿತಿ ಇಲ್ಲ. ಲಾರಿಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ’ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ. ರಘು.

‘ಎರಡು ತಿಂಗಳ ಹಿಂದೆ ನೂಕುನುಗ್ಗಲಿನಲ್ಲಿ ನೋಂದಣಿ ಮಾಡಿಸಿದ್ದೆವು. ಈಗ ಕೊಬ್ಬರಿಯೊಂದಿಗೆ ದಿನಗಟ್ಟಲೆ ಕಾಯಬೇಕಿದೆ. ನೀರು, ಊಟ, ಶೌಚಾಲಯ, ಬೆಳಕಿನ ವ್ಯವಸ್ಥೆ ಇಲ್ಲ. ಮಳೆ ಬಂದರೆ ಕೊಬ್ಬರಿ ತೇವಗೊಳ್ಳುತ್ತದೆ. ತೂಕ ಆಗುವವರೆಗೆ ರೈತರೇ ಹೊಣೆಗಾರರು. ಸರ್ಕಾರ ಮತ್ತು ಜನಪ್ರತಿನಿಧಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ’ ಎಂದು ರೈತ ಅಂತನಹಳ್ಳಿ ಧರಣೇಶ್ ದೂರಿದರು.

ಪ್ರತಿಭಟನೆಯ ಎಚ್ಚರಿಕೆ:

ಹೆಸರು ನೋಂದಣಿಯ ಹಿರಿತನದ ಆಧಾರದಲ್ಲಿ ಕೊಬ್ಬರಿ ಖರೀದಿಸಬೇಕು. ಆದರೆ,  ಮಧ್ಯವರ್ತಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ದೂರುಗಳೂ ಇವೆ. ಕೂಡಲೇ ಚೀಲಗಳನ್ನು ತರಿಸಿ ಕ್ರಮಬದ್ದವಾಗಿ ಖರೀದಿಗೆ ಮುಂದಾಗದಿದ್ದರೆ ಶುಕ್ರವಾರ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.

ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ರೈತರು ಉಂಡೆ ಕೊಬ್ಬರಿ ಮಾರಾಟಕ್ಕೆ ಕಾದು ನಿಂತಿದ್ದರು.
ಹಿರೀಸಾವೆ ಹೋಬಳಿಯ ಬೂಕನಬೆಟ್ಟದಲ್ಲಿ ರೈತರು ಉಂಡೆ ಕೊಬ್ಬರಿ ಮಾರಾಟಕ್ಕೆ ಕಾದು ನಿಂತಿದ್ದರು.
ಚನ್ನರಾಯಪಟ್ಟಣದ ಕೊಬ್ಬರಿ ಖರೀದಿ ಕೇಂದ್ರದ ಎದುರು ಗುರುವಾರ ನಿಂತಿದ್ದ ವಾಹನಗಳು.
ಚನ್ನರಾಯಪಟ್ಟಣದ ಕೊಬ್ಬರಿ ಖರೀದಿ ಕೇಂದ್ರದ ಎದುರು ಗುರುವಾರ ನಿಂತಿದ್ದ ವಾಹನಗಳು.
ಮೂರು ದಿನದಿಂದ ಕೊಬ್ಬರಿ ಮಾರಲು ಕಾಯುತ್ತಿರುವೆ. ಮಳೆಯಿಂದ ಕೊಬ್ಬರಿ ರಕ್ಷಿಸಿಕೊಳ್ಳಲು ಕಷ್ಟಪಡುತ್ತಿದ್ದೇವೆ. ಊಟ ನೀರು ಸಹ ಸಿಗುತ್ತಿಲ್ಲ. ನಮ್ಮ ಕಷ್ಟ ಕೇಳುವವರಿಲ್ಲ
ಕೃಷ್ಣಪ್ಪ ರೈತ ಹೊಸಹಳ್ಳಿ
ದಿನಕ್ಕೆ 30ರಿಂದ 40 ರೈತರಿಂದ ಕೊಬ್ಬರಿ ತೆಗೆದುಕೊಳ್ಳುತ್ತೇವೆ. ನಿತ್ಯ 1300 ಚೀಲ ಬೇಕು. ಕೊರತೆ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ
ಗಂಗರಾಜು ಎಪಿಎಂಸಿ ಅಧಿಕಾರಿ ಹಿರೀಸಾವೆ

ಕೋಲ್ಕತ್ತದಿಂದ ಚೀಲ ಬಂದಿಲ್ಲ! ‘ಚೀಲಗಳು ಮುಗಿದಿರುವುದರಿಂದ ಬಾಗೂರು ಹಿರೀಸಾವೆ ಮತ್ತು ಚನ್ನರಾಯಪಟ್ಟಣ ಕೇಂದ್ರದಲ್ಲಿ ಖರೀದಿಯನ್ನು ಗುರುವಾರ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ’ ಎಂದು ಕೊಬ್ಬರಿ ಖರೀದಿ ಕೇಂದ್ರ ಅಧಿಕಾರಿ ಕೆ.ಆರ್. ಕಾವ್ಯಾ ಹೇಳಿದರು. ‘ಕೋಲ್ಕತ್ತದಿಂದ ಚೀಲಗಳನ್ನು ತರಿಸಲು ಇಂಡೆಂಟ್ ಹಾಕಲಾಗಿದೆ. ಅದುವರೆಗೆ ಸ್ಥಳೀಯವಾಗಿ ಗಂಡಸಿಯಿಂದ ಎರಡು ಸಾವಿರ ಮತ್ತು ಕುಶಾಲನಗರದಿಂದ 15 ಸಾವಿರ ಚೀಲಗಳನ್ನು ತರಿಸಲಾಗುವುದು. ನಂತರ ಖರೀದಿ ಆರಂಭಿಸಲಾಗುವುದು’ ಎಂದರು.

ಚಿತ್ರದುರ್ಗ: 20 ಸಾವಿರ ಚೀಲ ಬೇಕು ಚಿತ್ರದುರ್ಗ: ಜಿಲ್ಲೆಯಲ್ಲಿಯೂ ಕೊಬ್ಬರಿ ಖರೀದಿಸಲು ಚೀಲಗಳ ಕೊರತೆ ಎದುರಾಗಿದೆ. ಖರೀದಿ ಕೇಂದ್ರಗಳಲ್ಲಿರುವ ಚೀಲಗಳು ಶುಕ್ರವಾರದ ವೇಳೆಗೆ ಖಾಲಿಯಾಗುವ ಸಾಧ್ಯತೆ ಇದೆ. ಜಿಲ್ಲೆಯ ಹಿರಿಯೂರು ಚಿತ್ರದುರ್ಗ ಹೊಳಲ್ಕೆರೆ ಹೊಸದುರ್ಗ ಕೇಂದ್ರಗಳಲ್ಲಿ ಏಪ್ರಿಲ್‌ 3ರಿಂದ ಖರೀದಿ ಪ್ರಾರಂಭಿಸಲಾಗಿದೆ. ಜೂನ್‌ 14ಕ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈಗಾಗಲೇ 90000 ಚೀಲಗಳು  ಖಾಲಿಯಾಗಿವೆ. ಹೊಸದುರ್ಗಕ್ಕೆ ಇನ್ನೂ 20000 ಚೀಲಗಳ ಅವಶ್ಯಕತೆಯಿದೆ. ಟೆಂಡರ್‌ ಸಮಸ್ಯೆ ಕಾರಣಕ್ಕೆ ಸರಬರಾಜು ವಿಳಂಬವಾಗಿದೆ ಎಂದು ಖರೀದಿ ಕೇಂದ್ರದ ಸಿಬ್ಬಂದಿ ತಿಳಿಸಿದರು. ‘ಜಿಲ್ಲೆಯ ಆರು ಕೇಂದ್ರಗಳಲ್ಲಿ 3358 ರೈತರು 42112 ಕ್ವಿಂಟಲ್‌ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಿದ್ದಾರೆ. ಈಗಾಗಲೇ ಶೇ 70ರಷ್ಟು ಖರೀದಿ ಪೂರ್ಣಗೊಂಡಿದೆ. ಚೀಲದ ಸಮಸ್ಯೆ ಒಂದೆರಡು ದಿನದಲ್ಲಿ ಬಗೆಹರಿಯಲಿದೆ’ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಜಿಲ್ಲಾ ಶಾಖಾ ವ್ಯವಸ್ಥಾಪಕ ಬಸವೇಶ ಎಸ್‌. ನಾಡಿಗರ್‌ ತಿಳಿಸಿದರು.

ತುಮಕೂರು: ಶೇ 62ರಷ್ಟು ಖರೀದಿ ಪೂರ್ಣ- ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಪ್ರಕ್ರಿಯೆಯು ಸ್ವಲ್ಪಮಟ್ಟಿಗೆ ಚುರುಕು ಪಡೆದುಕೊಂಡಿದ್ದು ಇಲ್ಲಿಯವರೆಗೆ ರೈತರಿಂದ 196549 ಕ್ವಿಂಟಲ್ ಖರೀದಿಸಲಾಗಿದೆ. ಏಪ್ರಿಲ್ 1ರಿಂದ ಜಿಲ್ಲೆಯಲ್ಲಿ ಖರೀದಿ ಆರಂಭವಾಗಿದ್ದು ಏಪ್ರಿಲ್ ಕೊನೆಯ ವೇಳೆಗೆ ಶೇ 30ರಷ್ಟು ಖರೀದಿಸಲಾಗಿತ್ತು. ಪ್ರಸಕ್ತ ತಿಂಗಳಲ್ಲಿ ಅಲ್ಪ ಪ್ರಮಾಣದಲ್ಲಿ ಚುರುಕು ಪಡೆದುಕೊಂಡಿದ್ದು ಒಟ್ಟು ನೋಂದಣಿಯಲ್ಲಿ ಶೇ 62ರಷ್ಟು ಖರೀದಿಸಲಾಗಿದೆ. ಇನ್ನೂ 121376 ಕ್ವಿಂಟಲ್ ಖರೀದಿಸಬೇಕಿದೆ. ಜೂನ್ ಅಂತ್ಯದ ವೇಳೆಗೆ ಖರೀದಿ ಪೂರ್ಣಗೊಳ್ಳಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಜಿಲ್ಲೆಯಾದ್ಯಂತ 27212 ರೈತರು 317917 ಕ್ವಿಂಟಲ್‌ ಮಾರಾಟಕ್ಕೆ ನೋಂದಣಿ ಮಾಡಿಕೊಂಡಿದ್ದು 26 ಕೇಂದ್ರಗಳಲ್ಲಿ ಖರೀದಿ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT