ಖರ್ಗೆ ಭೇಟಿಗೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ: ಸತೀಶ ಜಾರಕಿಹೊಳಿ
ನಿಪ್ಪಾಣಿ/ಬೆಳಗಾವಿ: ‘ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮುಡಾ ಪ್ರಕರಣದ ಬಗ್ಗೆ ಚರ್ಚಿಸಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಮುಖ್ಯಮಂತ್ರಿ ಕೂಗು ಎದ್ದಿಲ್ಲ ಮತ್ತು ರಾಜಕಾರಣದಲ್ಲಿ ಹೊಸ ಬೆಳವಣಿಗೆಯ ಲಕ್ಷಣಗಳೂ ಇಲ್ಲ’ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಇಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಖರ್ಗೆ ಅವರನ್ನು ಸಹಜವಾಗಿ ಭೇಟಿಯಾಗಿದ್ದು, ರಾಜಕೀಯವಾಗಿ ನಮ್ಮ ಸಮಸ್ಯೆಗಳನ್ನು ಚರ್ಚಿಸಿದ್ದೇವೆ’ ಎಂದರು. ‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷಗಳು ಒತ್ತಡ ತರುತ್ತಿವೆಯೇ ಹೊರತು ನಮ್ಮ ಪಕ್ಷ ಅಲ್ಲ. ನಾವು ಕಾನೂನು ರೀತಿ ಹೋರಾಡಲು ತೀರ್ಮಾನಿಸಿದ್ದೇವೆ. ಇ.ಡಿಯವರು ಪ್ರಕರಣ ದಾಖಲಿಸಿ ತನಿಖೆ ಮಾಡಿ, ಸತ್ಯಾಂಶ ಹೊರತರಲಿ. ಇದರಿಂದ ಏನೂ ತೊಂದರೆ ಇಲ್ಲ’ ಎಂದರು. ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ನಮ್ಮ ಪಕ್ಷದ ಸರ್ವೋಚ್ಛ ನಾಯಕರಾದ ಖರ್ಗೆ ಅವರನ್ನು ಕೆಲಸವಿದ್ದಾಗ, ಭೇಟಿ ಆಗುವುದು ಸಹಜ. ಸತೀಶ ಜಾರಕಿಹೊಳಿ ಅವರ ಭೇಟಿಯಾಗಿದ್ದರಲ್ಲಿ ವಿಶೇಷ ಇಲ್ಲ’ ಎಂದರು.