ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರೆಯಲ್ಲಿ ಮಕ್ಕಳ ಕಲರವ

Published : 6 ಅಕ್ಟೋಬರ್ 2024, 10:59 IST
Last Updated : 6 ಅಕ್ಟೋಬರ್ 2024, 10:59 IST
ಫಾಲೋ ಮಾಡಿ
Comments

ಮೈಸೂರು: ವೈವಿಧ್ಯಮಯ ನೃತ್ಯ ಪ್ರದರ್ಶನ. ಚಿಣ್ಣರ ಪ್ರತಿಭೆ ಅನಾವರಣ. ಗಮನಸೆಳೆದ ಶೈಕ್ಷಣಿಕ ವಸ್ತು ಪ್ರದರ್ಶನ. ಸಾಧಕರಿಗೆ ಸನ್ಮಾನ. ಪೋಷಕರ ಕರತಾಡನ.

–ನಗರದ ಕಲಾಮಂದಿರದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ–2024 ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿಯಿಂದ ಭಾನುವಾರ ನಡೆದ ಮಕ್ಕಳ ದಸರಾದಲ್ಲಿ ಕಂಡಬಂದ ನೋಟಗಳಿವು.

ದಸರಾ ಸಂಭ್ರಮದಲ್ಲಿ ಮಕ್ಕಳು ವಿವಿಧ ಕಲಾಪ್ರಾಕಾರಗಳ ನೃತ್ಯ ರೂಪಕ ಪ್ರದರ್ಶಿಸಿ ನೋಡುಗರಿಗೆ ರಸದೌತಣ ಉಣಬಡಿಸಿದರು. ನಾನಾ ಬಗೆಯ ವೇಷಭೂಷಣ ಧರಿಸಿ ಗಮನಸೆಳೆದರು.

ನೃತ್ಯ ವೈಭವ, ಜಾನಪದ ಗೀತೆಗಳ ಸಮೂಹ ಗಾಯನ, ಮಿಮಿಕ್ರಿ, ವಿಜ್ಞಾನ ನಾಟಕ, ದೇಶಭಕ್ತಿ ಗೀತೆ ಗಾಯನ, ಭರತನಾಟ್ಯ ಸೇರಿದಂತೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ನೆರೆದಿದ್ದವರ ಮನರಂಜಿಸಿದರು.

ಶೈಕ್ಷಣಿಕ ವಸ್ತುಪ್ರದರ್ಶನ: ಎಚ್‌.ಡಿ.ಕೋಟೆ ತಾಲ್ಲೂಕಿನಿಂದ ಸಸ್ಯ ಸಿರಿ (ಔಷಧ ಸಸ್ಯಗಳು), ಹುಣಸೂರು ತಾಲ್ಲೂಕಿನಿಂದ ಶಿಕ್ಷಣ ಇಲಾಖೆಯ ಪ್ರೋತ್ಸಾಹದಾಯಕ ಯೋಜನೆಗಳು ಮತ್ತು ಕಾರ್ಯಕ್ರಮಗಳು, ಕೆ.ಆರ್.ನಗರ ತಾಲ್ಲೂಕಿನಿಂದ ಸುಗ್ಗಿ ಸಿರಿ (ಸಿರಿ ಧಾನ್ಯಗಳ ಮಹತ್ವ ಪೌಷ್ಟಿಕ ಆಹಾರ), ಮೈಸೂರು ಉತ್ತರದಿಂದ ಕರ್ನಾಟಕದ ಜಾನಪದ ಕಲೆಗಳು, ಮೈಸೂರು ದಕ್ಷಿಣದಿಂದ ಮೈಸೂರು ರಾಜರ ಪರಂಪರೆ, ಮೈಸೂರು ತಾಲ್ಲೂಕಿನಿಂದ ವಿಜ್ಞಾನ ಮತ್ತು ತಂತ್ರಜ್ಞಾನ, ನಂಜನಗೂಡು ತಾಲ್ಲುಕಿನಿಂದ ನಾವೀನ್ಯಯುತವಾದ ಗಣಿತ ಮತ್ತು ವಿಜ್ಞಾನ ಪ್ರಯೋಗ ವಸ್ತುಪ್ರದರ್ಶನ ನಡೆಯಿತು.

ಪಿರಿಯಾಪಟ್ಟಣ ತಾಲ್ಲೂಕಿನಿಂದ ಕರ್ನಾಟಕ ಇತಿಹಾಸ, ತಿ.ನರಸೀಪುರ ತಾಲ್ಲೂಕಿನಿಂದ ಮೈಸೂರಿನ ವಿಶೇಷತೆ, ನೇತಾಜಿ ಸುಭಾಷ್ ಚಂದ್ರಬೋಸ್‌ ಆವಾಸೀಯ ಶಾಲೆಯಿಂದ ಕರಕುಶಲ ಕಲೆಗಳ ಪ್ರದರ್ಶನ, ಕೆ.ಆರ್.ನಗರ, ನಂಜನಗೂಡು, ಹುಣಸೂರು ಮತ್ತು ತಿ.ನರಸೀಪುರ ತಾಲ್ಲೂಕಿನ ಕಸ್ತೂರಬಾ ಗಾಂಧಿ ಬಾಲಿಕ ವಿದ್ಯಾಲಯದಿಂದ ವಿವಿಧ ಕರಕುಶಲ ವಸ್ತುಗಳ ಪ್ರದರ್ಶನ ಗಮನಸೆಳೆಯಿತು.

‘ಮಕ್ಕಳ ದಸರಾದಲ್ಲಿ ಪಾಲ್ಗೊಂಡಿರುವುದಕ್ಕೆ ಖುಷಿ ಇದೆ. ಪ್ರದರ್ಶನದಲ್ಲಿ ಎಲ್ಲರೂ ನಾನು ನಿರ್ಮಿಸಿದ ಡ್ರೋನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರತಿಭೆ ಅನಾವರಣಕ್ಕೆ ಇದೊಂದು ವೇದಿಕೆಯಾಗಿದೆ’ ಎಂದು ಹೂಟಗಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿ ರಾಜೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶಾಸಕ ಟಿ.ಎಸ್‌.ಶ್ರೀವತ್ಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಡಿಡಿಪಿಐ ಎಸ್‌.ಟಿ. ಜವರೇಗೌಡ, ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ ನಿಂಗರಾಜು, ಉಪ ವಿಶೇಷ ಅಧಿಕಾರಿ ವಿ.ಪ್ರಿಯದರ್ಶಿನಿ ಉಪಸ್ಥಿತರಿದ್ದರು.

‘ದೇವರಿಗಿಂತ ಮಕ್ಕಳ ಸೇವೆ ಮಾಡುವೆ’

ಮೈಸೂರು: ‘ದೇವರ ಪೂಜೆ ಮಾಡುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮಕ್ಕಳ ಸೇವೆ ಮಾಡುತ್ತೇವೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸರ್ಕಾರಿ ಶಾಲಾ ಮಕ್ಕಳಿಗೆ ಎಲ್ಲವನ್ನೂ ಸರ್ಕಾರ ಉಚಿತವಾಗಿ ನೀಡುತ್ತಿದೆ. ಪೋಷಕರು ಸರ್ಕಾರಿ ಶಾಲೆಗಳನ್ನು ನಂಬಬೇಕು. ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಬೇಕು’ ಎಂದು ಕೋರಿದರು.

‘ನಮ್ಮ ಜೀವನಕ್ಕೆ ಒಳ್ಳೆಯ ದಿಕ್ಕು ತೋರಿಸಲು ಗುರುಗಳಿಂದ ಮಾತ್ರ ಸಾಧ್ಯ. ಅಂತಹ ಕೆಲಸವನ್ನು ಸರ್ಕಾರಿ ಶಾಲಾ ಶಿಕ್ಷಕರು ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಊಟ ನೀಡುವುದು ದೇವರಿಗೆ ನೈವೇದ್ಯ ಇಟ್ಟಂತೆ ಎಂದು ಭಾವಿಸಿದ್ದೇನೆ. ಉತ್ತಮ ಶಿಕ್ಷಕರು ಇರುವುದು ಸರ್ಕಾರಿ ಶಾಲೆಯಲ್ಲಿ ಮಾತ್ರ’ ಎಂದು ತಿಳಿಸಿದರು.

‘ರಾಜ್ಯದಲ್ಲಿ 40ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆ ಇದೆ. 57 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಿಸುತ್ತಿದ್ದೇವೆ. ಇದೀಗ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಮಾತು ಕೊಟ್ಟಿದ್ದೇವೆ; ಮೊಟ್ಟೆ ನೀಡುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ನಾನು ಬಂದ ಮೇಲೆ 12,500 ಶಿಕ್ಷಕರ ನೇಮಕಾತಿ ಮಾಡಲಾಗಿದೆ. ‌ಕಲ್ಯಾಣ ಕರ್ನಾಟಕ ಶಿಕ್ಷಣದಲ್ಲಿ ಬಹಳ ಹಿಂದುಳಿದೆ. ಮುಂದಿನ 10 ವರ್ಷದಲ್ಲಿ ಅದು ರಾಜ್ಯದಲ್ಲೇ ಶಿಕ್ಷಣದಲ್ಲಿ ಮೊದಲನೇ ಸ್ಥಾನಕ್ಕೆ ಬರುತ್ತದೆ. ಅಲ್ಲದೆ, ಎಲ್‌ಕೆಜಿ, ಯುಕೆಜಿ ತರಗತಿ ಆರಂಭ ಮಾಡಿದ್ದೇವೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದರು.

‘ಮಕ್ಕಳು ಚೆನ್ನಾಗಿ ಓದಬೇಕು. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ದೇಶದಲ್ಲಿ ಜಾತಿ, ಧರ್ಮದ ವ್ಯವಸ್ಥೆ ರಾಜಕಾರಣಿಗಳಿಂದ ಹಾಳಾಗಿದೆ. ಅದನ್ನೆಲ್ಲ ನೀವು (ಮಕ್ಕಳು) ಸರಿಪಡಿಸಬೇಕು. ಇದು ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT