ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಟಿ20 ವಿಶ್ವಕಪ್: ಭಾರತದ ಗೆಲುವಿಗೆ 106 ರನ್‌ ಗುರಿ ನೀಡಿದ ಪಾಕಿಸ್ತಾನ

Published : 6 ಅಕ್ಟೋಬರ್ 2024, 10:36 IST
Last Updated : 6 ಅಕ್ಟೋಬರ್ 2024, 10:36 IST
ಫಾಲೋ ಮಾಡಿ
Comments

ದುಬೈ: ಮಹಿಳೆಯರ ಟಿ20 ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ಗೆಲುವಿಗೆ 106 ರನ್‌ಗಳ ಸಾಧಾರಣ ಗುರಿ ನೀಡಿದೆ.

ದುಬೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಫಾತಿಮಾ ಸನಾ ಪಡೆ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 105 ರನ್‌ ಗಳಿಸಿದೆ.

ಭಾರತದ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಆರಂಭಿಕ ಬ್ಯಾಟರ್‌ ಗುಲ್‌ ಫಿರೋಜಾ ಅವರು ಖಾತೆ ತೆರೆಯುವ ಮುನ್ನವೇ, ವೇಗಿ ವೇಗಿ ರೇಣುಕಾ ಠಾಕೂರ್‌ ಸಿಂಗ್‌ ಮೊದಲ ಓವರ್‌ನಲ್ಲೇ ಪೆವಿಲಿಯನ್‌ಗೆ ಅಟ್ಟಿದರು.

ನಂತರ ಬಂದ ಸಿದ್ರಾ ಅಮಿನ್‌ (8) ಹೆಚ್ಚು ಹೊತ್ತು ನಿಲ್ಲಲು ದೀಪ್ತಿ ಶರ್ಮಾ ಬಿಡಲಿಲ್ಲ. ಇದರೊಂದಿಗೆ, ಪಾಕ್‌ ಬ್ಯಾಟರ್‌ಗಳ ಪೆವಿಲಿಯನ್‌ ಪರೇಡ್‌ ಆರಂಭವಾಯಿತು. ನಿದಾ ದರ್‌ (28 ರನ್‌) ಹೊರತುಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿಬರಲಿಲ್ಲ.

ಮಧ್ಯಮ ವೇಗಿ ಅರುಂಧತಿ ರೆಡ್ಡಿ ಮೂರು ವಿಕೆಟ್‌ ಪಡೆದರೆ, ಕನ್ನಡತಿ ಶ್ರೇಯಂಕಾ ಪಾಟೀಲ್‌ ಎರಡು ವಿಕೆಟ್‌ ಉರುಳಿಸಿದರು. ರೇಣುಕಾ, ದೀಪ್ತಿ ಹಾಗೂ ಆಶಾ ಶೋಬನಾ ತಲಾ ಒಂದೊಂದು ವಿಕೆಟ್‌ ಕಿತ್ತರು.

ಭಾರತಕ್ಕೆ ಗೆಲ್ಲುವ ಒತ್ತಡ

ಟೂರ್ನಿಯಲ್ಲಿ 'ಬಿ' ಗುಂಪಿನಲ್ಲಿ ಭಾರತ ಹಾಗೂ ಪಾಕಿಸ್ತಾನದೊಂದಿಗೆ, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ ತಂಡಗಳು ಇವೆ. ಗುಂಪು ಹಂತದಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವ ತಂಡಗಳು ಸೆಮಿಫೈನಲ್‌ಗೆ ಪ್ರವೇಶ ಪಡೆಯಲಿವೆ.

ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ‌ಹೀನಾಯವಾಗಿ ಸೋಲು ಕಂಡಿರುವ ಟೀಂ ಇಂಡಿಯಾ, ಉಳಿದೆಲ್ಲ ಪಂದ್ಯಗಳನ್ನೂ ಗೆಲ್ಲುವ ಒತ್ತಡದಲ್ಲಿ ಆಡುತ್ತಿದೆ. ಆದರೆ, ಮೊದಲ ಪಂದ್ಯದಲ್ಲಿ ಶ್ರೀಲಂಕಾ ಎದುರು ಜಯ ಸಾಧಿಸಿರುವ ಪಾಕ್‌ ಪಡೆ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT