ಬೆಂಗಳೂರು: ರಕ್ತ ಕ್ಯಾನ್ಸರ್‌ಗೆ ಅಮೆರಿಕಾದ ಪ್ರತಿಷ್ಠಿತ ಕ್ಯಾನ್ಸರ್ ಆಸ್ಪತ್ರೆ ‘ಮೆಮೊರಿಯಲ್ ಸ್ಲೋನ್ ಕೆಟ್ಟರಿಂಗ್ ಕ್ಯಾನ್ಸರ್ ಸೆಂಟರ್’ (ಎಂಎಸ್‌ಕೆಸಿಸಿ) ‘ಟಿ ಸೆಲ್ ಥೆರಪಿ’ ಎಂಬ ಕ್ರಾಂತಿಕಾರಿ ಚಿಕಿತ್ಸೆಯೊಂದನ್ನು ಅಭಿವೃದ್ಧಿ ಪಡಿಸಿದೆ.

ಈ ಚಿಕಿತ್ಸೆಯ ವಿನ್ಯಾಸಕ ಮತ್ತು ಕ್ಲಿನಿಕಲ್ ಟ್ರಯಲ್‌ನ ರೂವಾರಿ ಮಂಗಳೂರು ಮೂಲದ ಕನ್ನಡಿಗ ಡಾ.ಶಾಮ ಮಾಯಿಲಂಕೋಡಿ. ಈ ಚಿಕಿತ್ಸೆಗೆ ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಇತ್ತೀಚೆಗೆ ಒಪ್ಪಿಗೆ ನೀಡಿದೆ.

ಮಲ್ಟಿಪಲ್ ಮೈಲೋಮ ಎಂದರೆ ಬಿಳಿ ರಕ್ತಕಣ ಕ್ಯಾನ್ಸರ್. ಇದನ್ನು ಗುಣಮುಖಪಡಿಸಲು ಸಾಧ್ಯವಿಲ್ಲ. ಮೈಲೋಮಾ ಕ್ಯಾನ್ಸರ್‌ನಿಂದಾಗಿ ಬಿಳಿ ರಕ್ತಕಣಗಳು ಹೋರಾಡುವ ಗುಣವನ್ನು ಕಳೆದುಕೊಳ್ಳುತ್ತವೆ. ಅಷ್ಟೇ ಅಲ್ಲ, ಪ್ರತಿಕೂಲಕರ ರೀತಿಯಲ್ಲಿ ಕೋಶಗಳು ತಮ್ಮ ಸಂಖ್ಯೆಯನ್ನು ಹಲವು ಪಟ್ಟು ವೃದ್ಧಿಸಿಕೊಳ್ಳುತ್ತಲೇ ಹೋಗುತ್ತವೆ. ದೇಹದ ಮೂಳೆ ಮತ್ತು ರಕ್ತಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಪ್ರೋಟೀನ್ (ಇಮ್ಯುನೋಗ್ಲೋಬ್ಯುಲಿನ್) ಸೇರಿಸುತ್ತವೆ.

ಅಂಗಾಂಗಗಳಲ್ಲಿ ಸೇರಿಕೊಳ್ಳುವ ಮಿತಿಮೀರಿದ ಪ್ರೋಟೀನ್ ಹಾನಿಯುಂಟು ಮಾಡುತ್ತವೆ. ಮೂಳೆಯಲ್ಲಿನ ಸಾಮಾನ್ಯ ರಕ್ತ ಕಣಗಳಿಗೆ ಪ್ಲಾಸ್ಮಾ ಕೋಶಗಳು ಮುತ್ತಿಗೆ ಹಾಕುತ್ತವೆ. ತಕ್ಷಣವೇ ಒಂದು ಬಗೆಯ ರಾಸಾಯನಿಕ ಬಿಡುಗಡೆಯಾಗುತ್ತದೆ. ಆ ರಾಸಾಯನಿಕವು ಮೂಳೆಯನ್ನು ಭಕ್ಷಿಸುವಂತೆ ಇತರ ಕೋಶಗಳನ್ನು ಪ್ರಚೋದಿಸುವುದು ವಿಶೇಷ.

ಏನಿದು ‘ಟಿ ಸೆಲ್’ ಥೆರಪಿ?: ಕೆಮೆರಿಕ್ ಆ್ಯಂಟಿಜನ್ ರಿಸೆಪ್ಟರ್– ಟಿ (ಸಿಎಆರ್–ಟಿ) ಎಂದು ಕರೆಯಲಾಗುವ ಇದು ಕೋಶ ಆಧಾರಿತ ಚಿಕಿತ್ಸಾ ವಿಧಾನ. ಇದನ್ನು ನೋವೆಲ್ ಇಮ್ಯುನೊಲಾಜಿಕ್ ಥೆರಪಿ ಎಂದು ಕರೆಯಲಾಗುತ್ತದೆ. ಟಿ ಕೋಶಗಳು ಸಹಜವಾಗಿ ರೋಗ ಪ್ರತಿರೋಧಕ ಗುಣವನ್ನು ಹೊಂದಿರುತ್ತವೆ. ರೋಗಿಯ ರಕ್ತದಿಂದ ಟಿ ಕೋಶಗಳನ್ನು ಸಂಗ್ರಹಿಸಿಕೊಂಡು, ಬಳಿಕ ಅದನ್ನು ತಳಿ (ಆನುವಂಶಿಕ) ಎಂಜಿನಿಯರಿಂಗ್ ಮೂಲಕ ಕೋಶಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗುತ್ತದೆ.

ಹೀಗೆ ರೂಪಾಂತರಗೊಂಡು ‘ವಿಶೇಷ ಶಕ್ತಿ’ ಪಡೆದ ‘ಟಿ ಕೋಶ’ವು ಕ್ಯಾನ್ಸರ್ ಕಣಗಳನ್ನು ಮಾತ್ರ ಪತ್ತೆ ಮಾಡಿ ನಾಶಗೊಳಿಸುವ ಗುಣ ಹೊಂದಿರುತ್ತವೆ. ರೂಪಾಂತರಗೊಂಡ ಟಿ ಕೋಶಗಳನ್ನು ಮತ್ತೆ ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ. ಒಂದು ಸಲದ ಚಿಕಿತ್ಸೆಗಾಗಿ ಇವುಗಳನ್ನು ಬಳಕೆ ಮಾಡಲಾಗುತ್ತದೆ.

ದೇಹದಲ್ಲಿ ಕ್ಯಾನ್ಸರ್ ಕೋಶಗಳನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೆ ಇವು ವಿರಮಿಸುವುದಿಲ್ಲ. ಕ್ಯಾನ್ಸರ್ ಕೋಶಗಳು ನಾಶವಾದ ಬಳಿಕ ಸ್ವಲ್ಪ ಕಾಲ ದೇಹದಲ್ಲೇ ಉಳಿದಿರುತ್ತವೆ. ಬಳಿಕ ಕ್ರಮೇಣ ಲಯವಾಗುತ್ತವೆ.

ವಂಶವಾಹಿ ಮಾರ್ಪಾಡಿಗೆ ಎಷ್ಟು ಸಮಯ?: ರೋಗಿಯ ದೇಹದಿಂದ ಟಿ ಕೋಶಗಳನ್ನು ಸಂಗ್ರಹಿಸಿ, ಅವುಗಳ ವಂಶವಾಹಿ ಮಾರ್ಪಾಡಿಗೆ ಸಾಮಾನ್ಯವಾಗಿ 3 ರಿಂದ 6 ವಾರಗಳು ಬೇಕಾಗುತ್ತವೆ. ಆದರೆ, ರೋಗಿಯ ದೇಹದೊಳಗೆ ಕೋಶಗಳನ್ನು ಸೇರಿಸುವ ಮೂಲಕ ಚಿಕಿತ್ಸೆ ಆರಂಭಿಸಲಾಗುತ್ತದೆ. ಇದಕ್ಕೆ ಬೇಕಾಗುವ ಸಮಯ 1 ರಿಂದ 2 ಗಂಟೆಗಳು ಮಾತ್ರ.

ಚಿಕಿತ್ಸೆಯ ಬಳಿಕ ಕೆಲವು ಸಣ್ಣ ಪುಟ್ಟ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ, ಚಿಕಿತ್ಸೆಯ ನಂತರ ಒಂದು ತಿಂಗಳವರೆಗೆ ರೋಗಿಯ ಮೇಲೆ ನಿಗಾ ಇಡಲಾಗುತ್ತದೆ.

ಮಿದುಳು, ಶ್ವಾಸಕೋಶ ಕ್ಯಾನ್ಸರ್‌ಗೂ ಟ್ರಯಲ್
‘ಈ ಚಿಕಿತ್ಸೆ ಬಿಳಿರಕ್ತ ಕಣ ಕ್ಯಾನ್ಸರ್‌ಗೆಂದು ಅಭಿವೃದ್ಧಿಗೊಂಡಿದ್ದರೂ, ಈಗ ಮೂರು ಬಗೆಯ ರಕ್ತ ಕ್ಯಾನರ್‌ಗಳ ಚಿಕಿತ್ಸೆಗೆ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಅವುಗಳೆಂದರೆ, ಲುಕೇಮಿಯಾ, ಲಿಂಫೋಮಾ ಮತ್ತು ಮಲ್ಟಿಪಲ್ ಮೈಲೋಮಾ. ಅಲ್ಲದೆ, ಮಿದುಳು, ಶ್ವಾಸಕೋಶ ಕ್ಯಾನ್ಸರ್‌ಗಳಿಗೂ ಇದು ಪರಿಣಾಮಕಾರಿಯೇ ಎಂಬುದರ ಬಗ್ಗೆ ಕ್ರಿನಿಕಲ್ ಟ್ರಯಲ್ಸ್ ನಡೆದಿವೆ’ ಎಂದು ಡಾ. ಶಾಮ ಮಾಯಿಂಲಕೋಡಿ ತಿಳಿಸಿದರು.

‘ನಾವು 100ಕ್ಕೂ ಹೆಚ್ಚು ಬಿಳಿ ರಕ್ತಕಣದ ಕ್ಯಾನ್ಸರ್ ರೋಗಿಗಳ ಮೇಲೆ ಕ್ಲಿನಿಕಲ್ ಟ್ರಯಲ್ ನಡೆದಿವೆ. ಈ ಎಲ್ಲ ರೋಗಿಗಳು ಇದಕ್ಕೂ ಮೊದಲು ಅಸ್ಥಿಮಜ್ಜೆ ಕಾಂಡಕೋಶ ಚಿಕಿತ್ಸೆಯೂ ಸೇರಿ ವಿವಿಧ ಬಗೆಯ ಚಿಕಿತ್ಸೆ ಪಡೆದು ಗುಣಮುಖರಾಗದೇ ಕೊನೆಯ ಪ್ರಯತ್ನ ಎಂದು ಬಂದವರು. ಟಿ ಕೋಶ ಚಿಕಿತ್ಸೆಗೆ ಶೇ 80 ರಿಂದ ಶೇ 95 ರಷ್ಟು ರೋಗಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ’ ಎನ್ನುತ್ತಾರೆ ಶಾಮ.

ಕ್ಯಾನ್ಸರ್ ಕಣಗಳ ಕಳ್ಳಾಟ!
ಹಲವು ಬಗೆಯ ಕ್ಯಾನ್ಸರ್ ಕೋಶಗಳು ಪ್ರತಿಕಾಯಗಳ ‘ಚಕ್ಷು’ವಿಗೆ ಪತ್ತೆಯಾಗದ ಮತ್ತು ನಾಶವಾಗದ ಸಾಮರ್ಥ್ಯವನ್ನು ಬೆಳೆಸಿಕೊಂಡಿವೆ. ಹೀಗಾಗಿ ನ್ಯಾಚುರಲ್ ಕಿಲ್ಲರ್ ಸೆಲ್ಸ್ (ಎನ್‌ಕೆ ಸೆಲ್ಸ್) ಅಥವಾ ಟಿ ಸೆಲ್ಸ್‌ಗಳನ್ನು ಯಾವುದೇ ಮಾರ್ಪಾಡು ಮಾಡದೇ ದೇಹದೊಳಗೆ ಬಿಟ್ಟರೂ ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡಿ ನಾಶ ಮಾಡಲು ಸಾಧ್ಯವಾಗಿಲ್ಲ. ಎನ್‌ಕೆ ಸೆಲ್ಸ್ ಮತ್ತು ಟಿ ಸೆಲ್ಸ್‌ಗಳಲ್ಲಿ ಸಹಜವಾಗಿ ಪ್ರತಿರೋಧಕ ಶಕ್ತಿ ಇದೆ. ಆದರೆ, ಕಿಲಾಡಿ ಕ್ಯಾನ್ಸರ್ ಕೋಶಗಳು ಈ ಎರಡೂ ಕೋಶಗಳ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಳ್ಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.