ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಂಪ್ ಹತ್ಯೆಗೆ ಯತ್ನ: ಮೋದಿ, ರಾಹುಲ್ ಸೇರಿದಂತೆ ವಿಶ್ವ ನಾಯಕರು ಹೇಳಿದ್ದೇನು?

Published : 14 ಜುಲೈ 2024, 3:55 IST
Last Updated : 14 ಜುಲೈ 2024, 3:55 IST
ಫಾಲೋ ಮಾಡಿ
Comments

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ನಡೆದಿರುವ ಗುಂಡಿನ ದಾಳಿಯ ಬಗ್ಗೆ ಜಾಗತಿಕ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಸಂಜೆ ಬಹಿರಂಗ ಸಮಾವೇಶದಲ್ಲಿ ಟ್ರಂಪ್ ಅವರು ಭಾಷಣ ಆರಂಭಿಸುತ್ತಿದ್ದಂತೆ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ. ಈ ವೇಳೆ ಪ್ರೇಕ್ಷಕನೊಬ್ಬ ಮೃತಪಟ್ಟಿದ್ದು, ಟ್ರಂಪ್‌ ಹಾಗೂ ಮತ್ತಿಬ್ಬರು ಗಾಯಗೊಂಡಿದ್ದಾರೆ. ಈ ಕೃತ್ಯವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ವಿವಿಧ ದೇಶಗಳ ನಾಯಕರು ಖಂಡಿಸಿದ್ದಾರೆ.

'ನನ್ನ ಮಿತ್ರ, ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ನಡೆಸಲಾಗಿರುವ ದಾಳಿಯು ಕಳವಳ ಉಂಟುಮಾಡಿದೆ. ಈ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ರಾಜಕೀಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂಸೆಗೆ ಅವಕಾಶವಿಲ್ಲ. ಟ್ರಂಪ್ ಅವರು ಬೇಗನೆ ಚೇತರಿಸಿಕೊಳ್ಳಲಿ. ಮೃತರ ಕುಟುಂಬದವರು ಹಾಗೂ ಗಾಯಗೊಂಡವರಿಗಾಗಿ ಪ್ರಾರ್ಥಿಸುತ್ತೇನೆ' ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್, 'ಟ್ರಂಪ್ ಅವರ ಹತ್ಯೆಯ ಯತ್ನದಿಂದ ಆಘಾತವಾಗಿದೆ. ಇಂತಹ ಘಟನೆಗಳನ್ನು ಬಲವಾಗಿ ಖಂಡಿಸಬೇಕು' ಎಂದಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು, 'ಡೊನಾಲ್ಡ್ ಟ್ರಂಪ್ ಸುರಕ್ಷಿತವಾಗಿದ್ದಾರೆ ಎಂದು ಸುದ್ದಿ ತಿಳಿದು ನಿರಾಳವಾಗಿದ್ದೇನೆ. ಟ್ರಂಪ್‌ ಮತ್ತು ಅವರ ಕುಟುಂಬದವರು ಸೇರಿದಂತೆ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಒಳಿತಾಗಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಈ ರೀತಿಯ ಹಿಂಸಾಚಾರಕ್ಕೆ ಅಮೆರಿಕದಲ್ಲಿ ಸ್ಥಳವಿಲ್ಲ' ಎಂದು ತಿಳಿಸಿದ್ದಾರೆ.

'ಈ ಹೇಯ ಕೃತ್ಯವನ್ನು ಎಲ್ಲರೂ ಒಗ್ಗಟ್ಟಿನಿಂದ ಖಂಡಿಸುತ್ತೇವೆ. ಇದು ಮತ್ತಷ್ಟು ಹಿಂಸಾಚಾರಕ್ಕೆ ಕಾರಣವಾಗದಂತೆ ಎಚ್ಚರ ವಹಿಸಬೇಕಿದೆ' ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಬ್ರಿಟನ್‌ ಪ್ರಧಾನಿ ಕಿಯರ್‌ ಸ್ಟಾರ್ಮರ್‌ ಅವರು, 'ಆಘಾತಕಾರಿ ಕೃತ್ಯ ಕಂಡು ಆತಂಕವಾಯಿತು. ಯಾವುದೇ ರೀತಿಯ ರಾಜಕೀಯ ಹಿಂಸೆಗೆ ನಮ್ಮ ಸಮಾಜದಲ್ಲಿ ಅವಕಾಶ ನೀಡಬಾರದು' ಎಂದಿದ್ದಾರೆ.

'ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗುವ ಯಾವುದೇ ರೀತಿಯ ಹಿಂಸೆಯ ವಿರುದ್ಧ ನಾವೆಲ್ಲ ಒಂದಾಗಿ ನಿಲ್ಲಬೇಕು' ಎಂದು ಜಪಾನ್‌ ಪ್ರಧಾನಿ ಫುಮಿಯೊ ಕಿಶಿದಾ ಕರೆ ನೀಡಿದ್ದಾರೆ.

'ಇದು ಅತ್ಯಂತ ನೋವಿನ ಸಮಯ' ಎಂದಿರುವ ಹಂಗೇರಿ ಪ್ರಧಾನಿ ವಿಕ್ಟರ್‌ ಒರ್ಬನ್‌, ಗಾಯಾಳುಗಳ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

'ಪೆನ್ಸಿಲ್ವೇನಿಯಾ ಘಟನೆ ನಂತರದ ಬೆಳವಣಿಗೆಗಳ ಬಗ್ಗೆ ಆತಂಕದಿಂದಲೇ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ' ಎಂದಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೂ ಟ್ರಂಪ್‌ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

ಮುಂಬರುವ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನಡೆಸುವ ಸಂವಾದಗಳು, ಹೊಣೆಗಾರಿಕೆಗಳು ದ್ವೇಷ ಮತ್ತು ಹಿಂಸೆಯ ವಿರುದ್ಧ ಮೇಲುಗೈ ಸಾಧಿಸಲಿವೆ ಎಂದೂ ಹೇಳಿದ್ದಾರೆ.

ಜಾಗತಿಕ ಎಡಪಂಥೀಯರ ವಿರುದ್ಧ ಗುಡುಗಿರುವ ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್‌ ಮಿಲೈ, 'ಚುನಾವಣೆ ಸೋಲಿನ ಭೀತಿಯಲ್ಲಿರುವ ಅವರು, ತಮ್ಮ ಹಿನ್ನಡೆಯನ್ನು ತಪ್ಪಿಸಿಕೊಳ್ಳಲು, ಸರ್ವಾಧಿಕಾರಿ ಧೋರಣೆಯನ್ನು ಹೇರಲು ಭಯೋತ್ಪಾದನೆಯನ್ನು ಆಶ್ರಯಿಸುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.

ಬ್ರೆಜಿಲ್‌ ಅಧ್ಯಕ್ಷ ಲೂಯಿಸ್‌ ಇನಾಸಿಯೊ ಲುಲಾ ಡಾ ಸಿಲ್ವಾ, 'ಪ್ರಜಾಪ್ರಭುತ್ವ ಹಾಗೂ ರಾಜಕೀಯ ಸಂವಾದವನ್ನು ಬೆಂಬಲಿಸುವ ಎಲ್ಲರೂ ಈ ಕೃತ್ಯವನ್ನು ಬಲವಾಗಿ ಖಂಡಿಸಬೇಕು' ಎಂದು ಕರೆ ನೀಡಿದ್ದಾರೆ.

'ಈ ದಾಳಿಯನ್ನು ಸಹಿಸಲಾಗದು' ಎಂದು ಕೋಸ್ಟರಿಕಾ ಸರ್ಕಾರ ಹೇಳಿದೆ. ಆ ದೇಶದ ಅಧ್ಯಕ್ಷ ರಾಡ್ರಿಗೊ ಛಾವೆಸ್‌ ರೊಬೆಲ್ಸ್‌, 'ಪ್ರಜಾಪ್ರಭುತ್ವ ಮತ್ತು ಶಾಂತಿಯ ನಾಯಕನಾಗಿ ಯಾವುದೇ ರೀತಿಯ ಹಿಂಸೆಯನ್ನು ಖಂಡಿಸುತ್ತೇವೆ' ಎಂದಿದ್ದಾರೆ.

ಚಿಲಿ ಅಧ್ಯಕ್ಷ ಗೆಬ್ರಿಯಾಲ್‌ ಬೊರಿಕ್‌, 'ಈ ಕೃತ್ಯವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆದರಿಕೆಯೊಡ್ಡಿದೆ. ಸಾಮರಸ್ಯವನ್ನು ದುರ್ಬಲಗೊಳಿಸುತ್ತದೆ. ನಾವೆಲ್ಲ ಇದರ ವಿರುದ್ಧ ನಿಲ್ಲಬೇಕು' ಎಂದು ಕರೆ ನೀಡಿದ್ದಾರೆ.

ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೆಸ್‌, ಕಳವಳ ವ್ಯಕ್ತಪಡಿಸಿ, ದಾಳಿಯನ್ನು ಖಂಡಿಸಿದ್ದಾರೆ.

'ಟ್ರಂಪ್‌ ಅವರ ಮೇಲಿನ ದಾಳಿಯಿಂದ ಆಘಾತಗೊಂಡಿದ್ದೇನೆ' ಎಂದಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಚೇತರಿಕೆಗಾಗಿ ಪ್ರಾರ್ಥಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT