ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Bangla Unrest | ನಾಗರಿಕರ ಸುರಕ್ಷತೆಗೆ ಆದ್ಯತೆ: ಮೊಹಮ್ಮದ್ ಯೂನಸ್

Published : 8 ಆಗಸ್ಟ್ 2024, 14:23 IST
Last Updated : 8 ಆಗಸ್ಟ್ 2024, 14:23 IST
ಫಾಲೋ ಮಾಡಿ
Comments

ಢಾಕಾ: ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿಕೊಳ್ಳಲು ಗುರುವಾರ ಪ್ಯಾರಿಸ್‌ನಿಂದ ಢಾಕಾಗೆ ಬಂದ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂನಸ್ (84) ಅವರು, ‘ನಮ್ಮ ಸರ್ಕಾರವು ದೇಶದ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಲಿದೆ’ ಎಂದು ಭರವಸೆ ನೀಡಿದರು.

ದೇಶಕ್ಕೆ ಮರಳಿದ ಯೂನಸ್‌ ಅವರನ್ನು ಸೇನಾ ಮುಖ್ಯಸ್ಥ ಜನರಲ್‌ ವಕಾರ್‌–ಉಝ್‌–ಝಮಾನ್, ಹಿರಿಯ ಅಧಿಕಾರಿಗಳು, ವಿದ್ಯಾರ್ಥಿ ನಾಯಕರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಪ್ಯಾರಿಸ್‌ನಿಂದ ಢಾಕಾಗೆ ಹಿಂದಿರುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶ ಕಟ್ಟುವ ಕಾರ್ಯಕ್ಕೆ ಎಲ್ಲರೂ ನನಗೆ ನೆರವಾಗಬೇಕು’ ಎಂದು ಕೋರಿದರು.

ಶೇಖ್‌ ಹಸೀನಾ ಅವರ ವಿರುದ್ಧ ಯಶಸ್ವಿ ಪ‍್ರತಿಭಟನಾ ಆಂದೋಲನ ನಡೆಸಿದ ಯುವ ಜನರಿಗೆ ಅವರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.

‘ಎರಡನೇ ಸ್ವಾತಂತ್ರ್ಯ’
ಆಡಳಿತ ಬದಲಾವಣೆಯನ್ನು ದೇಶದ ‘ಎರಡನೇ ಸ್ವಾತಂತ್ರ್ಯ’ ಎಂದು ಕರೆದ ಅವರು, ‘ಇದು ನಮ್ಮ ಹೆಮ್ಮೆಯ ದಿನವಾಗಿದೆ’ ಎಂದು ಹೇಳಿದರು. ‘ನಮಗೆ ದೊರೆತಿರುವ ಈ ಎರಡನೇ ಸ್ವಾತಂತ್ರ್ಯವನ್ನು ನಾವು ರಕ್ಷಿಸಿಕೊಳ್ಳಬೇಕಿದೆ’ ಎಂದು ಅವರು ತಿಳಿಸಿದರು. ‘ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮರಳಿ ತರುವುದು, ಅರಾಜಕತಾ ಚಟುವಟಿಕೆಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಗಳನ್ನು ನಿಯಂತ್ರಿಸುವುದು ನನ್ನ ಮೊದಲ ಕಾರ್ಯವಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
‘ಹಿಂಸೆ ಆಗದಂತೆ ನೋಡಿಕೊಳ್ಳಿ’

‘ನಿಮಗೆ ನನ್ನ ಮೇಲೆ ನಂಬಿಕೆ ಇದ್ದರೆ, ದೇಶದಲ್ಲಿ ಎಲ್ಲೂ, ಯಾರ ಮೇಲೂ ದಾಳಿ ನಡೆಯದಂತೆ ನೋಡಿಕೊಳ್ಳಿ. ಇದು ನಮ್ಮ ಮೊದಲ ಜವಾಬ್ದಾರಿಯಾಗಿದೆ’ ಎಂದು ಯೂನಸ್‌ ಕರೆ ನೀಡಿದರು.

‘ನನ್ನಿಂದ ಈ ಕಾರ್ಯವನ್ನು ಮಾಡಲು ಸಾಧ್ಯವಾಗದಿದ್ದರೆ ಮತ್ತು ನೀವು ನನ್ನ ಮಾತುಗಳನ್ನು ಕೇಳದಿದ್ದರೆ, ನಾನು ಇಲ್ಲಿದ್ದು ಏನು ಪ್ರಯೋಜನ’ ಎಂದು ಅವರು ಪ್ರಶ್ನಿಸಿದರು. 

‘ದೇಶ ನಿಮ್ಮ ಕೈಯಲ್ಲಿದೆ. ನಿಮ್ಮ ಆಶಯದಂತೆ ದೇಶವನ್ನು ಮರು ನಿರ್ಮಿಸಬೇಕಿದೆ. ಅದಕ್ಕೆ ನಿಮ್ಮ ಸೃಜನಶೀಲತೆಯನ್ನು ಬಳಸಬೇಕು’ ಎಂದು ಅವರು ಯುವ ಜನರಿಗೆ ಕರೆ ನೀಡಿದರು.

‘ದೇಶದ ರಚನೆಯನ್ನು ನಾವು ಬದಲಿಸಬೇಕಿದೆ. ಈ ಮೂಲಕ ಭಯದ ವಾತಾವರಣವನ್ನು ತೆಗೆದುಹಾಕಬೇಕಿದೆ’ ಎಂದು ಅವರು ಪ್ರತಿಪಾದಿಸಿದರು.

ವಿದ್ಯಾರ್ಥಿ ಆಂದೋಲನದ ವೇಳೆ ಪೊಲೀಸ್‌ ಗೋಲಿಬಾರ್‌ನಲ್ಲಿ ಮೃತಪಟ್ಟ ಮೊದಲ ವಿದ್ಯಾರ್ಥಿ ಅಬು ಸೈಯದ್‌ ಅವರಿಗೆ ಯೂನಸ್‌ ಅವರು ನಮನ ಸಲ್ಲಿಸಿದರು.

ಮಧ್ಯಂತರ ಸರ್ಕಾರ ನಿರ್ದಿಷ್ಟ ಅವಧಿಯವರೆಗೆ ದೇಶವನ್ನು ಮುನ್ನಡೆಸುತ್ತದೆ. ಬಳಿಕ ಚುನಾಯಿತ ಸರ್ಕಾರ ರಚನಾ ಕಾರ್ಯದ ಮೇಲ್ವಿಚಾರಣೆಯನ್ನು ಅದು ಮಾಡಲಿದೆ. 

ದೇಶವು ಮೂರು–ನಾಲ್ಕು ದಿನಗಳಲ್ಲಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಸೇನಾ ಮುಖ್ಯಸ್ಥ ವಕಾರ್‌–ಉಝ್‌–ಝಮಾನ್‌ ಪ್ರತಿಕ್ರಿಯಿಸಿದರು.

ದರೋಡೆಕೋರರ ಹಾವಳಿ
ಢಾಕಾ (ಪಿಟಿಐ): ಹಿಂಸಾಚಾರದಿಂದ ನಲುಗಿರುವ ಬಾಂಗ್ಲಾದೇಶದಲ್ಲಿ ಲೂಟಿ ಮತ್ತು ದರೋಡೆಕೋರರ ಹಾವಳಿಯೂ ತೀವ್ರಗೊಂಡಿದ್ದು, ನಿವಾಸಿಗಳು ಕೆಲ ದಿನಗಳಿಂದ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿದ್ದು, ಪೊಲೀಸರು ಕಾರ್ಯ ನಿರ್ವಹಿಸಲು ಹಿಂಜರಿದಿರುವ ಕಾರಣ ಅಪರಾಧಿಗಳು ಗುಂಪು ಗುಂಪಾಗಿ ಲೂಟಿ, ದರೋಡೆ ಕೃತ್ಯಗಳನ್ನು ಎಸಗುತ್ತಿದ್ದಾರೆ ಎನ್ನಲಾಗಿದೆ. ನಿವಾಸಿಗಳು ದೊಣ್ಣೆಗಳನ್ನು ಹಿಡಿದು ಗಸ್ತು ತಿರುಗುವ ಮೂಲಕ, ತಮ್ಮ ಮನೆ ಮತ್ತು ರಸ್ತೆಗಳನ್ನು ರಕ್ಷಿಸಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಯುವ ಜನರ ಕೈಯಲ್ಲಿ ದೇಶ
ವಿದ್ಯಾರ್ಥಿಗಳು ಮತ್ತು ಯುವ ಜನರ ಕರೆಗೆ ಓಗೊಟ್ಟು ಮಧ್ಯಂತರ ಸರ್ಕಾರದ ನೇತೃತ್ವ ವಹಿಸಿಕೊಳ್ಳಲು ಒಪ್ಪಿದ್ದಾಗಿ ಹೇಳಿದ ಅವರು, ದೇಶ ಈಗ ಯುವ ಜನರ ಕೈಯಲ್ಲಿದೆ ಎಂದರು. ‘ನಾಗರಿಕರ ಸುರಕ್ಷತೆಯನ್ನು ಖಾತರಿಪಡಿಸುವಂತಹ ಸರ್ಕಾರವನ್ನು ನಾವು ರಚಿಸಬೇಕಿದೆ. ಅಂತೆಯೇ ಪ್ರತಿಭಟನಾ ಸಮಯದಲ್ಲಿ ಉಂಟಾದ ಅವ್ಯವಸ್ಥೆಯಿಂದ ದೇಶವನ್ನು ರಕ್ಷಿಸಲು ನಾಗರಿಕರು ಸಹಕರಿಸಬೇಕಿದೆ’ ಎಂದು ಹೇಳಿದರು.
560ಕ್ಕೆ ಏರಿದ ಮೃತರ ಸಂಖ್ಯೆ
ಶೇಖ್‌ ಹಸೀನಾ ಅವರು ಸೋಮವಾರ ದೇಶ ತೊರೆದ ಬಳಿಕ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಈ ಮೂಲಕ ಮೀಸಲಾತಿ ನಿಯಮ ವಿರೋಧಿಸಿ ಜುಲೈನಿಂದ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 560ಕ್ಕೆ ಏರಿದಂತಾಗಿದೆ.

ದಿನದ ಬೆಳವಣಿಗೆಗಳು

l ಬಾಂಗ್ಲಾದೇಶದಲ್ಲಿ ಸಿಲುಕಿದ್ದ ಭಾರತದ 17 ಕಾರ್ಮಿಕರನ್ನು (ರಸ್ತೆ ನಿರ್ಮಿಸುವವರು) ಸುರಕ್ಷಿತವಾಗಿ ಗುರುವಾರ ದೇಶಕ್ಕೆ ಕರೆತರಲಾಯಿತು ಎಂದು ಬಿಎಸ್‌ಎಫ್‌ ತಿಳಿಸಿದೆ.

l ತೀವ್ರ ಹಿಂಸಾಚಾರದ ಕಾರಣಕ್ಕೆ ಕೆಲಸಕ್ಕೆ ಬರಲು ಹಿಂಜರಿಯುತ್ತಿದ್ದ ಪೊಲೀಸರು ಕ್ರಮೇಣ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಪಾಲನೆಯತ್ತ ಮುಖ ಮಾಡಿದ್ದಾರೆ.

560ಕ್ಕೆ ಏರಿದ ಮೃತರ ಸಂಖ್ಯೆ

ಶೇಖ್‌ ಹಸೀನಾ ಅವರು ಸೋಮವಾರ ದೇಶ ತೊರೆದ ಬಳಿಕ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ ಮೃತಪಟ್ಟವರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಈ ಮೂಲಕ ಮೀಸಲಾತಿ ನಿಯಮ ವಿರೋಧಿಸಿ ಜುಲೈನಿಂದ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 560ಕ್ಕೆ ಏರಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT