ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾ | ವಾಹನಗಳ ಆಮದು ಮೇಲಿದ್ದ ನಿಷೇಧ 2025ರಿಂದ ಸಂಪೂರ್ಣ ತೆರವು

Published : 14 ಸೆಪ್ಟೆಂಬರ್ 2024, 13:18 IST
Last Updated : 14 ಸೆಪ್ಟೆಂಬರ್ 2024, 13:18 IST
ಫಾಲೋ ಮಾಡಿ
Comments

ಕೊಲೊಂಬೊ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದೇಶದ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ವಾಹನಗಳ ಆಮದು ಮೇಲಿದ್ದ ನಿಷೇಧವನ್ನು 2025ರಿಂದ ತೆರವುಗೊಳಿಸಲು ಶ್ರೀಲಂಕಾ ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಸದ್ಯ ಇರುವ ನಿಷೇಧವು ಅ. 1ರಿಂದ ಮೂರು ಹಂತಗಳಲ್ಲಿ ತೆರವುಗೊಳಿಸಲಾಗುವುದು. ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಿಸ್ತೃತ ಹೂಡಿಕೆ ಸೌಲಭ್ಯ ಹಾಗೂ ವಿಶಾಲ ಆರ್ಥಿಕ ಚೇತರಿಕೆ ತಂತ್ರದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅಧ್ಯಕ್ಷ ರೇನಿಲ್ ವಿಕ್ರಮಸಿಂಘೆ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

‘ವಾಹನಗಳ ಆಮದು ಮೇಲೆ ನಾಲ್ಕು ವರ್ಷಗಳಿಂದ ಇದ್ದ ನಿಷೇಧ ತೆರವಿಗೆ ಸಂಪುಟ ಸಮಿತಿ ಒಪ್ಪಿಗೆ ಸೂಚಿಸಿತ್ತು. ಇದರಿಂದಾಗಿ ಆರ್ಥಿಕ ಸಂಕಷ್ಟದಿಂದ ಹೊರಬರಲು ದೇಶದ ವಿದೇಶಿ ವಿನಿಮಯ ಹೆಚ್ಚಿಸುವ ಗುರಿಯನ್ನು ಶ್ರೀಲಂಕಾ ಹೊಂದಿದೆ’ ಎಂದು ರಾಷ್ಟ್ರಪತಿ ಅವರ ಮಾಧ್ಯಮ ವಿಭಾಗ ಹೇಳಿದೆ.

‘ಎಲ್ಲಾ ರೀತಿಯ ವಾಹನಗಳ ಆಮದು ಮೇಲಿದ್ದ ನಿಷೇಧವು 2025ರ ಫೆಬ್ರುವರಿಯಿಂದ ತೆರವಾಗಲಿದೆ. 2024ರ ಅ. 1ರಿಂದ ಸಾರ್ವಜನಿಕ ಸಾರಿಗೆ ವಾಹನಗಳ ಆಮದು ಆರಂಭವಾಗಲಿದೆ. ವಾಣಿಜ್ಯ ವಾಹನಗಳ ಆಮದು ಮೇಲಿದ್ದ ನಿಷೇಧ ಡಿ. 1ರಿಂದ ತೆರವಾಗಲಿದೆ. ಎಲ್ಲಾ ರೀತಿಯ ಮೋಟಾರು ವಾಹನಗಳ ಮೇಲಿದ್ದ ನಿಷೇಧ ಫೆ. 1ರಿಂದ ತೆರವಾಗಲಿದೆ’ ಎಂದು ಶ್ರೀಲಂಕಾ ವಿದೇಶಾಂಗ ಸಚಿವ ಅಲಿ ಸ್ಯಾಬ್ರಿ ಹೇಳಿದ್ದಾರೆ.

‘ವಾಹನಗಳ ಆಮದಿನಿಂದ ಆರ್ಥಿಕ ಚಟುವಟಿಕೆಗಳು ಏರಿಕೆ ಕಂಡು, ಸರ್ಕಾರದ ಆದಾಯವೂ ಹೆಚ್ಚಳವಾಗಲಿದೆ. ಅದರಲ್ಲೂ ವಾಹನಗಳ ಆಮದು ಪ್ರಕ್ರಿಯೆಯು ದೇಶದ ಆದಾಯದ ಪ್ರಮುಖ ಮೂಲವಾಗಿದೆ. ಈ ಬಾರಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವ ಸಾಧ್ಯತೆಯೂ ಇದೆ’ ಎಂದೆನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT