ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾನು ಕಮಲಾಗಿಂತ ಚೆನ್ನಾಗಿ ಕಾಣುತ್ತೇನೆ: ವೈಯಕ್ತಿಕ ದಾಳಿ ಮುಂದುವರಿಸಿದ ಟ್ರಂಪ್‌

Published 18 ಆಗಸ್ಟ್ 2024, 15:38 IST
Last Updated 18 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಮತ್ತು ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ ವಿರುದ್ಧ ವೈಯಕ್ತಿಕ ವಾಗ್ದಾಳಿ ಮುಂದುವರಿಸಿರುವ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ (78) ಅವರು, ‘ನಾನು ಹ್ಯಾರಿಸ್‌ ಅವರಿಗಿಂತ ಚೆನ್ನಾಗಿ ಕಾಣುತ್ತೇನೆ’ ಎಂದು ಹೇಳಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಶನಿವಾರ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಟೈಮ್‌ ಮ್ಯಾಗಜೀನ್‌ನಲ್ಲಿ ಇತ್ತೀಚೆಗೆ ಪ್ರಕಟವಾಗಿರುವ ಕಮಲಾ ಹ್ಯಾರಿಸ್‌ ಅವರ ಚಿತ್ರವನ್ನು ಗುರಿಯಾಗಿಸಿ ಟೀಕೆ ಮಾಡಿದ್ದಾರೆ.

‘ಟೈಮ್‌ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿರುವ ಭಾವಚಿತ್ರದಲ್ಲಿ ಹ್ಯಾರಿಸ್‌ (59) ಅವರು ‘ತುಂಬಾ ಉದಾರಿ’ಯಂತೆ ಕಾಣುತ್ತಿದ್ದಾರೆ ಎಂದಿರುವ ಅವರು, ‘ನಾನು ಅವರಿಗಿಂತ ಉತ್ತಮವಾಗಿ ಕಾಣುತ್ತೇನೆ’ ಎಂದಿದ್ದಾರೆ.

‘ಮ್ಯಾಗಜೀನ್‌ನವರ ಬಳಿ ಹ್ಯಾರಿಸ್‌ ಅವರ ಒಂದು ಚಿತ್ರವೂ ಇರಲಿಲ್ಲವೇ. ಅದಕ್ಕಾಗಿಯೇ ಅವರು ಚಿತ್ರಕಲಾವಿದನನ್ನು ನೇಮಿಸಿಕೊಂಡು ಊಹಿಸಲಾಗದಂತ ಹ್ಯಾರಿಸ್‌ ಅವರ ಚಿತ್ರವನ್ನು ಬಿಡಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ವಿರುದ್ಧವೂ ವಾಗ್ದಾಳಿ ನಡೆಸಿದ ಟ್ರಂಪ್‌, ‘ಬೈಡನ್‌ ಅವರಿಗೆ ಏನಾಗಿದೆ? ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲಿಗೆ ನಾನು ಬೈಡನ್‌ ವಿರುದ್ಧ ಸ್ಪರ್ಧೆಯಲ್ಲಿದ್ದೆ. ಆದರೆ ಈಗ ಮತ್ತೊಬ್ಬರ ವಿರುದ್ಧ ಸ್ಪರ್ಧೆಯಲ್ಲಿದ್ದೇನೆ. ಈ ಚುನಾವಣೆಯಲ್ಲಿ ನಾನು ಎದುರಿಸುತ್ತಿರುವ ಹ್ಯಾರಿಸ್ಸಾದರೂ ಯಾರು?’ ಎಂದು ಅವರು ಪ್ರಶ್ನಿಸಿದರು.

‘ಕಮಲಾ ಅವರು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಆಹಾರ ಮತ್ತು ವಸತಿ ಬೆಲೆಯನ್ನು ಕಡಿಮೆಗೊಳಿಸುವ ಭರವಸೆ ನೀಡಿದ್ದಾರೆ. ಆದರೆ, ಅವರ ಆ ಮೊದಲ ದಿನ ಮೂರೂವರೆ ವರ್ಷಗಳ ಹಿಂದೆಯೇ ಆರಂಭವಾಗಿದೆಯಲ್ಲ’ ಎಂದು ಅವರು ಹೇಳಿದ್ದಾರೆ.

‘ಬೈಡನ್‌ ಅವರ ಅಧ್ಯಕ್ಷೀಯ ಸ್ಥಾನದ ಸ್ಪರ್ಧೆಯನ್ನು ಕಮಲಾ ಅವರು ಕಸಿದಿದ್ದಾರೆ. ಇದರಿಂದ ಬೈಡನ್‌ ಅವರಿಗೆ ಕಮಲಾ ಮೇಲೆ ಸಿಟ್ಟಿದ್ದು, ಅವರನ್ನು ದ್ವೇಷಿಸುತ್ತಿದ್ದಾರೆ’ ಎಂದು ಟ್ರಂಪ್‌ ವಾಗ್ದಾಳಿ ಮುಂದುವರಿಸಿದ್ದಾರೆ.

ಕಮಲಾ ಅವರ ವಿರುದ್ಧ ಸೆಪ್ಟೆಂಬರ್‌ 10ರಂದು ನಡೆಯಲಿರುವ ಚರ್ಚೆಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ ಟ್ರಂಪ್‌, ‘ಅದು ನನಗೆ ಸುಲಭವಾಗಲಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT