ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇರಾನ್‌ ಅಣ್ವಸ್ತ್ರ ಕೇಂದ್ರದ ಮೇಲೆ ಇಸ್ರೇಲ್ ದಾಳಿ ನಡೆಸಲಿ: ಡೊನಾಲ್ಡ್ ಟ್ರಂಪ್

Published : 5 ಅಕ್ಟೋಬರ್ 2024, 10:34 IST
Last Updated : 5 ಅಕ್ಟೋಬರ್ 2024, 10:34 IST
ಫಾಲೋ ಮಾಡಿ
Comments

ವಾಷಿಂಗ್ಟನ್: ‘ಇರಾನ್‌ನ ಅಣ್ವಸ್ತ್ರ ಕೇಂದ್ರದ ಮೇಲೆ ಇಸ್ರೇಲ್ ಮೊದಲು ದಾಳಿ ಮಾಡಬೇಕು’ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇಸ್ರೇಲ್‌ ಮೇಲಿನ ಇರಾನ್‌ನ ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ‘ಇರಾನ್‌ನ ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ನಡೆಸದ ಹೊರತು ಎಲ್ಲವೂ ಸರಿಹೋಗದು. ಅದುವೇ ಇಸ್ರೇಲ್‌ಗಿರುವ ಸರಿಯಾದ ಮಾರ್ಗ’ ಎಂದಿದ್ದಾರೆ.

ಇರಾನ್‌ನ ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ನಡೆಸುವುದನ್ನು ನೀವು ಬೆಂಬಲಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬುಧವಾರ ಪ್ರತಿಕ್ರಿಯಿಸಿ, ‘ನನ್ನ ಉತ್ತರ ‘ಇಲ್ಲ’’ ಎಂದಿದ್ದರು. ಆದರೆ ಇಸ್ರೇಲ್‌ ಮೇಲೆ 200 ಕ್ಷಿಪಣಿಗಳನ್ನು ಉಡ್ಡಾಯಿಸಿದ ಇರಾನ್‌ನ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು. 

ಬೈಡನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ನಮಗಿರುವ ದೊಡ್ಡ ಅಪಾಯವೇ ಅಣ್ವಸ್ತ್ರ. ಹೀಗಾಗಿ ಅದನ್ನೇ ಮೊದಲು ನಾಶಪಡಿಸಬೇಕು ಎಂಬುದು ಸರಿಯಲ್ಲವೇ?. ಮೊದಲು ಅದನ್ನು ನಾಶಪಡಿಸಿ, ಉಳಿದದ್ದನ್ನು ನಂತರ ನೋಡಿಕೊಂಡರಾಯಿತು’ ಎಂದಿದ್ದಾರೆ.

‘ಇಸ್ರೇಲ್‌ ಅದನ್ನು ಮಾಡಲು ನಿರ್ಧರಿಸಿದರೆ, ಅವರು ಮಾಡಿಯೇ ಮಾಡುತ್ತಾರೆ. ಆದರೆ ಇರಾನ್‌ನ ಮುಂದಿನ ಯೋಜನೆಗಳೇನು ಎಂಬುದನ್ನು ನಾವು ಪತ್ತೆ ಮಾಡುತ್ತೇವೆ. ಇಸ್ರೇಲ್ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಾವು ಚರ್ಚಿಸುತ್ತೇವೆ. ಜಿ7 ಗುಂಪಿನ ಎಲ್ಲಾ ರಾಷ್ಟ್ರಗಳು ಇಸ್ರೇಲ್ ಪರವಾಗಿವೆ. ಅವರು ಏನು ಮಾಡುತ್ತಿದ್ದಾರೋ ಅದು ಸರಿಯಾಗಿದೆ. ಆದರೆ ಸರಿಯಾದ ಅನುಪಾತದಲ್ಲಿ ಪ್ರತ್ಯುತ್ತರ ನೀಡಬೇಕು ಎಂದು ಹೇಳಲಾಗಿದೆ’ ಎಂದು ಟ್ರಂಪ್ ಹೇಳಿದ್ದಾರೆ.

ನ. 5ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಇಬ್ಬರ ನಡುವೆ ನಿಕಟ ಪೈಪೋಟಿ ನಡೆದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT